ಭಾರೀ ಮಳೆಯಿಂದ ಮಣ್ಣಿನೊಳಗಿನ ನೀರಿನ ಹರಿವು ಹೆಚ್ಚಾಗಿದ್ದು ಮಡಿಕೇರಿಯಲ್ಲಿ ತಡೆಗೋಡೆ ರಸ್ತೆ ಕುಸಿಯುವ ಸಾಧ್ಯತೆಯಿದ್ದು ಸುಗಮ ರಸ್ತೆ ಸಂಚಾರಕ್ಕೆ ಆತಂಕ ಎದುರಾಗಿದೆ.
ಮಡಿಕೇರಿ ನಗರದ ಜಿಲ್ಲಾಧಿಕಾರಿ ಸಮೀಪದ ರಸ್ತೆ ತಡೆಗೋಡೆ ಕುಸಿಯುವ ಭೀತಿಯಲ್ಲಿದೆ. ಯಾವ ಕ್ಷಣದಲ್ಲಿಯೂ ರಸ್ತೆ ಕುಸಿಯುವ ಸಾಧ್ಯತೆ ಇರುವುದರಿಂದ ಮಡಿಕೇರಿ- ಮಂಗಳೂರು ರಾಷ್ಟ್ರೀಯ ಹೆದ್ದಾರಿ 275ನ್ನು ಸಂಪೂರ್ಣ ಬಂದ್ ಮಾಡಲಾಗಿದೆ.
ಈ ಹಿನ್ನೆಲೆಯಲ್ಲಿ ರಾತ್ರಿಯೇ ಅಧಿಕಾರಿಗಳು ನೀಡಿದ ಸಲಹೆಯ ಮೇರೆಗೆ ದಿಢೀರ್ ಆಗಿ ಮಡಿಕೇರಿಯ ಟೋಲ್‌ಗೇಟ್ ಬಳಿಯೇ ಹೆದ್ದಾರಿಯನ್ನು ಸಂಪೂರ್ಣವಾಗಿ ಮುಚ್ಚಲಾಗಿದೆ.
ಕಳೆದ ವರ್ಷ ಸುಮಾರು 7 ಕೋಟಿ ರೂ. ವೆಚ್ಚದಲ್ಲಿ ತಡೆಗೋಡೆಯನ್ನು ನಿರ್ಮಿಸಲಾಗಿತ್ತು. ತಡೆಗೋಡೆಗೆ ಹಾಕಿದ್ದ ಸ್ಲ್ಯಾಬ್‌ಗಳು ಉಬ್ಬಿ ಬೀಳುವ ಪರಿಸ್ಥಿತಿ ಈಗ ಎದುರಾಗಿದೆ. ತಡೆಗೋಡೆ ಉಬ್ಬಿರುವುದನ್ನು ಕಂಡ ಇಲಾಖೆ ಇಲ್ಲಿ ನೀರು ಹೊರ ಹೋಗಲು ರಂಧ್ರವನ್ನು ಕೊರೆಯುವ ವ್ಯವಸ್ಥೆ ಮಾಡಿದ್ದರು.

ಆದರೆ ಇದರಿಂದ ಇನ್ನಷ್ಟು ಅಪಾಯ ಹೆಚ್ಚಾಗಿದೆ. ಈ ಮುಚ್ಚಿದ ಹೆದ್ದಾರಿಗೆ ಪರ್ಯಾಯವಾಗಿ ಸಂಚಾರಕ್ಕೆ ಮಡಿಕೇರಿ – ಮೇಕೇರಿ ರಸ್ತೆಯನ್ನು ವ್ಯವಸ್ಥೆ ಮಾಡಲಾಗಿದೆ.
ರಸ್ತೆಯನ್ನು ದಿಢೀರ್ ಬಂದ್ ಮಾಡಿದ್ದರಿಂದ ಅಷ್ಟು ಸಣ್ಣ ರಸ್ತೆಯಲ್ಲಿ ಸಾಗಲು ಬೃಹತ್ ವಾಹನಗಳು ಪರದಾಡುತ್ತಿವೆ. ಸ್ಥಳದಲ್ಲೇ ಪೊಲೀಸ್ ಅಧಿಕಾರಿಗಳು ಮತ್ತು ಹೆದ್ದಾರಿ ಅಧಿಕಾರಿಗಳು ಬೀಡು ಬಿಟ್ಟಿದ್ದಾರೆ.