ಶಿವಸೇನೆಯು ಎನ್‌ಸಿಪಿ ಮತ್ತು ಕಾಂಗ್ರೆಸ್‌ನೊಂದಿಗಿನ ಸಂಬಂಧವನ್ನು ಮುರಿದು ಬಿಜೆಪಿಯೊಂದಿಗೆ ಕೈಜೋಡಿಸಬೇಕು ಎಂದು ಒತ್ತಾಯಿಸಿ ಹಿರಿಯ ಸಚಿವ ಏಕನಾಥ್ ಶಿಂಧೆ ಅವರು ಶಿವಸೇನೆಯೊಳಗೆ ಬಂಡಾಯ ಎದ್ದಿದ್ದರಿಂದ ಮಹಾರಾಷ್ಟ್ರದ ಎಂವಿಎ ಸರ್ಕಾರ ಬಿಕ್ಕಟ್ಟಿನಲ್ಲಿ ಮುಳುಗಿತು.
ಆದರೆ, ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಅವರು ಈ ಬೇಡಿಕೆಯನ್ನು ಒಪ್ಪಿಕೊಳ್ಳಲು ನಿರಾಕರಿಸಿದ್ದರಿಂದ ಬಿಕ್ಕಟ್ಟು ಮುಂದುವರಿದಿದೆ. ಪ್ರಸ್ತುತ, ಶಿಂಧೆ ಅವರು ಶಿವಸೇನೆಯ 37 ಶಾಸಕರ ಬೆಂಬಲವನ್ನು ಹೊಂದಿದ್ದಾರೆ ಎಂದು ಹೇಳಿಕೊಂಡಿದ್ದಾರೆ.
ಮಹಾರಾಷ್ಟ್ರ ಸಚಿವ ಏಕನಾಥ್ ಶಿಂಧೆ ಅವರು ತಮ್ಮ ಬಂಡಾಯ ಶಾಸಕರ ಗುಂಪು ನಿಜವಾದ ಶಿವಸೇನೆಯನ್ನು ಪ್ರತಿನಿಧಿಸುತ್ತದೆ ಎಂದು ಒತ್ತಿ ಹೇಳಿದರು. ಎಂವಿಎ ಸರ್ಕಾರ ಪತನದ ಅಂಚಿನಲ್ಲಿದೆ ಎಂದು ಸೂಚಿಸಿದ ಅವರು, ಸ್ವತಂತ್ರರು ಸೇರಿದಂತೆ 50 ಕ್ಕೂ ಹೆಚ್ಚು ಶಾಸಕರ ಬೆಂಬಲವಿದೆ ಎಂದು ಹೇಳಿದರು.
ತಾವು ಸೇರಿದಂತೆ 12 ಬಂಡಾಯ ಶಾಸಕರನ್ನು ಅನರ್ಹಗೊಳಿಸುವಂತೆ ಉಪಸಭಾಪತಿ ನರಹರಿ ಝಿರ್ವಾಲ್ ಅವರಿಗೆ ಸೇನೆ ಸಲ್ಲಿಸಿರುವ ಅರ್ಜಿಯ ಕುರಿತು ಪ್ರತಿಕ್ರಿಯಿಸಿದ ಶಿಂಧೆ, “ನಾವು ಬಾಳಾಸಾಹೇಬ್ ಠಾಕ್ರೆಯ ನಿಜವಾದ ಶಿವಸೈನಿಕರು, ನಾವು ಯಾರಿಗೂ ಹೆದರುವುದಿಲ್ಲ” ಎಂದು ಪ್ರತಿಪಾದಿಸಿದರು.
ವಿಶ್ವಾಸಮತ ಪರೀಕ್ಷೆಗಾಗಿ ತಮ್ಮ ಗುಂಪು ರಾಜ್ಯಪಾಲ ಭಗತ್ ಸಿಂಗ್ ಕಿಶ್ಯಾರಿ ಅವರನ್ನು ಸಂಪರ್ಕಿಸಲಿದೆ ಎಂಬ ಊಹಾಪೋಹಗಳ ನಡುವೆ, ಇಂದು ನಡೆದ ಬಂಡುಕೋರರ ಸಭೆಯ ನಂತರ ದೊಡ್ಡ ನಿರ್ಧಾರವನ್ನು ತೆಗೆದುಕೊಳ್ಳಲಾಗುವುದು ಎಂದು ಅವರು ಬಹಿರಂಗಪಡಿಸಿದರು.