ಯಕ್ಷಗಾನವು ಹಾಡು, ವಾದನ, ನೃತ್ಯ, ವೇಷ, ಅಭಿನಯ, ಮಾತುಗಾರಿಕೆಗಳ ಮಿಶ್ರಣದ ಸಮಷ್ಟಿ ಕಲೆಯಾಗಿದೆ. ಈ ಎಲ್ಲಾ ಅಂಗಗಳೂ ಶಾಸ್ತ್ರದ ಮೇರೆಯೊಳಗಿದ್ದು ಪರಂಪರೆಯುಳ್ಳದ್ದಾಗಿ ಆಕರ್ಷಣೀಯವಾಗಿದೆ. ವಾದನ ವಿಭಾಗದಲ್ಲಿ ಕಾಣಿಸುವುದೇ ಚೆಂಡೆ ಮದ್ದಳೆಯ ನುಡಿತಗಳು. ಗಾಯನ ಮತ್ತು ನರ್ತನಗಳಿಗೆ ಇದು ಪೂರಕವಾಗಿರುತ್ತದೆ. ಯಕ್ಷಗಾನ ಕಲೆಯಲ್ಲಿ ವಾದನ ಕ್ರಮವು ಹೇಗಿರಬೇಕೆಂದು ವಿದ್ವಾಂಸರೂ, ಹಿರಿಯ ಮದ್ದಳೆವಾದಕರೂ ತಿಳಿಸಿರುತ್ತಾರೆ. ಅದೇ ದಾರಿಯಲ್ಲಿ ಸಾಗಬೇಕಾದುದು ಅಭ್ಯಾಸಿಗಳಿಗೆ ಕರ್ತವ್ಯ. ಯಕ್ಷಗಾನದಲ್ಲಿ ಭಾಗವತನೇ ನಿರ್ದೇಶಕ. ಹಾಡುಗಾರಿಕೆಯೇ ಪ್ರಧಾನವು.
ಭಾಗವತನ ಹಾಡುಗಾರಿಕೆಯನ್ನು ಮೆರೆಸುವ ವಾದನ ಕ್ರಮವು ಬೇಕೆಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಹಾಡಿಗಾಗಿ ಮತ್ತು ಕುಣಿತಕ್ಕಾಗಿ ವಾದನವು ಇರುವುದಾದರೂ ಕುಣಿದದ್ದಕ್ಕೆಲ್ಲಾ ಬಾರಿಸಲೂ ಬಾರದು ಎಂದುದನ್ನು ಹಿರಿಯ ವಾದಕರು ಹೇಳಿರುತ್ತಾರೆ. ಚೆಂಡೆ ಮದ್ದಲೆಗಳ ನುಡಿತಗಳು ಅತ್ಯಂತ ಸ್ಪಷ್ಟವಾಗಿರಬೇಕು. ವೇಗದ ಅವಸರದಲ್ಲಿ ಸ್ಪಷ್ಟತೆಗೆ ತೊಡಕಾಗಬಾರದು ಎಂಬ ವಿಚಾರವನ್ನೂ ಹೇಳಿರುತ್ತಾರೆ. ಹೀಗೆ ಸಾಗಿಬಂದ ಅನೇಕರು ಖ್ಯಾತ ಮದ್ದಳೆಗಾರರಾಗಿ ಪ್ರಸಿದ್ಧರಾದರು. ಪ್ರಸ್ತುತ ಅದೇ ದಾರಿಯಲ್ಲಿ ಸಾಗುತ್ತಾ ಕಲಾ ವ್ಯವಸಾಯವನ್ನು ಮಾಡುತ್ತಿರುವ ಮದ್ದಳೆಗಾರರಲ್ಲಿ ಶ್ರೀ ದಯಾನಂದ ಶೆಟ್ಟಿಗಾರ್ ಮಿಜಾರು ಅವರನ್ನೂ ಗುರುತಿಸಬಹುದು.
ಇವರು ನಿಷ್ಠಾವಂತ ಅರ್ಪಣಾ ಭಾವದ ಅನುಭವೀ ಕಲಾವಿದರು. ಹೊಸ ಹೊಸ ಪ್ರಸಂಗಗಳು ಎದುರಾದಾಗ ಸಾಕಷ್ಟು ಸಿದ್ಧರಾಗಿಯೇ ರಂಗವೇರುತ್ತಾರೆ. ನೇಪಥ್ಯದಲ್ಲಿ ಭಾಗವತರು ಮತ್ತು ಕಲಾವಿದರೊಂದಿಗೆ ಪ್ರಸಂಗವನ್ನು ಮುನ್ನಡೆಸುವ ರೀತಿಯ ಬಗೆಗೆ ಚರ್ಚಿಸಿಯೇ ಮುಂದುವರಿಯುತ್ತಾರೆ. ರಂಗವು ಹಾಳಾಗಬಾರದು. ಪ್ರದರ್ಶನವು ಸೋಲಬಾರದು ಎಂಬ ಎಚ್ಚರಿಕೆ ಇವರಲ್ಲಿ ಸದಾ ಇರುತ್ತದೆ. ಅವರೊಂದಿಗಿನ ತಿರುಗಾಟದಲ್ಲಿ ನಾನು ಕಂಡುಕೊಂಡ ವಿಚಾರವಿದು. ಶ್ರೀಯುತರು ಕಟೀಲು ಶ್ರೀ ದುರ್ಗಾಪರಮೇಶ್ವರೀ ದಶಾವತಾರ ಯಕ್ಷಗಾನ ಮಂಡಳಿಯ ಪ್ರಧಾನ ಮದ್ದಳೆಗಾರರು.
