28-02-2022 ಸೋಮವಾರದಂದು ಪೇಜಾವರ ಮಠದ ಶ್ರೀ ರಾಮವಿಠಲ ಸಭಾಂಗಣದಲ್ಲಿ ಹಿರಿಯ ಸಾಮಾಜಿಕ ಕಾರ್ಯಕರ್ತ, ಕರ್ಣಾಟಕ ಬ್ಯಾಂಕ್ ನಿವೃತ್ತ ಅಧಿಕಾರಿ ಶ್ರೀ ಮಟ್ಟಿ ಲಕ್ಷ್ಮಿನಾರಾಯಣ ರಾವ್ ಇವರಿಗೆ ಕಾಣಿಯೂರು ಮಠಾಧೀಶರಾದ ಶ್ರೀ ಶ್ರೀ ವಿದ್ಯಾವಲ್ಲಭತೀರ್ಥ ಶ್ರೀಪಾದರು ಯಕ್ಷಗಾನ ಕಲಾರಂಗದಲ್ಲಿ 27 ವರ್ಷ ಕೋಶಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದ ಎಸ್. ಗೋಪಾಲಕೃಷ್ಣರ ನೆನಪಿನಲ್ಲಿ ನೀಡುವ ‘ಸೇವಾಭೂಷಣ ಪ್ರಶಸ್ತಿ’ನೀಡಿ ಗೌರವಿಸಿದರು.
ಶ್ರೀಮತಿ ವರಲಕ್ಷ್ಮಿ ಎಲ್. ರಾವ್ ಇವರನ್ನು ಇದೇ ಸಂದರ್ಭದಲ್ಲಿ ಮಂಗಳ ಸೀರೆ ನೀಡಿ ಅನುಗ್ರಹಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಶ್ರೀಗಳು ಮಟ್ಟಿಯವರು ಶ್ರೀಕೃಷ್ಣ ಮಠಕ್ಕೆ, ವಿವಿಧ ದೇವಸ್ಥಾನಗಳಿಗೆ ಹಾಗೂ ಆತ್ಮೀಯ ಒಡನಾಡಿಗಳಿಗೆ ಪ್ರತೀ ವರ್ಷ ವಾದಿರಾಜ ಅನುಗ್ರಹೀತ ಮಟ್ಟಿಗುಳ್ಳವನ್ನು ಉಚಿತವಾಗಿ ತಂದು ಕೊಟ್ಟು, ಸಮಾಜದ ಎಲ್ಲಾ ಚಟುವಟಿಗಕೆಗಳಲ್ಲಿ ಪಾಲ್ಗೊಂಡು ಬದುಕನ್ನು ಸಂಭ್ರಮಿಸಿದ ಸರಳ ವ್ಯಕ್ತಿಯಾಗಿದ್ದಾರೆ. ಅವರಿಗೆ ಅರ್ಹವಾಗಿ ಈ ಪ್ರಶಸ್ತಿ ಸಂದಿದೆ ಎಂದು ನುಡಿದರು.
ಹರಿಕೃಷ್ಣ ಪುನರೂರು ಅತಿಥಿಗಳಾಗಿ ಪಾಲುಗೊಂಡರು. ಇದೇ ಸಂದರ್ಭದಲ್ಲಿ ಯಕ್ಷಶಿಕ್ಷಣ ಟ್ರಸ್ಟ್ ನ ಗುರುಗಳಾಗಿ ಒಂದು ದಶಕದಿಂದ ಸೇವೆಸಲ್ಲಿಸುತ್ತಿರುವ, ಯಕ್ಷಗಾನ ಕೇಂದ್ರದ ಗುರುಗಳಾದ ಬಗ್ವಾಡಿ ಕೃಷ್ಣಮೂರ್ತಿ ಭಟ್ ಇವರ ಪತ್ನಿ ತೀವ್ರ ಅಸೌಖ್ಯದಿಂದ ಇದ್ದು ಅವರಿಗೆ ವೈದ್ಯಕೀಯ ನೆರವಾಗಿ ಸಂಸ್ಥೆಯ ಕಾರ್ಯಕಾರಿ ಸದಸ್ಯರ ವತಿಯಿಂದ ಒಂದು ಲಕ್ಷ ರೂಪಾಯಿಯನ್ನು ನೀಡಲಾಯಿತು.
ಸಂಸ್ಥೆಯ ಅಧ್ಯಕ್ಷರಾದ ಎಂ. ಗಂಗಾಧರ ರಾವ್ ಅವರು ಸ್ವಾಗತಿಸಿದರು. ಉಪಾಧ್ಯಕ್ಷರಾದ ಎಸ್. ವಿ. ಭಟ್ ಅವರು ಎಸ್. ಗೋಪಾಲಕೃಷ್ಣ ಅವರಿಗೆ ನುಡಿನಮನ ಸಲ್ಲಿಸಿದರು.
ವೇದಿಕೆಯಲ್ಲಿ ಉಪಾಧ್ಯಕ್ಷರುಗಳಾದ ಪಿ. ಕಿಶನ್ ಹೆಗ್ಡೆ, ವಿ. ಜಿ. ಶೆಟ್ಟಿ ಉಪಸ್ಥಿತರಿದ್ದರು. ಕಾರ್ಯದರ್ಶಿ ಮುರಲಿ ಕಡೆಕಾರ್ ನಿರೂಪಿಸಿದ ಕಾರ್ಯಕ್ರಮದಲ್ಲಿ ಜತೆ ಕಾರ್ಯದರ್ಶಿ ಎಚ್. ಎನ್. ಶೃಂಗೇಶ್ವರ ವಂದಿಸಿದರು.