Saturday, January 18, 2025
Homeಯಕ್ಷಗಾನಶಿವರಾಮ ಜೋಗಿ ಇವರಿಗೆ ಹಾಸ್ಯ ರತ್ನ ವೇಣೂರು ಸುಂದರ ಆಚಾರ್ಯ ಪ್ರಥಮ ಸಂಸ್ಮರಣಾ ಪ್ರಶಸ್ತಿ

ಶಿವರಾಮ ಜೋಗಿ ಇವರಿಗೆ ಹಾಸ್ಯ ರತ್ನ ವೇಣೂರು ಸುಂದರ ಆಚಾರ್ಯ ಪ್ರಥಮ ಸಂಸ್ಮರಣಾ ಪ್ರಶಸ್ತಿ

ಹಾಸ್ಯರತ್ನ ವೇಣೂರು ಸುಂದರ ಆಚಾರ್ಯ ಸಂಸ್ಮರಣ ಸಮಿತಿ, ಕಾಂಜರ ಕಟ್ಟೆ ವೇಣೂರು, ಬೆಳ್ತಂಗಡಿ ತಾಲೂಕು ದ.ಕ
ಶಿವರಾಮ ಜೋಗಿ ಇವರಿಗೆ ಹಾಸ್ಯ ರತ್ನ ವೇಣೂರು ಸುಂದರ ಆಚಾರ್ಯ ಪ್ರಥಮ ಸಂಸ್ಮರಣಾ ಪ್ರಶಸ್ತಿ


ಯಕ್ಷಗಾನ ಕ್ಷೇತ್ರದಲ್ಲಿ ಹಾಸ್ಯಗಾರರಾಗಿ ಕನ್ನಡ ಮತ್ತು ತುಳು ಪ್ರಸಂಗಗಳಲ್ಲಿ ನೂರಾರು ಪಾತ್ರಗಳನ್ನು ತನ್ನ ಅಭಿನಯ ಮತ್ತು ಮಾತುಗಾರಿಕೆಯಿಂದ ವಿಶಿಷ್ಟವಾಗಿ ನಿರ್ವಹಿಸಿ ಖ್ಯಾತರಾದ ವೇಣೂರು ಸುಂದರಾಚಾರ್ಯರ ಪ್ರಥಮ ಸಂಸ್ಮರಣ ಕಾರ್ಯಕ್ರಮವನ್ನು ದಿನಾಂಕ 10/07/2022 ರಂದು ವೇಣೂರಿನ ಭರತೇಶ ಸಭಾಭವನದಲ್ಲಿ ರಸಋಷಿ ಅರ್ಕುಳ ಸುಬ್ರಾಯ ಆಚಾರ್ಯ ವೇದಿಕೆಯಲ್ಲಿ ನಡೆಸಲು ನಿರ್ಧರಿಸಿದೆ. ತನ್ನಿಮಿತ್ತ ಸುಂದರ ಆಚಾರ್ಯರ ಸಂಸ್ಮರಣೆ, ಪ್ರಶಸ್ತಿ ಪ್ರದಾನ, ನುಡಿ ನಮನ ಮತ್ತು ತಾಳಮದ್ದಳೆ ನಡೆಯಲಿದೆ.


ಕಲಾವಿದ ಶ್ರೀ ಶಿವರಾಮ ಜೋಗಿ ಅವರಿಗೆ ಪ್ರಶಸ್ತಿ ಪ್ರದಾನ: ಸುರತ್ಕಲ್ ಮೇಳದಲ್ಲಿ ಸುಂದರ ಆಚಾರ್ಯರೊಂದಿಗೆ ನಾಲ್ಕು ದಶಕಗಳಿಗಿಂತಲೂ ಹೆಚ್ಚು ಒಡನಾಡಿ ಕಲಾವಿದರಾಗಿದ್ದ ರಾಜ್ಯ ಪ್ರಶಸ್ತಿ ಪುರಸ್ಕೃತ ಕೆ.ಶಿವರಾಮ ಜೋಗಿ ಬಿ.ಸಿ ರೋಡ್ ಇವರಿಗೆ ಪ್ರಥಮ ಸಂಸ್ಮರಣಾ ಪ್ರಶಸ್ತಿ ನೀಡಿ ಗೌರವಿಸಲಾಗುವುದು.


ಶಿವರಾಮ ಜೋಗಿ ಅವರ ಪರಿಚಯ: ಪುಂಡುವೇಷ, ರಾಜವೇಷ ಮತ್ತು ನಾಟಕೀಯ ವೇಷಗಳ ಮೂಲಕ ಯಾವುದೇ ಪ್ರಸಂಗದ ನಾಯಕ ಮತ್ತು ಪ್ರತಿನಾಯಕ ಪಾತ್ರಗಳನ್ನು ತನ್ನ ಗತ್ತುಗಾರಿಕೆಯ ನಾಟ್ಯ, ಸ್ವರ ಭಾರ ಮತ್ತು ಭಾವಪೂರ್ಣ ಅಭಿನಯದಿಂದ ನಿರ್ವಹಿಸುತ್ತಾ ಬಂದ ಶಿವರಾಮ ಜೋಗಿ ತೆಂಕುತಿಟ್ಟಿನ ಒಬ್ಬ ಪ್ರಾತಿನಿಧಿಕ ಕಲಾವಿದರಾಗಿ ಗುರುತಿಸಲ್ಪಟ್ಟವರು.


ಪುತ್ತೂರು ತಾಲೂಕಿನ ಬಜತ್ತೂರು ಗ್ರಾಮದ ಕಾಂಚನದಲ್ಲಿ ಗುರುವಪ್ಪ ಜೋಗಿ ಮತ್ತು ಸೀತಮ್ಮ ದಂಪತಿಯ ಪುತ್ರನಾಗಿ ದಿನಾಂಕ 07/06/1947ರಲ್ಲಿ ಜನಿಸಿದ ಶಿವರಾಮ ಜೋಗಿ ಪ್ರಾಥಮಿಕ ಶಿಕ್ಷಣವನ್ನು ಪೂರೈಸಿ ಯಕ್ಷಗಾನದ ಸೆಳೆತದಿಂದ ಕಲಾವಿದ ಗೋಪಾಲಕೃಷ್ಣ ಕುಡಾಣ ಇವರಲ್ಲಿ ನಾಟ್ಯ ಅಭ್ಯಾಸ ಮಾಡಿದರು. ವಿಟ್ಲ ಗೋಪಾಲಕೃಷ್ಣ ಜೋಶಿ ಅವರು 13ನೇ ವಯಸ್ಸಿನಲ್ಲಿಯೇ ಇವರನ್ನು ಕೂಡ್ಲು ಮೇಳಕ್ಕೆ ಸೇರ್ಪಡೆಗೊಳಿಸಿದರು.

ಮೇಳದಲ್ಲಿ ಕಲಾವಿದರಾಗಿದ್ದ ಶೇಣಿ ಗೋಪಾಲಕೃಷ್ಣ ಭಟ್ಟರೊಂದಿಗೆ ಬಾಲ ಪಾತ್ರಗಳನ್ನು ನಿರ್ವಹಿಸುತ್ತಾ ಮುಂದಕ್ಕೆ ಮುಲ್ಕಿ ಮೇಳದಲ್ಲಿ ಒಂದು ತಿರುಗಾಟ ನಡೆಸಿ ಸುರತ್ಕಲ್ ಮೇಳಕ್ಕೆ ಸೇರಿದರು. ಸುರತ್ಕಲ್ ಮೇಳದಲ್ಲಿ ಪ್ರಸಿದ್ಧ ಕಲಾವಿದರ ಒಡನಾಟದಲ್ಲಿ 40 ವರ್ಷಗಳ ನಿರಂತರ ತಿರುಗಾಟವು ಇವರನ್ನು ಅಪೂರ್ವ ಕಲಾವಿದನನ್ನಾಗಿ ಬೆಳೆಯುವಲ್ಲಿ ಮತ್ತು ಗುರುತಿಸುವಲ್ಲಿ ಸಹಕಾರಿಯಾಯಿತು. ಸುರತ್ಕಲ್ ಮೇಳದಲ್ಲಿ ಕಲಾವಿದನಾಗಿದ್ದುಕೊಂಡೇ ಮೇಳದ ವಾಹನ ಚಾಲನೆ ಮತ್ತು ನೇಪತ್ಯದ ಕಾರ್ಯ ನಿರ್ವಹಣೆಯಲ್ಲಿ ತೊಡಗಿಸಿಕೊಂಡದ್ದು ಇವರ ವಿಶೇಷತೆ. ಸುರತ್ಕಲ್ ಮೇಳ ಸ್ಥಗಿತಗೊಂಡ ಬಳಿಕ ಕರ್ನಾಟಕ, ಮಂಗಳಾದೇವಿ, ಕುಂಟಾರು, ಎಡನೀರು, ಹೊಸನಗರ, ಹನುಮಗಿರಿ, ಸುಂಕದಕಟ್ಟೆ ಮೇಳಗಳಲ್ಲಿ ಕಲಾವಿದರಾಗಿ ಒಟ್ಟು 63 ವರ್ಷಗಳ ಕಲಾ ಯಾನ.


ಪತ್ನಿ ಶ್ರೀಮತಿ ಲತಾ, ಎಸ್.ಬಿ.ಐ ಲೈಫ್ ಉದ್ಯೋಗಿಯಾಗಿರುವ ಮಗ ಸುಮಂತ್ ರಾಜ್ ಮತ್ತು ಮಗಳು ಶ್ರೀಮತಿ ಸೌಮ್ಯ ಇವರೊಡನೆ ನೆಮ್ಮದಿಯ ಸಂಸಾರದೊ0ದಿಗೆ ಬಿ.ಸಿ ರೋಡ್ ಬೈಪಾಸ್ ಪೂಂಜರಕೋಡಿ ಯಕ್ಷದೀಪ ನಿವಾಸದಲ್ಲಿ ಜೋಗಿಯವರು ಸಂತೃಪ್ತ ಜೀವನ ನಡೆಸುತ್ತಿದ್ದಾರೆ.


ಅಭಿಮನ್ಯು, ಅಶ್ವತ್ಥಾಮ, ಚಂಡ, ಮುಂಡ, ಕಾರ್ತವೀರ್ಯ, ಕರ್ಣ, ಅರ್ಜುನ, ಇಂದ್ರಜಿತು, ರಾವಣ, ಜಮದಗ್ನಿ, ಹನುಮಂತ, ದ್ರೋಣ, ಹಿರಣ್ಯಾಕ್ಷ, ವಾವರ, ಚೆನ್ನಯ್ಯ, ಚಂದುಗಿಡಿ, ದುಗ್ಗಣ ಕೊಂಡೆ ಮುಂತಾದ ವೈವಿಧ್ಯಮಯ ಪಾತ್ರಗಳಿಗೆ ಜೀವ ತುಂಬಿದ ಜೋಗಿ ಅವರ ಕಲಾಸಾಧನೆಗೆ ದೆಹಲಿ ಕನ್ನಡ ಸಂಘ, ದ.ಕ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಉಡುಪಿ ಮಠ, ಸಂಪಾಜೆ ಕೀಲಾರು ಪ್ರತಿಷ್ಠಾನ ಪ್ರಶಸ್ತಿ, ರಾಜ್ಯ ಮತ್ತು ಹೊರ ರಾಜ್ಯಗಳಲ್ಲಿ ಹಲವಾರು ಪ್ರಶಸ್ತಿ ಸನ್ಮಾನಗಳಿಗೆ ಪಾತ್ರರಾಗಿದ್ದಾರೆ.
ಕರ್ನಾಟಕ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಜೋಗಿ ಅವರು ಪ್ರಸ್ತುತ 76ರ ವಯಸ್ಸಿನಲ್ಲಿ ಮುಂದಿನ ಯಕ್ಷ ತಿರುಗಾಟಕ್ಕೆ ಸಿದ್ಧರಾಗಿದ್ದಾರೆ.


ನುಡಿ ನಮನ: ವೇಣೂರು ಸುಂದರ ಆಚಾರ್ಯರ ಕಿರಿಯ ಪುತ್ರ ಭಾಸ್ಕರ ಆಚಾರ್ಯರು ಧರ್ಮಸ್ಥಳ ಲಲಿತ ಕಲಾಕೇಂದ್ರದಲ್ಲಿ ನಾಟ್ಯಾಭ್ಯಾಸ ತರಬೇತಿ ಪಡೆದು ಸುರತ್ಕಲ್ ಮೇಳದಲ್ಲಿ ತಂದೆಯೊ0ದಿಗೆ ತಿರುಗಾಟ ಆರಂಭಿಸಿದವರು. ಪುಂಡುವೇಷ, ಸ್ತ್ರೀ ವೇಷ ಮತ್ತು ಹಾಸ್ಯ ಪಾತ್ರಗಳ ನಿರ್ವಹಣೆಯಿಂದ ಅತ್ಯಂತ ಜನಪ್ರಿಯರಾಗಿದ್ದ ಇವರು ಮುಂದಕ್ಕೆ ಮಂಗಳಾದೇವಿ, ಪೆರ್ಡೂರು ಮೇಳದಲ್ಲಿ ತಿರುಗಾಟ ನಡೆಸಿ ಅಲ್ಪಕಾಲದ ಅಸೌಖ್ಯದಿಂದ 37ನೇ ವಯಸ್ಸಿನಲ್ಲಿ (2008) ನಿಧನರಾದರು.


ವೇಣೂರಿನ ಇನ್ನೋರ್ವ ಪ್ರತಿಭಾವಂತ ಕಲಾವಿದ ವಾಮನ ಕುಮಾರ್. ಧರ್ಮಸ್ಥಳದ ಲಲಿತ ಕಲಾ ಕೇಂದ್ರದಲ್ಲಿ ನಾಟ್ಯ ಅಭ್ಯಾಸವನ್ನು ಮಾಡಿ ಧರ್ಮಸ್ಥಳ, ಕದ್ರಿ, ಮಂಗಳಾದೇವಿ ಮತ್ತು ಹಿರಿಯಡ್ಕ ಮೇಳಗಳಲ್ಲಿ ಒಟ್ಟು 29 ವರ್ಷ ತಿರುಗಾಟ ನಡೆಸಿದ ಇವರು 2022ರ ಜನವರಿಯಲ್ಲಿ 47ರ ಹರೆಯದಲ್ಲಿ ವಾಹನ ಅಪಘಾತದಲ್ಲಿ ದೈವಾಧೀನರಾದರು. ಈ ಕಲಾವಿದರಿಬ್ಬರಿಗೆ ನುಡಿ ನಮನವನ್ನು ಹಿರಿಯ ಕಲಾವಿದ ಪೂಕಳ ಲಕ್ಷ್ಮೀನಾರಾಯಣ ಭಟ್ ಸಲ್ಲಿಸಲಿದ್ದಾರೆ.


ಸಭಾ ಕಾರ್ಯಕ್ರಮ: ಅಪರಾಹ್ನ 4 ಗಂಟೆಯಿ0ದ ಜರಗಲಿರುವ ಸಭಾ ಕಾರ್ಯಕ್ರಮದಲ್ಲಿ ಮಂಗಳೂರು ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನದ ಎರಡನೇ ಮುಕ್ತೇಸರ ಬೆಳುವಾಯಿ ಸುಂದರ ಆಚಾರ್ಯ ಅಧ್ಯಕ್ಷತೆ ವಹಿಸಲಿದ್ದಾರೆ.

ಬೆಳ್ತಂಗಡಿ ಶಾಸಕರಾದ ಶ್ರೀ ಹರೀಶ್ ಪೂಂಜ, ಶ್ರೀಪತಿ ಭಟ್ ಉದ್ಯಮಿ ಮೂಡುಬಿದ್ರೆ ಮುಖ್ಯ ಅತಿಥಿಗಳಾಗಿದ್ದು ವೇಣೂರು ಗ್ರಾಮ ಪಂಚಾಯತ್ ಅಧ್ಯಕ್ಷ ನೇಮಯ್ಯ ಕುಲಾಲ್, ಸಿ.ಎ ಬ್ಯಾಂಕ್ ಅಧ್ಯಕ್ಷ ಸುಂದರ ಹೆಗ್ಡೆ, ಶ್ರೀ ಮಹಾಲಿಂಗೇಶ್ವರ ದೇವಾಲಯದ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ಪುರುಷೋತ್ತಮ ರಾವ್, ಉದ್ಯಮಿ ಭಾಸ್ಕರ್ ಪೈ ವೇಣೂರು, ಸಂಸ್ಮರಣಾ ಸಮಿತಿ ಗೌರವಾಧ್ಯಕ್ಷ ರವೀಂದ್ರ ಆಚಾರ್ಯ ವೇಣೂರು ಮತ್ತು ಅಧ್ಯಕ್ಷ ಖಂಡಿಗ ಶ್ರೀಧರ ಆಚಾರ್ಯ ಉಪಸ್ಥಿತರಿರುತ್ತಾರೆ.

ಸಭಾ ಕಾರ್ಯಕ್ರಮಕ್ಕಿಂತ ಮುಂಚಿತವಾಗಿ ಮತ್ತು ಬಳಿಕ ‘ಕರ್ಣಾರ್ಜುನ’ ಹಾಗೂ ‘ವಾಲಿಮೋಕ್ಷ’ ತಾಳಮದ್ದಳೆ ಪ್ರಸಿದ್ಧ ಕಲಾವಿದರಿಂದ ಜರಗಲಿದೆ.
ದಿವಾಕರ ಆಚಾರ್ಯ ಗೇರುಕಟ್ಟೆ
9449076275

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments