ಪುತ್ತೂರು: ವಿವೇಕಾನಂದ ಪದವಿ ಪೂರ್ವಕಾಲೇಜಿನ ವಾಣಿಜ್ಯ ಮತ್ತು ಕಲಾ ಸಂಘದ ವತಿಯಿಂದ 2021-22 ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ವಿಶಿಷ್ಟ ಸಾಧನೆಗೈದ ವಿದ್ಯಾರ್ಥಿಗಳ ಜೊತೆ ಪ್ರಸಕ್ತ ಶೈಕ್ಷಣಿಕ ವರ್ಷದ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಯಿತು.
ವಾಣಿಜ್ಯ ವಿಭಾಗದಲ್ಲಿ 593 ಅಂಕಗಳನ್ನು ಪಡೆಯುವುದರ ಮೂಲಕ ರಾಜ್ಯದಲ್ಲಿ ನಾಲ್ಕನೇ ರ‍್ಯಾಂಕ್ ಮತ್ತು ಪುತ್ತೂರು ತಾಲೂಕಿಗೆ ಪ್ರಥಮ ಸ್ಥಾನ ಪಡೆದ ದೀಪ್ನಾ ಜೆ,ವಿಜ್ಞಾನ ವಿಭಾಗದಲ್ಲಿ 594 ಅಂಕಗಳನ್ನು ಗಳಿಸುವುದರ ಮೂಲಕ ರಾಜ್ಯದಲ್ಲಿ ಐದನೇ ರ‍್ಯಾಂಕ್ ಮತ್ತು ಪುತ್ತೂರು ತಾಲೂಕಿಗೆ ಪ್ರಥಮ ಸ್ಥಾನ ಪಡೆದ ಮನ್ವಿತ ಎನ್ ಪಿ,ಕಲಾ ವಿಭಾಗದಲ್ಲಿ 580 ಅಂಕಗಳನ್ನು ಪಡೆಯುವುದರ ಮೂಲಕ ಪುತ್ತೂರು ತಾಲೂಕಿನಲ್ಲಿ ಪ್ರಥಮ ಸ್ಥಾನ ಪಡೆದ ವಸುದೇವ ತಿಲಕ್ ಕಳೆದ ವರ್ಷದ ತಮ್ಮ ಅನುಭವಗಳನ್ನು ಈ ಸಂದರ್ಭದಲ್ಲಿ ಹಂಚಿಕೊಂಡರು.
ಪರೀಕ್ಷೆಗಳಿಗೆ ಮುಂಚಿತವಾಗಿ ತಾವು ಮಾಡುತ್ತಿದ್ದ ತಯಾರಿ, ಓದುತ್ತಿದ್ದ ಪುಸ್ತಕಗಳು, ಮಾನಸಿಕ ಒತ್ತಡವನ್ನು ನಿಭಾಯಿಸಲು ಅನುಸರಿಸುತ್ತಿದ್ದ ಕ್ರಮಗಳು ಮುಂತಾದ ವಿಷಯಗಳ ಬಗ್ಗೆ ಕಿರಿಯರಿಗೆ ಮಾಹಿತಿ ನೀಡಿದರು.
ಪರೀಕ್ಷೆಗಳನ್ನು ಎದುರಿಸುವಾಗ ಬರುವ ಸವಾಲುಗಳು ಮತ್ತು ಅವುಗಳನ್ನು ನಿಭಾಯಿಸುವ ರೀತಿಯ ಬಗ್ಗೆ ಮಾಹಿತಿ ನೀಡಿ ಅನೇಕ ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಪರಿಹಾರ ಸೂಚಿಸಿ ಉತ್ತರ ನೀಡಿದರು.
ವಿದ್ಯಾರ್ಥಿನಿ ಇಶಾ ಸುಲೋಚನಾ ಸ್ವಾಗತಿಸಿ ಸುಶ್ಮಿತಾ ವಂದಿಸಿದರು. ವಿದ್ಯಾರ್ಥಿನಿ ನಿಶ್ಮಿತಾ ಕಾರ್ಯಕ್ರಮದಲ್ಲಿ ನಿರೂಪಿಸಿದರು.