ಈ ಸಾಲಿನಲ್ಲಿ ಮಳೆಯ ಭೀಕರತೆಯಿಂದ ಎಲ್ಲೆಲ್ಲೂ ಪ್ರವಾಹವೇ ಕಾಣಸಿಗುತ್ತಿದೆ. ಕರ್ನಾಟಕ ಮಾತ್ರವಲ್ಲದೆ ದೇಶದಾದ್ಯಂತ ಪ್ರವಾಹದ ಕಾರಣದಿಂದ ಹಲವಾರು ಅನಾಹುತಗಳು, ಆಸ್ತಿನಷ್ಟ, ಪ್ರಾಣಹಾನಿಗಳು ಸಂಭವಿಸಿವೆ.
ಹಾಸನ ಜಿಲ್ಲೆಯಲ್ಲಿ ಕಳೆದ 12 ದಿನಗಳಿಂದ ಧಾರಾಕಾರವಾಗಿ ಮಳೆಯಾಗುತ್ತಿದೆ. ಅನೇಕ ಅವಘಡಗಳು ಸಂಭವಿಸಿವೆ. ನೂರಾರು ಮನೆಗಳು ಕುಸಿದು ಬಿದ್ದಿವೆ, ಸೇತುವೆ, ರಸ್ತೆ. ಹೊಲ, ಗದ್ದೆ, ತೋಟಗಳು ಜಲಾವೃತವಾಗಿ ಬೆಳೆ ನಾಶವಾಗಿದೆ.
ಇಂದು ಮಧ್ಯಾಹ್ನ ಮಹಾಮಳೆಗೆ ಇಬ್ಬರು ಬಲಿಯಾಗಿದ್ದಾರೆ. ಮೀನು ಹಿಡಿಯಲು ಹೋದ ವೇಳೆ ತೆಪ್ಪ ಮಗುಚಿ ಇಬ್ಬರು ಜಲಸಮಾಧಿಯಾಗಿದ್ದರೆ, ಓರ್ವ ಈಜಿ ದಡ ಸೇರಿ ಪಾರಾಗಿರುವ ಘಟನೆ ಹಾಸನ ತಾಲೂಕಿನ ತಿಮ್ಲಾಪುರ ಗ್ರಾಮದಲ್ಲಿ ನಡೆದಿದೆ.
ತಿಮ್ಲಾಪುರ ಕೆರೆಯಲ್ಲಿ ಕಿಶೋರ್ ಎಂಬವರು ಮೀನುಗಳನ್ನು ಸಾಕಿದ್ದರು. ಅವುಗಳನ್ನು ಹಿಡಿದು ಮಾರಾಟ ಮಾಡಲು ಮೂವರು ತೆಪ್ಪದಲ್ಲಿ ತೆರಳಿದ್ದರು. ಭಾರೀ ಮಳೆ, ಪ್ರವಾಹ, ಗಾಳಿಯಿಂದ ಕೆರೆಯ ಮಧ್ಯದಲ್ಲಿ ತೆಪ್ಪ ಮಗುಚಿ ಬಿದ್ದಿದ್ದು, ನೀರಲ್ಲಿ ಮುಳುಗಿ ಕಿಶೋರ್(38) ಮತ್ತು ರಾಜಣ್ಣ(50) ಸಾವನ್ನಪ್ಪಿದ್ದಾರೆ.
ಇನ್ನೊಬ್ಬರು ಈಜಿ ದಡ ಸೇರಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅಗ್ನಿಶಾಮಕ ದಳದ ಸಿಬ್ಬಂದಿ ಕೆರೆಯಲ್ಲಿ ಕಾರ್ಯಾಚರಣೆ ನಡೆಸಿ, ಕಿಶೋರ್ ಮೃತದೇಹ ಹೊರತೆಗೆದಿದ್ದಾರೆ.

ಮೂರು ಗಂಟೆಗಳ ಕಾರ್ಯಾಚರಣೆಯ ಬಳಿಕ ಅಗ್ನಿಶಾಮಕ ಸಿಬ್ಬಂದಿ ಮೃತದೇಹವನ್ನು ಹೊರತೆಗೆದಿದ್ದಾರೆ. ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ತನಿಖೆ ನಡೆಸುತ್ತಿದ್ದಾರೆ.