ಶ್ರೀ ದಯಾನಂದ ಶೆಟ್ಟಿಗಾರರ ಹುಟ್ಟೂರು ಮಂಗಳೂರು ತಾಲೂಕಿನ ತೆಂಕಮಿಜಾರು ಗ್ರಾಮದ ಪೂಮಾರಪದವು. ಶ್ರೀ ರಾಮ ಶೆಟ್ಟಿಗಾರ್ ಮತ್ತು ಶ್ರೀಮತಿ ವಾರಿಜ ದಂಪತಿಗಳ ಪುತ್ರನಾಗಿ 1972ನೇ ಇಸವಿ ಏಪ್ರಿಲ್ 12ರಂದು ಜನನ. ಓದಿದ್ದು ಎಸ್ ಎಸ್ ಎಲ್ ಸಿ ವರೆಗೆ. ೪ನೇ ತರಗತಿ ವರೆಗೆ ಮಿಜಾರು ದಡ್ಡಿ ಶಾಲೆಯಲ್ಲಿ. 7ನೇ ತರಗತಿ ವರೆಗೆ ಮೂಡುಪೆರಾರ ಶಾಲೆಯಲ್ಲಿ. ಬಳಿಕ ಹತ್ತನೇ ತರಗತಿ ವರೆಗೆ ಎಡಪದವು ಸ್ವಾಮೀ ವಿವೇಕಾನಂದ ವಿದ್ಯಾಲಯದಲ್ಲಿ. ಇವರ ಅಜ್ಜ ಶ್ರೀ ದಾಸು ಶೆಟ್ಟಿಗಾರರು ಹವ್ಯಾಸಿ ಕಲಾವಿದರಾಗಿ ಆಟ ಕೂಟಗಳಲ್ಲಿ ಭಾಗವಹಿಸುತ್ತಿದ್ದರು. ತಂದೆ ಶ್ರೀ ರಾಮ ಶೆಟ್ಟಿಗಾರರು ಹವ್ಯಾಸೀ ಹಿಮ್ಮೇಳ ಮುಮ್ಮೇಳ ಕಲಾವಿದರಾಗಿದ್ದರು. ವೇಷಧಾರಿಯಾಗಿ ಹಾಸ್ಯ ಪಾತ್ರಗಳಲ್ಲಿ ಹೆಚ್ಚು ಕಾಣಿಸಿಕೊಂಡವರು. ಇವರಿಬ್ಬರೂ ಕುಲಕಸುಬನ್ನೂ ಬಲ್ಲವರಾಗಿದ್ದರು.
ಇಬ್ಬರೂ ಹಳ್ಳಿಯ ಔಷಧಗಳ ಬಗೆಗೆ ಅಪಾರ ಜ್ಞಾನವನ್ನು ಹೊಂದಿದ್ದರು. ಪಶು ಚಿಕಿತ್ಸಕರಾಗಿಯೂ ಹೆಸರು ಗಳಿಸಿದ್ದರು. ಶ್ರೀ ದಯಾನಂದ ಶೆಟ್ಟಿಗಾರರಿಗೆ ಯಕ್ಷಗಾನ ಕಲಾಸಕ್ತಿ ರಕ್ತಗತವಾಗಿಯೇ ಬಂದಿತ್ತು. ಎಳವೆಯಲ್ಲಿ ಪ್ರದರ್ಶನಗಳನ್ನು ನೋಡುತ್ತಿದ್ದರು. ಆಟ ನೋಡಿ ಬಂದು ಗೆಳೆಯರೊಂದಿಗೆ ಕುಣಿಯುವ ಕ್ರಮವೂ ಇತ್ತು. ಆ ಸಮಯದಲ್ಲಿ ತೆಂಕಮಿಜಾರು ಶ್ರೀ ಮಾರಿಕಾಂಬಾ ಯಕ್ಷಗಾನ ಕಲಾಮಂಡಳಿಯು ಕಲಾಚಟುವಟಿಕೆಗಳನ್ನು ನಡೆಸುತ್ತಿತ್ತು. ದಯಾನಂದ ಶೆಟ್ಟಿಗಾರರ ತಂದೆ ರಾಮ ಶೆಟ್ಟಿಗಾರರು ಈ ಸಂಸ್ಥೆಯಲ್ಲಿ ಸಕ್ರಿಯರಾಗಿದ್ದರು. ಹೆಸರಾಂತ ಕಲಾವಿದ ಮುಚ್ಚೂರು ಶ್ರೀ ಹರೀಶ್ ಶೆಟ್ಟಿಗಾರರು ಅಲ್ಲಿ ನಾಟ್ಯ ತರಬೇತಿಯನ್ನು ನೀಡುತ್ತಿದ್ದರು. ಅವರ ಒತ್ತಾಯದಂತೆ ಶ್ರೀ ದಯಾನಂದ ಶೆಟ್ಟಿಗಾರರು ಹೆಜ್ಜೆಗಾರಿಕೆಯನ್ನು ಕಲಿಯುವ ಮನಮಾಡಿದ್ದರು. ಶ್ರೀ ಮಾರಿಕಾಂಬಾ ಯಕ್ಷಗಾನ ಕಲಾ ಮಂಡಳಿಯ ಆಶ್ರಯದಲ್ಲಿ ಮುಚ್ಚೂರು ಶ್ರೀ ಹರೀಶ್ ಶೆಟ್ಟಿಗಾರರಿಂದ ಯಕ್ಷಗಾನ ನಾಟ್ಯಾಭ್ಯಾಸ.
ಮುಚ್ಚೂರು ಶ್ರೀ ಹರೀಶ್ ಶೆಟ್ಟಿಗಾರರು ಅಭ್ಯಾಸಿಗಳಿಗೆ ಸಂಭಾಷಣೆಗಳನ್ನು ಅಂದವಾಗಿ ಬರೆದುಕೊಡುತ್ತಿದ್ದರು. ಮಾರಿಕಾಂಬಾ ಕಲಾಮಂಡಳಿಯ ಪ್ರದರ್ಶನದಲ್ಲಿ ರಂಗಪ್ರವೇಶ ಮಾಡಿದ ದಯಾನಂದ ಶೆಟ್ಟಿಗಾರರು ಬಳಿಕ ನಡೆದ ಪ್ರದರ್ಶನಗಳಲ್ಲೆಲ್ಲಾ ವೇಷ ಮಾಡಿದ್ದರು. ಬಳಿಕ ಮಂಗಳೂರು ಬಿಕರ್ನಕಟ್ಟೆಯ ವೀರಾಂಜನೇಯ ಯಕ್ಷಗಾನ ಮಂಡಳಿಯಲ್ಲೂ ವೇಷ ಮಾಡಿದರು. ವೀರಾಂಜನೇಯ ಯಕ್ಷಗಾನ ಮಂಡಳಿಯ ಪ್ರದರ್ಶನಗಳಿಗೆ ಅತಿಥಿಗಳಾಗಿ ತೆಂಕಬೈಲು ತಿರುಮಲೇಶ್ವರ ಶಾಸ್ತ್ರಿ ಮತ್ತು ಮಾಂಬಾಡಿ ಸುಬ್ರಹ್ಮಣ್ಯ ಭಟ್ಟರು ಬರುತ್ತಿದ್ದರು.
ಹರೀಶ್ ಶೆಟ್ಟಿಗಾರರು ಹೇಳಿಕೊಟ್ಟ ಸಂಭಾಷಣೆಗಳನ್ನು ತಪ್ಪದೆ ಅಂದವಾಗಿ ದಯಾನಂದ ಶೆಟ್ಟಿಗಾರರು ಹೇಳಿದಾಗ ಇವರಿಬ್ಬರೂ ಮೆಚ್ಚುಗೆಯನ್ನು ಸೂಚಿಸಿ ಹರಸಿದ್ದರು. ಎಸ್. ಎಸ್. ಎಲ್. ಸಿ ವಿದ್ಯಾರ್ಜನೆಯ ಬಳಿಕವೇ ಇವರು ನಾಟ್ಯ ಕಲಿತುದು. ಬಳಿಕ ಜೀವನೋಪಾಯಕ್ಕಾಗಿ ಎಡಪದವಿನಲ್ಲಿ ವೆಲ್ಡಿಂಗ್ ಕೆಲಸದಲ್ಲಿ ತೊಡಗಿಸಿಕೊಂಡರು. ಖ್ಯಾತ ಮದ್ದಳೆಗಾರರಾದ ಮಿಜಾರು ಮೋಹನ ಶೆಟ್ಟಿಗಾರ್ ಮತ್ತು ರಾಮಕೃಷ್ಣ ಶೆಟ್ಟಿಗಾರರು ಇವರ ಮಾವಂದಿರು. ಅವರು ಚೆಂಡೆ ಮದ್ದಳೆ ನುಡಿಸುವುದನ್ನು ನೋಡಿ ಕೇಳಿಯೇ ದಯಾನಂದ ಶೆಟ್ಟಿಗಾರರು ಹಿಮ್ಮೇಳದ ವಿದ್ಯೆಯನ್ನು ಕಲಿತಿದ್ದರು. ಸಮಯ ಸಿಕ್ಕಾಗಲೆಲ್ಲಾ ಚೆಂಡೆ ಮದ್ದಳೆ ನುಡಿಸಿದ್ದರು. ಇದನ್ನು ಗಮನಿಸಿದ ಶ್ರೀ ಹರೀಶ್ ಶೆಟ್ಟಿಗಾರರು ಶಾಸ್ತ್ರೀಯವಾಗಿ ಗುರುಗಳಿಂದಲೇ ಅಭ್ಯಾಸ ಮಾಡಲು ಸೂಚಿಸಿದ್ದರು.
ಗುರುಗಳ ಸಲಹೆಯಂತೆ ಮದ್ದಳೆಗಾರರಾದ ಗುರುಪುರ ಅಣ್ಣಿ ಭಟ್ಟರಿಂದ ಹಿಮ್ಮೇಳ ಕಲಿತರು. ಅಣ್ಣಿ ಭಟ್ಟರು ದಯಾನಂದ ಶೆಟ್ಟಿಗಾರರ ತಂದೆ ಶ್ರೀ ರಾಮ ಶೆಟ್ಟಿಗಾರರ ಗುರುಗಳು. ಕೆಲವು ಸಮಯ ದಿವಾಣ ಶ್ರೀ ಭೀಮ ಭಟ್ಟರಿಂದಲೂ ಕಲಿಯುವ ಭಾಗ್ಯ ಸಿಕ್ಕಿತ್ತು. ಹೀಗೆ ವೇಷಧಾರಿಯಾಗಿದ್ದ ಶ್ರೀ ದಯಾನಂದ ಶೆಟ್ಟಿಗಾರರು ಮದ್ದಳೆಗಾರರಾಗುವತ್ತ ಹೆಜ್ಜೆ ಇರಿಸಿದರು. ಈ ಸಂದರ್ಭಗಳಲ್ಲಿ ಊರ ಪರವೂರ ಪ್ರದರ್ಶನಗಳಲ್ಲಿ ಸಿಕ್ಕ ಅವಕಾಶವನ್ನು ಸದುಪಯೋಗಪಡಿಸುತ್ತಾ ಬೆಳೆಯತೊಡಗಿದರು. ಮೇಳದಲ್ಲಿ ಪರಿಪೂರ್ಣವಾಗಿ ತಿರುಗಾಟ ನಡೆಸುವ ಮೊದಲೇ ಮಿಜಾರು ತಿಮ್ಮಪ್ಪ ಅವರ ಜತೆ ಹೋಗಿ ಕರ್ನಾಟಕ ಮೇಳದಲ್ಲಿ ಮದ್ದಳೆ ಬಾರಿಸಿದ್ದರು. ದಿನೇಶ ಅಮ್ಮಣ್ಣಾಯ, ಪ್ರಭಾಕರ ಗೋರೆ, ದೇಲಂತಮಜಲು ಸುಬ್ರಹ್ಮಣ್ಯ ಭಟ್ಟರ ಒಡನಾಟ, ಸಹಕಾರವು ದೊರೆತಿತ್ತು. ಶ್ರೀ ದಯಾನಂದ ಶೆಟ್ಟಿಗಾರರು ಮೊಟ್ಟಮೊದಲು ತಿರುಗಾಟ ನಡೆಸಿದ್ದು ಶ್ರೀ ತಿಮ್ಮಪ್ಪ ಗುಜರನ್ ಅವರ ಸಂಚಾಲಕತ್ವದ ತಲಕಳ ಮೇಳದಲ್ಲಿ.
ಅಲ್ಲಿ ಶ್ರೀ ಬೈಪಾಡಿತ್ತಾಯ ದಂಪತಿಗಳು ಸಹಕಾರ, ಪ್ರೋತ್ಸಾಹವನ್ನು ನೀಡಿ ಹರಸಿದ್ದರು. ಕಲಾವಿದರಾದ ಪೊಳಲಿ ಶ್ರೀ ಸುದರ್ಶನ ಶೆಟ್ಟಿ ಮೂಡುಶೆಡ್ಡೆ ಶ್ರೀ ದೊಡ್ಡಣ್ಣ ಶೆಟ್ರ ಪ್ರೋತ್ಸಾಹವೂ ಇತ್ತು. ಆ ಕಾಲದಲ್ಲಿ ಪ್ರದರ್ಶನ ನಡೆಯುವ ಸ್ಥಳಕ್ಕೆ ಚೆಂಡೆ ಮದ್ದಲೆಗಳನ್ನು ಹೊತ್ತುಕೊಂಡು ಕಾಲ್ನಡಿಗೆಯಿಂದಲೇ ಸಾಗುತ್ತಿದ್ದರು. ತಲಕಳದಲ್ಲಿ ಮೂರು ವರ್ಷ ತಿರುಗಾಟ. ಆ ಸಂದರ್ಭದಲ್ಲಿ ಸುರತ್ಕಲ್ ಮೇಳಕ್ಕೆ ಮದ್ದಳೆಗಾರರ ಅನಿವಾರ್ಯತೆಯಿತ್ತು. ಕಲಾವಿದ ಶ್ರೀ ಕುಮಾರ ಗೌಡ ಪುತ್ತಿಗೆ ಅವರ ಹೇಳಿಕೆಯಂತೆ ಶ್ರೀ ದಯಾನಂದ ಶೆಟ್ಟಿಗಾರರು ಸುರತ್ಕಲ್ ಮೇಳವನ್ನು ಸೇರಿ (1997) 3 ವರ್ಷ ತಿರುಗಾಟ ನಡೆಸಿದ್ದರು.
ಸದ್ರಿ ಮೇಳದಲ್ಲಿ ಪದ್ಯಾಣ ಗಣಪತಿ ಭಟ್, ಕಡಬ ನಾರಾಯಣ ಆಚಾರ್ಯ, ಕಾಂಚನ ಸಂಜೀವ ರೈ, ವೇಣೂರು ಸುಂದರಾಚಾರ್ಯ, ಶಿವರಾಮ ಜೋಗಿ, ಎಂ.ಕೆ ರಮೇಶಾಚಾರ್ಯ, ಪೂಕಳ ಲಕ್ಷ್ಮೀನಾರಾಯಣ ಭಟ್, ಉಜಿರೆ ರಾಜ, ವೇಣೂರು ಸದಾಶಿವ ಕುಲಾಲ್, ವೇಣೂರು ಸದಾಶಿವ ಆಚಾರ್ಯ, ವೇಣೂರು ಅಶೋಕ ಆಚಾರ್ಯ ಮೊದಲಾದವರ ಒಡನಾಟ ಮತ್ತು ಸಹಕಾರವು ಬೆಳೆಯುವುದಕ್ಕೆ ಅನುಕೂಲವಾಯಿತು. ಆಗ ಶ್ರೀ ರವಿಚಂದ್ರ ಕನ್ನಡಿಕಟ್ಟೆ ಅವರು ಬಾಲಗೋಪಾಲನಾಗಿ ಅಭಿನಯಿಸುತ್ತಿದ್ದರು. ಪ್ರಸ್ತುತ ಅವರು ಯುವ ಭಾಗವತರಾಗಿ ಕಲಾಸೇವೆಯನ್ನು ಮಾಡುತ್ತಿರುವುದು ನಮಗೆಲ್ಲಾ ತಿಳಿದ ವಿಚಾರ. ಬಳಿಕ ೨ ವರ್ಷ ಶ್ರೀ ಕಿಶನ್ ಕುಮಾರ್ ಹೆಗ್ಡೆ ಸಂಚಾಲಕತ್ವದ ಕರ್ನಾಟಕ ಮೇಳದಲ್ಲಿ ವ್ಯವಸಾಯ.
ಈ ಮೇಳದಲ್ಲಿ ಶ್ರೀ ಗೋರೆ ಮತ್ತು ಶ್ರೀ ದೇಲಂತಮಜಲು ಅವರುಗಳು ಅವಕಾಶಗಳನ್ನು ಇತ್ತು ಸಹಕರಿಸಿದ್ದರು. ಬಳಿಕ 5 ವರ್ಷ ಶ್ರೀ ದಯಾನಂದ ಗುಜರನ್ ಅವರ ಸಸಿಹಿತ್ಲು ಮೇಳದಲ್ಲಿ ತಿರುಗಾಟ. ಮುಖ್ಯ ಮದ್ದಳೆಗಾರರಾಗಿ ಈ ಮೇಳದಲ್ಲಿ ವ್ಯವಸಾಯ ಮಾಡಿದ್ದರು. ಈ ಸಂದರ್ಭದಲ್ಲಿ ಮೇಳದ ತಿರುಗಾಟ ಮತ್ತು ವೆಲ್ಡಿಂಗ್ ಕೆಲಸವನ್ನು ಜತೆಜತೆಯಾಗಿಯೇ ನಿರ್ವಹಿಸಿದ್ದರು. ಬಳಿಕ 1 ವರ್ಷ ಮುಖ್ಯ ಮದ್ದಳೆಗಾರರಾಗಿ ಸುಂಕದಕಟ್ಟೆ ಮೇಳದಲ್ಲಿ ವ್ಯವಸಾಯ.
2010ಕ್ಕೆ ಕಟೀಲು ಮೇಳ ಸೇರಿದ ಶ್ರೀ ದಯಾನಂದ ಶೆಟ್ಟಿಗಾರರು ಮೋಹನ ಶೆಟ್ಟಿಗಾರರ ಜೊತೆ 2 ವರ್ಷ ಕಲಾಸೇವೆ ಮಾಡಿದ್ದರು. (4ನೇ ಮೇಳ) ಬಳಿಕ ಮುಖ್ಯ ಮದ್ದಳೆಗಾರನಾಗಿ ಸ್ಥಾನವು ದೊರಕಿತ್ತು. ಕಳೆದ 13 ವರ್ಷಗಳಿಂದ ಕಟೀಲು ಮೇಳದಲ್ಲಿ ವ್ಯವಸಾಯ ಮಾಡುತ್ತಿದ್ದಾರೆ. ಕುಬಣೂರು ಶ್ರೀಧರ ರಾವ್, ಬೊಟ್ಟಿಕೆರೆ ಪುರುಷೋತ್ತಮ ಪೂಂಜ, ಪುಂಡಿಕಾಯಿ ಗೋಪಾಲಕೃಷ್ಣ ಭಟ್, ಬಳ್ಳಮಂಜ ಶ್ರೀನಿವಾಸ, ಇವರುಗಳ ಪ್ರಧಾನ ಭಾಗವತಿಕೆಯಡಿಯಲ್ಲಿ ವ್ಯವಸಾಯ ಮಾಡುತ್ತಾ ಬಂದಿದ್ದಾರೆ. ಉಳಿದ ಭಾಗವತರುಗಳಿಗೂ ಹಾಗೂ ಎಲ್ಲಾ ಕಲಾವಿದರುಗಳಿಗೂ ದಯಾನಂದ ಶೆಟ್ಟಿಗಾರರೆಂದರೆ ಅಚ್ಚುಮೆಚ್ಚು. ಎಲ್ಲರಿಗೂ ಇವರು ಪ್ರೀತಿಯ ‘ದಯಣ್ಣ’
ಕಟೀಲು ಮೇಳದ ಪ್ರಧಾನ ಮದ್ದಳೆಗಾರರಾದ ಶ್ರೀ ದಯಾನಂದ ಶೆಟ್ಟರು ನಾಲ್ಕು ಬಾರಿ ವಿದೇಶ ಪ್ರವಾಸ ಮಾಡಿರುತ್ತಾರೆ. ಮೊಟ್ಟಮೊದಲು ವಿದೇಶ ಯಾತ್ರೆ ಕೈಗೊಂಡದ್ದು 2006ರಲ್ಲಿ. ಶ್ರೀ ಪಿ.ವಿ. ಪರಮೇಶ್ ಅವರ ಜತೆಯಾಗಿ ದುಬೈ ಯಕ್ಷಮಿತ್ರರು ಆಯೋಜಿಸಿದ ಪ್ರದರ್ಶನದಲ್ಲಿ ಭಾಗಿಯಾಗಿದ್ದರು. ದ್ವಿತೀಯ ವಿದೇಶಯಾತ್ರೆ 2010ರಲ್ಲಿ. ಮಿತ್ರ ಶ್ರೀ ಧನಂಜಯ ಕಿನ್ನಿಗೋಳಿ ಅವರ ಹೇಳಿಕೆಯಂತೆ ಬಹರೈನ್ ಕನ್ನಡ ಸಂಘದವರು ಆಯೋಜಿಸಿದ ಪ್ರದರ್ಶನದಲ್ಲಿ ತಮ್ಮ ವಾದನ ಕೌಶಲವನ್ನು ತೋರಿದ್ದರು. 2013ರಲ್ಲಿ ಮತ್ತೆ ಬಹರೈನ್ ಕನ್ನಡ ಸಂಘದವರು ಏರ್ಪಡಿಸಿದ ಪ್ರದರ್ಶನದಲ್ಲಿ.
