ನಿನ್ನೆ ಪತ್ತೆಯಾದ ಮಾನವ ಅಸ್ಥಿಪಂಜರದ ಬಗ್ಗೆ ಹರಿದಾಡುತ್ತಿರುವ ಊಹಾಪೋಹಗಳಿಗೆ ತೆರೆಬೀಳುವ ಲಕ್ಷಣಗಳು ಗೋಚರಿಸುತ್ತಿವೆ. ಸ್ಥಳದಲ್ಲಿದ್ದ ಅಸ್ಥಿಪಂಜರವನ್ನು ತನ್ನ ತಂದೆಯದೇ ಎಂದು ಅಸ್ಥಿಪಂಜರವೆಂದು ಹೇಳಲ್ಪಟ್ಟಿರುವವರ ಮಗ ಗುರುತುಹಿಡಿದಿದ್ದಾರೆ.
ನಿನ್ನೆ ಪತ್ತೆಯಾಗಿದ್ದ ಅಸ್ಥಿಪಂಜರದ ಸಮೀಪ ಹರಿದ ಬಟ್ಟೆಬರೆಗಳೂ ಗೋಚರಿಸಿತ್ತು. ಈ ಬಟ್ಟೆಗಳ ಆಧಾರದ ಮೇಲೆ ಗುರುತುಹಿಡಿಯಲಾಗಿದೆ ಎಂದು ತಿಳಿದುಬಂದಿದೆ.
ಉಕ್ಕುಡ ಬಳಿಯ ಕಾನತಡ್ಕ ನಾಗೇಶ ಗೌಡ ಅವರ ಅಸ್ಥಿಪಂಜರವೆಂದು ಅವರ ಮಗ ಗುರುತು ಹಿಡಿದಿದ್ದಾರೆ.
ಜನವರಿ 31ರಂದು ವಿಪರೀತ ಮದ್ಯಪಾನ ಮಾಡಿ ಮನೆಗೆ ಬಂದಿದ್ದ ನಾಗೇಶ ಗೌಡ ಅವರು ಮನೆಯವರೊಂದಿಗೆ ಜಗಳವಾಡಿ ಕೋಪಿಸಿಕೊಂಡು ಮನೆ ಬಿಟ್ಟು ಹೋಗಿದ್ದರು. ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಇದರ ಸಲುವಾಗಿ ವಿಟ್ಲ ಪೊಲೀಸ್ ಠಾಣೆ ಲುಕ್ ಔಟ್ ನೋಟೀಸ್ ಜಾರಿಗೊಳಿಸಿತ್ತು.
ಸಮೀಪದಲ್ಲಿ ಸಿಕ್ಕಿದ ಬಟ್ಟೆಗಳ ಆಧಾರದ ಮೇಲೆ ಗುರುತುಹಿಡಿದ್ದರೂ ವ್ಯಕ್ತಿ ಯಾರೆಂದು ದೃಢೀಕರಿಸಲು ಪೊಲೀಸರಿಗೆ ಈ ಒಂದೇ ಆಧಾರ ಸಾಕಾಗುವುದಿಲ್ಲ. ಶೀಘ್ರವೇ ಎಲುಬುಗಳನ್ನು ವಿಧಿವಿಜ್ಞಾನ ಇಲಾಖೆಗೆ ಪೊಲೀಸರು ರವಾನಿಸಿದ್ದಾರೆ ಎಂದು ತಿಳಿದುಬಂದಿದೆ.
ಮಾನವನ ಅಸ್ಥಿಪಂಜರ ಎಂದು ವಿಧಿವಿಜ್ಞಾನ ಇಲಾಖೆ ದೃಢೀಕರಿಸಿದ ಮೇಲೆ ಡಿಎನ್ಎ ಪರೀಕ್ಷೆ ನಡೆಯಬೇಕಾಗುತ್ತದೆ. ನಾಗೇಶ ಗೌಡರ ಮಗನ ಡಿಎನ್ಎ ಮತ್ತು ಮತ್ತು ವ್ಯಕ್ತಿಯ ಡಿಎನ್ಎ ಹೋಲಿಕೆಯಾದಲ್ಲಿ ಆ ಅಸ್ಥಿಪಂಜರ ನಾಗೇಶ ಗೌಡರದ್ದೇ ಎಂದು ನಿರ್ಧರಿಸಲಾಗುತ್ತದೆ. ಅದಕ್ಕೆ ಸ್ವಲ್ಪ ದಿನಗಳ ಕಾಲಾವಕಾಶ ಬೇಕಾಗುತ್ತದೆ.

