Saturday, July 6, 2024
Homeಯಕ್ಷಗಾನಅಂಬಲಪಾಡಿ ಯಕ್ಷಗಾನ ಮಂಡಳಿಯ ವಾರ್ಷಿಕೋತ್ಸವ ಮತ್ತು ಪ್ರಶಸ್ತಿ ಪ್ರದಾನ

ಅಂಬಲಪಾಡಿ ಯಕ್ಷಗಾನ ಮಂಡಳಿಯ ವಾರ್ಷಿಕೋತ್ಸವ ಮತ್ತು ಪ್ರಶಸ್ತಿ ಪ್ರದಾನ

ಉಡುಪಿಯ ಹಿರಿಯ ಸಾಂಸ್ಕೃತಿಕ ಸಂಘಟನೆ ಶ್ರೀ ಲಕ್ಷ್ಮೀ ಜನಾರ್ದನ ಯಕ್ಷಗಾನ ಕಲಾ ಮಂಡಳಿಯ 64ನೇ ವಾರ್ಷಿಕೋತ್ಸವ ಮಾರ್ಚ್ 06, 2022 ಭಾನುವಾರ ಅಂಬಲಪಾಡಿಯ ಜನಾರ್ದನ ಮಂಟಪದಲ್ಲಿ ಜರಗಿತು.

ಈ ಸಂದರ್ಭದಲ್ಲಿ ನಿಡಂಬೂರು ಬೀಡು ಬಲ್ಲಾಳ ಪ್ರಶಸ್ತಿಯನ್ನು ಬೆಂಗಳೂರಿನ ಗಾನಸೌರಭ ಯಕ್ಷಗಾನ ಶಾಲೆ, ಕಿದಿಯೂರು ಜನಾರ್ದನ ಆಚಾರ್ಯ ಪ್ರಶಸ್ತಿಯನ್ನು ವಿದ್ವಾನ್ ಗಣಪತಿ ಭಟ್, ಕಪ್ಪೆಟ್ಟು ಬಾಬು ಶೆಟ್ಟಿಗಾರ್ ಪ್ರಶಸ್ತಿಯನ್ನು ರಾಜೀವ ತೋನ್ಸೆ ಮತ್ತು ಕುತ್ಪಾಡಿ ಆನಂದ ಗಾಣಿಗ ಪ್ರಶಸ್ತಿಯನ್ನು ಪದ್ಮನಾಭ ಗಾಣಿಗ ಇವರಿಗೆ ಅಂಬಲಪಾಡಿ ದೇವಳದ ಧರ್ಮದರ್ಶಿ ಡಾ. ನಿ.ಬೀ ವಿಜಯ ಬಲ್ಲಾಳರು ಪ್ರದಾನ ಮಾಡಿ ಗೌರವಿಸಿದರು.

ನಿಡಂಬೂರು ಬೀಡು ಬಲ್ಲಾಳ ಪ್ರಶಸ್ತಿಯು ಹತ್ತು ಸಾವಿರ ರೂಪಾಯಿ, ಉಳಿದ ಪ್ರಶಸ್ತಿ ತಲಾ ಎಂಟು ಸಾವಿರ ರೂಪಾಯಿ ನಗದು ಹಾಗೂ ಪ್ರಶಸ್ತಿ ಪತ್ರಗಳನ್ನು ಒಳಗೊಂಡಿದೆ. ಈ ಸಂದರ್ಭದಲ್ಲಿ ಮಾತನಾಡಿದ ಬಲ್ಲಾಳರು ಕಳೆದ 64 ವರ್ಷಗಳಿಂದ ಯಕ್ಷಗಾನ ಮಂಡಳಿಯು ವೃತ್ತಿ ಮೇಳಗಳಿಗೆ ಸಮದಂಡಿಯಾಗಿ ಬೆಳೆದು, ದೇಶ-ವಿದೇಶಗಳಲ್ಲಿ ಖ್ಯಾತಿಯನ್ನು ಗಳಿಸಿದೆ. ನಮ್ಮ ನಾಡಿಗೆ ಹೆಮ್ಮೆ ತರುವ ರೀತಿಯಲ್ಲಿ ಬೆಳೆದ ಈ ಮಂಡಳಿಯ ಅಗತ್ಯತೆಗಳಿಗೆ ದೇವಳ ಸದಾ ಸ್ಪಂದಿಸುತ್ತಿರುತ್ತದೆ ಎಂದು ನುಡಿದರು.

ಅತಿಥಿಗಳಾಗಿ ಆಗಮಿಸಿದ ಖ್ಯಾತ ನ್ಯಾಯವಾದಿ ಎ. ಸಂಕಪ್ಪ ಇವರು ಮಂಡಳಿಯ ಚಟುವಟಿಕೆಗಳನ್ನು ಮೆಚ್ಚಿ ಒಂದು ಲಕ್ಷ ರೂಪಾಯಿಯ ದೇಣಿಗೆಯನ್ನು ಘೋಷಿಸಿದರು.

ಇನ್ನೋರ್ವ ಅತಿಥಿಗಳಾದ ಅಗ್ನಿಹೋತ್ರಿ ವಿದ್ವಾನ್ ಅಡ್ವೆ  ಲಕ್ಷ್ಮೀಶ ಆಚಾರ್ಯರು ತಾನು ಈ ಮಂಡಳಿಯಲ್ಲಿ ನಾಲ್ಕು ವರ್ಷ ವೇಷಧಾರಿಯಾಗಿ ಗಳಿಸಿದ ಅನುಭವವನ್ನು ಹಂಚಿಕೊ೦ಡು, ಸ್ಪಷ್ಟ ಕನ್ನಡದ ಉಳಿವಿಗೆ ಯಕ್ಷಗಾನದ ಕೊಡುಗೆ ಅನನ್ಯವಾದುದಾಗಿದೆ ಎಂದು ನುಡಿದರು.

ಕರ್ಣಾಟಕ ಬ್ಯಾಂಕಿನ ಎ.ಜಿ.ಎಂ. ಶ್ರೀ ರಾಜಗೋಪಾಲ ಆಚಾರ್ಯರು ಅತಿಥಿಗಳಾಗಿ ಪಾಲ್ಗೊಂಡರು. ನಿಡಂಬೂರು ಬೀಡು ಬಲ್ಲಾಳ ಪ್ರಶಸ್ತಿಯನ್ನು ಸ್ವೀಕರಿಸಿದ ಬೆಂಗಳೂರಿನ ಗಾನಸೌರಭ ಶಾಲೆಯ ನಿರ್ದೇಶಕರಾದ ಬೇಗಾರು ಶಿವಕುಮಾರರು ಈ ಪ್ರಶಸ್ತಿಯಿಂದ ನಮ್ಮ ತಂಡಕ್ಕೆ ಹೊಸ ಸ್ಫೂರ್ತಿ ಉಂಟಾಗಿದೆ.  ಬೆಂಗಳೂರಿನಲ್ಲಿ ನಮ್ಮ ಕಾರ್ಯಕ್ಷೇತ್ರವನ್ನು ವಿಸ್ತರಿಸಲು ಇದು ಅನುವು ಮಾಡಿದೆ ಎಂದು ಸಂತಸ ವ್ಯಕ್ತಪಡಿಸಿದರು.

ನಿರ್ದೇಶಕರಾದ ನರಸಿಂಹ ತುಂಗರನ್ನು ಧರ್ಮದರ್ಶಿಗಳು ಗೌರವಿಸಿದರು. ಮಂಡಳಿಯ ಅಧ್ಯಕ್ಷ ಕೆ. ಅಜಿತ್ ಕುಮಾರ್ ಸ್ವಾಗತಿಸಿದರು. ಮುರಲಿ ಕಡೆಕಾರ್ ಪ್ರಸ್ತಾವನೆಗೈದರು.

ಪ್ರಶಸ್ತಿ ಪುರಸ್ಕೃತರ ಪರಿಚಯವನ್ನು ಪ್ರೊ. ನಾರಾಯಣ ಎಮ್. ಹೆಗಡೆಯವರು ಮಾಡಿದರು. ನಟರಾಜ ಉಪಾಧ್ಯಾಯ ಮತ್ತು ಮಂಜುನಾಥ ತೆಂಕಿಲ್ಲಾಯರು ನಿರ್ವಹಣೆಗೈದ ಕಾರ್ಯಕ್ರಮದ ಕೊನೆಯಲ್ಲಿ ಕಾರ್ಯದರ್ಶಿ ಸುನಿಲ್ ಕುಮಾರ್ ಧನ್ಯವಾದ ಸಮರ್ಪಿಸಿದರು.

ಕಾರ್ಯಕ್ರಮದ ಬಳಿಕ ಮಂಡಳಿಯ ಬಾಲ ಕಲಾವಿದರಿಂದ ‘ಮೈಂದದ್ವಿವಿದ ಕಾಳಗ’ ಮತ್ತು ‘ರುಗ್ಮಾವತಿ ಕಲ್ಯಾಣ’ ಯಕ್ಷಗಾನ ಸೊಗಸಾಗಿ ಪ್ರಸ್ತುತ ಗೊಂಡಿತು.  

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments