ತೆಂಕುತಿಟ್ಟು ಯಕ್ಷಗಾನದ ಖ್ಯಾತ ಎದುರು ವೇಷಧಾರಿ ಶಂಭು ಕುಮಾರ್ ಕಿನ್ನಿಗೋಳಿ ಇಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕಟೀಲು ಮೇಳದಲ್ಲಿ ಖಳ ಪಾತ್ರಗಳಿಗೆ ಹೆಸರುವಾಸಿಯಾಗಿದ್ದ ಕೊಡೆತ್ತೂರು ಶಂಭುಕುಮಾರ್ (46) ಅವರು ತಮ್ಮ ಉಲ್ಲಂಜೆಯ ಮನೆಯಲ್ಲಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪ್ರಾಥಮಿಕ ಮೂಲಗಳಿಂದ ತಿಳಿದುಬಂದಿದೆ.
ಇವರು ತೆಂಕುತಿಟ್ಟು ಯಕ್ಷಗಾನದಲ್ಲಿ ಎದುರುವೇಷಗಳಿಗೆ ಹೆಸರುವಾಸಿಯಾಗಿದ್ದರು. ಭಸ್ಮಾಸುರ, ಇಂದ್ರಜಿತು, ಅರುಣಾಸುರ, ಮಧು, ಕೈಟಭ ಭೀಮ, ಅರ್ಜುನ,ದೇವೇಂದ್ರ ಮೊದಲಾದ ವೇಷಗಳಲ್ಲಿ ತನ್ನದೇ ಛಾಪನ್ನು ಮೂಡಿಸಿದ್ದ ಅವರು ಖಳ ಪಾತ್ರಗಳ ಜೊತೆಗೆ ಪೀಠಿಕೆ ವೇಷದಲ್ಲಿಯೂ ಪ್ರಸಿದ್ಧಿಯನ್ನು ಪಡೆದವರು.
ತನ್ನ ಹದಿನಾರನೆಯ ವಯಸ್ಸಿನಲ್ಲಿಯೇ ಯಕ್ಷಗಾನ ರಂಗದಲ್ಲಿ ಗುರುತಿಸಿಕೊಂಡಿದ್ದ ಅವರು ಮುಂಡ್ಕೂರು, ತಲಕಳ, ಮಂಗಳಾದೇವಿ, ಎಡನೀರು, ಪುತ್ತೂರು, ಬಪ್ಪನಾಡು ಮೇಳಗಳಲ್ಲಿ ಸೇವೆ ಸಲ್ಲಿಸಿದ್ದರು. ಕಳೆದ 7 ವರ್ಷಗಳಿಂದ ಕಟೀಲು ಮೇಳದಲ್ಲಿ ಎದುರುವೇಷಧಾರಿಯಾಗಿ ಹೆಸರುವಾಸಿಯಾಗಿದ್ದರು.
ನಾಟ್ಯ ಗುರುವಾಗಿಯೂ ಗುರುತಿಸಿಕೊಂಡಿದ್ದ ಅವರು ಕಿನ್ನಿಗೋಳಿಯ ಯಕ್ಷ ಕೌಸ್ತುಭ ಸಂಸ್ಥೆಯಲ್ಲಿ ನಾಟ್ಯ ತರಬೇತಿಯನ್ನು ನೀಡಿ ಹಲವಾರು ಶಿಷ್ಯರನ್ನು ಸಿದ್ಧಗೊಳಿಸಿದ್ದರು.
ಹೊಯಿಗೆಗುಡ್ಡೆ ಉಮಾಮಹೇಶ್ವರ ದೇವಳದ ಸಹಕಾರದೊಂದಿಗೆ ಚಿಕ್ಕಮೇಳವನ್ನೂ ಕಳೆದ ಹಲವಾರು ವರ್ಷಗಳಿಂದ ನಡೆಸುತ್ತಿದ್ದರು. ಆರ್ಥಿಕ ಮುಗ್ಗಟ್ಟು ಆತ್ಮಹತ್ಯೆಗೆ ಕಾರಣ ಎಂದು ಹೇಳಲಾಗುತ್ತಿದೆಯಾದರೂ ಮುಂದಿನ ತನಿಖೆಯಿಂದ ಆತ್ಮಹತ್ಯೆಗೆ ಕಾರಣವೇನೆಂದು ತಿಳಿಯಬೇಕಿದೆ.
ಮೃತರ ಸಹೋದರ ಗಣೇಶ ಚಂದ್ರಮಂಡಲ ಅವರು ತೆಂಕುತಿಟ್ಟಿನ ಖ್ಯಾತ ವೇಷಧಾರಿಯಾಗಿದ್ದಾರೆ. ಮೃತ ಶಂಭುಕುಮಾರ್ ಕೊಡೆತ್ತೂರು ಅವರು ಪತ್ನಿ ಹಾಗೂ ಇಬ್ಬರು ಪುಟ್ಟ ಮಕ್ಕಳನ್ನು ಅಗಲಿದ್ದಾರೆ.