
ಯಕ್ಷಗಾನ ಕಲಾರಂಗ ವೃತ್ತಿ ಕಲಾವಿದರ ಕ್ಷೇಮ ಚಿಂತನೆಗೆ ರೂಪಿಸಿದ ಅಂಗಸ0ಸ್ಥೆ ಯಕ್ಷನಿಧಿಯ ಮೂಲಕ ಹಲವು ಯೋಜನೆಗಳನ್ನು ಅನುಷ್ಠಾನಕ್ಕೆ ತಂದಿದೆ. ಪ್ರತೀ ವರ್ಷ ಕಲಾವಿದರ ಸಮಾವೇಶವನ್ನು ಮೇ 31 ರಂದು ನಡೆಸಿಕೊಂಡು ಬಂದಿದೆ.
ಯಕ್ಷನಿಧಿಯ 24ನೇ ವರ್ಷದ ಸಮಾವೇಶ ಮೇ 31, ಮಂಗಳವಾರ ದಿನಪೂರ್ತಿ ಕಾರ್ಯಕ್ರಮಗಳೊಂದಿಗೆ ಜರಗಲಿದ್ದು ಅಂದು ಅಪರಾಹ್ನ 2.00 ಗಂಟೆಗೆ ಪರ್ಯಾಯ ಶ್ರೀಕೃಷ್ಣಾಪುರ ಮಠಾಧೀಶರಾದ ಶ್ರೀ ಶ್ರೀ ವಿದ್ಯಾಸಾಗರತೀರ್ಥ ಶ್ರೀಪಾದರು ಅನುಗ್ರಹ ಸಂದೇಶ ನೀಡಲಿದ್ದು, ಎಡನೀರು ಮಠಾಧೀಶರಾದ ಶ್ರೀ ಶ್ರೀ ಸಚ್ಚಿದಾನಂದ ಭಾರತಿ ಶ್ರೀಪಾದರು ದಿವ್ಯ ಸಾನಿಧ್ಯ ವಹಿಸಲಿದ್ದಾರೆ.
ಡಾ. ಜಿ. ಶಂಕರ್ ಅಧ್ಯಕ್ಷತೆಯಲ್ಲಿ ಸಂಪನ್ನಗೊಳ್ಳಲಿರುವ ಸಮಾರಂಭದಲ್ಲಿ ಮಾನ್ಯ ಇಂಧನ, ಕನ್ನಡ ಮತ್ತು ಸಂಸ್ಕೃತಿ ಸಚಿವರಾದ ಶ್ರೀ ಸುನಿಲ್ ಕುಮಾರ್ ಕಲಾವಿದರಿಗೆ ಉಡುಗೊರೆ ನೀಡಲಿದ್ದಾರೆ. ಗೃಹ ನಿರ್ಮಾಣದ ಉಡುಗೊರೆಯನ್ನು ಶಾಸಕ ಶ್ರೀ ಕೆ. ರಘುಪತಿ ಭಟ್ ವಿತರಿಸುತ್ತಾರೆ.
ಯಕ್ಷಗಾನ ಅಕಾಡೆಮಿಯ ಅಧ್ಯಕ್ಷ ಡಾ. ಜಿ. ಎಲ್. ಹೆಗಡೆ ಶುಭಾಶಂಸನೆಗೈಯಲಿದ್ದು ಅಭ್ಯಾಗತರಾಗಿ ಶ್ರೀ ಆನಂದ ಸಿ. ಕುಂದರ್, ಶ್ರೀ ಹಾರಾಡಿ ನಿತ್ಯಾನಂದ ಶೆಟ್ಟಿ, ಸಿಎ ಗಣೇಶ್ ಕಾಂಚನ್, ಡಾ. ಚಂದ್ರಶೇಖರ ದಾಮ್ಲೆ, ಶ್ರೀ ಎಂ. ಕೆ. ಭಟ್ ಹಾಗೂ ಶ್ರೀ ಕರುಣಾಕರ ಸಾಲಿಯಾನ್ ಭಾಗವಹಿಸಲಿದ್ದಾರೆ.
ಪೂವಾಹ್ನ 9.00 ರಿಂದ 11.30ರ ವರೆಗೆ ಕಲಾವಿದರ ಆರೋಗ್ಯ ತಪಾಸಣೆ ನಡೆಸಲಾಗುವುದು. 11.30 ರಿಂದ 1.00 ಗಂಟೆಯವರೆಗೆ ‘ಪ್ರಸ್ತುತ ಯಕ್ಷಗಾನದ ಅವಲೋಕನ’ ನಡೆಯಲಿದೆ ಎಂದು ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.