ಉಡುಪಿ : ಯತಿಶ್ರೇಷ್ಠರಾದ ಶ್ರೀ ವಿದ್ಯಾಮಾನ್ಯತೀರ್ಥ ಶ್ರೀಪಾದರ ಆರಾಧನೇಯ ಸುಸಂದರ್ಭದಲ್ಲಿ ಪಲಿಮಾರು ಮಠಾಧೀಶರಾದ ಶ್ರೀ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ಯಕ್ಷಗಾನ ಕ್ಷೇತ್ರಕ್ಕೆ ವಿಶೇಷ ಕೊಡುಗೆ ನೀಡಿದ ಕಟೀಲು ಮೇಳದಲ್ಲಿ 3 ದಶಕಗಳ ಕಾಲ ಭಾಗವತರಾಗಿ ಸೇವೆ ಸಲ್ಲಿಸಿದ ಶ್ರೀ ಕುರಿಯ ಗಣಪತಿ ಶಾಸ್ತ್ರಿಗಳಿಗೆ ‘ಶ್ರೀ ವಿದ್ಯಾಮಾನ್ಯ ಯಕ್ಷಕಲಾ ಪ್ರಶಸ್ತಿ’ ನೀಡಿ ಅನುಗ್ರಹಿಸಿದರು.
ಮೇ 11, 2022, ಬುಧವಾರ ಪಲಿಮಾರು ಮೂಲ ಮಠದಲ್ಲಿ ಜರಗಿದ ಜ್ಞಾನಸತ್ರದಲ್ಲಿ ಪೇಜಾವರ, ಅದಮಾರು, ಚಿತ್ರಾಪುರ ಹಾಗೂ ಪಲಿಮಾರು ಮಠದ ಕಿರಿಯ ಶ್ರೀಪಾದರು ಉಪಸ್ಥಿತರಿದ್ದು ಅನುಗ್ರಹಿಸಿದರು. ಪ್ರಶಸ್ತಿಯು 50,000 ರೂಪಾಯಿ ನಗದು ಪುರಸ್ಕಾರವನ್ನೊಳಗೊಂಡಿದೆ.
ಕುರಿಯ ಶಾಸ್ತ್ರಿಗಳು ತೆಂಕುತಿಟ್ಟು ಯಕ್ಷಗಾನ ಕ್ಷೇತ್ರಕ್ಕೆ ಭಾಗವತರಾಗಿ, ನಿರ್ದೇಶಕರಾಗಿ ನೀಡಿದ ವಿಶೇಷ ಕೊಡುಗೆಯನ್ನು ಪಲಿಮಾರು ಶ್ರೀಗಳು ಈ ಸಂದರ್ಭದಲ್ಲಿ ಸ್ಮರಿಸಿಕೊಂಡು, ಅವರಿಗೆ ಉತ್ತರೋತ್ತರ ಶ್ರೇಯಸ್ಸನ್ನು ಪ್ರಾರ್ಥಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸ್ತ್ರಿಗಳು ಈ ಗೌರವ ಕುರಿಯ ಮನೆತನಕ್ಕೆ ಮುಖ್ಯವಾಗಿ ಕುರಿಯ ವಿಠಲ ಶಾಸ್ತ್ರಿಗಳಿಗೆ ಸಂದಿದೆ ಎಂದು ಧನ್ಯತೆಯಿಂದ ನುಡಿದರು.
ಇದೇ ಸಂದರ್ಭದಲ್ಲಿ ಮೈಸೂರಿನ ವಿದ್ವಾಂಸರಾದ ಡಾ. ಸಿ. ಎಚ್. ಶ್ರೀನಿವಾಸ ಮೂರ್ತಿ ಇವರಿಗೆ ಒಂದು ಲಕ್ಷ ರೂಪಾಯಿ ಮೊತ್ತಗಳನ್ನೊಳಗೊಂಡ ‘ಪರವಿದ್ಯಾಮಾನ್ಯ ಪ್ರಶಸ್ತಿ’ ನೀಡಿ ಶ್ರೀಪಾದರು ಗೌರವಿಸಿದರು.
ಯಕ್ಷಗಾನ ಕಲಾರಂಗದ ಕಾರ್ಯದರ್ಶಿ ಮುರಲಿ ಕಡೆಕಾರ್ ಅಭಿನಂದನಾ ಪತ್ರವನ್ನು ವಾಚಿಸಿದರು. ವಿದ್ವಾನ್ ಮೋಹನ್ ಆಚಾರ್ಯ ಕಾರ್ಯಕ್ರಮ ನಿರ್ವಹಿಸಿದರು.