ನಾಲ್ಕನೇ ಬಾರಿ ವಿದೇಶ ಯಾತ್ರೆ ಮಾಡಿದ್ದು 2019ರಲ್ಲಿ. ಶ್ರೀ ಶೇಖರ ಡಿ. ಶೆಟ್ಟಿಗಾರ್ ಕಿನ್ನಿಗೋಳಿ ಇವರ ದುಬೈ ಯಕ್ಷಗಾನ ಅಭ್ಯಾಸ ತರಗತಿ ಈ ಸಂಸ್ಥೆಯ ವತಿಯಲ್ಲಿ ಪಟ್ಲ ಸಂಭ್ರಮ ಕಾರ್ಯಕ್ರಮವು ನಡೆದಿತ್ತು. ಇದರ ಜತೆ ಪದ್ಮಶಾಲಿ ಸಮುದಾಯ ದುಬೈ ಇವರೂ ಪ್ರದರ್ಶನವನ್ನು ಏರ್ಪಡಿಸಿದ್ದರು. ಈ ಪ್ರದರ್ಶನದಲ್ಲಿ ಭಾಗವಹಿಸಿದ ದಯಾನಂದ ಶೆಟ್ಟಿಗಾರರು ಸನ್ಮಾನವನ್ನೂ ಸ್ವೀಕರಿಸಿದ್ದರು. ಮಳೆಗಾಲದಲ್ಲಿ ಮುಂಬೈ ಪ್ರದರ್ಶನಗಳಲ್ಲೂ ಭಾಗವಹಿಸಿ ಸನ್ಮಾನಗಳನ್ನು ಸ್ವೀಕರಿಸಿರುತ್ತಾರೆ. ಶ್ರೀ ಪದ್ಮನಾಭ ಕಟೀಲು ನಾಯಕತ್ವದ ‘ಕೀರ್ತಿಶೇಷ ಕಟೀಲು ಶ್ರೀ ಗೋಪಾಲಕೃಷ್ಣ ಆಸ್ರಣ್ಣ ಸಂಸ್ಮರಣಾ ಸಮಿತಿ ಮುಂಬೈ- ಯು. ಎ. ಇ. ಈ ಸಂಸ್ಥೆಯು ಕೊಡಮಾಡುವ ಕೀರ್ತಿಶೇಷ ಗೋಪಾಲಕೃಷ್ಣ ಸಂಸ್ಮರಣಾ ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ. ಮುಂಬೈಯ ಯಶಸ್ವೀ ಸಂಘಟಕ ಶ್ರೀ ಅಜೆಕಾರು ಬಾಲಕೃಷ್ಣ ಶೆಟ್ಟಿ ಅವರ ‘ಅಜೆಕಾರು ಕಲಾಭಿಮಾನಿ ಬಳಗ’ವು “ಯಕ್ಷರಕ್ಷಾ ಪ್ರಶಸ್ತಿ” ಯನ್ನು ಶ್ರೀ ದಯಾನಂದ ಶೆಟ್ಟಿಗಾರರಿಗೆ ನೀಡಿ ಗೌರವಿಸಿದೆ.
ಮೂಡಬಿದಿರೆಯ ಡಾ. ಮೋಹನ ಆಳ್ವರ ಆಳ್ವಾಸ್ ವಿದ್ಯಾಸಂಸ್ಥೆಯ ಧೀಂಕಿಟ ಅಧ್ಯಯನ ಕೇಂದ್ರದಲ್ಲಿ ಶ್ರೀ ಶೇಖರ ಡಿ. ಶೆಟ್ಟಿಗಾರರ ನಿರ್ದೇಶನಗಳ ಪ್ರದರ್ಶನಗಳ ಆರಂಭದಿಂದಲೇ ದಯಾನಂದ ಶೆಟ್ಟಿಗಾರರು ಚೆಂಡೆವಾದಕರಾಗಿ ಭಾಗವಹಿಸಿರುತ್ತಾರೆ. 1997-98ರಲ್ಲಿ ಪುತ್ತೂರು ಶ್ರೀಧರ ಭಂಡಾರಿಗಳ ಸಂಚಾಲಕತ್ವದ ಪುತ್ತೂರು ಶ್ರೀ ಮಹಾಲಿಂಗೇಶ್ವರ ಪ್ರವಾಸಿ ಯಕ್ಷಗಾನ ಮಂಡಳಿಯ ಪ್ರದರ್ಶನಗಳಲ್ಲಿ ಭಾಗವಹಿಸಿದ್ದಾರೆ. ಶ್ರೀ ದಾಮೋದರ ಶೆಟ್ಟಿಗಾರರ ಮೋಹಿನಿ ಕಲಾಸಂಪದ ತಂಡದಲ್ಲಿ ಶ್ರೀ ಶೇಖರ ಡಿ. ಶೆಟ್ಟಿಗಾರರ ನಿರ್ದೇಶನದಲ್ಲಿ ವಾದಕರಾಗಿ ಅನುಭವಗಳನ್ನು ಪಡೆದುಕೊಂಡಿದ್ದರು.
ಪರಂಪರೆ, ಮಟ್ಟುಗಳ ರೀತಿಯನ್ನು ಅರಿತುಕೊಳ್ಳುವುದಕ್ಕೆ ಈ ಪ್ರದರ್ಶನಗಳು ಅನುಕೂಲವಾಗಿತ್ತು. ಶ್ರೀಮತಿ ವಿದ್ಯಾ ಕೊಳ್ಯೂರು ವಾರ ‘ಯಕ್ಷಮಂಜೂಷ’ ತಂಡದ ಕೆಲವು ಪ್ರದರ್ಶನಗಳಲ್ಲೂ ಭಾಗವಹಿಸಿದ್ದರು. ಅಲ್ಲದೆ ಮುಂಬೈ, ಚೆನ್ನೈ, ಬೆಂಗಳೂರು, ಪಾಂಡಿಚೇರಿ ಮೊದಲಾದ ನಗರಗಳಲ್ಲಿ ನಡೆದ ಯಕ್ಷಗಾನ ಪ್ರದರ್ಶನಗಳಲ್ಲಿ ವಾದಕರಾಗಿ ಕಾಣಿಸಿಕೊಂಡಿದ್ದರು. ಸಾಧಕನು ತಾನು ಸಾಗಿ ಬಂದ ದಾರಿಯನ್ನು ಮತ್ತು ಸಹಕರಿಸಿದ ಮಹಾನುಭಾವರುಗಳನ್ನು ಎಂದಿಗೂ ಮರೆಯಲಾರ. ದಯಾನಂದ ಶೆಟ್ಟಿಗಾರರು ಕಲಾಬದುಕಿನಲ್ಲಿ ತಮಗೆ ಸಹಕರಿಸಿದ ಸಂಘಟಕರನ್ನೂ, ಕಲಾವಿದರನ್ನೂ, ಸಂಸ್ಥೆಗಳನ್ನೂ ಮರೆಯದೆ ನೆನಪಿಸಿಕೊಳ್ಳುತ್ತಾರೆ.
ಇವರ ಅಣ್ಣ ಶ್ರೀ ಸದಾನಂದ ಶೆಟ್ಟಿಗಾರರೂ ಮದ್ದಳೆಗಾರರು. ಕಟೀಲು ಮೇಳದಲ್ಲಿ ವ್ಯವಸಾಯ ಮಾಡುತ್ತಿದ್ದಾರೆ. ಶ್ರೀ ದಯಾನಂದ ಶೆಟ್ಟಿಗಾರರ ಪತ್ನಿ ಶ್ರೀಮತಿ ಸರಿತಾ ಗೃಹಣಿ. ಸರಿತಾ, ದಯಾನಂದ ಶೆಟ್ಟಿಗಾರ್ ದಂಪತಿಗಳಿಗೆ ಇಬ್ಬರು ಪುತ್ರರು. ಹಿರಿಯ ಪುತ್ರ ಮಾ| ಕೌಶಿಕ್ ಶೆಟ್ಟಿಗಾರ್ ೯ನೇ ತರಗತಿ ವಿದ್ಯಾರ್ಥಿ. ಕಿರಿಯ ಪುತ್ರ ಮಾ| ಸ್ವಸ್ತಿಕ್ ಶೆಟ್ಟಿಗಾರ್ ೬ನೇ ತರಗತಿ ವಿದ್ಯಾರ್ಥಿ. ಇಬ್ಬರೂ ದೊಡ್ಡಪ್ಪ ಶ್ರೀ ಸದಾನಂದ ಶೆಟ್ಟಿಗಾರರಿಂದ ನಾಟ್ಯ ಕಲಿತು ವೇಷ ಮಾಡುತ್ತಿದ್ದಾರೆ. ಮಕ್ಕಳಿಗೆ ಉಜ್ವಲವಾದ ಭವಿಷ್ಯವು ಸಿದ್ಧಿಸಲಿ. ಮದ್ದಳೆಗಾರ ಮಿಜಾರು ಶ್ರೀ ದಯಾನಂದ ಶೆಟ್ಟಿಗಾರರಿಂದ ಇನ್ನಷ್ಟು ಕಲಾಸೇವೆಯು ನಡೆಯಲಿ. ಶ್ರೀ ದೇವರ ಅನುಗ್ರಹವು ಸದಾ ಇರಲಿ ಎಂಬ ಹಾರೈಕೆಗಳು.
ಶ್ರೀ ದಯಾನಂದ ಶೆಟ್ಟಿಗಾರ್ ಮಿಜಾರು
ಮೊಬೈಲ್: 7259713245
ಲೇಖಕ: ಶ್ರೀ ರವಿಶಂಕರ್ ವಳಕ್ಕುಂಜ
- 10th Standard, Social – Economics Chapter 31 – ‘PUBLIC FINANCE AND BUDGET’ – Solutions
- 10th Standard, English Poem 8 – ‘Mending Wall’ – Solutions
- 10th Standard Social Science, Chapter 19 – ‘INDIA AFTER INDEPENDENCE’ – Solutions
- 9th Standard – English – UNIT 8 PROSE – ‘THE STORY-TELLER’ – Solutions
- 9th Social Science – Chapter 26 – ‘Community’ – Solutions