ಬಂಟ್ವಾಳ ತಾಲೂಕಿನ ಅನಂತಾಡಿ ಗ್ರಾಮದ ಬಂಟ್ರಂಜದಲ್ಲಿ 11 ವರ್ಷದ ಬಾಲಕಿಯೊಬ್ಬಳು ತಾನು ಆಡುತ್ತಿದ್ದ ಉಯ್ಯಾಲೆಗೆ ಸೀರೆಯು ಆಕಸ್ಮಾತಾಗಿ ಕುತ್ತಿಗೆಗೆ ಸುತ್ತಿಕೊಂಡು ಮೃತಪಟ್ಟಿದ್ದಾಳೆ.
ಮೃತ ಬಾಲಕಿ ಬಂಟ್ರಂಜ ನಿವಾಸಿ ಶೇಖರ್ ಎಂಬವರ ಪುತ್ರಿ ಲಿಖಿತಾ ಎಂದು ತಿಳಿದುಬಂದಿದೆ. ಆಕೆಯು ಬಾಬನಕಟ್ಟೆ ಶಾಲೆಯಲ್ಲಿ ಆರನೇ ತರಗತಿ ಕಲಿಯುತ್ತಿದ್ದ ಹುಡುಗಿ.
ಆಕೆಯ ಹಾಗೂ ಮನೆಯವರ ಪಾಲಿಗೆ ಕೆಟ್ಟ ದಿನವಾಗಿದ್ದ ನಿನ್ನೆ ಲಿಖಿತಾ ಮನೆಯಲ್ಲಿಯೇ ಇದ್ದಳು. ಆಕೆಯ ತಂದೆ ಶೇಖರ್ ತನ್ನ ಪತ್ನಿ ಚಂದ್ರಾವತಿಯೊಂದಿಗೆ ಮನೆಯಿಂದ ಹೊರಗೆ ಹೋಗಿದ್ದಾಗ ಅವಳು ಉಯ್ಯಾಲೆಯಲ್ಲಿ ಆಡುತ್ತಿದ್ದಳು.
ಆಕೆಯ ತಾಯಿ ಚಂದ್ರಾವತಿ ಹಿಂತಿರುಗಿ ಬಂದಾಗ ಮಗಳು ಸೀರೆಯಲ್ಲಿ ನೇಣು ಬಿಗಿದುಕೊಂಡಿರುವುದನ್ನು ಕಂಡು ಜೋರಾಗಿ ಕಿರುಚಿದಳು. ಆಕೆಯ ಕೂಗಿನಿಂದ ಗಾಬರಿಗೊಂಡ ನೆರೆಹೊರೆಯವರು ಸ್ಥಳಕ್ಕೆ ಧಾವಿಸಿ ಬಾಲಕಿಯ ಕುತ್ತಿಗೆಗೆ ಸಿಕ್ಕಿಕೊಂಡಿದ್ದ ಸೀರೆಯನ್ನು ಬಿಡಿಸಿದರು.
ಆದರೆ, ಲಿಖಿತಾ ಅದಾಗಲೇ ಮೃತಪಟ್ಟಿದ್ದಳು. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.