Friday, November 22, 2024
Homeಯಕ್ಷಗಾನವೇಣೂರು ಸಂಸ್ಮರಣೆ, ಪ್ರಶಸ್ತಿ ಪ್ರದಾನ, ತಾಳಮದ್ದಳೆ

ವೇಣೂರು ಸಂಸ್ಮರಣೆ, ಪ್ರಶಸ್ತಿ ಪ್ರದಾನ, ತಾಳಮದ್ದಳೆ

ದೇಲಂತಪುರಿ ಮೇಳದ ಇತಿಹಾಸ ಹೊಂದಿರುವ ವೇಣೂರು ಯಕ್ಷಗಾನ ಪ್ರದರ್ಶನಗಳ ಮತ್ತು ಕಲಾವಿದರ ನೆಲೆಬೀಡಾಗಿದ್ದು ಹಾಸ್ಯರತ್ನ ಸುಂದರ ಆಚಾರ್ಯರ ಕೊಡುಗೆಯು ನಾಡಿಗೆ ಕೀರ್ತಿಯನ್ನು ತಂದಿದೆ ಎಂದು ವೇಣೂರು ಶ್ರೀ ಮಹಾಲಿಂಗೇಶ್ವರ ದೇವಾಲಯದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ಪುರುಷೋತ್ತಮ ರಾವ್ ತಿಳಿಸಿದರು. ವೇಣೂರು ಭರತೇಶ ಸಭಾಭವನದ ಅರ್ಕುಳ ಸುಬ್ರಾಯ ಆಚಾರ್ಯ ವೇದಿಕೆಯಲ್ಲಿ ಜರಗಿದ ಸುಂದರ ಆಚಾರ್ಯರ ಪ್ರಥಮ ಸಂಸ್ಮರಣಾ ಕಾರ್ಯಕ್ರಮವನ್ನು ದೀಪ ಪ್ರಜ್ವಲನೆ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.


ವೇಣೂರು ಸುಂದರ ಆಚಾರ್ಯರ ಸಂಸ್ಮರಣಾ ಭಾಷಣ ಮಾಡಿದ ರಾಜ್ಯ ಪ್ರಶಸ್ತಿ ಪುರಸ್ಕೃತ ಕಲಾವಿದ ಎಂ.ಕೆ ರಮೇಶ ಆಚಾರ್ಯ ಆರಂಭದಲ್ಲಿ ಪುಂಡುವೇಷಧಾರಿಯಾಗಿದ್ದ ಸುಂದರಾಚಾರ್ಯರು ಹಾಸ್ಯಗಾರರಾಗಿ ಸುರತ್ಕಲ್ ಮೇಳದಲ್ಲಿ 42 ವರ್ಷಗಳ ತಿರುಗಾಟದಲ್ಲಿ ಶೇಣಿ, ಸಾಮಗ ತೆಕ್ಕಟ್ಟೆಯಂತಹ ಮಹಾನ್ ಕಲಾವಿದರಿಂದ ಮೆಚ್ಚುಗೆ ಪಡೆದವರಾಗಿದ್ದು ಪೌರಾಣಿಕ ಐತಿಹಾಸಿಕ ಮತ್ತು ತುಳು ಯಕ್ಷಗಾನ ಪ್ರಸಂಗಗಳಲ್ಲಿ ಅವರು ನಿರ್ವಹಿಸಿದ ನೂರಾರು ಪಾತ್ರಗಳಲ್ಲಿ ಅವರ ಸ್ವಂತಿಕೆಯನ್ನು ಕಾಣಬಹುದಾಗಿದೆ ಎಂದು ತಿಳಿಸಿದರು.


ಸಂಸ್ಮರಣಾ ಪ್ರಶಸ್ತಿ ಪ್ರದಾನ: ರಾಜ್ಯ ಪ್ರಶಸ್ತಿ ಪುರಸ್ಕೃತ ಶಿವರಾಮ ಜೋಗಿ ಅವರ 63 ವರ್ಷಗಳ ತಿರುಗಾಟವು ಯಕ್ಷಗಾನ ಕ್ಷೇತ್ರದಲ್ಲಿ ಅವರ ಶೈಲಿಯಿಂದಾಗಿ ಅಚ್ಚಳಿಯದೆ ಉಳಿದಿದೆ ಎಂದು ತಿಳಿಸಿ ವೇಣೂರು ಸುಂದರಾಚಾರ್ಯರ ದೀರ್ಘಕಾಲದ ಸಹ ಕಲಾವಿದರಾದ ಜೋಗಿ ಅವರಿಗೆ ಸುಂದರ ಆಚಾರ್ಯರ ಪ್ರಥಮ ಸಂಸ್ಮರಣಾ ಪ್ರಶಸ್ತಿಯನ್ನು ನೀಡುತ್ತಿರುವುದು ಅತ್ಯಂತ ಸೂಕ್ತವಾಗಿರುವುದಾಗಿ ಅಭಿನಂದನಾ ನುಡಿಗಳಲ್ಲಿ ರಮೇಶ ಆಚಾರ್ಯರು ಸಂತಸ ವ್ಯಕ್ತಪಡಿಸಿದರು.


ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಜೋಗಿ ಅವರು ಸುಂದರಾಚಾರ್ಯರೊ0ದಿಗಿನ ಮೇಳದ ತಿರುಗಾಟವು ಸಾಹೋದರ್ಯ ಭಾವದಿಂದ ಕೂಡಿತ್ತು. ಉದರಂಬರಣಕ್ಕಾಗಿ ಯಕ್ಷಗಾನ ಕ್ಷೇತ್ರಕ್ಕೆ ಬಂದ ನಾನು ಕಲಾಮಾತೆಯ ಅನುಗ್ರಹದಿಂದ ಕಲಾವಿದರ ಮತ್ತು ಕಲಾಭಿಮಾನಿಗಳ ಪ್ರೀತಿಯಿಂದ ಸಕ್ರಿಯನಾಗಿದ್ದೇನೆಂದು ತಿಳಿಸಿ ಈ ಪ್ರಶಸ್ತಿಯು ನನಗೆ ಅತ್ಯಂತ ದೊಡ್ಡ ಗೌರವವನ್ನು ತಂದಿದೆ ಎಂದು ಕೃತಜ್ಞತೆ ಸಲ್ಲಿಸಿದರು.


ನುಡಿ ನಮನ: ವೇಣೂರಿನ ಪ್ರತಿಭಾವಂತ ಯುವ ಕಲಾವಿದರಾಗಿ ಜನಪ್ರಿಯರಾಗಿದ್ದಾಗಲೇ ಅಸ್ತಂಗತರಾದ ವೇಣೂರು ಸುಂದರಾಚಾರ್ಯರ ಕಿರಿಯ ಪುತ್ರ ಭಾಸ್ಕರಚಾರ್ಯ ಮತ್ತು ಹಿರಿಯಡ್ಕ ಮೇಳದ ಕಲಾವಿದ-ಪ್ರಬಂಧಕರಾಗಿದ್ದ ವಾಮನ ಕುಮಾರ್ ಅವರ ಕಲಾಸಾಧನೆಯನ್ನು ಪೂಕಳ ಲಕ್ಷ್ಮೀನಾರಾಯಣ ಭಟ್ ಸ್ಮರಿಸಿ ಮಹಾನ್ ಕಲಾವಿದ ಕೀರ್ತಿಶೇಷ ಅರ್ಕುಳ ಸುಬ್ರಾಯಾಚಾರ್ಯ ವೇದಿಕೆಯಲ್ಲಿ ಸಾರ್ಥಕ ಕಾರ್ಯಕ್ರಮ ಸಂಪನ್ನಗೊ0ಡಿದೆ ಎಂದು ಧನ್ಯತಾ ಭಾವ ವ್ಯಕ್ತಪಡಿಸಿದರು.


ಮುಖ್ಯ ಅತಿಥಿಗಳಾಗಿದ್ದ ಕಲಾಪೋಷಕ ಶ್ರೀಪತಿ ಭಟ್ ಮೂಡಬಿದ್ರೆ, ಉದ್ಯಮಿ ಭಾಸ್ಕರ್ ಪೈ ವೇಣೂರು, ಗ್ರಾಮ ಪಂಚಾಯತ್ ಅಧ್ಯಕ್ಷ ನೇಮಯ್ಯ ಕುಲಾಲ್ ಶುಭ ಹಾರೈಸಿದರು. ಬೆಳ್ತಂಗಡಿ ಶಾಸಕರಾದ ಹರೀಶ್ ಪೂಂಜ ಸಮಿತಿಗೆ ನೀಡಿದ ನೆರವಿಗೆ ಕೃತಜ್ಞತೆ ವ್ಯಕ್ತಪಡಿಸಿ ಅವರ ಶುಭ ಸಂದೇಶವನ್ನು ತಿಳಿಸಲಾಯಿತು.


ಸಭಾಧ್ಯಕ್ಷತೆ ವಹಿಸಿದ್ದ ಮಂಗಳೂರು ಶ್ರೀ ಕಾಳಿಕಾಂಬಾ ದೇವಳದ ಎರಡನೇ ಮೊಕ್ತೇಸರ ಸುಂದರ ಆಚಾರ್ಯ ಬೆಳುವಾಯಿ ಮಾತನಾಡಿ ಕಲಾವಿದರ ತ್ಯಾಗ, ಕಲಾ ಪ್ರೀತಿ ಮತ್ತು ಕಲಾಭಿಮಾನಿಗಳ ಬೆಂಬಲದಿ0ದ ಯಕ್ಷಗಾನ ಉಳಿದು ಬೆಳೆದು ಬಂದಿದೆ. ವೇಣೂರು ಸುಂದರ ಆಚಾರ್ಯರ ಸಾಧನೆ ಮತ್ತು ಕೊಡುಗೆಗಾಗಿ ಅವರ ಸಂಸ್ಮರಣೆಯು ನಿರಂತರವಾಗಿ ನಡೆಯುವಂತಹ ವ್ಯವಸ್ಥೆಯಾಗುವಂತೆ ಎಲ್ಲರೂ ಕೈಜೋಡಿಸಬೇಕೆಂದು ತಿಳಿಸಿದರು.

ವೇದಿಕೆಯಲ್ಲಿ ಸಮಿತಿಯ ಗೌರವಾಧ್ಯಕ್ಷ ರವೀಂದ್ರ ಆಚಾರ್ಯ ವೇಣೂರು, ಅಧ್ಯಕ್ಷ ಶ್ರೀಧರ ಆಚಾರ್ಯ ಖಂಡಿಗ, ಸುಂದರ ಆಚಾರ್ಯರ ಪತ್ನಿ ಪ್ರೇಮಾವತಿ ಉಪಸ್ಥಿತರಿದ್ದರು. ಕುಮಾರಿ ಶ್ರೇಯಾ ಅಲಂಕಾರು ಯಕ್ಷಗಾನ ಶೈಲಿಯಲ್ಲಿ ಪ್ರಾರ್ಥಿಸಿದರು. ಸಮಿತಿಯ ಸಲಹೆಗಾರ ರಾಷ್ಟ್ರಪ್ರಶಸ್ತಿ ಪುರಸ್ಕೃತ ದಿವಾಕರ ಆಚಾರ್ಯ ಗೇರುಕಟ್ಟೆ ಪ್ರಸ್ತಾವನೆಯೊಂದಿಗೆ ಸ್ವಾಗತಿಸಿದರು. ಪ್ರಭಾಕರ ಪ್ರಭು ವೇಣೂರು ಸನ್ಮಾನ ಪತ್ರ ವಾಚಿಸಿದರು.


ಸಂಸ್ಮರಣಾ ಸಮಿತಿಯ ಉಪಾಧ್ಯಕ್ಷರಾದ ಸದಾಶಿವ ಕುಲಾಲ್ ವೇಣೂರು, ಚಂದ್ರಶೇಖರ ಭಟ್ ಕೊಂಕಣಾಜೆ, ಸದಾಶಿವ ಆಚಾರ್ಯ ಕೊಡ್ಲೆ, ಅಶೋಕ್ ಆಚಾರ್ಯ ವೇಣೂರು, ಖಜಾಂಜಿ ಸೀತಾರಾಮ ಆಚಾರ್ಯ ವೇಣೂರು, ಸಹ ಕಾರ್ಯದರ್ಶಿ ಹರಿಶ್ಚಂದ್ರ ಆಚಾರ್ಯ, ಭಾಸ್ಕರಾಚಾರ್ಯ ಅಂಡಿ0ಜೆ, ಪ್ರಭಾಕರ ಆಚಾರ್ಯ, ಮಮತಾ.ವಿ ಆಚಾರ್ಯ ಮಂಗಳೂರು, ಯಶೋಧರ ಆರಿಗ, ಸತೀಶ್ ಆಚಾರ್ಯ, ಗಂಗಾಧರಾಚಾರ್ಯ ವಿವಿಧ ಕಾರ್ಯಕ್ರಮಗಳನ್ನು ನಿರ್ವಹಿಸಿದರು. ದಿನೇಶ ಶರ್ಮ ಕೊಯ್ಯೂರು ಕಾರ್ಯಕ್ರಮ ನಿರೂಪಿಸಿದರು. ಸಮಿತಿಯ ಕಾರ್ಯದರ್ಶಿ ಪ್ರಕಾಶ ಪುರೋಹಿತ್ ವೇಣೂರು ವಂದಿಸಿದರು.


ಸದಾನಂದ ಆಚಾರ್ಯ ನೂರಾಲ್ ಬೆಟ್ಟು ಸಂಯೋಜನೆಯಲ್ಲಿ ಪ್ರಸಿದ್ಧ ಕಲಾವಿದರಿಂದ ಕಣಾರ್ಜುನ ಮತ್ತು ವಾಲಿಮೋಕ್ಷ ತಾಳಮದ್ದಳೆ ಜರಗಿತು. ಹಿಮ್ಮೇಳದಲ್ಲಿ ರವಿಚಂದ್ರ ಕನ್ನಡಿಕಟ್ಟೆ, ದಿವಾಕರ ಆಚಾರ್ಯ ಪೊಳಲಿ, ಚಂದ್ರಶೇಖರ ಭಟ್ ಕೊಂಕಣಾಜೆ, ಸುಧಾಸ್ ಕಾವೂರು, ಯೋಗೀಶ್ ಕುಂದಲ್ಕೋಡಿ, ಯೋಗೀಶ್ ಆಚಾರ್ಯ ಉಳೆಪಾಡಿ, ಕುಮಾರಿ ಪೂಜಾ ಆಚಾರ್ಯ ಶಿರ್ತಾಡಿ, ಸತೀಶ್ ಚಾರ್ಮಾಡಿ ಅರ್ಥದಾರಿಗಳಾಗಿ ಎಂ.ಕೆ ರಮೇಶ ಆಚಾರ್ಯ, ಪೂಕಳ ಲಕ್ಷ್ಮೀನಾರಾಯಣ ಭಟ್, ಜಬ್ಬಾರ್ ಸಮೋ, ಬಂಟ್ವಾಳ ಜಯರಾಮ ಆಚಾರ್ಯ, ದಿವಾಕರ ಆಚಾರ್ಯ ಗೇರುಕಟ್ಟೆ, ಪ್ರಜ್ವಲ್ ಕುಮಾರ್ ಗುರುವಾಯನಕೆರೆ, ಸತೀಶ್ ಆಚಾರ್ಯ ಮಾಣಿ, ಅಶೋಕ ಆಚಾರ್ಯ ವೇಣೂರು, ದಿನೇಶ ಶರ್ಮ ಕೊಯ್ಯೂರು ಭಾಗವಹಿಸಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments