Saturday, January 18, 2025
Homeಯಕ್ಷಗಾನನಗುಮೊಗದ ಅನುಭವಿ ಯಕ್ಷಗಾನ ಕಲಾವಿದ ಸುನಿಲ್ ಪದ್ಮುಂಜ

ನಗುಮೊಗದ ಅನುಭವಿ ಯಕ್ಷಗಾನ ಕಲಾವಿದ ಸುನಿಲ್ ಪದ್ಮುಂಜ

ಶ್ರೀ ಸುನಿಲ್ ಪದ್ಮುಂಜ ಅವರು ಕಟೀಲು ಶ್ರೀ ದುರ್ಗಾಪರಮೇಶ್ವರೀ ದಶಾವತಾರ ಯಕ್ಷಗಾನ ಮಂಡಳಿಯ ಕಲಾವಿದ. ಕಳೆದ ಹದಿನಾಲ್ಕು ವರ್ಷಗಳಿಂದ ಕಟೀಲು ಮೂರನೆಯ ಮೇಳದಲ್ಲಿ ವ್ಯವಸಾಯ ಮಾಡುತ್ತಿದ್ದಾರೆ. ಪುಂಡುವೇಷ ಮತ್ತು ಕಿರೀಟ ವೇಷಗಳಲ್ಲಿ ಇವರು ಕಾಣಿಸಿಕೊಳ್ಳುತ್ತಾರೆ. ಅನಿವಾರ್ಯವಾದರೆ ಸ್ತ್ರೀವೇಷ ಮತ್ತು ಹಾಸ್ಯ ಪಾತ್ರಗಳನ್ನೂ ನಿರ್ವಹಿಸಬಲ್ಲರು.

ವೇಷ ಮಾಡುವುದಕ್ಕೆ ಮೊದಲೇ ವೇಷಭೂಷಣ ತಯಾರಿಕೆಯ ಕೆಲಸವನ್ನು ಕಲಿತಿದ್ದರು. ಈ ವಿಚಾರದಲ್ಲಿ ಪುತ್ತೂರು ಚಂದ್ರಶೇಖರ ಹೆಗ್ಡೆ ಅವರಿಂದ ತರಬೇತಿಯನ್ನು ಪಡೆದಿದ್ದರು. ಖ್ಯಾತ ಕಲಾವಿದ ಪುತ್ತೂರು ಶ್ರೀಧರ ಭಂಡಾರಿಗಳ ನೇತೃತ್ವದ ಪುತ್ತೂರು ಮಹಾಲಿಂಗೇಶ್ವರ ಪ್ರವಾಸಿ ಯಕ್ಷಗಾನ ಮಂಡಳಿ, ಬಜಪೆ ರಾಘವದಾಸರ ಶ್ರೀ ಭಾರತೀ ಕಲಾ ಆರ್ಟ್ಸ್, ಶ್ರೀ ಪ್ರಸಾದ್ ದಾಸರ ಮಾತಾಶ್ರೀ ಕಲಾ ಆರ್ಟ್ಸ್ ಉಜಿರೆ ಎಂಬ ಮೂರು ಸಂಸ್ಥೆಗಳಲ್ಲಿ ಯಕ್ಷಗಾನ ವೇಷಭೂಷಣ ತಯಾರಿಕೆಯ ಕೆಲಸಗಳನ್ನು ಮಾಡಿ ಅನುಭವಗಳನ್ನು ಗಳಿಸಿದ್ದರು.

ಕಳೆದ ಹದಿನಾಲ್ಕು ವರ್ಷಗಳಿಂದ ಕಟೀಲು ಮೇಳಗಳ ವೇಷಭೂಷಣ ತಯಾರಿಕೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಯಕ್ಷಗಾನ ಕ್ಷೇತ್ರದಲ್ಲಿ ಇವರದು ಬಿಡುವಿಲ್ಲದ ದುಡಿಮೆ. ಬೇಸಿಗೆಯಲ್ಲಿ ಮೇಳದ ತಿರುಗಾಟ, ಮಳೆಗಾಲದಲ್ಲಿ ವೇಷಭೂಷಣ ತಯಾರಿಕೆ. ಕಳೆದ ಇಪ್ಪತ್ತಾರು ವರ್ಷಗಳಿಂದ ಯಕ್ಷಗಾನ ಕ್ಷೇತ್ರದಲ್ಲಿ ರಂಗಪ್ರಸಾಧನ ಮತ್ತು ವೇಷಧಾರಿಯಾಗಿ ಕಲಾಸೇವೆಯನ್ನು ಮಾಡುತ್ತಿದ್ದಾರೆ. 

ನಗುಮೊಗದ ಅನುಭವೀ ಕಲಾವಿದ  ಶ್ರೀ ಸುನಿಲ್ ಪದ್ಮುಂಜ 1976 ಜೂನ್ 1ರಂದು ಈ ಲೋಕದ ಬೆಳಕನ್ನು ಕಂಡವರು. ಓದಿದ್ದು ಹತ್ತನೇ ತರಗತಿ ವರೆಗೆ. ಸುಂಕದಕಟ್ಟೆ ಶ್ರೀ ನಿರಂಜನ ಸ್ವಾಮಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ. ಬಾಲಕನಾಗಿದ್ದಾಗಲೇ ಯಕ್ಷಗಾನ ಆಸಕ್ತಿ ಇತ್ತು. ಸುಂಕದಕಟ್ಟೆ ಪರಿಸರದಲ್ಲಿ ನಡೆಯುತ್ತಿದ್ದ ಪ್ರದರ್ಶನಗಳನ್ನು ನೋಡುತ್ತಿದ್ದರು.

ತಾನೂ ಯಕ್ಷಗಾನ ಕಲಾವಿದನಾಗಬೇಕೆಂಬ ಆಸೆಯುಂಟಾಗಿತ್ತು. ಎಳವೆಯಲ್ಲಿ ತೆಂಕುತಿಟ್ಟಿನ ಖ್ಯಾತ ಕಲಾವಿದ ಪುತ್ತೂರು ಶ್ರೀಧರ ಭಂಡಾರಿಗಳ ಆಶ್ರಯದಲ್ಲೇ ಬೆಳೆದವರಿವರು. ಮಗನಂತೆಯೇ ಕಂಡು ಸಾಕಿ ಸಲಹಿದ್ದರು. ಸುಂಕದಕಟ್ಟೆಯಲ್ಲಿರುವಾಗ ಪುತ್ತೂರು ಚಂದ್ರಶೇಖರ ಹೆಗ್ಡೆ ಅವರಿಂದ ವೇಷಭೂಷಣಗಳನ್ನು ತಯಾರಿಸುವ ಕೆಲಸವನ್ನು ಕಲಿಯಲು ಆರಂಭಿಸಿದರು. ತೆಂಕುತಿಟ್ಟಿನ ಹೆಸರಾಂತ ಪುಂಡುವೇಷಧಾರಿ ಪುತ್ತೂರು ಶ್ರೀ ರತ್ನಾಕರ ಹೆಗ್ಡೆ ಅವರಿಂದ ಹೆಜ್ಜೆಗಾರಿಕೆಯನ್ನು ಕಲಿತರು.

ಸುನಿಲ್ ಪದ್ಮುಂಜ ಅವರು ವೇಷ ಮಾಡುವ ಮೊದಲೇ ವೇಷಭೂಷಣ ತಯಾರಿಕೆಯ ಕೆಲಸವನ್ನು ಮಾಡಿದ್ದರು. (ಎಸ್ ಎಸ್ ಎಲ್ ಸಿ ಕಲಿಕೆಯ ನಂತರ) ಬಳಿಕ ಸುಂಕದಕಟ್ಟೆಯ ಶ್ರೀ ಅಂಬಿಕಾ ಅನ್ನಪೂರ್ಣೇಶ್ವರೀ ಮೇಳದಲ್ಲಿ ಬಾಲಗೋಪಾಲನಾಗಿ ರಂಗಪ್ರವೇಶ. ಒಂದು ವರ್ಷ ಸದ್ರಿ ಮೇಳದಲ್ಲಿ ತಿರುಗಾಟ. ಬಳಿಕ ಪುತ್ತೂರು ಶ್ರೀ ದಿವಾಕರ ಹೆಗ್ಡೆ ಅವರ ನಾಯಕತ್ವದ ಕೊಲ್ಲೂರು ಮೇಳದಲ್ಲಿ ಒಂದು ವರ್ಷ ಕಲಾಸೇವೆ.

ಬಳಿಕ ಶ್ರೀ ಕಿಶನ್ ಕುಮಾರ್ ಹೆಗ್ಡೆ ಅವರ ಸಂಚಾಲಕತ್ವದ ಮಂಗಳಾದೇವಿ ಮೇಳದಲ್ಲಿ ಒಂಭತ್ತು ವರ್ಷಗಳ ತಿರುಗಾಟ. ಈ ಸಂದರ್ಭದಲ್ಲಿ ಸ್ತ್ರೀವೇಷ ಮತ್ತು ಪುಂಡುವೇಷಗಳನ್ನು ಮಾಡುತ್ತಿದ್ದರು. ಈ ಎರಡೂ ಮೇಳಗಳಲ್ಲಿ ಹೆಸರಾಂತ ಕಲಾವಿದರ ಒಡನಾಟವು ದೊರಕಿತ್ತು. ಪುರಾಣ ಮತ್ತು ತುಳು ಪ್ರಸಂಗಗಳಲ್ಲಿ ಅನುಭವವನ್ನು ಪಡೆದುಕೊಂಡರು. ಬಳಿಕ ಒಂದು ವರ್ಷ ಹೊಸನಗರ ಮೇಳದಲ್ಲಿ ಕಲಾಸೇವೆ. 

ಶ್ರೀ ಸುನಿಲ್ ಪದ್ಮುಂಜ ಅವರು ಕಳೆದ ಹದಿನೈದು ವರುಷಗಳಿಂದ ಕಟೀಲು ಮೇಳದಲ್ಲಿ ವ್ಯವಸಾಯ ಮಾಡುತ್ತಿದ್ದಾರೆ. ಮಳೆಗಾಲದಲ್ಲಿ  ಪುತ್ತೂರು ಮಹಾಲಿಂಗೇಶ್ವರ ಪ್ರವಾಸಿ ಯಕ್ಷಗಾನ ಮಂಡಳಿಯ ಪ್ರದರ್ಶನಗಳಲ್ಲೂ ಭಾಗವಹಿಸಿದ್ದಾರೆ. ಕಟೀಲು ಮೇಳದ ತಿರುಗಾಟ ಮತ್ತು ಶ್ರೀ  ಪುತ್ತೂರು ಮಹಾಲಿಂಗೇಶ್ವರ ಪ್ರವಾಸಿ ಯಕ್ಷಗಾನ ಮಂಡಳಿಯ ಪ್ರದರ್ಶನಗಳು  ಸುನಿಲ್ ಪದ್ಮುಂಜ ಅವರಿಗೆ ಪುರಾಣ ಪ್ರಸಂಗಗಳಲ್ಲಿ ಅನುಭವಗಳನ್ನು ಗಳಿಸುವುದಕ್ಕೆ ಕಾರಣವಾಯಿತು.

ಪುಂಡು ವೇಷಕ್ಕೆ ಸಂಬಂಧಿಸಿದ ವಿಷ್ಣು, ಶ್ರೀರಾಮ, ಶ್ರೀಕೃಷ್ಣ, ಬ್ರಹ್ಮ, ಈಶ್ವರ ಮೊದಲಾದ ಪಾತ್ರಗಳಲ್ಲಿ ಇವರಿಗೆ ಆಸಕ್ತಿ. ದೇವೇಂದ್ರ, ಅರ್ಜುನ, ಗರುಡ, ಬಲರಾಮ ಮೊದಲಾದ ಕಿರೀಟ ವೇಷಗಳನ್ನೂ ಈಗ ಮಾಡುತ್ತಿದ್ದಾರೆ. ಕಳೆದ ಹದಿನಾಲ್ಕು ವರ್ಷಗಳಿಂದ ಕಟೀಲು ಮೂರನೇ ಮೇಳದಲ್ಲಿ ವ್ಯವಸಾಯ.  ಕುರಿಯ ಗಣಪತಿ ಶಾಸ್ತ್ರಿಗಳ ನಿರ್ದೇಶನದಲ್ಲಿ ಬೆಳೆದವರು.

ಶ್ರೀ ಗೋಪಾಲಕೃಷ್ಣ ಮಯ್ಯ, ಗೇರುಕಟ್ಟೆ ಗಂಗಯ್ಯ ,ಶೆಟ್ಟಿ, ಪುಂಡರೀಕಾಕ್ಷ ಉಪಾಧ್ಯಾಯ,ಕೈರಂಗಳ ಕೃಷ್ಣ ಮೂಲ್ಯ, ಅಡೂರು ಲಕ್ಷ್ಮೀನಾರಾಯಣ ರಾವ್, ಪ್ರಫುಲ್ಲಚಂದ್ರ ನೆಲ್ಯಾಡಿ, ಅಮ್ಮುಂಜೆ ಮೋಹನ ಕುಮಾರ್, ಗಣೇಶ್ ಶೆಟ್ಟಿ ಕನ್ನಡಿಕಟ್ಟೆ, ತೊಡಿಕಾನ ವಿಶ್ವನಾಥ ಗೌಡ, ಮೊದಲಾದವರ ಒಡನಾಟವೂ ಕಟೀಲು ಮೇಳದಲ್ಲಿ ದೊರಕಿತ್ತು. ಕಸೆ ಸ್ತ್ರೀ ವೇಷಗಳಲ್ಲೂ  ಸುನಿಲ್ ಅವರು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಕಳೆದ ಹದಿಮೂರು ವರ್ಷಗಳಿಂದ ಬೆಳ್ತಂಗಡಿ ತಾಲೂಕಿನ ಕಣಿಯೂರು ಗ್ರಾಮದ ಪದ್ಮುಂಜ ಎಂಬಲ್ಲಿ ವಾಸವಾಗಿದ್ದಾರೆ.  ಸುನಿಲ್ ಪದ್ಮುಂಜ ಅವರ ಪತ್ನಿ ಶ್ರೀಮತಿ ಗೀತಾ ಶೆಟ್ಟಿ. ಗೀತಾ  ಸುನಿಲ್ ದಂಪತಿಗಳಿಗೆ ಇಬ್ಬರು ಮಕ್ಕಳು. ಪುತ್ರಿ ಕು| ಶ್ರೀದೇವಿ ಏಳನೆಯ ತರಗತಿ ವಿದ್ಯಾರ್ಥಿನಿ. ಪುತ್ರ ಮಾ| ಶ್ರೀನಿಧಿ ಎರಡನೇ ತರಗತಿ ವಿದ್ಯಾರ್ಥಿ. (ಪದ್ಮುಂಜ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು) ಮಕ್ಕಳಿಬ್ಬರೂ ಶ್ರೀ ರಾಕೇಶ್ ರೈ ಅಡ್ಕ ಇವರಿಂದ ಯಕ್ಷಗಾನ ನಾಟ್ಯ ಕಲಿತು ವೇಷ ಮಾಡುತ್ತಿದ್ದಾರೆ.

ಇವರಿಗೆ ಉಜ್ವಲವಾದ ಭವಿಷ್ಯವು ದೊರೆಯಲಿ. ಶ್ರೀ  ಸುನಿಲ್ ಪದ್ಮುಂಜ ಅವರಿಂದ ಕಲಾಸೇವೆಯು  ನಿರಂತರವಾಗಿ ಸಾಗಲಿ. ಕಲಾಮಾತೆಯ  ಅನುಗ್ರಹವು ಸದಾ ಇರಲಿ ಎಂಬ ಹಾರೈಕೆಗಳು. 

(ಸುನಿಲ್ ಪದ್ಮುಂಜ, ಯಕ್ಷಗಾನ ಕಲಾವಿದ, ಕಟೀಲು ಮೇಳ, ಮೊ: 9902720134)

ಲೇಖಕ: ರವಿಶಂಕರ್ ವಳಕ್ಕುಂಜ 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments