ಯಕ್ಷಗಾನ ಕಲಾರಂಗ ಉಡುಪಿ ತಲ್ಲೂರು ಫ್ಯಾಮಿಲಿ ಟ್ರಸ್ಟ್ ಪ್ರಾಯೋಜಕತ್ವದಲ್ಲಿ ಯಕ್ಷಗಾನದ ವಿಶಿಷ್ಟ ಸಾಧಕರಿಗೆ ನೀಡುವ ತಲ್ಲೂರು ಕನಕಾ-ಅಣ್ಣಯ್ಯ ಶೆಟ್ಟಿ ನೆನಪಿನ ಯಕ್ಷಸಾಧಕ ಪ್ರಶಸ್ತಿ 22-05-2022 ಭಾನುವಾರ ಸಂಜೆ 5.15 ಗಂಟೆಗೆ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಸಂಪನ್ನಗೊಳ್ಳಲಿದೆ.
ಪರ್ಯಾಯ ಶ್ರೀಕೃಷ್ಣಾಪುರ ಮಠಾಧೀಶರಾದ ಶ್ರೀ ಶ್ರೀ ವಿದ್ಯಾಸಾಗರತೀರ್ಥ ಶ್ರೀಪಾದರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಪ್ರಸಿದ್ಧ ವೈದ್ಯರೂ, ಯಕ್ಷಗಾನ ಪೋಷಕರೂ ಆದ ಡಾ. ಪದ್ಮನಾಭ ಕಾಮತರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಸಮಾರಂಭದಲ್ಲಿ ಹಿರಿಯ ಸ್ತ್ರೀವೇಷಧಾರಿ ಬೇಗಾರು ಶಿವಕುಮಾರ ಅಭಿನಂದನಾ ಭಾಷಣ ಮಾಡಲಿದ್ದು, ತಲ್ಲೂರು ಫ್ಯಾಮಿಲಿ ಟ್ರಸ್ಟ್ನ ಡಾ. ತಲ್ಲೂರು ಶಿವರಾಮ ಶೆಟ್ಟಿ ಅಭ್ಯಾಗತರಾಗಿ ಭಾಗವಹಿಸಲಿದ್ದಾರೆ.
ಅಪರಾಹ್ನ 2.00 ಗಂಟೆಗೆ ‘ಯಕ್ಷಗಾನಾಕಾಶದ ತಾರನಾಥ’ ಶೀರ್ಷಿಕೆಯಲ್ಲಿ ಪ್ರಶಸ್ತಿ ಪುರಸ್ಕೃತರ ಬಹುಮುಖಿ ವ್ಯಕ್ತಿತ್ವವನ್ನು ಪರಿಚಯಿಸುವ ಕಾರ್ಯಕ್ರಮವಿದ್ದು ಇದನ್ನು ಹಿರಿಯ ಯಕ್ಷಗಾನ ಕಲಾವಿದ ಗೋವಿಂದ ಭಟ್ ಉದ್ಘಾಟಿಸುತ್ತಾರೆ.
‘ಯುಗಳ ತಾಳಮದ್ದಲೆ’ ವಿಚಾರಗೋಷ್ಠಿ ತಾರಾನಾಥರಿಂದ ನೃತ್ಯ ಪ್ರಾತ್ಯಕ್ಷಿಕೆ ನಡೆಯಲಿದೆ. ವಿಚಾರ ಗೋಷ್ಠಿ ಅಧ್ಯಕ್ಷತೆಯನ್ನು ಹಿರಿಯ ಯಕ್ಷಗಾನ ವಿದ್ವಾಂಸ ಡಾ. ಮೋಹನ ಕುಂಟಾರು ನಡೆಸಿಕೊಡುತ್ತಾರೆ.
ಈ ಗೋಷ್ಠಿಯಲ್ಲಿ ಗಾಯತ್ರಿ ಉಡುಪ ಕಿನ್ನಿಗೋಳಿ, ಯೋಗಿಶ ರಾವ್ ಚಿಗುರುಪಾದೆ, ಶಾಂತಾರಾಮ ಕುಡ್ವ ಉಪನ್ಯಾಸ ನೀಡಲಿದ್ದಾರೆ.
ರೂ. 40000/- ನಗದು ಪುರಸ್ಕಾರದೊಂದಿಗೆ ಕಲಾವಿದ, ಪ್ರಸಂಗಕರ್ತ, ಲೇಖಕ, ಪತ್ರಕರ್ತ ತಾರನಾಥ ವರ್ಕಾಡಿಯವರನ್ನು ವಿಶಿಷ್ಟವಾಗಿ ಗೌರವಿಸುವ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಆಸಕ್ತರನ್ನು ಆಹ್ವಾನಿಸಿರುವುದಾಗಿ ಪತ್ರಿಕಾ ಪ್ರಕಟಣೆಯಲ್ಲಿ ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್ ತಿಳಿಸಿದ್ದಾರೆ.