ಉಡುಪಿಯ ಯಕ್ಷಗಾನ ಕಲಾರಂಗ ಕಳೆದ 23 ವರ್ಷಗಳಿಂದ ನಡೆಸಿಕೊಂಡು ಬಂದ ಕಲಾವಿದರ ಸಮಾವೇಶ 31-05-2022 ರಂದು ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಸಂಪನ್ನಗೊ0ಡಿತು.
ಪೂರ್ವಾಹ್ನ 9.00 ರಿಂದ 11.30ರವರೆಗೆ ಮಣಿಪಾಲದ ಕೆ.ಎಂ.ಸಿ ಆಸ್ಪತ್ರೆ ಇವರ ಸಹಯೋಗದಲ್ಲಿ ತಜ್ಞ ವೈದ್ಯರಿಂದ ಆರೋಗ್ಯ ತಪಾಸಣೆ ನಡೆಸಲಾಯಿತು. ಪೂರ್ವಾಹ್ನ 11.30 ರಿಂದ 1.30ರ ವರೆಗೆ ಕರ್ನಾಟಕ ಯಕ್ಷಗಾನ ಅಕಾಡೆಮಿ ಬೆಂಗಳೂರು ಇದರ ಪ್ರಾಯೋಜಕತ್ವದಲ್ಲಿ ‘ಪ್ರಸ್ತುತ ಯಕ್ಷಗಾನದ ಅವಲೋಕನ’ ಎಂಬ ವಿಷಯದ ಕುರಿತು ವಿಚಾರಗೋಷ್ಠಿ ನಡೆಯಿತು.
ಪರ್ಯಾಯ ಶ್ರೀಕೃಷ್ಣಾಪುರ ಮಠಾಧೀಶರಾದ ಶ್ರೀ ಶ್ರೀ ವಿದ್ಯಾಸಾಗರ ತೀರ್ಥ ಶ್ರೀಪಾದರು ಅನುಗ್ರಹ ಸಂದೇಶ ನೀಡಿದರು. ಎಡನೀರು ಮಠಾಧೀಶರಾದ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದರು ದಿವ್ಯ ಸಾನಿಧ್ಯ ವಹಿಸಿದ್ದರು. ಶಾಸಕರಾದ ಶ್ರೀ ಕೆ. ರಘುಪತಿ ಭಟ್ ಕಲಾವಿದರಿಗೆ ಉಡುಗೊರೆಯನ್ನು ವಿತರಿಸಿದರು.
ನೂತನ ಮನೆ ನಿರ್ಮಿಸಿದ 16 ಮಂದಿ ಕಲಾವಿದರಿಗೆ ತಲಾ 10,000/- ನಗದು ಉಡುಗೊರೆಯೊಂದಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಹಿಂದಿನ ಸಮಾವೇಶದ ಬಳಿಕ ಅಗಲಿದ ಕಲಾವಿದರಿಗೆ ಶ್ರದ್ಧಾಂಜಲಿ ಸಮರ್ಪಿಸಲಾಯಿತು. ಸಮಾವೇಶದಲ್ಲಿ ಭಾಗವಹಿಸಿದ ಕಲಾವಿದರಿಗೆ ನೀಡುವ ಉಡುಗೊರೆಗಳನ್ನು ಸಾಂಕೇತಿಕವಾಗಿ 15 ಮಂದಿ ಹಿರಿಯ ಕಲಾವಿದರಿಗೆ ವೇದಿಕೆಯಲ್ಲಿ ವಿತರಿಸಲಾಯಿತು.
ಇದೇ ಸಂದರ್ಭದಲ್ಲಿ ಯಕ್ಷಗಾನ ಕಲೆ-ಕಲಾವಿದರನ್ನು ನಿರಂತರ ಪ್ರೋತ್ಸಾಹಿಸುತ್ತಾ ಬಂದ ಎಡನೀರು ಮಠದ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದರನ್ನು ಪರ್ಯಾಯ ಮಠಾಧೀಶರು ಶಾಲು, ಸ್ಮರಣಿಕೆ ಅಭಿವಂದನಾ ಪತ್ರದೊಂದಿಗೆ ಗೌರವಿಸಿದರು.
ಕರ್ನಾಟಕ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರಾದ ಡಾ. ಜಿ.ಎಲ್ ಹೆಗಡೆ ಶುಭಾಶಂಸನೆಗೈದರು. ಅಭ್ಯಾಗತರಾಗಿ ಕುಯಿಲಾಡಿ ಸುರೇಶ್ ನಾಯಕ್, ಹಾರಾಡಿ ನಿತ್ಯಾನಂದ ಶೆಟ್ಟಿ, ಸಿ.ಎ ಗಣೇಶ್ ಕಾಂಚನ್, ಡಾ. ಚಂದ್ರಶೇಖರ ದಾಮ್ಲೆ, ಜೀವನ್‌ರಾಮ್ ಸುಳ್ಯ, ಎಂ.ಕೆ ಭಟ್ ಹೊನ್ನಾವರ, ಮಲ್ಪೆ ಕರುಣಾಕರ ಸಾಲಿಯಾನ್ ಪಾಲ್ಗೊಂಡಿದ್ದರು.
ಸಂಸ್ಥೆಯ ಉಪಾಧ್ಯಕ್ಷರಾದ ಪಿ.ಕಿಶನ್ ಹೆಗ್ಡೆ, ವಿ.ಜಿ ಶೆಟ್ಟಿ ಉಪಸ್ಥಿತರಿದ್ದರು. ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್ ಸ್ವಾಗತಿಸಿದರು. ಜತೆಕಾರ್ಯದರ್ಶಿ ಪ್ರೊ. ನಾರಾಯಣ ಎಂ. ಹೆಗಡೆ ವಂದನಾರ್ಪಣೆಗೈದರು. ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಸ್ತಾವನೆಯೊಂದಿಗೆ ಕಾರ್ಯಕ್ರಮ ನಿರೂಪಿಸಿದರು.