Saturday, January 18, 2025
Homeಯಕ್ಷಗಾನಅಜೆಕಾರು ಕಲಾಭಿಮಾನಿ ಬಳಗ ಅಜೆಕಾರು ಶಾಖೆ ಶುಭಾರಂಭ - ಕಲಾವಿದರ ಸನ್ಮಾನ

ಅಜೆಕಾರು ಕಲಾಭಿಮಾನಿ ಬಳಗ ಅಜೆಕಾರು ಶಾಖೆ ಶುಭಾರಂಭ – ಕಲಾವಿದರ ಸನ್ಮಾನ

‘ಹೊರನಾಡಿನಲ್ಲಿ ಯಕ್ಷಗಾನ ಕಲೆಯ ವಿವಿಧ ಆಯಾಮಗಳಲ್ಲಿ ಮೌಲಿಕ ಕೆಲಸ ಮಾಡಿದ ಅಜೆಕಾರು ಕಲಾಭಿಮಾನಿ ಬಳಗ ಮುಂಬೈ ಮಹಾನಗರದಲ್ಲಿ ಮನೆಮಾತಾಗಿದೆ. ಅಜೆಕಾರು ಬಾಲಕೃಷ್ಣ ಶೆಟ್ಟಿ ಅವರ ನೇತೃತ್ವದಲ್ಲಿ ಯಕ್ಷಗಾನ ಪ್ರದರ್ಶನ, ಸರಣಿ ತಾಳಮದ್ದಳೆ ಕೂಟಗಳಲ್ಲದೆ ಕಲಾವಿದರ ಸನ್ಮಾನ, ಗ್ರಂಥ ಪ್ರಕಟಣೆ, ಬಡ ಕಲಾವಿದರಿಗೆ ನೆರವು, ಯಕ್ಷರಕ್ಷಾ ಪ್ರಶಸ್ತಿ ಪ್ರದಾನ ಇತ್ಯಾದಿ ಮಾನವೀಯ ಕಾರ್ಯಗಳಿಂದ ಅದು ತುಳುನಾಡಿನ ಸಂಸ್ಕೃತಿಯನ್ನು ಮೆರೆಸಿದೆ.

ಇದೀಗ ಎರಡು ದಶಕಗಳ ಬಳಿಕ ಹುಟ್ಟೂರಿನಲ್ಲಿ ಬಳಗದ ಸ್ಥಳೀಯ ಶಾಖೆ ವಿಧ್ಯುಕ್ತವಾಗಿ ಆರಂಭವಾಗುತ್ತಿರುವುದು ಶ್ಲಾಘನೀಯ’ ಎಂದು ಕರ್ನಾಟಕ ಜಾನಪದ, ಯಕ್ಷಗಾನ ಮತ್ತು ತುಳು ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯ, ಯಕ್ಷಗಾನ ವಿದ್ವಾಂಸ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಹೇಳಿದ್ದಾರೆ.         

ಅಜೆಕಾರು ಜ್ಯೋತಿ ಪ್ರೌಢಶಾಲಾ ಮೈದಾನದಲ್ಲಿ ಮುಂಬೈ ಅಜೆಕಾರು ಕಲಾಭಿಮಾನಿ ಬಳಗ ವತಿಯಿಂದ ಜರಗಿದ ಅಜೆಕಾರು ಶಾಖೆಯ ವಿಧ್ಯುಕ್ತ ಉದ್ಘಾಟನೆ ಮತ್ತು ಪ್ರಥಮ ವಾರ್ಷಿಕೋತ್ಸವ ಸಮಾರಂಭದ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು. ಕಾಡುಹೊಳೆ ಶ್ರೀ ಜಂಗಮೇಶ್ವರ ಮಠದ ಪ್ರಧಾನ ಅರ್ಚಕ ರಾಘವೇಂದ್ರ ಭಟ್ ದೀಪ ಬೆಳಗಿ ಬಳಗವನ್ನು ಉದ್ಘಾಟಿಸಿದರು.


ಕಲಾವಿದರ ಸನ್ಮಾನ – ಬಯಲಾಟ: ಸಮಾರಂಭದಲ್ಲಿ ಪಾವಂಜೆ ಮೇಳದ ಕಲಾವಿದರಾದ ಮೋಹನ ಬೆಳ್ಳಿಪ್ಪಾಡಿ ಮತ್ತು ಪ್ರಶಾಂತ ಶೆಟ್ಟಿ ವಗೆನಾಡು ಅವರನ್ನು ಸನ್ಮಾನಿಸಲಾಯಿತು. ಕರ್ನಾಟಕ ಸ್ಟೋನ್ ಕ್ರಷರ್ ಮತ್ತು ಕ್ವಾರಿ ಮಾಲಕರ ಸಂಘದ ಅಧ್ಯಕ್ಷ ರವೀಂದ್ರ ಶೆಟ್ಟಿ, ಖ್ಯಾತ ಭಾಗವತ ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿ ಮತ್ತು ಕಾರ್ಕಳ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಮಾಜಿ ಅಧ್ಯಕ್ಷ ರತ್ನಾಕರ ಅಮೀನ್ ಅತಿಥಿಗಳಾಗಿ ಶುಭ ಹಾರೈಸಿದರು.

ಯಕ್ಷ ನೃತ್ಯ ಶಿಬಿರ: ಸಭೆಯ ಅಧ್ಯಕ್ಷತೆ ವಹಿಸಿದ ಅಜೆಕಾರು ಕಲಾಭಿಮಾನಿ ಬಳಗ ಅಜೆಕಾರು ಶಾಖೆಯ ಅಧ್ಯಕ್ಷ ವಿಜಯ ಶೆಟ್ಟಿ ಶುಭವಿ ಮಾತನಾಡಿ ‘ಬಳಗದ ವತಿಯಿಂದ ಮೇ 1ರಿಂದ 5ರ ವರೆಗೆ ಅಜೆಕಾರು ಶ್ರೀರಾಮ ಮಂದಿರದಲ್ಲಿ ಪ್ರಥಮ ಹಂತದ ಮಹಿಳೆಯರಿಗಾಗಿ ಉಚಿತ ಯಕ್ಷಗಾನ ತರಬೇತಿ ಶಿಬಿರವನ್ನು ಏರ್ಪಡಿಸಲಾಗಿದ್ದು ಆಸಕ್ತರು ಭಾಗವಹಿಸಬಹುದು’ ಎಂದು ತಿಳಿಸಿದರು                 

ಅಜೆಕಾರು ಕಲಾಭಿಮಾನಿ ಬಳಗ ಮುಂಬೈ ಇದರ ಸಂಸ್ಥಾಪನಾ ಅಧ್ಯಕ್ಷ, ಯಕ್ಷಗುರು ಅಜೆಕಾರು ಬಾಲಕೃಷ್ಣ ಶೆಟ್ಟಿ ಸ್ವಾಗತಿಸಿದರು. ಹರೀಶ್ ನಾಯಕ ಅಜೆಕಾರು ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

ಬಳಿಕ ಶ್ರೀ ಜ್ಞಾನ ಶಕ್ತಿ ಸುಬ್ರಹ್ಮಣ್ಯ ಸ್ವಾಮಿ ಕೃಪಾಪೋಷಿತ ಯಕ್ಷಗಾನ ಮಂಡಳಿ ಕ್ಷೇತ್ರ ನಾಗವೃಜ ಕ್ಷೇತ್ರ ಪಾವಂಜೆ ಇವರಿಂದ ‘ಶ್ರೀದೇವಿ ಮಹಾತ್ಮೆ’ ಯಕ್ಷಗಾನ ಬಯಲಾಟ ಜರಗಿತು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments