Saturday, January 18, 2025
Homeಯಕ್ಷಗಾನಪೆರುವಡಿ ನಾರಾಯಣ ಭಟ್ಟರಿಗೆ 'ಶ್ರೀ ನರಹರಿ ತೀರ್ಥ ಪ್ರಶಸ್ತಿ'

ಪೆರುವಡಿ ನಾರಾಯಣ ಭಟ್ಟರಿಗೆ ‘ಶ್ರೀ ನರಹರಿ ತೀರ್ಥ ಪ್ರಶಸ್ತಿ’

ಶ್ರೀ ಅದಮಾರು ಮಠದ ಪ್ರಾಯೋಜಕತ್ವದಲ್ಲಿ ನೀಡುವ ಯಕ್ಷಗಾನ ಕಲಾ ಪ್ರಶಸ್ತಿಯಾದ ‘ಶ್ರೀ ನರಹರಿ ತೀರ್ಥ ಪ್ರಶಸ್ತಿ’ ಗೆ ಖ್ಯಾತ ಯಕ್ಷಗಾನ ಹಾಸ್ಯ ಕಲಾವಿದ  ಪೆರುವಡಿ ನಾರಾಯಣ ಭಟ್ಟರು ಆಯ್ಕೆಯಾಗಿದ್ದಾರೆ. ಪ್ರಶಸ್ತಿಯು ಪ್ರಶಸ್ತಿಪತ್ರ, ಸ್ಮರಣಿಕೆಗಳೊಂದಿಗೆ ರೂ. 50,000 ನಗದನ್ನು ಒಳಗೊಂಡಿರುತ್ತದೆ.

ಈ ಪ್ರಶಸ್ತಿಯು ಕಳೆದ ವರ್ಷಗಳಲ್ಲಿ ಶ್ರೀ ಬಲಿಪ ನಾರಾಯಣ ಭಾಗವತ,(2020) ಶ್ರೀ ಶ್ರೀಪಾದ ತಿಮ್ಮಣ್ಣ ಭಟ್ಟ ಸಾಲ್ಕೋಡು(2021) ಇವರಿಗೆ ಲಭಿಸಿತ್ತು. 

ಪೆರುವಡಿ ನಾರಾಯಣ ಭಟ್ಟರು ಈಗ ಕಲಾಜೀವನದಿಂದ ನಿವೃತ್ತರಾಗಿ ಪುತ್ತೂರು ಸಮೀಪದ ಬಪ್ಪಳಿಗೆಯಲ್ಲಿ ವಾಸಿಸುತ್ತಿದ್ದಾರೆ. ಶುದ್ಧ ಪರಂಪರೆಯ ಹಾಸ್ಯಗಾರರಾದ ಶ್ರೀಯುತರು ಮೇಳದ ಸಂಚಾಲಕರಾಗಿಯೂ ಕಲಾಸೇವೆಯನ್ನು ಮಾಡಿದವರು. ಶ್ರೀಯುತರು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕು ಪೆರುವಡಿಯಲ್ಲಿ ಪದ್ಯಾಣ ಭೀಮ ಭಟ್ ಮತ್ತು ಗುಣವತಿ ಅಮ್ಮ ದಂಪತಿಗಳ ಮಗನಾಗಿ ಮೇ 28, 1927ರಂದು ಜನಿಸಿದರು.

ಮಿತ್ತನಡ್ಕ (ಕರೋಪಾಡಿ) ಮತ್ತು ಪೆರುವಡಿ ಕುದ್ರಡ್ಕ ಶಾಲೆಗಳಲ್ಲಿ 5ನೇ ತರಗತಿ ವರೆಗೆ ಓದಿದ್ದರು.  ತನ್ನ 14ನೇ ವಯಸ್ಸಿನಲ್ಲಿ ಪೆರುವಡಿ ನಾರಾಯಣ ಭಟ್ಟರು ನಾಟ್ಯಾಭ್ಯಾಸ ಇಲ್ಲದೆ ಶ್ರೀ ಧರ್ಮಸ್ಥಳ ಮೇಳದಲ್ಲಿ ಮೊದಲ ತಿರುಗಾಟ ಮಾಡಿದ್ದರು. (ಶ್ರೀ ಮಂಜಯ್ಯ ಹೆಗ್ಗಡೆಯವರ ಕಾಲ, ಕುರಿಯ ವಿಠಲ ಶಾಸ್ತ್ರಿಗಳು ಮೇಳ ವಹಿಸಿಕೊಂಡ ಸಮಯ) ನಂತರ ಕುರಿಯ ವಿಠಲ ಶಾಸ್ತ್ರಿಗಳು ಇವರನ್ನು ನಾಟ್ಯ ಕಲಿಯಲು ಪ್ರೇರೇಪಿಸಿದರಂತೆ. ವ್ಯವಸ್ಥೆಯೂ ಆಯಿತು.

ಧರ್ಮಸ್ಥಳ, ಸುರತ್ಕಲ್, ಕದ್ರಿ, ನಂದಾವರ, ಅರುವ, ಕುಂಬಳೆ, ಬಪ್ಪನಾಡು ಮೊದಲಾದ ಮೇಳಗಳಲ್ಲಿ ತಿರುಗಾಟ ನಡೆಸಿದರು. 1954ರಲ್ಲಿ ಮುಲ್ಕಿ ಮೇಳದ ಸಂಚಾಲಕರಾಗಿ ಶ್ರೀ ಪೆರುವಡಿ ನಾರಾಯಣ ಭಟ್ಟರು ಮೇಳವನ್ನು 11 ವರ್ಷಗಳ ಕಾಲ ಮುನ್ನಡೆಸಿದ್ದರು.  17 ವರ್ಷಗಳ ಕಾಲ ಶ್ರೀ ಧರ್ಮಸ್ಥಳ ಮೇಳದಲ್ಲಿ ತಿರುಗಾಟ ನಡೆಸಿದರು.  

ಪಾಪಣ್ಣ ವಿಜಯ – ಗುಣಸುಂದರಿ’ ಪ್ರಸಂಗದ ‘ಪಾಪಣ್ಣ’ ಪಾತ್ರ ಇವರಿಗೆ ಅಪಾರ ಪ್ರಸಿದ್ಧಿಯನ್ನು ತಂದುಕೊಟ್ಟಿತು. ಪೆರುವಡಿ ನಾರಾಯಣ ಭಟ್ಟರು ‘ಪಾಪಣ್ಣ ಭಟ್ರು’ ಎಂದೇ ಪ್ರಸಿದ್ಧರಾದರು. ವೃತ್ತಿ ಸಂಕಷ್ಟವನ್ನು ಸಾರುವ ಮೂರ್ತೆಯವನಾಗಿ, ತಾಮಸಿ ಪ್ರವೃತ್ತಿಯ ರಾಕ್ಷಸ ದೂತನಾಗಿ, ಸಹಜ ಬದುಕಿಗೆ ಕನ್ನಡಿ ಹಿಡಿಯುವ ವಿಪ್ರನಾಗಿ, ದೇವತ್ವವನ್ನು ಎತ್ತಿ ಹಿಡಿವ ದೇವದೂತನಾಗಿ ಅಭಿನಯಿಸುತ್ತಾ ಇವರು ಎಲ್ಲಾ ಹಾಸ್ಯಗಾರರಿಗೂ ಆದರ್ಶರಾದರು.

ಪೆರುವಡಿ ಹಾಸ್ಯಗಾರರು ಪ್ರಸ್ತುತ ಪುತ್ತೂರಿನ ಬಪ್ಪಳಿಗೆಯ ಸಮೀಪದ ತೆಂಕಿಲ ನೂಜಿ ಶ್ರೀ ದುರ್ಗಾ ನಿಲಯದಲ್ಲಿ ವಾಸವಾಗಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments