ಯಕ್ಷಗಾನ ಕಲೆಯ ಪ್ರೀತಿಯಿಂದ ಅನೇಕ ಕಲಾವಿದರು ಪ್ರತಿಫಲಾಪೇಕ್ಷೆಯಿಲ್ಲದೆ ಸೇವೆ ಸಲ್ಲಿಸಿದ್ದಾರೆ. ಇಂತಹ ಕಲಾವಿದರ ಸಂಸ್ಮರಣೆಯನ್ನು ನಡೆಸುವುದು ಅತ್ಯಂತ ಸೂಕ್ತವೆಂದು ರಾಮನಗರ ಶ್ರೀ ಸೌಹಾರ್ದಯಕ್ಷಗಾನ ಸಮಿತಿ ಅಧ್ಯಕ್ಷರಾದ ಉಮೇಶ ಶೆಣೈ ಎನ್ ತಿಳಿಸಿದರು.
ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಳದ ವಠಾರದಲ್ಲಿ ಜರುಗಿದ ಕೀರ್ತಿಶೇಷರಾದ ಗಣಪತಿ ಆಚಾರ್ಯ ನೇರೆಂಕಿ, ವಿಠ್ಠಲಾಚಾರ್ಯ ನೆಲ್ಯಾಡಿ, ಭಾಸ್ಕರಾಚಾರ್ಯ ಉಪ್ಪಿನಂಗಡಿ ಇವರ ಸಂಸ್ಮರಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಈ ಸಂಸ್ಮರಣಾ ಕಾರ್ಯಕ್ರಮವನ್ನು ಪ್ರತಿವರ್ಷ ಟ್ರಸ್ಟ್ ಮೂಲಕ ನಡೆಸುವುದಕ್ಕೆ ರೂಪಾಯಿ 10,000 ದೇಣಿಗೆಯನ್ನು ಉಮೇಶ ಶೆಣೈ ನೀಡಿದರು.
ಕಲಾವಿದರಾದ ಗೋಪಾಲ್ ಶೆಟ್ಟಿ ಕಳೆಂಜ, ಗುಡ್ಡಪ್ಪ ಬಲ್ಯ ಸಂಸ್ಮರಣಾ ನುಡಿಗಳನ್ನಾಡಿದರು. ಶ್ರೀ ಕಾಳಿಕಾಂಬ ಯಕ್ಷಗಾನ ಸಂಘದ ಅಧ್ಯಕ್ಷರಾದ ದಿವಾಕರ ಆಚಾರ್ಯ ಗೇರುಕಟ್ಟೆ ಶುಭ ಹಾರೈಸಿದರು. ವೇದಿಕೆಯಲ್ಲಿ ಗಂಗಾಧರ್ ಆಚಾರ್ಯ ನೇರೆಂಕಿ, ಪುರುಷೋತ್ತಮ್ ಆಚಾರ್ಯ ಉಪಸ್ಥಿತರಿದ್ದರು.
ಶ್ರೀ ಹರೀಶ್ ಆಚಾರ್ಯ ಬಾರ್ಯ ಪ್ರಸ್ತಾವನೆಗೈದರು. ಉಪನ್ಯಾಸಕ ಹರೀಶ್‌ಆಚಾರ್ಯ ಸುರತ್ಕಲ್ ಸ್ವಾಗತಿಸಿ ಮುರಳೀಧರ ನೇರೆಂಕಿ ವಂದಿಸಿದರು.
ಕಾರ್ಯಕ್ರಮದ0ಗವಾಗಿ ಜಬ್ಬಾರ್ ಸಮೋ, ಅಂಬಾಪ್ರಸಾದ್ ಪಾತಾಳ, ಗೋಪಾಲ ಶೆಟ್ಟಿ ಕಳೆಂಜ, ದಿವಾಕರ ಆಚಾರ್ಯ ಗೇರುಕಟ್ಟೆ, ಮಹಾಲಿಂಗೇಶ್ವರ ಭಟ್ ಪೆರಿಯಡ್ಕ , ಹರೀಶ್ ಬಾರ್ಯ, ಪದ್ಮನಾಭ ಕುಲಾಲ್ , ಡಿ.ಕೆ ಆಚಾರ್ಯ, ಪ್ರಚೇತ್ ಆಳ್ವ, ಶ್ರೀಪತಿ ಭಟ್ ಇಳಂತಿಲ, ಮೋಹನ ಆಲಂಕಾರು ಭಾಗವಹಿಸುವಿಕೆಯಲ್ಲಿ ಸುಧನ್ವ ಮೋಕ್ಷ ತಾಳಮದ್ದಳೆ ಜರಗಿತು.