Saturday, January 18, 2025
Homeಸುದ್ದಿವೀರರಾಣಿ ಅಬ್ಬಕ್ಕ ಪ್ರತಿಷ್ಠಾನದಿಂದ ಸೌಹಾರ್ದ ಸಮಾವೇಶ - ಸಾಧಕ ಸಮ್ಮಾನ

ವೀರರಾಣಿ ಅಬ್ಬಕ್ಕ ಪ್ರತಿಷ್ಠಾನದಿಂದ ಸೌಹಾರ್ದ ಸಮಾವೇಶ – ಸಾಧಕ ಸಮ್ಮಾನ

ಮಂಗಳೂರು:  ‘ವೈಯಕ್ತಿಕವಾದ ಪ್ರತಿಷ್ಠೆಯನ್ನು ಮೀರಿ ಸೇವಾ ಮನೋಭಾವದಿಂದ ದುಡಿಯುವ ವ್ಯಕ್ತಿಗಳಿಗೆ ಸಾಮಾಜಿಕ ಮನ್ನಣೆ ಸಹಜವಾಗಿ ಲಭಿಸುತ್ತದೆ. ಅದರಲ್ಲೂ ರಾಷ್ಟ್ರ ರಕ್ಷಣೆಗಾಗಿ ಸರ್ವಸ್ವವನ್ನೂ ತ್ಯಾಗ ಮಾಡಿದ ಅಬ್ಬಕ್ಕ ರಾಣಿಯಂಥವರ ಹೆಸರಿನಲ್ಲಿ ಸಾಧಕರಿಗೆ ನೀಡುವ ಗೌರವ ಶ್ರೇಷ್ಠವಾದುದು’ ಎಂದು ರೋಟರಿ ಜಿಲ್ಲೆ 3181 ರ ಜಿಲ್ಲಾ ಗವರ್ನರ್ ರೊ. ಪ್ರಕಾಶ್ ಕಾರಂತ ಹೇಳಿದ್ದಾರೆ.

ವೀರರಾಣಿ ಅಬ್ಬಕ್ಕ ರಾಷ್ಟ್ರೀಯ ಪ್ರತಿಷ್ಠಾನ ವತಿಯಿಂದ ನಗರದ ಕೊಡಿಯಾಲ್ ಬೈಲ್ ಪತ್ತುಮುಡಿ ಸೌಧದಲ್ಲಿ ಜರಗಿದ ‘ನಮ್ಮ ಅಬ್ಬಕ್ಕ: ಸೌಹಾರ್ದ ಸಮಾವೇಶ ಮತ್ತು ಸಾಧಕ ಸಮ್ಮಾನ’  ಸಮಾರಂಭದ ಪ್ರಧಾನ ಅಭ್ಯಾಗತರಾಗಿ ಅವರು ಮಾತನಾಡಿದರು. 

       ಸಭೆಯ ಅಧ್ಯಕ್ಷತೆ ವಹಿಸಿದ ಕರ್ನಾಟಕ ರಾಜ್ಯ ಅಲೆಮಾರಿ ಮತ್ತು ಅರೆ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಕೆ ರವೀಂದ್ರ ಶೆಟ್ಟಿ ಉಳಿದೊಟ್ಟು ಮಾತನಾಡಿ ‘ವೀರರಾಣಿ ಅಬ್ಬಕ್ಕ ರಾಷ್ಟ್ರೀಯ ಪ್ರತಿಷ್ಠಾನವು ಸ್ವಾತಂತ್ರ್ಯ ಅಮೃತೋತ್ಸವ ಸಂದರ್ಭದಲ್ಲಿ ಅತ್ಯಂತ ಮಹತ್ವದ ಕಾರ್ಯಕ್ರಮವನ್ನು ಯಶಸ್ವಿಯಾಗಿ ನೆರವೇರಿಸಿದೆ. ಇದೇ ಮಾರ್ಚಿ ತಿಂಗಳಲ್ಲಿ ಪುರಭವನದಲ್ಲಿ ಆಯೋಜಿಸಿದ್ದ ನಮ್ಮ ಅಬ್ಬಕ್ಕ ಸ್ವಾತಂತ್ರ್ಯ ಸಂಭ್ರಮ ಕಾರ್ಯಕ್ರಮಕ್ಕೆ ಮಂಗಳೂರು ಮಹಾನಗರ ಪಾಲಿಕೆ ಸಹಯೋಗ ನೀಡಿರುವುದು ಶ್ಲಾಘನೀಯ’ ಎಂದರು.


 ಸಾಧಕರಿಗೆ ಅಭಿನಂದನೆ:  ಮಂಗಳೂರು ಮಹಾನಗರ ಪಾಲಿಕೆಯ ನಿರ್ಗಮನ ಮೇಯರ್ ಪ್ರೇಮಾನಂದ ಶೆಟ್ಟಿಯವರು ತಮ್ಮ ಅಧಿಕಾರಾವಧಿಯಲ್ಲಿ ಮಾಡಿದ ಜನಪರ ಕಾರ್ಯಕ್ರಮಗಳಿಗಾಗಿ ಅಭಿನಂದಿಸಿ ಪ್ರತಿಷ್ಠಾನ ವತಿಯಿಂದ ಸನ್ಮಾನಿಸಲಾಯಿತು. ಅಲ್ಲದೆ ಇತ್ತೀಚೆಗೆ ಮಂಗಳೂರು ವಿಶ್ವವಿದ್ಯಾನಿಲಯದ ಗೌರವ ಡಾಕ್ಟರೇಟ್ ಪಡೆದ ಪ್ರತಿಷ್ಠಾನದ ಗೌರವಾಧ್ಯಕ್ಷ ಡಾ.ಹರಿಕೃಷ್ಣ ಪುನರೂರು ಅವರನ್ನೂ ಅಭಿನಂದಿಸಲಾಯಿತು.ಇದೇ ಸಂದರ್ಭದಲ್ಲಿ ಜುಲೈ 3 ರಂದು ರೋಟರಿ ಜಿಲ್ಲಾ ನೂತನ ರಾಜ್ಯಪಾಲರಾಗಿ ಪದಗ್ರಹಣ ಮಾಡಿದ್ದ ರೊ.ಪ್ರಕಾಶ್ ಕಾರಂತ ಅವರನ್ನು ವಿರಾಟ್ ವತಿಯಿಂದ ಗೌರವಿಸಲಾಯಿತು.         

ಹಿರಿಯ ಲೆಕ್ಕಪರಿಶೋಧಕ ಎಸ್. ಎಸ್.ನಾಯಕ್ ಮುಖ್ಯ ಅತಿಥಿಗಳಾಗಿ ಸನ್ಮಾನಿತರನ್ನು ಅಭಿನಂದಿಸಿದರು. ಉದ್ಯಮಿ ಎ.ಕೆ.ಜಯರಾಮ ಶೇಖ, ಎಸ್.ಡಿ.ಎಂ.ಆಡಳಿತಾಧಿಕಾರಿ ಡಾ.ದೇವರಾಜ್, ಯುಗಪುರುಷದ ಭುವನಾಭಿರಾಮ ಉಡುಪ ಅತಿಥಿಗಳಾಗಿದ್ದರು. ವೀರರಾಣಿ ಅಬ್ಬಕ್ಕ ರಾಷ್ಟ್ರೀಯ ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಸ್ವಾಗತಿಸಿ, ಪ್ರಸ್ತಾವನೆಗೈದರು. ಕೋಶಾಧಿಕಾರಿ ಪಿ.ಡಿ.ಶೆಟ್ಟಿ ವಂದಿಸಿದರು.

ಸಂಘಟನಾ ಕಾರ್ಯದರ್ಶಿ  ತೋನ್ಸೆ ಪುಷ್ಕಳ ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ವಿರಾಂಟ್ ಪದಾಧಿಕಾರಿಗಳಾದ ವಾಮನ್ ಬಿ.ಮೈಂದನ್, ಕೆ.ರವೀಂದ್ರ ರೈ ಕಲ್ಲಿ ಮಾರ್,ತ್ಯಾಗಂ ಹರೇಕಳ,ಸತೀಶ್ ಸುರತ್ಕಲ್, ದೀಪಕ್ ರಾಜ್ ಉಳ್ಳಾಲ್, ಬಾದ್ ಶಾ ಸಾಂಬಾರ್ ತೋಟ, ವಿಜಯಲಕ್ಷ್ಮಿ ಬಿ ಶೆಟ್ಟಿ, ಸುಮಾ ಪ್ರಸಾದ್ , ಪ್ರತಿಮಾ ಹೆಬ್ಬಾರ್ ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments