Saturday, January 18, 2025
Homeಯಕ್ಷಗಾನನಗುಮೊಗದ ಭಾಗವತ - ಶ್ರೀ ಪ್ರಫುಲ್ಲಚಂದ್ರ ನೆಲ್ಯಾಡಿ

ನಗುಮೊಗದ ಭಾಗವತ – ಶ್ರೀ ಪ್ರಫುಲ್ಲಚಂದ್ರ ನೆಲ್ಯಾಡಿ

ಯಕ್ಷಗಾನ ಕಲೆಯ ಹಿಮ್ಮೇಳದಲ್ಲಿ ಹಾಡುಗಾರರನ್ನು ಭಾಗವತ ಎಂದು ಕರೆಯುವುದು ರೂಢಿ. ಇಂದು ಅನೇಕ ಉದಯೋನ್ಮುಖ ಹಾಡುಗಾರರು ಕಲಾಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಅಂತಹವರಲ್ಲೊಬ್ಬರು  ನಗುಮೊಗದ ಭಾಗವತ ಶ್ರೀ ಪ್ರಫುಲ್ಲಚಂದ್ರ ನೆಲ್ಯಾಡಿ. 

ಶ್ರೀ ಪ್ರಫುಲ್ಲಚಂದ್ರ ನೆಲ್ಯಾಡಿ  ಅವರ ಮೂಲಮನೆ ಬಂಟ್ವಾಳ ತಾಲೂಕಿನ ಕೊಳ್ನಾಡು ಗ್ರಾಮದ ಪಂಜಿಗದ್ದೆ. ಇವರು ಜನಿಸಿದ್ದು  ಪುತ್ತೂರು ಸಮೀಪದ ಪಡ್ಡಾಯೂರು ಮನೆಯಲ್ಲಿ. (ಅಜ್ಜನ ಮನೆಯಲ್ಲಿ ಜನನ) ಪಂಜಿಗದ್ದೆ ಶ್ರೀ ಗಣಪತಿ ಭಟ್ ಮತ್ತು ಶ್ರೀಮತಿ ಸ್ವರ್ಣಲತಾ ದಂಪತಿಗಳ ಪುತ್ರನಾಗಿ 1981 ನೇ ಇಸವಿ ಅಕ್ಟೋಬರ್ 26ರಂದು ಜನನ.

ಶ್ರೀ ಗಣಪತಿ ಭಟ್ಟರು ಅನೇಕ ಭಾಷೆಗಳನ್ನೂ ಉದ್ಯೋಗಗಳನ್ನೂ ಬಲ್ಲವರು. ಸದಾ ಅಧ್ಯಯನಶೀಲರು. ಹತ್ತಕ್ಕೂ ಹೆಚ್ಚು ಭಾಷೆಗಳನ್ನು ಓದಲು ಮತ್ತು ಬರೆಯಲು ಬಲ್ಲವರು. ಹೊಲಿಗೆ, ಮೆಕ್ಯಾನಿಕ್ ಮತ್ತು ಇಲೆಕ್ಟ್ರಿಕಲ್ ಮೊದಲಾದ ಕೆಲಸಗಳನ್ನೂ ಬಲ್ಲವರು. ಯಕ್ಷಗಾನ ಕಲಾಸಕ್ತರೂ ಹೌದು. ಶ್ರೀ ಪ್ರಫುಲ್ಲಚಂದ್ರರು ಓದಿದ್ದು ಹತ್ತನೇ ತರಗತಿ ವರೆಗೆ. ಮಂಜಲ್ಪಡ್ಪು, ಮಾದಕಟ್ಟೆ, ಕೊಂಬೆಟ್ಟು ಶಾಲೆಗಳಲ್ಲಿ ಓದಿದ್ದರು.

ಎಳವೆಯಲ್ಲೇ ಯಕ್ಷಗಾನಾಸಕ್ತಿ ಇತ್ತು. ಆಡಿಯೋ ಕ್ಯಾಸೆಟ್ ನಲ್ಲಿ ಪ್ರಸಿದ್ಧ ಯಕ್ಷಗಾನ ಭಾಗವತರ ಹಾಡುಗಳನ್ನು ಕೇಳುವ ಹವ್ಯಾಸವಿತ್ತು. ಧರ್ಮಸ್ಥಳ, ಸಾಲಿಗ್ರಾಮ, ಬಚ್ಚಗಾರು ಮೊದಲಾದ ಮೇಳಗಳ ಪ್ರದರ್ಶನಗಳನ್ನೂ ನೋಡುತ್ತಿದ್ದರು. ಆಟ ತಾಳಮದ್ದಲೆಗಳಿಗೆ ಹೋದರೆ ಹಾರ್ಮೋನಿಯಂ ಬಾರಿಸುವ ಕ್ರಮವೂ ಇತ್ತು. ಇವರಿಗೆ ಹಿಮ್ಮೇಳ ವಿಭಾಗದಲ್ಲಿ ಆಸಕ್ತಿ ಹೆಚ್ಚು. ಆದರೂ ಮೊದಲು ರಂಗಪ್ರವೇಶ ಮಾಡಿದ್ದು ವೇಷಧಾರಿಯಾಗಿ.

ಹೈಸ್ಕೂಲು ವಿದ್ಯಾರ್ಥಿಯಾಗಿದ್ದಾಗ ಪುತ್ತೂರು ಕೊಂಬೆಟ್ಟು ಶಾಲೆಯ ದೈಹಿಕ ಶಿಕ್ಷಕರಾಗಿದ್ದ ಶ್ರೀ ಇಬ್ರಾಹಿಂ ಶಾಫಿ ಅವರಿಂದ ನಾಟ್ಯಾಭ್ಯಾಸ. ಶ್ರೀ ಇಬ್ರಾಹಿಂ ಶಾಫಿ ಅವರು ಹವ್ಯಾಸೀ ಉತ್ತಮ ಕಲಾವಿದರಾಗಿದ್ದರು. ಮಹಿಷಾಸುರ ಮೊದಲಾದ ಪಾತ್ರಗಳಲ್ಲಿ ಖ್ಯಾತಿ ಗಳಿಸಿದ್ದರು. ಅವರಿಂದ ನಾಟ್ಯ ಕಲಿತು ಪ್ರಫುಲ್ಲಚಂದ್ರರು ವೇಷ ಮಾಡಲು ಆರಂಭಿಸಿದರು. ಬಳಿಕ ರಜಾದಿನಗಳಲ್ಲಿ ಬಳ್ಳಂಬೆಟ್ಟು ಶೀನಪ್ಪ ಭಂಡಾರಿಗಳ ನೇತೃತ್ವದ ಸುಬ್ರಹ್ಮಣ್ಯ ಮೇಳದಲ್ಲಿ ವೇಷ ಮಾಡುತ್ತಿದ್ದರು.

ಹಿಮ್ಮೇಳ ಕಲಾವಿದನಾಗಬೇಕೆಂಬ ಆಸೆ.  ಎಸ್ ಎಸ್ ಎಲ್ ಸಿ ಶಿಕ್ಷಣದ ನಂತರ ಮದ್ದಳೆ ಕಲಿಯಲು ತೀರ್ಮಾನ. ಮಾಂಬಾಡಿ ಶ್ರೀ ಸುಬ್ರಹ್ಮಣ್ಯ ಭಟ್ಟರು ಕೋಡಪದವು ಶ್ರೀ ವೀರಾಂಜನೇಯ ವ್ಯಾಯಾಮ ಶಾಲೆಯಲ್ಲಿ ನಡೆಸುತ್ತಿದ್ದ ತರಬೇತಿ ಕೇಂದ್ರಕ್ಕೆ ತೆರಳಿದರು. ಶ್ರೀ ಮಾಂಬಾಡಿ ಗುರುಗಳ ಸೂಚನೆಯಂತೆ ಅವರಿಂದ ಭಾಗವತಿಕೆಯ ಅಭ್ಯಾಸ. ಗುರುಗಳ ಮನೆಗೆ ತೆರಳಿಯೂ ತರಬೇತಿಯನ್ನು ಪಡೆದಿದ್ದರು.

ಈ ಸಂದರ್ಭದಲ್ಲಿ ಪಂಜಿಗದ್ದೆಯಿಂದ ತೆರಳಿ ನೆಲ್ಯಾಡಿಯಲ್ಲಿ ವಾಸ್ತವ್ಯ. ಭಾಗವತ ನೆಲ್ಯಾಡಿ ಲಕ್ಷ್ಮೀನಾರಾಯಣ ಶೆಟ್ಟರಿಂದಲೂ ಅಭ್ಯಾಸ ಮಾಡಿದ್ದರು. ಶ್ರೀ ಪ್ರಫುಲ್ಲಚಂದ್ರರ ಮೊದಲ ತಿರುಗಾಟ ಕಟೀಲು ಶ್ರೀ ದುರ್ಗಾಪರಮೇಶ್ವರೀ ದಶಾವತಾರ ಯಕ್ಷಗಾನ ಮಂಡಳಿಯಲ್ಲಿ ಸಂಗೀತಗಾರನಾಗಿ. 1997-98ರಲ್ಲಿ ಕಟೀಲು ಒಂದನೇ ಮೇಳಕ್ಕೆ ಸಂಗೀತಗಾರನಾಗಿ ಸೇರ್ಪಡೆ. ಬೊಟ್ಟಿಕೆರೆ ಶ್ರೀ ಪುರುಷೋತ್ತಮ ಪೂಂಜರು ಆಗ ಪ್ರಧಾನ ಭಾಗವತರಾಗಿದ್ದರು. ಪ್ರಥಮ ವರ್ಷವೇ ಸಂಗೀತದ ಜತೆಗೆ ಪ್ರಸಂಗದಲ್ಲಿ ಪದ್ಯ ಹೇಳಲು ಅವಕಾಶವಿತ್ತು ಪ್ರೋತ್ಸಾಹಿಸಿದ್ದರು.

ಮೂರು ವರ್ಷಗಳ ಕಾಲ ಒಂದನೇ ಮೇಳದಲ್ಲಿ ತಿರುಗಾಟ ನಡೆಸಿದ್ದರು. ಬಳಿಕ ಬಡಗಿನ ಭಾಗವತಿಕೆ ಕಲಿಯುವ ಆಸೆಯಾಗಿತ್ತು. ಮಂದಾರ್ತಿ ಕೇಂದ್ರದಲ್ಲಿ ಬಡಗಿನ ಖ್ಯಾತ ಪ್ರಾಚಾರ್ಯ ಶ್ರೀ ಕೆ.ಪಿ ಹೆಗಡೆ ಅವರಿಂದ ಅಭ್ಯಾಸ. ಅದೇ ವರ್ಷ ಮಂದಾರ್ತಿ ನಾಲ್ಕನೇ ಮೇಳದಲ್ಲಿ ಶ್ರೀ ಕೆ. ಪಿ. ಹೆಗಡೆ ಅವರ ಜತೆ ತಿರುಗಾಟ.

ಬಳಿಕ ಖ್ಯಾತ ಸ್ತ್ರೀ ಪಾತ್ರಧಾರಿ ಗೋಣಿಬೀಡು ಶ್ರೀ ಸಂಜಯ ಕುಮಾರರ ನೇತೃತ್ವದ ಬಪ್ಪನಾಡು ಮೇಳದಲ್ಲಿ ವ್ಯವಸಾಯ. ಅಲ್ಲದೆ ಕೂಡ್ಲು ಶ್ರೀ ರವಿರಾಜರ ನೇತೃತ್ವದ ಕೂಡ್ಲು ಮೇಳದ ಪ್ರದರ್ಶನಗಳಲ್ಲೂ ಭಾಗವಹಿಸುತ್ತಿದ್ದರು. ಬಳಿಕ ಒಂದು ವರ್ಷ ಎಡನೀರು ಮೇಳದಲ್ಲಿ. ಈ ಸಂದರ್ಭದಲ್ಲಿ ಶ್ರೀ ದಿನೇಶ ಅಮ್ಮಣ್ಣಾಯರು ಪ್ರೋತ್ಸಾಹಿಸಿದ್ದರು. ಬಳಿಕ ಮೂರು ವರ್ಷ ಹೊಸನಗರ ಮೇಳದಲ್ಲಿ. ಈ ಸಂದರ್ಭದಲ್ಲಿ ಪದ್ಯಾಣ ಗಣಪತಿ ಭಟ್ಟರಿಂದ ತರಬೇತಿ ಮತ್ತು ಪ್ರೋತ್ಸಾಹವನ್ನೂ ಪಡೆದಿದ್ದರು.

ಬಳಿಕ  ಮತ್ತೆ ಕಟೀಲು ಮೇಳಕ್ಕೆ. ಮೂರು ವರ್ಷಗಳ ಕಾಲ ನಾಲ್ಕನೇ ಮೇಳದಲ್ಲಿ ಕುಬಣೂರು ಶ್ರೀಧರ ರಾಯರ ಜತೆ ವ್ಯವಸಾಯ. ಬಳಿಕ ಕಟೀಲು ಮೂರನೇ ಮೇಳದಲ್ಲಿ 2 ವರ್ಷ ಮತ್ತು ಎರಡನೇ ಮೇಳದಲ್ಲಿ 1 ವರ್ಷ ತಿರುಗಾಟ ನಡೆಸಿದ್ದರು. ಬಳಿಕ ಒಂದು ವರ್ಷ ಯಕ್ಷಗಾನದಿಂದ ದೂರವಾಗಿ ಕೃಷಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದರು. ಪ್ರಸ್ತುತ ಯಕ್ಷಧ್ರುವ ಪಟ್ಲ ಶ್ರೀ ಸತೀಶ ಶೆಟ್ಟರ ಜತೆ ಶ್ರೀ ಪಾವಂಜೆ ಮೇಳದಲ್ಲಿ ವ್ಯವಸಾಯ ಮಾಡುತ್ತಿದ್ದಾರೆ.ಪ್ರಸ್ತುತ ಇವರು ಗಾನವೈಭವ ಕಾರ್ಯಕ್ರಮಗಳಲ್ಲೂ ಕಾಣಿಸಿಕೊಳ್ಳುತ್ತಿದ್ದಾರೆ. 

ಪ್ರಫುಲ್ಲಚಂದ್ರ ನೆಲ್ಯಾಡಿ ಅವರ ಬಾಳ ಸಂಗಾತಿ ಶ್ರೀಮತಿ ಪ್ರತಿಭಾ (2009 ಏಪ್ರಿಲ್ 3ರಂದು ವಿವಾಹ ) ಪ್ರಫುಲ್ಲಚಂದ್ರ ಪ್ರತಿಭಾ ದಂಪತಿಗಳಿಗೆ ಇಬ್ಬರು ಮಕ್ಕಳು. ಪುತ್ರಿ ಕು| ವರ್ಷಿಣಿ ಏಳನೆಯ ತರಗತಿ ವಿದ್ಯಾರ್ಥಿನಿ ಪುತ್ರ ಮಾ| ವಸಿಷ್ಠರಾಮ 6ನೆಯ ತರಗತಿ ವಿದ್ಯಾರ್ಥಿ. ಮಕ್ಕಳಿಗೆ ಉಜ್ವಲವಾದ ಭವಿಷ್ಯ ಸಿದ್ಧಿಸಲಿ. ಶ್ರೀ ಪ್ರಫುಲ್ಲಚಂದ್ರರಿಂದ ಕಲಾಸೇವೆಯು ನಿರಂತರವಾಗಿ ನಡೆಯಲಿ. ಶ್ರೀ ದೇವರು ಅವರ ಮನದ ಅಭಿಲಾಷೆಗಳನ್ನು ಅನುಗ್ರಹಿಸಲಿ ಎಂಬ ಹಾರೈಕೆಗಳು. 

ಲೇಖಕ: ರವಿಶಂಕರ್ ವಳಕ್ಕುಂಜ 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments