
ಉಡುಪಿ : ಯಕ್ಷಗಾನ ಕಲಾರಂಗ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ನಡೆಸಿದ ಈ ವರ್ಷದ ‘ಉತ್ತರ ರಾಮಾಯಣ’ದ ಶೀರ್ಷಿಕೆಯಲ್ಲಿ ಜರಗಿದ ತಾಳಮದ್ದಲೆ ಸಪ್ತಾಹದ ಸಮಾರೋಪ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭವು 29-05-2022 ರಂದು ಸಂಪನ್ನಗೊ0ಡಿತು.
ಪರ್ಯಾಯ ಮಠಾಧೀಶರಾದ ಶ್ರೀ ಶ್ರೀ ವಿದ್ಯಾಸಾಗರ ತೀರ್ಥ ಶ್ರೀಪಾದರು ಶ್ರೀ ಕೆ. ಎಲ್. ಕುಂಡ0ತಾಯ ಅವರಿಗೆ ಪೆರ್ಲ ಕೃಷ್ಣ ಭಟ್ ಸ್ಮರಣಾರ್ಥ ‘ಯಕ್ಷಗಾನ ಕಲಾರಂಗ ಪ್ರಶಸ್ತಿ’ಯನ್ನು ಪ್ರದಾನ ಮಾಡಿದರು.
ಎಸ್.ಎಂ. ಹೆಗಡೆ ಮುಡಾರೆಯವರಿಗೆ ಮರಣೋತ್ತರವಾಗಿ ನೀಡಿದ ಮಟ್ಟಿ ಮುರಲೀಧರ ರಾವ್ ಸ್ಮರಣಾರ್ಥ ‘ಯಕ್ಷಗಾನ ಕಲಾರಂಗ ಪ್ರಶಸ್ತಿ’ಯನ್ನು ಮುಡಾರೆಯವರ ಮಗಳು ಶ್ರೀಮತಿ ವಿಮಲಾ ಹೆಗಡೆಯವರು ಸ್ವೀಕರಿಸಿದರು.
ಯಕ್ಷಗಾನ ನಮ್ಮ ಆಸ್ತಿಕತೆಯನ್ನು ಉಳಿಸುವಲ್ಲಿ ಮಹತ್ವದ ಪಾತ್ರವಹಿಸಿದೆ. ಯಕ್ಷಗಾನ ಕಲಾರಂಗ ಕಲೆ, ಕಲಾವಿದರು ಹಾಗೂ ವಿದ್ಯಾರ್ಥಿಗಳ ಶ್ರೇಯೋಭಿವೃದ್ಧಿಗೆ ಅರ್ಥಪೂರ್ಣವಾದ ಕಾರ್ಯಗಳನ್ನು ಮಾಡುತ್ತಿದೆ ಎಂದರು.
ಕರ್ಣಾಟಕ ಬ್ಯಾಂಕ್‌ನ ಮಹಾಪ್ರಬಂಧಕ ಶ್ರೀ ರಾಜಕುಮಾರ್ ಪಿ.ಎಚ್ ಸಂಸ್ಥೆಯ ವಾರ್ಷಿಕ ಸಂಚಿಕೆ ‘ಕಲಾಂತರ0ಗ 2021-22’ವನ್ನು ಬಿಡುಗಡೆಗೊಳಿಸಿದರು. ಹೊನ್ನಾವರದ ಶ್ರೀ ಕೃಷ್ಣಮೂರ್ತಿ ಶಿವಾನಿ ಮುಖ್ಯ ಅಭ್ಯಾಗತರಾಗಿ ಪಾಲ್ಗೊಂಡಿದ್ದರು. ಉಪಾಧ್ಯಕ್ಷ ಎಸ್. ವಿ. ಭಟ್ ಉಪಸ್ಥಿತರಿದ್ದರು.
ಸಂಸ್ಥಯ ಅಧ್ಯಕ್ಷ ಎಂ. ಗಂಗಾಧರ ರಾವ್ ಸ್ವಾಗತಿಸಿದರು. ಜತೆಕಾರ್ಯದರ್ಶಿ ಪ್ರೊ. ನಾರಾಯಣ ಎಂ. ಹೆಗಡೆ ಪ್ರಶಸ್ತಿ ಪುರಸ್ಕೃತರನ್ನು ಪರಿಚಯಿಸಿದರು. ಜತೆಕಾರ್ಯದರ್ಶಿ ಹೆಚ್.ಎನ್ ಶೃಂಗೇಶ್ವರ ವಂದಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ನಿರ್ವಹಿಸಿದರು.