Saturday, January 18, 2025
Homeಇಂದಿನ ಕಾರ್ಯಕ್ರಮಇಂದು ಹಾಸ್ಯರತ್ನ ವೇಣೂರು ಸುಂದರ ಆಚಾರ್ಯರ ಸಂಸ್ಮರಣೆ - ತಾಳಮದ್ದಳೆ

ಇಂದು ಹಾಸ್ಯರತ್ನ ವೇಣೂರು ಸುಂದರ ಆಚಾರ್ಯರ ಸಂಸ್ಮರಣೆ – ತಾಳಮದ್ದಳೆ

ಭಾರತೀಯ ರಂಗಭೂಮಿಯ ವಿಶಿಷ್ಟ ಕಲಾ ಪ್ರಕಾರವಾದ ನವರಸಗಳ ಸಂಗಮವೆನಿಸಿದ ಯಕ್ಷಗಾನದಲ್ಲಿ ನಗುವಿನ ಹೊಳೆಯನ್ನು ಹರಿಸಿ ಪ್ರೇಕ್ಷಕರನ್ನು ರಂಜಿಸುವಲ್ಲಿ ಹಾಸ್ಯಗಾರರ ಪಾತ್ರ ಪ್ರಮುಖವಾದದ್ದು.
ವಿಟ್ಲ ಗೋಪಾಲಕೃಷ್ಣ ಜೋಶಿ , ಪೆರುವಡಿ ನಾರಾಯಣ ಭಟ್, ನೆಲ್ಲಿಕಟ್ಟೆ ನಾರಾಯಣ ಹಾಸ್ಯಗಾರ, ಕೊಡಕಲ್ಲು ಗೋಪಾಲಕೃಷ್ಣ ಭಟ್, ಮುಖ್ಯಪ್ರಾಣ ಕಿನ್ನಿಗೋಳಿ ಮೊದಲಾದವರು ಹಾಸ್ಯಗಾರರು ಒಂದು ಪರಂಪರೆಯನ್ನು ಮುಂದುವರಿಸಿಕೊ0ಡು ಬಂದವರು. ಈ ಸಾಲಿನಲ್ಲಿ ಮುಂಚೂಣಿಯಲ್ಲಿ ಗುರುತಿಸಲ್ಪಡುವ ಪ್ರಸಿದ್ಧ ಹಾಸ್ಯಗಾರರೇ ವೇಣೂರು ಸುಂದರ ಆಚಾರ್ಯರು.


ಬೆಳ್ತಂಗಡಿ ತಾಲೂಕಿನ ವೇಣೂರು ಕಿನ್ನಿ ಆಚಾರ್ಯ ಮತ್ತು ಸರಸಮ್ಮ ದಂಪತಿಯ ನಾಲ್ಕನೇ ಪುತ್ರನಾಗಿ ದಿನಾಂಕ 07-10-1940 ರಲ್ಲಿ ಜನಿಸಿದ ಇವರು ಎರಡನೇ ತರಗತಿಯ ಶಿಕ್ಷಣ ಪಡೆದು ಯಕ್ಷಗಾನದ ಆಸಕ್ತಿಯಿಂದ ದೇಲಂತಪುರಿ ಮೇಳದ ಯಜಮಾನ – ಕಲಾವಿದ ಕೃಷ್ಣ ಭಟ್ ಮತ್ತು ವೇದಮೂರ್ತಿ ವೆಂಕಟರಮಣ ಭಟ್ಟರಿಂದ ಪ್ರಾಥಮಿಕ ಹೆಜ್ಜೆಗಾರಿಕೆ ಮತ್ತು ಮಾತುಗಾರಿಕೆಯ ಅಭ್ಯಾಸ ಮಾಡಿ 14ನೇ ವಯಸ್ಸಿನಲ್ಲಿ ದೇಲಂತಪುರಿ ಮೇಳದಲ್ಲಿ ರಂಗ ಪ್ರವೇಶ ಮಾಡಿದರು.

ಎರಡು ವರ್ಷದ ತಿರುಗಾಟದ ಬಳಿಕ ಬಳ್ಳಂಬೆಟ್ಟು ಮೇಳದಲ್ಲಿ ಪುಂಡು ವೇಷಧಾರಿಯಾಗಿ ತಿರುಗಾಟ ಮಾಡಿ 1957ರಲ್ಲಿ ಸುರತ್ಕಲ್ ಶ್ರೀ ಮಹಮ್ಮಾಯಿ ಮೇಳಕ್ಕೆ ಸೇರ್ಪಡೆಗೊಂಡು ನಿರಂತರ 42 ವರ್ಷಗಳ ತಿರುಗಾಟ ನಡೆಸಿದ್ದಾರೆ. ಇದು ಆಚಾರ್ಯರ ಮೇಳ ನಿಷ್ಠೆ ಮತ್ತು ಕಲಾ ಪ್ರೀತಿಗೆ ಸಾಕ್ಷಿ.


ಸುರತ್ಕಲ್ ಮೇಳ ಸ್ಥಗಿತಗೊಂಡ ಬಳಿಕ ಕರ್ನಾಟಕ ಮತ್ತು ಶ್ರೀ ಮಂಗಳಾದೇವಿ ಮೇಳಗಳಲ್ಲಿ ಒಂದೊ0ದು ವರ್ಷದ ತಿರುಗಾಟ ಮಾಡಿ ಒಟ್ಟು 46 ವರ್ಷಗಳ ಕಾಲ ಯಕ್ಷಗಾನ ರಂಗದಲ್ಲಿ ಮೆರೆದು ಬಳಿಕ ಅತಿಥಿ ಕಲಾವಿದರಾಗಿ ಸುಂಕದಕಟ್ಟೆ ಮೇಳದಲ್ಲಿ ಭಾಗವಹಿಸುತ್ತಿದ್ದರು. ಪುಂಡು ವೇಷಧಾರಿಯಾಗಿದ್ದ ಇವರು ಹಾಸ್ಯಗಾರರದದ್ದು ಆಕಸ್ಮಿಕ. ದಿ.ವಿಟ್ಲ ಜೋಶಿಯವರ ಒತ್ತಾಸೆಯಿಂದ ಕೆಲವು ಹಾಸ್ಯ ಪಾತ್ರಗಳನ್ನು ಮಾಡಿದಾಗ ಇವರ ಹಾಸ್ಯಪ್ರಜ್ಞೆಯನ್ನು ಸಹ ಕಲಾವಿದರು ಮತ್ತು ಪ್ರೇಕ್ಷಕರು ಒಪ್ಪಿಕೊಂಡರು. ಬಳಿಕ ಮೇಳದಲ್ಲಿ ಹಾಸ್ಯಗಾರರಾಗಿದ್ದ ಪೆರುವಡಿ ನಾರಾಯಣ ಭಟ್ಟರ ಪ್ರೋತ್ಸಾಹವು ಇವರನ್ನು ಪೂರ್ಣ ಪ್ರಮಾಣದಲ್ಲಿ ಹಾಸ್ಯಗಾರನಾಗುವಂತೆ ಮಾಡಿತು.


ತುಳು ಪ್ರಸಂಗಗಳ ಪ್ರದರ್ಶನಗಳು ಮುನ್ನೆಲೆಗೆ ಬಂದಾಗ ಹಾಸ್ಯ ಪಾತ್ರಗಳನ್ನು ಪರಂಪರೆಯ ಚೌಕಟ್ಟಿನಲ್ಲಿ ನಿರ್ವಹಿಸಿದ ಹೆಚ್ಚುಗಾರಿಕೆ ಇವರದು. ಶ್ರೀ ಕೃಷ್ಣ ಲೀಲೆಯ ವಿಜಯ, ಪಾರಿಜಾತದ ಮಕರಂದ, ಸತಿ ಶೀಲಾವತಿಯ ಚಿತ್ರಾಂಗ, ಚಂದ್ರಾವಳಿಯ ಅತ್ತೆ, ನಳದಮಯಂತಿಯ ಬಾಹುಕ, ಗುಣ ಸುಂದರಿಯ ಪಾಪಣ್ಣ, ಸಾಧ್ವಿ ಸದಾರಮೆಯ ಆದಿಮೂರ್ತಿ, ಶನೀಶ್ವರ ಮಹಾತ್ಮೆಯ ಕುದುರೆ ವ್ಯಾಪಾರಿ, ಶಬರಿಮಲೆ ಅಯ್ಯಪ್ಪದ ಕೇಳು ಪಂಡಿತ, ಕೋಟಿ ಚೆನ್ನಯದ ಪೈಯ್ಯ ಬೈದ್ಯ, ಶೇಣಿಯವರ ಬಪ್ಪಬ್ಯಾರಿಯೊಂದಿಗೆ ಉಸ್ಮಾನ್, ಶಿವರಾಮ ಜೋಗಿ ಅವರೊಂದಿಗೆ ಮಲೆಯಾಳಿ ಬಿಲ್ಲವ, ಶ್ರೀನಿವಾಸ ಕಲ್ಯಾಣದ ಸಖ ಮೊದಲಾದ ಪಾತ್ರಗಳನ್ನು ನಿರ್ವಹಿಸಿ ಸದಭಿರುಚಿಯ ಹಾಸ್ಯವನ್ನು ಮುಂದುವರಿಸಿದ ಅನನ್ಯ ಕಲಾವಿದ ಸುಂದರ ಆಚಾರ್ಯರು.


ಹೆಚ್ಚಿನ ಪ್ರಸಂಗಗಳ ಬಾಯಿಪಾಠವಿದ್ದುದರಿಂದ ಪ್ರಸಂಗದ ನಡೆ ಮತ್ತು ಕಥಾ ಹಂದರವನ್ನು ಸಹ ಕಲಾವಿದರಿಗೆ ತಿಳಿಸುವ ಕಲೆ ಇವರಿಗೆ ಕರಗತವಾಗಿತ್ತು. ಮೇಳದಲ್ಲಿ ಅಗರಿ ಭಾಗವತರು ಮಲ್ಪೆ ಸಾಮಗರು, ತೆಕ್ಕಟ್ಟೆ ಆನಂದ ಮಾಸ್ಟರ್, ಪದ್ಯಾಣ ಗಣಪತಿ ಭಟ್, ಕಡಬ ನಾರಾಯಣಚಾರ್ಯ, ಎಂ. ಕೆ. ರಮೇಶ ಆಚಾರ್ಯ, ಶಿವರಾಮ ಜೋಗಿ ಮೊದಲಾದವರ ಒಡನಾಟದಲ್ಲಿ ಗಳಿಸಿದ ಅನುಭವವನ್ನು ಕಿರಿಯ ಕಲಾವಿದರಿಗೆ ತಿಳಿಸುವುದರೊಂದಿಗೆ ಹಲವಾರು ಕಲಾವಿದರನ್ನು ಗುರುತಿಸಿ ಮೇಳಕ್ಕೆ ಸೇರ್ಪಡೆಗೊಳಿಸಿದ್ದಾರೆ.


ಕಿರಿಯ ಪುತ್ರ ಭಾಸ್ಕರಾಚಾರ್ಯ ಸೇರಿದಂತೆ ವೇಣೂರು ಸದಾಶಿವ ಕುಲಾಲ್, ವೇಣೂರು ಅಶೋಕ ಆಚಾರ್ಯ, ಸದಾಶಿವ ಆಚಾರ್ಯ ಕೊಡ್ಲೆ ಮೊದಲಾದ ಶಿಷ್ಯಂದಿರನ್ನು ಯಕ್ಷಗಾನ ಕ್ಷೇತ್ರಕ್ಕೆ ಕೊಡುಗೆಯಾಗಿ ನೀಡಿದ್ದಾರೆ. ಉಡುಪಿ ಯಕ್ಷಗಾನ ಕಲಾರಂಗ ನಡೆಸಿದ ತೆಂಕುತಿಟ್ಟಿನ ಹಾಸ್ಯ ಪಾತ್ರಗಳ ದಾಖಲೀಕರಣದ ಪ್ರಾತ್ಯಕ್ಷಿಕೆಯಲ್ಲಿ ಇವರು ಭಾಗವಹಿಸಿದ್ದಾರೆ. ಹಲವಾರು ಕನ್ನಡ ಮತ್ತು ತುಳು ಧ್ವನಿ ಸುರುಳಿ ಮತ್ತು ಅಡಕ ತಟ್ಟೆಗಳಲ್ಲಿ ಇವರ ಪಾತ್ರಗಳ ನಿರ್ವಹಣೆಯನ್ನು ಕಾಣಬಹುದು.


ಮಡದಿ ಪ್ರೇಮಾವತಿ ಪುತ್ರರಾದ ರವೀಂದ್ರ, ಪ್ರಭಾಕರ, ಭಾಸ್ಕರ ಮತ್ತು ಮಗಳು ಮಮತಾ ಇವರೊಂದಿಗೆ ಸಂತೃಪ್ತ ಜೀವನ ನಡೆಸಿ ವೇಣೂರಿಗೆ ಹೆಮ್ಮೆಯನ್ನು ತಂದ ಸುಂದರಾಚಾರ್ಯರು 2005ರಲ್ಲಿ ದೈವಾಧೀನರಾದರು.


ಹಾಸ್ಯ ರತ್ನ ಸುಂದರಾಚಾರ್ಯರ ಬಂಧುಗಳು ಮತ್ತು ಅಭಿಮಾನಿ ವರ್ಗದವರು ಅವರ ಸಂಸ್ಮರಣೆಯನ್ನು ಅರ್ಥಪೂರ್ಣವಾಗಿ ನಡೆಸಲು ಖಂಡಿಗ ಶ್ರೀಧರಾಚಾರ್ಯ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚಿಸಿದ್ದಾರೆ. ದಿನಾಂಕ 10/07/2022 ರಂದು ವೇಣೂರಿನ ಶ್ರೀ ಭರತೇಶ ಸಭಾಭವನದಲ್ಲಿ ಅರ್ಕುಳ ಸುಬ್ರಾಯಾಚಾರ್ಯ ವೇದಿಕೆಯಲ್ಲಿ ಜರಗಲಿರುವ ಕಾರ್ಯಕ್ರಮದಲ್ಲಿ ಸುರತ್ಕಲ್ ಮೇಳದಲ್ಲಿ ಸುಂದರ ಆಚಾರ್ಯರ ದೀರ್ಘಕಾಲ ಒಡನಾಡಿಯಾಗಿದ್ದ ರಾಜ್ಯ ಪ್ರಶಸ್ತಿ ಪುರಸ್ಕೃತ ಕಲಾವಿದ ಕೆ.ಶಿವರಾಮ ಜೋಗಿ ಅವರಿಗೆ ಪ್ರಥಮ ವರ್ಷದ ಸಂಸ್ಮರಣಾ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುವುದು.

ರಾಜ್ಯ ಪ್ರಶಸ್ತಿ ಪುರಸ್ಕೃತ ಕಲಾವಿದ ಎಂ.ಕೆ. ರಮೇಶ ಆಚಾರ್ಯ ತೀರ್ಥಹಳ್ಳಿ ಸಂಸ್ಮರಣೆ ಮತ್ತು ಅಭಿನಂದನಾ ಭಾಷಣವನ್ನು ಮಾಡಲಿದ್ದಾರೆ. ಯಕ್ಷಗಾನ ಕಲಾವಿದರಾಗಿ ಅಸ್ತಂಗತರಾದ ವೇಣೂರು ಭಾಸ್ಕರಾಚಾರ್ಯ ಮತ್ತು ವಾಮನ ಕುಮಾರ್ ವೇಣೂರು ಇವರಿಗೆ ಗೌರವಪೂರ್ವಕ ನುಡಿ ನಮನ ಹಾಗೂ ಹಿರಿಯ ಕಿರಿಯ ಕಲಾವಿದರಿಂದ “ಕರ್ಣಾರ್ಜುನ” ಮತ್ತು “ವಾಲಿ ಮೋಕ್ಷ” ತಾಳಮದ್ದಳೆಯು ನಡೆಯಲಿದೆ.


ದಿವಾಕರ ಆಚಾರ್ಯ
9449076275

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments