Friday, September 20, 2024
Homeಸುದ್ದಿವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ

ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ

ಕಲಿಕೆ ಎನ್ನುವುದು ನಿರಂತರ, ಕಾಲೇಜಿನಲ್ಲಿ ಕಲಿಯುವುದು ಮುಗಿದರೂ ನಿಮ್ಮ ನಿಜವಾದ ಜೀವನದ ಪಾಠ ಇನ್ನು ಮುಂದೆ ಪ್ರಾರಂಭವಾಗುತ್ತದೆ ಎಂದು ಮರ್ಸಿಡಿಸ್ ಬೆಂಝ್‌ನ ಪ್ರಾಡಕ್ಟ್ ಡೆವೆಲಪ್‌ಮೆಂಟ್ ವಿಭಾಗದ ಸೀನಿಯರ್ ಎಂಜಿನಿಯರ್ ಹಾಗೂ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್  ಎಂಡ್ ಟೆಕ್ನಾಲಜಿಯ ಪೂರ್ವ ವಿದ್ಯಾರ್ಥಿ ಪ್ರಬೋಧ್ ಐತಾಳ್ ಹೇಳಿದರು.


ಅವರು ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್  ಎಂಡ್ ಟೆಕ್ನಾಲಜಿಯ ಅಂತಿಮ ವರ್ಷದ ಇಂಜಿನಿಯರಿಂಗ್  ಮತ್ತು ಎಂಬಿಎ ವಿಭಾಗದ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದ ಮುಖ್ಯ ಅತಿಥಿಗಳಾಗಿ ಮಾತಾಡಿದರು. ಇತ್ತೀಚಿನ ದಿನಗಳಲ್ಲಿ ಭೌತಿಕ ಉಪಸ್ಥಿತಿಗಿಂತ ಆನ್ಲೈನ್  ವಿಧಾನಕ್ಕೆ ಹೆಚ್ಚಿನ ಪ್ರಾಶಸ್ತ್ಯ  ನೀಡಲಾಗುತ್ತಿದ್ದು, ನಿಮ್ಮನ್ನು ನೀವು ಹೇಗೆ ಪ್ರಸ್ತುತಪಡಿಸುತ್ತೀರಿ ಎನ್ನುವುದರ ಮೇಲೆ ನಿಮ್ಮ ಭವಿಷ್ಯ ನಿರ್ಧರಿತವಾಗುತ್ತದೆ ಎಂದರು.

ಹೊಸತನ್ನು ಕಲಿಯುತ್ತಾ ಹೋಗುವುದರ ಮೂಲಕ ಇತರರಿಗಿಂತ ಭಿನ್ನವಾಗುವುದಕ್ಕೆ ಪ್ರಯತ್ನಿಸಬೇಕು. ನಡವಳಿಕೆ ಮತ್ತು ತಾಂತ್ರಿಕತೆಯನ್ನು ಸಮಾನವಾಗಿ ಸಮತೋಲನ ಮಾಡಿಕೊಂಡರೆ ಮಾತ್ರ  ಒತ್ತಡವನ್ನು ನಿಭಾಯಿಸಬಹುದು ಎಂದು ನುಡಿದರು.


ಕಾಲೇಜಿನ ವಾರ್ಷಿಕಾಂಕ ‘ಅಂಕುರ’ವನ್ನು ಬಿಡುಗಡೆಗೊಳಿಸಿ ಮಾತನಾಡಿದ ವಿವೇಕಾನಂದ ವಿದ್ಯಾವರ್ಧಕ ಸಂಘದ ಉಪಾಧ್ಯಕ್ಷ ಸತೀಶ್ ರಾವ್.ಪಿ ಮಾತನಾಡಿ ಕಾಲೇಜು ಕರ್ನಾಟಕ ಸರ್ಕಾರದ ಸೂಪರ್-30 ಯೋಜನೆಗೆ ಆಯ್ಕೆಯಾಗಿದ್ದು, ವಿಶ್ವದರ್ಜೆಯ ಮಟ್ಟಕ್ಕೆ ಏರುವ ಅವಕಾಶ ಸಿಕ್ಕಿದೆ ಎಂದರು. ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡುವ ಮೂಲಕ ಈ ಕಾರ್ಯದಲ್ಲಿ ಯಶಸ್ಸನ್ನು ಸಾಧಿಸೋಣ ಎಂದರು.


ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷ ವಿಶ್ವಾಸ್ ಶೆಣೈ ಮಾತನಾಡಿ ಇದುವರೆಗೆ ಕಲಿಕೆಯಲ್ಲಿ ಮತ್ತು ಶಿಸ್ತಿನಲ್ಲಿ ನಿಮ್ಮನ್ನು ತಿದ್ದಿ ತೀಡಿ ಸಚ್ಚಾರಿತ್ರ್ಯವಂತರನ್ನಾಗಿಸುವ ನಿಟ್ಟಿನಲ್ಲಿ ಸಾಕಷ್ಟು ಶ್ರಮವಹಿಸಿದ್ದೇವೆ. ನಿಮ್ಮ ಜೀವನ ಪಯಣದಲ್ಲಿ ಇದರ ನೆನಪು ಬಂದರೆ ನಮ್ಮ ಶ್ರಮ ಸಾರ್ಥಕ ಎಂದರು. ಜೀವನದಲ್ಲಿ ಹಣಗಳಿಸುವುದೇ ಧ್ಯೇಯವಾಗಬಾರದು ನಮ್ಮನ್ನು ಈ ಮಟ್ಟಕ್ಕೆ ಬೆಳೆಸಿದ ಮಾತಾ ಪಿತರು, ಗುರುಗಳು, ವಿದ್ಯಾಸಂಸ್ಥೆಗಳು ಹಾಗೂ ಇತರರನ್ನು ನೋಯಿಸದೆ ಜೀವನವನ್ನು ಸಾರ್ಥಕಪಡಿಸಿಕೊಳ್ಳಬೇಕು ಎಂದರು.


ಕಾಲೇಜಿನಿಂದ ಬೀಳ್ಕೊಳ್ಳುವ ಎಲ್ಲಾ ವಿದ್ಯಾರ್ಥಿಗಳಿಗೆ ಸ್ಮರಣಿಕೆಯನ್ನು ನೀಡಿ ಗೌರವಿಸಲಾಯಿತು. ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯ ಮಟ್ಟದ ಆಟೋಟ ಸ್ಪರ್ಧೆಯಲ್ಲಿ ವಿಶಿಷ್ಟ ಸಾಧನೆಯನ್ನು ಮಾಡಿದ ಕ್ರೀಡಾಪಟುಗಳನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು. ವಿಡಿಯೋ ಎಡಿಟಿಂಗ್‌ನಲ್ಲಿ ವಿಶೇಷ ಸಾಧನೆಯನ್ನು ಮಾಡಿದ ಪ್ರತಿಭಾವಂತ ವಿಧ್ಯಾರ್ಥಿ ಎಲೆಕ್ಟ್ರಾನಿಕ್ಸ್  ಎಂಡ್ ಕಮ್ಯುನಿಕೇಶನ್ ವಿಭಾಗದ ಅಕ್ಷಯ್ ಕುಮಾರ್ ಅವರನ್ನು ಗೌರವಿಸಲಾಯಿತು.


ಕಾಲೇಜು ಆಡಳಿತ ಮಂಡಳಿಯ ಸಂಚಾಲಕ ಸುಬ್ರಮಣ್ಯ ಭಟ್.ಟಿ.ಎಸ್, ಕೋಶಾಧಿಕಾರಿ ಮುರಳೀಧರ ಭಟ್ ಬಂಗಾರಡ್ಕ, ನಿರ್ದೇಶಕರಾದ ಸಂತೋಷ್ ಕುತ್ತಮೊಟ್ಟೆ, ಸತ್ಯನಾರಾಯಣ ಭಟ್, ಪ್ರಾಂಶುಪಾಲ ಡಾ.ಮಹೇಶ್ ಪ್ರಸನ್ನ.ಕೆ ವಿಭಾಗ ಮುಖ್ಯಸ್ಥರಾದ ಪ್ರೊ.ಕೃಷ್ಣಮೋಹನ್, ಡಾ.ಆನಂದ್.ವಿ.ಆರ್, ಡಾ.ಮನುಜೇಶ್.ಬಿ.ಜೆ, ಪ್ರೊ.ಶ್ರೀಕಾಂತ್ ರಾವ್.ಕೆ, ಡಾ.ಗೋವಿಂದ.ಪಿ, ಪ್ರೊ.ರಮಾನಂದ್ ಕಾಮತ್, ಡಾ.ಶೇಖರ್.ಎಸ್.ಅಯ್ಯರ್, ಡಾ.ವಂದನಾ, ದೈಹಿಕ ಶಿಕ್ಷಣ ನಿರ್ದೇಶಕ ಬಾಲಚಂದ್ರ ಗೌಡ ಭಾರ್ತಿಕುಮೇರು ಮತ್ತು ಮುಖ್ಯ ಗ್ರಂಥಪಾಲಕ ದಿನೇಶ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ವಾರ್ಷಿಕ ಪತ್ರಿಕೆ ಅಂಕುರದ ಸಂಪಾದಕ ಪ್ರೊ.ಸುದರ್ಶನ್.ಎಂ.ಎಲ್ ತಮ್ಮ ಅನುಭವವನ್ನು ಹಂಚಿಕೊಂಡರು. ವಿದ್ಯಾರ್ಥಿಗಳು ಕಾಲೇಜಿನ ತಮ್ಮ ಶೈಕ್ಷಣಿಕ ಯಾನದ ಅನುಭವಗಳನ್ನು ಮೆಲುಕು ಹಾಕಿದರು. ಪ್ರಾಂಶುಪಾಲ ಡಾ.ಮಹೇಶ್ ಪ್ರಸನ್ನ.ಕೆ ಸ್ವಾಗತಿಸಿ, ಕಾರ್ಯಕ್ರಮ ಸಂಯೋಜಕ ಡಾ. ಮನುಜೇಶ್.ಬಿ.ಜೆ ವಂದಿಸಿದರು. ಸಹಾಯಕ ಪ್ರಾಧ್ಯಾಪಕರಾದ ಪ್ರೊ.ನಿಶಾ.ಜಿ.ಆರ್ ಮತ್ತು ಪ್ರೊ.ನೀಮಾ ಕಾರ್ಯಕ್ರಮ ನಿರ್ವಹಿಸಿದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments