ಯಕ್ಷಗಾನ ಅಭ್ಯಾಸ ತರಗತಿಯ ಸುಮಾರು 50 ರಷ್ಟು ಕಲಾವಿದರು ಸರಿಸುಮಾರು ದಾಖಲೆಯ 72 ಪಾತ್ರಗಳನ್ನು ರಂಗದಲ್ಲಿ ಯಶಸ್ವಿಯಾಗಿ ನಿರ್ವಹಿಸಿ – ದುಬಾಯಿಯ ಯಕ್ಷಚರಿತ್ರೆಯಲ್ಲಿ ನೂತನ ದಾಖಲೆ ನಿರ್ಮಿಸಿದ್ದಾರೆ.
ಯಕ್ಷಗಾನ ಅಭ್ಯಾಸ ತರಗತಿ ದುಬಾಯಿ ಪ್ರಸ್ತುತಪಡಿಸಿದ
ದುಬಾಯಿ ಯಕ್ಷೋತ್ಸವ 2022 – ಶ್ರೀ ಮಹಾದೇವೀ ಲಲಿತೋಪಖ್ಯಾನ ಯಕ್ಷಗಾನ ಪ್ರಸಂಗ ಮತ್ತು ಸಾಧನಾ ಸಂಭ್ರಮ 2021-22 ರ ಸಮಾರೋಪ ಸಮಾರಂಭ
ದುಬಾಯಿಯ ಶೇಖ್ ರಶೀದ್ ಅಡಿಟೋರಿಯಂನಲ್ಲಿ ಜೂನ್ 11, 2022 ರ ಶುಕ್ರವಾರದಂದು ನಡೆದ – ದುಬಾಯಿ ಯಕ್ಷೋತ್ಸವ 2022 ರ ಸಲುವಾಗಿ ತರಗತಿಯ ವಿದ್ಯಾರ್ಥಿಗಳು ಮತ್ತು ಅತಿಥಿ ಕಲಾವಿದರ ಕೂಡುವಿಕೆಯಿಂದ ಹಮ್ಮಿಕೊಂಡ ಕನ್ನಡ ಪೌರಾಣಿಕ ಯಕ್ಷಗಾನ ಯಕ್ಷಬ್ರಹ್ಮ ಖ್ಯಾತಿಯ ಕೀರ್ತಿಶೇಷ ಅಗರಿ ಶ್ರೀನಿವಾಸ ಭಾಗವತ ವಿರಚಿತ “ಶ್ರೀ ಮಹಾದೇವೀ ಲಲಿತೋಪಖ್ಯಾನ” “ಯಕ್ಷಮಯೂರ”, “ದ.ರಾ.ಬೇಂದ್ರೆ ಪ್ರಶಸ್ತಿ” ಪುರಸ್ಕೃತ ದುಬಾಯಿಯ ಯಕ್ಷಗುರು ಶ್ರೀಯುತ ಶೇಖರ್ ಡಿ. ಶೆಟ್ಟಿಗಾರರ ದಕ್ಷ ನಿರ್ದೇಶನದಲ್ಲಿ- ಶ್ರೀಯುತ ಶರತ್ ಕುಡ್ಲರ ನೃತ್ಯ ಸಂಯೋಜನೆಯೊಡನೆ –ದುಬಾಯಿ ಯಕ್ಷಗಾನ ಅಭ್ಯಾಸ ತರಗತಿಯ ಸದಸ್ಯರು, ವಿದ್ಯಾರ್ಥಿಗಳು ಮತ್ತು ಅತಿಥಿ ಕಲಾವಿದರ ಕೂಡುವಿಕೆಯಿಂದ ಪ್ರದರ್ಶಿಸಲ್ಪಟ್ಟು, ನೆರೆದ ಯಕ್ಷಪ್ರೇಮಿಗಳ ಮುಕ್ತಕಂಠದ ಪ್ರಶಂಸೆಗೆ ಮಾತ್ರವಲ್ಲದೆ ದೇಶ ವಿದೇಶಗಳ ಯಕ್ಷಾಭಿಮಾನಿಗಳ ಶ್ಲಾಘನೆಗೂ ಪಾತ್ರವಾಯಿತು.
ಧಾರ್ಮಿಕ ಮತ್ತು ಸಾಂಪ್ರದಾಯಿಕ ರೀತಿಯಲ್ಲಿ ಶುಭಾರಂಭ ಲಲಿತಾಸಹಸ್ರನಾಮ ಪಠಣ, ಭಜನೆ ಮತ್ತು ಚೌಕಿ ಪೂಜೆಯಿಂದ ಆರಂಭಗೊಂಡ ಕಾರ್ಯಕ್ರಮ ಪೂರ್ವರಂಗ ಪ್ರದರ್ಶನದ ಮೂಲಕ ರಂಗಚಾಲನೆ ಪಡೆಯಿತು. ದೀಪ ಪ್ರಜಲ್ವನೆಯ ಮೂಲಕ ಗಣ್ಯರು ಮತ್ತು ಸುಮಂಗಲೆಯರು ಕಾರ್ಯಕ್ರಮಕ್ಕೆ ವಿದ್ಯುಕ್ತವಾಗಿ ಶುಭಕೋರಿದರು.
ದುಬಾಯಿ ಯಕ್ಷಗಾನ ಅಭ್ಯಾಸ ತರಗತಿ ಪ್ರಾಯೋಜಿತ ಯಕ್ಷ ಶ್ರೀ ರಕ್ಷಾ ಗೌರವ ಪ್ರಶಸ್ತಿ ಪ್ರದಾನ: ಪ್ರಸಂಗ ಪ್ರದರ್ಶನದ ಮಧ್ಯಾವಧಿಯಲ್ಲಿ, ಅಭ್ಯಾಸ ತರಗತಿಯ ವಿಶೇಷ ವಾರ್ಷಿಕ ಪ್ರಶಸ್ತಿ, ಯಕ್ಷ ಶ್ರೀ ರಕ್ಷಾ ಗೌರವ ಪ್ರಶಸ್ತಿ ಯನ್ನು ಹಿರಿಯ ಕಲಾವಿದ – ಸಂಘಟಕ ಶ್ರೀಯುತ ಪ್ರಭಾಕರ ಡಿ. ಸುವರ್ಣ ಕರ್ನಿರೆಯವರಿಗೆ ಗಣ್ಯರ ಸುಮ್ಮುಖದಲ್ಲಿ ನೀಡಲಾಯಿತು.
ಪ್ರಮುಖ ಪ್ರಾಯೋಜಕತ್ವದ ಮೂಲಕ ಪ್ರೋತ್ಸಾಹಿಸಿದ ಸಂಸ್ಥೆ ಭೀಮ ಗೋಲ್ಡ್ ಕೊಡುಗೆ: ಸದವಸರದಲ್ಲಿ ಅತಿಥಿ ಕಲಾವಿದರ ಸನ್ಮಾನ ಮತ್ತು ಭೀಮ ಗೋಲ್ಡ್ ಪ್ರಾಯೋಜಿತ ಬಂಗಾರದ ನಾಣ್ಯಗಳನ್ನು ನೀಡಲಾಯಿತು ಅಲ್ಲದೆ ಅದೃಷ್ಟ ಚೀಟಿ ವಿಜೇತರಿಗೆ ಬಂಗಾರದ ನಾಣ್ಯಗಳನ್ನು ನೀಡಲಾಯಿತು. ಶ್ರೀಯುತ ರಾಜೇಶ್ ಕುತ್ತಾರ್ ಕಾರ್ಯಕ್ರಮ ನಿರ್ವಹಿಸಿದರು, ಶ್ರೀಯುತ ಗಣೇಶ ರೈಯವರು ಅಭಿನಂದನಾ ಭಾಷಣ ನೆರವೇರಿಸಿ- ಸನ್ಮಾನ ಪತ್ರ ವಾಚಿಸಿದರು.
ಕಾರ್ಯಕ್ರಮಕ್ಕೆ ರಂಜನೆ ನೀಡಿದ ಅಭ್ಯಾಗತ ಕಲಾವಿದರ ಸಮೂಹ: ಕಾರ್ಯಕ್ರಮದ ಕೇಂದ್ರಬಿಂದುವಾಗಿ ಭಾಗವತರಾದ ಯಕ್ಷಧ್ರುವ ಶ್ರೀಯುತ ಪಟ್ಲ ಸತೀಶ ಶೆಟ್ಟಿಯವರು ತಮ್ಮ ಭಾವಪೂರ್ಣ ಹಾಡುಗಾರಿಕೆ, ಭಕ್ತಿ-ಶೃಂಗಾರ, ವೀರ-ರೌದ್ರ ರಸಗಳ ರಮ್ಯ ಹಾಡುಗಾರಿಕೆಯಿಂದ ನೆರೆದ ಜನಸ್ತೋಮವನ್ನು ರಂಜಿಸಿದರು.
ಯಕ್ಷದಂಪತಿಗಳಾದ ಶ್ರೀಮತಿ ಅಮೃತ ಅಡಿಗ ತಮ್ಮ ಸುಮಧುರ ಕಂಠದ ಭಾಗವತಿಕೆ, ಮತ್ತು ಚೆಂಡೆ-ಮದ್ದಳೆಯಲ್ಲಿ ಶ್ರೀಯುತ ಕೌಶಿಕ್ ರಾವ್ ಪುತ್ತಿಗೆಯವರು ರಂಜಿಸಿದರೆ, ಚಂಡೆ- ಮದ್ದಳೆಯಲ್ಲಿ ಶ್ರೀಯುತ ಸವಿನಯ ನೆಲ್ಲಿತೀರ್ಥ, ಪ್ರಖ್ಯಾತ ಸ್ತ್ರೀವೇಷಧಾರಿ ದೀಪಕ್ ರಾವ್ ಪೇಜಾವರ ಮೋಹಿನಿ ಮತ್ತು ಲಲಿತಾಂಬಿಕೆಯ ಪಾತ್ರದಲ್ಲಿ ವಿಜೃಂಭಿಸಿದರು.
ಪ್ರಸಾಧನ –ವೇಷಭೂಷಣ ಕಲಾವಿದರಾಗಿ ಶ್ರಿಯುತ ಗಂಗಾಧರ ಡಿ. ಶೆಟ್ಟಿಗಾರ್ ಕಿನ್ನಿಗೋಳಿ ಮತ್ತು ನಿತಿನ್ ಕುಂಪಲರು ಅಭ್ಯಾಗತರ ನೆಲೆಯಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮದ ಮೆರುಗನ್ನು ಹೆಚ್ಚಿಸಿದರು.
ದುಬಾಯಿ ಯಕ್ಷಗಾನ ಅಭ್ಯಾಸ ತರಗತಿಯ ಹಿರಿಯರು, ಕಿರಿಯರು ಮತ್ತು ಬಾಲ ಬಾಲೆಯರ ಸಮತೂಕದ ಸ್ಪರ್ಧಾತ್ಮಕ ಯಕ್ಷಾಭಿನಯ-ನೃತ್ಯಗಳ ಮೇಲಾಟ: ವಿಶೇಷವಾಗಿ ಪುಟ್ಟ ಮಕ್ಕಳು- ಹಿರಿಯರೊಡನೆ ಸ್ಪರ್ಧೆಗೆ ಇಳಿದವರಂತೆ ರಂಗದಲ್ಲಿ ವಿಜೃಂಭಿಸಿ ಪ್ರಸಂಗ ಕಳೆಕಟ್ಟುವಂತೆ ಮಾಡಿದರು ಮಾತ್ರವಲ್ಲದೆ ಯಕ್ಷಾಭಿಮಾನಿಗಳ ವಿಶೇಷ ಮೆಚ್ಚುಗೆಗೆ ಪಾತ್ರರಾದರು. ಕರಾವಳಿ ಪ್ರದೇಶದ ಅವಿಭಜಿತ ದಕ್ಷಿಣಕನ್ನಡ-ಉತ್ತರಕನ್ನಡದ ಮಂದಿ, ಬೆಂಗಳೂರಿಗರು, ಮುಂಬಾಯಿಯ ಕಲಾಪ್ರೇಮಿಗಳು ತಮ್ಮ ಸಂದೇಶ, ಕರೆಗಳಿಂದ ಕಾರ್ಯಕ್ರಮವನ್ನು ಮುಕ್ತಕಂಠದಿಂದ ಶ್ಲಾಘಿಸಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿ- ಪ್ರಾಯೋಜಕತ್ವ ವಹಿಸಿಕೊಂಡು ಕಾರ್ಯಕ್ರಮದ ಶೋಭೆ ಹೆಚ್ಚಿಸಿದ ದುಬಾಯಿಯ ಗಣ್ಯಾತಿಗಣ್ಯರು: ಗಣ್ಯರ ನೆಲೆಯಲ್ಲಿ ಶ್ರೀ ಸರ್ವೋತ್ತಮ ಶೆಟ್ಟಿ, ಶ್ರೀ ವಾಸು ಭಟ್ ಪುತ್ತಿಗೆ, ಶ್ರೀ ಸುಜಾತ್ ಶೆಟ್ಟಿ, ಶ್ರೀ ಪ್ರವೀಣ್ ಕುಮಾರ್ ಶೆಟ್ಟಿ ವಕ್ವಾಡಿ, ಶ್ರೀ ಹರೀಶ್ ಶೇರಿಗಾರ್, ಶ್ರೀ ಹರೀಶ್ ಬಂಗೇರ, ಶ್ರೀ ಗುಣಶೀಲ್ ಶೆಟ್ಟಿ, ಶ್ರೀ ಸತೀಶ್ ಪೂಜಾರಿ, ಶ್ರೀ ನಾಗರಾಜ್ ರಾವ್, ಶ್ರೀ ಸುಧಾಕರ್ ರಾವ್ ಪೇಜಾವರ, ಶ್ರೀ ಆತ್ಮನಂದ ರೈ, ಶ್ರೀ ಪ್ರೇಮನಾಥ್ ಶೆಟ್ಟಿ, ಶ್ರೀ ವಿನೋದ್ ಕುಮಾರ್, ಶ್ರೀ ರಮಾನಂದ ಶೆಟ್ಟಿ, ಶ್ರೀ ರಾಮಚಂದ್ರ ಹೆಗ್ಡೆ, ಶ್ರೀ ರಮೇಶ್ ಶೆಟ್ಟಿ ಅಬುಧಾಬಿ, ಶ್ರೀ ಮನೋಹರ್ ತೋನ್ಸೆ, ಶ್ರೀ ಜಯರಾಮ್ ರೈ, ಶ್ರೀ ಸುಂದರ್ ಶೆಟ್ಟಿ, ಶ್ರೀ ಸುದರ್ಶನ್ ರೈ, ಶ್ರೀ ರಶ್ಮಿಕಾಂತ್ ಶೆಟ್ಟಿ, ಶ್ರೀ ಸಂದೀಪ್ ರೈ ನಂಜೆ, ಶ್ರೀ ರೋನಾಲ್ಡ್ ಮಾರ್ಟೀಸ್, ಶ್ರೀ ಯೋಗೀಶ್ ಪ್ರಭು ಮೊದಲಾದವರು ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಶುಭಹಾರೈಸಿದರೆ, ಇವರ ಜೊತೆಗೆ ದುಬಾಯಿಯ ಅನೇಕ ಗಣ್ಯಾತಿಗಣ್ಯರು-ಉದ್ಯೋಗಪತಿಗಳು ಸಭಾ ಕಾರ್ಯಕ್ರಮ –ಸನ್ಮಾನ ಕಾರ್ಯಕ್ರಮದಲ್ಲಿ ಬಾಗವಹಿಸಿದರು. ಅನೇಕರು ಪ್ರಾಯೋಜಕತ್ವ ವಹಿಸಿ ಕಾರ್ಯಕ್ರಮಕ್ಕೆ ಬೆನ್ನೆಲುಬಾಗಿ ನಿಂತರು.
ಸಾಧನಾ ಸಂಭ್ರಮ 2021-2022 ರ ಸಮಾರೋಪ ಮತ್ತು ಸಂತೋಷಕೂಟ: ಜೂನ್ 12, ಆದಿತ್ಯವಾರದಂದು ನಡೆದ ಸಾಧನಾ ಸಂಭ್ರಮ 2021-22 ರ ಸಮಾರೋಪ ಸಮಾರಂಭದಲ್ಲಿ, ಕಾರ್ಯಕ್ರಮಕ್ಕಾಗಿ ದುಡಿದ ಕಾರ್ಯಕರ್ತರು, ಕಲಾ ಪೋಷಕರು, ಕಲಾವಿದರು ಹೆತ್ತವರ ಪ್ರೋತ್ಸಾಹವನ್ನು ನೆನಪಿಸಿಕೊಂಡು ಸಾದರ ಪೂರ್ವಕವಾಗಿ ನಮ್ಮ ದುಬಾಯಿ ಯಕ್ಷಗಾನ ಅಭ್ಯಾಸ ತರಗತಿಯ ಸಂಚಾಲಕರಾದ ಶ್ರೀಯುತ ಕೊಟ್ಟಿಂಜ ದಿನೇಶ ಶೆಟ್ಟಿಯವರು, ಎಲ್ಲರಿಗೂ ನೆನಪಿನ ಕಾಣಿಕೆಯನ್ನು ವಿತರಿಸಿದರು.
ತಮ್ಮ ಮಾದರಿ ನಾಯಕತ್ವದ ಮೂಲಕ ದುಬಾಯಿಯ ಯಕ್ಷಗಾನ ಅಭ್ಯಾಸ ತರಗತಿಯನ್ನು ಮುನ್ನಡೆಸುತ್ತಿರುವ – ಕಾರ್ಯಕ್ರಮವನ್ನು ಸಂಘಟಿಸಿದ ಶ್ರೀಯುತ ಕೊಟ್ಟಿಂಜ ದಿನೇಶ ಶೆಟ್ಟಿಯವರ ಪರಿಶ್ರಮ ಬಹುಜನ ವಂದನೀಯವೆನಿಸಿತು. ಸಾಧನಾ ಸಂಭ್ರಮದ ಅಂಗವಾಗಿ ನಡೆದ ವಿವಿಧ ಸ್ಪರ್ಧಾ ವಿಜೇತರಿಗೆ ಮತ್ತು ವಾರ್ಷಿಕ ಪರೀಕ್ಷೆಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳಿಗೆ ನೆರೆದ ಪ್ರಾಯೋಜಕರು ಪ್ರಶಸ್ತಿ ಪತ್ರ ವಿತರಿಸಿದರು.
ಮಾದರಿ ಸಂಘಟನೆಯ ಬೆನ್ನೆಲುಬಾಗಿ ನಿಂತ ಮಾದರಿ ಕಾರ್ಯಕರ್ತರ ಪಡೆ: ಸ್ವಾಗತ ದ್ವಾರ, ದೇವರ ಮಂಟಪ, ವಸಂತ ಮಂಟಪ, ರಂಗಸ್ಥಳ, ಚೌಕಿ, ವೇಷಭೂಷಣ ಪರಿಕರಗಳ ಸಂಯೋಜನೆ, ಅತಿಥಿಗಳ ಸ್ವಾಗತ, ಸಭಾ ಕಾರ್ಯಕ್ರಮಗಳ ನಿರ್ವಹಣೆ, ವಿಶೇಷವಾಗಿ ಮುದ್ರಣ, ಮಾಧ್ಯಮಗಳಲ್ಲಿ ನಿರಂತರ ಪ್ರಚಾರಕ್ಕಾಗಿ ಬಹುಸಂಖ್ಯೆಯ ಕಾರ್ಯಕರ್ತರು ಟೊಂಕಕಟ್ಟಿ, ಶಿಸ್ತಿನಿಂದ ದುಡಿದ ಕಾರ್ಯಕರ್ತರ ಪರಿಶ್ರಮ ಈ ಯಶಸ್ವಿ ಸಮಾರಂಭದ ಮೂಲದ್ರವ್ಯ ಎನ್ನುವುದನ್ನು ಯಾವತ್ತೂ ಮರೆಯುವಂತಿಲ್ಲ.
ಎಲ್ಲರ ಅಭಿನಂದನೆಗೆ ಪಾತ್ರರಾಗಿದ್ದಾರೆ. ತರಗತಿಯ ಮಹಿಳಾ ವಿಭಾಗದ ಕಾರ್ಯಕರ್ತರು ಅಭ್ಯಾಸ ತರಗತಿಗಳಿಗೆ ಮನೆಯೂಟ ಸಿದ್ಧಪಡಿಸಿಕೊಂಡು ಬಂದು ಸಹಕರಿಸಿದರೆ, ಕಾರ್ಯಕ್ರಮದ ದಿನ ಬಹುಮಂದಿ ದಾನಿಗಳು ಅನ್ನಸಂತರ್ಪಣೆಗೆ ಸಹಕರಿಸಿ ಶ್ರೀದೇವಿಯ ಕೃಪೆಗೆ ಪಾತ್ರರಾದರು.
ತರಗತಿ ಅಂಗಸಂಸ್ಥೆ ಯಕ್ಷಯೋಧಾಸ್ ನ ಸದಸ್ಯರ ಜೊತೆ ಕಟೀಲು ಫ್ರೆಂಡ್ಸ್ ಮತ್ತು ಬಿರುವೆರ್ ಕುಡ್ಲ ದುಬಾಯಿ ಘಟಕದ ಸದಸ್ಯರು ಸಹಕರಿಸಿದರು. ಒಟ್ಟಿನಲ್ಲಿ ಲಲಿತೋಪಖ್ಯಾನ ಯಕ್ಷಗಾನ ಪ್ರದರ್ಶನ ದುಬಾಯಿಯ ಯಕ್ಷಗಾನ ಚರಿತ್ರೆಯಲ್ಲಿ ಒಂದು ದಾಖಲೆಯನ್ನೇ ನಿರ್ಮಿಸಿತು.