ಸಂಪಾಜೆ ಕೊಯನಾಡಿನಲ್ಲಿ ರಸ್ತೆ ಮತ್ತು ಸೇತುವೆ ಕುಸಿತದಿಂದಾಗಿ ಮಂಗಳೂರು – ಮಡಿಕೇರಿ ನಡುವೆ ಸಂಚಾರ ಕಡಿತಗೊಳ್ಳುವ ಸಂಭಾವ್ಯತೆ ಉಂಟಾಗಿದೆ.
ದ.ಕ ಜಿಲ್ಲೆ ಮತ್ತು ಕೊಡಗು ಜಿಲ್ಲೆಯ ಗಡಿಭಾಗವಾದ ಸಂಪಾಜೆ ಭಾಗದಲ್ಲಿ ಭಾರೀ ಮಳೆ ಸುರಿಯುತ್ತಿದೆ. ಇದರಿಂದ ಅಲ್ಲಲ್ಲಿ ರಸ್ತೆ ಬಿರುಕು ಕಾಣಿಸಿಕೊಳ್ಳುತ್ತಿದ್ದು ಸೇತುವೆಯ ಬದಿ ಕೂಡಾ ಕುಸಿದಿದೆ. ಮಂಗಳೂರು – ಮಡಿಕೇರಿ ರಾಷ್ಟ್ರೀಯ ಹೆದ್ದಾರಿಯ ಕೊಯನಾಡು ಸಮೀಪ ರಸ್ತೆಯಲ್ಲಿ ಭಾರೀ ಬಿರುಕು ಕಾಣಿಸಿಕೊಂಡಿದೆ.
ಕೊಯನಾಡಿನ ಸೇತುವೆಯ ಒಂದು ಬದಿ ಜರಿದು ಬಿದ್ದಿದೆ. ಕೊಯನಾಡಿನ ಗಣಪತಿ ದೇವಸ್ಥಾನದ ಎದುರು ರಾಷ್ಟ್ರೀಯ ಹೆದ್ದಾರಿಯ ಸೇತುವೆಯ ಒಂದು ಬದಿ ಕುಸಿದಿದೆ. ಇಲ್ಲಿ ಭಾರೀ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ.
ಸುಗಮ ಸಂಚಾರಕ್ಕೆ ಅಡೆತಡೆಯಿಂದ ಪ್ರಯಾಣಿಕರು ತೊಂದರೆ ಅನುಭವಿಸುತ್ತಿದ್ದಾರೆ. ಸೇತುವೆಯ ಕುಸಿತ ಇನ್ನಷ್ಟು ಸಂಭವಿಸಿದರೆ ಮಂಗಳೂರು – ಮಡಿಕೇರಿ ಹೆದ್ದಾರಿ ಸಂಚಾರ ಕಡಿತಗೊಳ್ಳುವ ಭೀತಿ ಎದುರಾಗಿದೆ. ಆಗ ಪ್ರಯಾಣಕ್ಕೆ ಬದಲಿ ಮಾರ್ಗಗಳನ್ನು ಅವಲಂಬಿಸಬೇಕಾಗುತ್ತದೆ.
