ತೆಂಕುತಿಟ್ಟು ಯಕ್ಷಗಾನದ ದಂತಕಥೆ, ಮಹಾನ್ ಭಾಗವತರಾದ ಶ್ರೀ ದಾಮೋದರ ಮಂಡೆಚ್ಚರ ಹೆಸರಿನಲ್ಲಿ ನೀಡಲಾಗುವ ಮಂಡೆಚ್ಚ ಪ್ರಶಸ್ತಿಯನ್ನು ಈ ಬಾರಿ ಅವರ ಪ್ರಿಯ ಶಿಷ್ಯರಾದ ಖ್ಯಾತ ಭಾಗವತ ಶ್ರೀ ದಿನೇಶ ಅಮ್ಮಣ್ಣಾಯರಿಗೆ ನೀಡಲಾಗುತ್ತದೆ.
ಇಂದು ದಿನಾಂಕ 10.07.2022ರಂದು ಭಾನುವಾರ ಮದ್ಯಾಹ್ನ ಘಂಟೆ 3.30ಕ್ಕೆ ಶ್ರೀ ಕಟೀಲು ಕ್ಷೇತ್ರದ ಸರಸ್ವತಿ ಸದನದಲ್ಲಿ ನಡೆಯುವ ಸಮಾರಂಭದಲ್ಲಿ ಈ ಪ್ರಶಸ್ತಿಯನ್ನು ಅವರಿಗೆ ಪ್ರದಾನ ಮಾಡಲಾಗುತ್ತದೆ. ಯಕ್ಷಗಾಯನ ಮತ್ತು ಯಕ್ಷಗಾನ ಬಯಲಾಟವೂ ನಡೆಯಲಿದೆ.

ದಿನೇಶ ಅಮ್ಮಣ್ಣಾಯರ ಬಗ್ಗೆ ಎರಡು ಮಾತು: ಯಕ್ಷಜಗತ್ತು ಕಂಡ ಅತಿ ಸಂಭಾವಿತ ವ್ಯಕ್ತಿ, ಅಷ್ಟೇ ಸರಳ, ಸಜ್ಜನ. ಸ್ವಭಾವದಲ್ಲಿಯೂ ಭಾವುಕತೆಯನ್ನು ಮೈಗೂಡಿಸಿಕೊಂಡ ಆ ಭಾವುಕತೆಯನ್ನು ತನ್ನ ಹಾಡಿನಲ್ಲಿಯೂ ಪ್ರತಿಫಲಿಸುವ ಸ್ವಭಾವದ ಯಕ್ಷಗಾನದ ಹಾಡುವ ಹಕ್ಕಿ, ಗಾನಕೋಗಿಲೆ ಶ್ರೀ ದಿನೇಶ ಅಮ್ಮಣ್ಣಾಯರು ಎಲ್ಲರ ನೆಚ್ಚಿನ ಭಾಗವತರು.
ಕೆಲವೊಮ್ಮೆ ಸಂಕೋಚದ ಪ್ರವೃತ್ತಿಯವರಂತೆ ತೋರುವ ಇವರು ನಿಗರ್ವಿ.
ತಾನಾಯಿತು ತನ್ನ ಭಾಗವತಿಕೆಯಾಯಿತು ಎಂಬ ಭಾವ ಹೊಂದಿದ ಸದಾ ವಿವಾದಗಳಿಂದ ದೂರವಿರುವ ವ್ಯಕ್ತಿ. ಎಂದೂ ಪ್ರಚಾರವನ್ನು ಬಯಸದ ಹೊಗಳಿಕೆಯಿಂದ ಸಂಕೋಚಪಡುವ ಭಾವ ಗಾಯನದ ಯಜಮಾನ ದಿನೇಶ ಅಮ್ಮಣ್ಣಾಯರ ಗಾಯನವನ್ನು ಕೇಳಿ ಆನಂದಿಸಬೇಕೇ ವಿನಃ ಬರೆಯಲು ಪದಪುಂಜಗಳಿಲ್ಲ. ಭಕ್ತಿ, ಕರುಣರಸದ ಒಡೆಯ, ಶೃಂಗಾರವನ್ನು ಹಾಡುವುದರಲ್ಲೂ ಪಳಗಿದ ಸರದಾರ.
ಯಕ್ಷರಂಗ ಕಂಡ ಭಾಗವತಿಕೆಯ ದಂತಕಥೆ ದಿ| ದಾಮೋದರ ಮಂಡೆಚ್ಚರ ನಿಜಾರ್ಥದ ಶಿಷ್ಯನಾಗಿ ಅವರ ಬಗ್ಗೆ ವಿಷಯ ಪ್ರಸ್ತಾಪಿಸಿದಾಗಲೆಲ್ಲಾ ಎಲ್ಲಿಲ್ಲದ ಭಾವುಕತೆ ಅಮ್ಮಣ್ಣಾಯರನ್ನು ಕಾಡುತ್ತದೆಯೇನೋ… ಆ ಸಮಯದಲ್ಲಿ ಕಣ್ಣಂಚು ಒದ್ದೆಯಾಗುವುದನ್ನು ಅವರು ತಡೆದುಕೊಳ್ಳಲಾರರು.
ತಂದೆ ಶ್ರೀ ನಾರಾಯಣ ಅಮ್ಮಣ್ಣಾಯ, ತಾಯಿ ಕಾವೇರಿ ಅಮ್ಮ ದಂಪತಿಗಳ ಸುಪುತ್ರನಾಗಿ ಅಮ್ಮಣ್ಣಾಯರು ಹುಟ್ಟಿದ್ದು 1959ರಲ್ಲಿ. ವಿದ್ಯಾಭ್ಯಾಸ ಅಪೂರ್ಣವಾಯಿತು. ಎಸ್.ಎಸ್.ಎಲ್.ಸಿ. ತನಕ ಮಾತ್ರ ಎಂದು ಅವರೇ ಹೇಳುತ್ತಾರೆ. ಇವರು ಎರಡನೇ ತರಗತಿಯಲ್ಲಿರುವಾಗಲೇ ತನ್ನ ಸೋದರಮಾವನ ಮಗ ಈಗಿನ ಖ್ಯಾತ ಮದ್ದಳೆಗಾರರಾದ ಶ್ರೀಹರಿನಾರಾಯಣ ಬೈಪಡಿತ್ತಾಯರಿಂದ ಮದ್ದಳೆವಾದನದ ಅಭ್ಯಾಸ ಆರಂಭಿಸುತ್ತಾರೆ.
ಇವರ ಚಿಕ್ಕಪ್ಪ ವಿಷ್ಣು ಅಮ್ಮಣ್ಣಾಯರಿಂದ (ಲಕ್ಷ್ಮೀಶ ಅಮ್ಮಣ್ಣಾಯರ ತಂದೆ) ಭಾಗವತಿಕೆಯ ಮೂಲಪಾಠವನ್ನು ಅಭ್ಯಸಿಸಿದರು. ಇವರು ಸಂಗೀತವನ್ನು ಅಭ್ಯಾಸ ಮಾಡಿದ್ದು ಇವರ ಅಕ್ಕ (ಚಿಕ್ಕಪ್ಪನ ಮಗಳು) ರಾಜೀವಿ ಅವರಿಂದ. ರಾಜೀವಿ ಅವರು ಕಾಂಚನದಲ್ಲಿ ಕಲಿತು ಸಂಗೀತದಲ್ಲಿ ವಿದ್ವಾನ್ ಪದವಿ ಪಡೆದವರು.
ಯಕ್ಷಗಾನ ಕ್ಷೇತ್ರದಲ್ಲಿ ಭಾಗವತರಾಗಿ ಅಥವಾ ಕಲಾವಿದರಾಗಿ ದಿನೇಶ ಅಮ್ಮಣ್ಣಾಯರು ಕರ್ನಾಟಕ ಮೇಳ 21 ವರ್ಷ, ಪುತ್ತೂರು ಮೇಳ 1 ವರ್ಷ, ಕದ್ರಿ ಮೇಳ 4 ವರ್ಷ ಆಮೇಲೆ ಮೇಳ ಬಿಟ್ಟು ಕುಂಟಾರು ಮೇಳದಲ್ಲಿ ಅತಿಥಿ ಕಲಾವಿದರಾಗಿ 3 ವರ್ಷ ಪೂರೈಸಿ ಮತ್ತು ಪ್ರಸ್ತುತ ಎಡನೀರು ಮೇಳದಲ್ಲಿ 15 ವರ್ಷಗಳ ಸೇವೆ ಸಲ್ಲಿಸಿದ್ದಾರೆ.
ಪತ್ನಿ ಶ್ರೀಮತಿ ಸುಧಾ ಮತ್ತು ಮಕ್ಕಳಾದ ಅಕ್ಷತಾ ಮತ್ತು ಅನಿತಾ (ಈರ್ವರೂ ವಿವಾಹಿತರು) ಜೊತೆಗೆ ಸಂತೃಪ್ತ ಕುಟುಂಬ.
ಸುಮಾರು 50ಕ್ಕೂ ಹೆಚ್ಚು ಸನ್ಮಾನ ಮತ್ತು ಪ್ರಶಸ್ತಿಗಳಿಗೆ ಭಾಜನರಾದ ಅಮ್ಮಣ್ಣಾಯರನ್ನು ಎಲ್ಲರೂ ತಿಳಿದಿರುವಂತೆ ‘ಗಾನಕೋಗಿಲೆ’, ‘ಮಧುರಗಾನದ ಐಸಿರಿ’, ‘ಯಕ್ಷಸಂಗೀತ ಕಲಾ ಕೌಸ್ತುಭ’ ಎಂಬ ಬಿರುದುಗಳು ಅರಸಿಕೊಂಡು ಬಂದಿವೆ.
ಶ್ರೀ ಅಮ್ಮಣ್ಣಾಯರ ಬಗ್ಗೆ ಅವರ ಭಾವಪೂರ್ಣ ಹಾಡುಗಾರಿಕೆಗೆ ಮನಸೋಲದ ಯಕ್ಷಪ್ರಿಯರಿಲ್ಲ.
- 6th Standard, Social Studies, Civics, Chapter 21 – National Symbols and National Day Celebration
- 8th Standard, Social, Business Studies, Chapter 29 – EMERGENCE OF DIFFERENT BUSINESS ORGANISATIONS
- 6th Standard, Social, History, Chapter 16 – Indian Ideology and Bhakti cult
- 8th Standard, Mathematics, Chapter 12 – Factorisation
- 9th Standard, Social, History, CHAPTER 20 – REVOLUTION AND RISE OF NATION STATES
