Saturday, January 18, 2025
Homeಯಕ್ಷಗಾನಶೈಕ್ಷಣಿಕ ಯೋಜನೆಯೊಂದಿಗೆ ಮುನ್ನಡೆಯುತ್ತಿರುವ ಮಂಗಳಗಂಗೋತ್ರಿಯ ಯಕ್ಷಗಾನ ಅಧ್ಯಯನ ಕೇಂದ್ರ

ಶೈಕ್ಷಣಿಕ ಯೋಜನೆಯೊಂದಿಗೆ ಮುನ್ನಡೆಯುತ್ತಿರುವ ಮಂಗಳಗಂಗೋತ್ರಿಯ ಯಕ್ಷಗಾನ ಅಧ್ಯಯನ ಕೇಂದ್ರ

ಬರಹ: ಸತೀಶ್ ಕೊಣಾಜೆ

    ಯಕ್ಷಗಾನ ಸರ್ವಾಂಗ ಸುಂದರ ಕಲೆ ಹಾಗೂ ನಮ್ಮ ನಾಡಿನ ಹಿರಿಮೆಯ ಕಲೆಯಾಗಿದೆ. ಕರ್ನಾಟಕದ ಸಾಂಸ್ಕ್ರತಿಕ ಶ್ರೀಮಂತಿಕೆಯನ್ನು ಪ್ರತಿನಿಧಿಸುವ ಯಕ್ಷಗಾನವಿಂದು ನಾಡಿನ ಮುಖ್ಯ ಕಲಾಪ್ರಕಾರವಾಗಿ ಬೆಳೆದು, ದೇಶ-ವಿದೇಶದ ನೆಲದಲ್ಲಿಯೂ ಪ್ರದರ್ಶನಗೊಳ್ಳುತ್ತಿರುವುದು ಈ ಕಲೆಯ ಅನನ್ಯತೆಗೆ ಸಾಕ್ಷಿಯಾಗಿದೆ. ಯಕ್ಷಗಾನವು ಶೈಕ್ಷಣಿಕ ವಲಯಗಳಲ್ಲಿ ಗುರುತಿಸಿದ ನಂತರವಂತೂ ಯಕ್ಷಗಾನ ಜ್ಞಾನ ಪರಂಪರೆಯನ್ನು ಅಧ್ಯಯನ ಶಿಸ್ತಿನ ಮೂಲಕ ವಿಸ್ತರಿಸಿಕೊಳ್ಳಲು ಸಾಧ್ಯವಾಗಿದೆ.


 ಪರಿಪೂರ್ಣ ರಂಗಭೂಮಿಯಾದ ಯಕ್ಷಗಾನ ಕಲೆಯ ಅಧ್ಯಯನ, ಪ್ರಕಟನೆ, ಸಂವರ್ಧನೆ ಹಾಗೂ ಸಂರಕ್ಷಣೆಯಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಪಾತ್ರವು ಅತ್ಯಂತ ಮಹತ್ವಪೂರ್ಣವಾದುದು. ಉದ್ಯಮಿಗಳು, ಯಕ್ಷಗಾನ ಕಲಾಸಕ್ತರು, ಯಕ್ಷಗಾನ ಅಭಿಮಾನಿಯೂ ಆಗಿರುವ ಡಾ.ಪಿ.ದಯಾನಂದ ಪೈ ಅವರ ಆರ್ಥಿಕ ಸಹಕಾರದೊಂದಿಗೆ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಡಾ.ಪಿ.ದಯಾನಂದ ಪೈ ಮತ್ತು ಶ್ರೀ ಪಿ.ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರವು ಸ್ಥಾಪನೆಯಾಗಿ ಯಕ್ಷಗಾನಕ್ಕೆ ಸಂಬಂಧಿಸಿದ ಶೈಕ್ಷಣಿಕ ಯೋಜನೆಗಳನ್ನು ಹಮ್ಮಿಕೊಂಡು ಬಹುಮುಖೀ ಉದ್ದೇಶದೊಂದಿಗೆ ಸಕ್ರಿಯವಾಗಿ ಮುನ್ನಡೆಯುತ್ತಿದೆ.


    ಯಕ್ಷಗಾನ ವಿದ್ವಾಂಸರು, ಕಲಾವಿದರು, ಸಹೃದಯಿ ಪ್ರೇಕ್ಷಕರ ಅನುಸಂಧಾನದ ಮೂಲಕವೇ ಕೇಂದ್ರವು ನಿರ್ಮಾಣವಾಗಬೇಕೆಂಬ ಆಶಯದೊಂದಿಗೆ ರೂಪುಗೊಂಡಿರುವ ಯಕ್ಷಗಾನ ಅಧ್ಯಯನ ಕೇಂದ್ರವು  ಯಕ್ಷಗಾನವನ್ನು ತಿಟ್ಟು- ಮಟ್ಟುಗಳ ಬೇಧವಿಲ್ಲದೆ ಯಕ್ಷಗಾನ ಪ್ರಕಾರಗಳ ಅಧ್ಯಯನ, ಈ ರಂಗಭೂಮಿಗೆ  ಸಂಬಂಧಿಸಿದ  ಎಲ್ಲಾ ಅಂಶಗಳ ಅಧ್ಯಯನ ಹಾಗೂ ಸಂಗ್ರಹ, ಪ್ರಚಾರ ಉಪನ್ಯಾಸ, ಪ್ರಾತ್ಯಕ್ಷಿಕೆ, ಪ್ರದರ್ಶನ, ಕಮ್ಮಟ,  ವಿಚಾರಸಂಕಿರಣ, ಕಾರ್ಯಾಗಾರ, ಕಲಾವಿದರ ದಾಖಲಾತಿ, ಯಕ್ಷಗಾನ ಸಂಘ ಸಂಸ್ಥೆಗಳೊಂದಿಗೆ ಯಕ್ಷಗಾನ ಸಂಬಂಧೀ ಕಾರ್ಯಕ್ರಮಗಳಿಗೆ ಸಹಭಾಗಿತ್ವ, ಉಚಿತ ಯಕ್ಷಗಾನ ತರಬೇತಿ- ಹೀಗೆ ಹತ್ತು ಹಲಾವಾರು ಶೈಕ್ಷಣಿಕ ಯೋಜನೆಗಳನ್ನು ಹಮ್ಮಿಕೊಂಡು ಸುಮಾರು ಹತ್ತು ವರ್ಷಗಳಲ್ಲಿ ಯಕ್ಷಗಾನ ಕೇಂದ್ರವು ಮಹತ್ತರವಾದ ಕಾರ್ಯವನ್ನು ನಿರ್ವಹಿಸಿಕೊಂಡು ಬರುತ್ತಿವೆ.


ದಶಮಾನೋತ್ಸವ ಸಂಭ್ರಮ

ಡಾ.ಪಿ.ದಯಾನಂದ ಪೈ ಮತ್ತು ಶ್ರೀ ಪಿ.ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರವು ವಿವಿಯಲ್ಲಿ ಆರಂಭಗೊಂಡು ಹತ್ತು ವರ್ಷಗಳು ಕಳೆದಿದ್ದು ಕೊರೋನಾ ಕಾಲಘಟ್ಟದಲ್ಲಿ ದಶಮಾನೋತ್ಸವ ಆಚರಣೆಗೆ ಅಡಚಣೆಯಾಗಿತ್ತು. ಅಲ್ಲದೆ ಕಳೆದ ಡಿಸೆಂಬರ್‌ನಲ್ಲಿ ದಶಮಾನೋತ್ಸವ ಸಂಭ್ರಮವನ್ನು ನಡೆಸಲು ನಿರ್ದರಿಸಲಾಗಿತ್ತು.  ಹದಿನೈದು ಜನರಿಗೆ ದಶಮಾನೋತ್ಸವ ಪ್ರಶಸ್ತಿ ಹಾಗೂ ಇಬ್ಬರಿಗೆ ಕೃತಿ ಪ್ರಶಸ್ತಿ, ಯಕ್ಷಗಾನ ಪ್ರದರ್ಶನ, ಕೃತಿ ಬಿಡುಗಡೆ, ಯಕ್ಷಗಾನ ಬಯಲು ರಂಗಮಂದಿರಕ್ಕೆ ಶಿಲಾನ್ಯಾಸ ಮೊದಲಾದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದರೂ ಚುನಾವಣಾ ನೀತಿ ಸಂಹಿತೆ ಕಾರಣದಿಂದ ದಶಮಾನೋತ್ಸವ ಉದ್ಘಾಟನಾ ಕಾರ್ಯಕ್ರಮವನ್ನು ಅನಿವಾರ್ಯ ಕಾರಣದಿಂದ ಮುಂದೂಡಲಾಗಿತ್ತು. ಈ ಮುಂದೂಡಲ್ಪಟ್ಟ ದಶಮಾನೋತ್ಸವ ಕಾರ್ಯಕ್ರಮದ ಉದ್ಘಾಟನೆ, ಪ್ರಶಸ್ತಿ ಪ್ರಧಾನ ಕಾರ್ಯಕ್ರಮವನ್ನು ಕೇಂದ್ರದ ಪ್ರಾಯೋಜಕರಾದ ಡಾ.ದಯಾನಂದ ಪೈ ಹಾಗೂ ಕುಲಪತಿಗಳ ಮಾರ್ಗದರ್ಶನ, ಸಲಹೆಯನ್ನು ಪಡೆದುಕೊಂಡು ಮುಂದಿನ ಮಾರ್ಚ್ ತಿಂಗಳಿನಲ್ಲಿ ನಡೆಸುವ ಬಗ್ಗೆ ಚಿಂತನೆ ಇದೆ.  
ಪ್ರೊ. ಶ್ರೀಪತಿ ಕಲ್ಲೂರಾಯ
ನಿರ್ದೇಶಕರು, ಯಕ್ಷಗಾನ ಅಧ್ಯಯನ ಕೇಂದ್ರ


ಯಕ್ಷವಾಙ್ಮಯದಲ್ಲಿದೆ 2000 ಕ್ಕೂ ಹೆಚ್ಚು ಯಕ್ಷಗಾನ ಗ್ರಂಥಗಳು :
       ಗುರುಶಿಷ್ಯಪರಂಪರೆಯೊಂದಿಗೆ ಅನೌಪಚಾರಿಕವಾಗಿ ಬೆಳೆದುಬಂದಿರುವ ಯಕ್ಷಗಾನದತ್ತ ಇಂದು ವಿದ್ಯಾವಂತರು ಆಕರ್ಷಿತರಾಗುತ್ತಿದ್ದಾರೆ. ವಿಶ್ವವಿದ್ಯಾಲಯಗಳ ಮೂಲಕ ಯಕ್ಷಗಾನ ಕಲೆಗೆ ಸಂಬಂಧಿಸಿದ ಪಿಎಚ್‌ಡಿ ಸಂಶೋಧನೆಗಳು ಸೇರಿದಂತೆ ಅಧ್ಯಯನಗಳು ಹೆಚ್ಚೆಚ್ಚು ನಡೆಯುತ್ತಿವೆ. ಮಂಗಳೂರು ವಿಶ್ವವಿದ್ಯಾನಿಲಯದ ಮೂಲಕವೂ ಹಲವು ಸಂಶೋಧನೆ, ಪಿಎಚ್‌ಡಿ ಅಧ್ಯಯನಗಳು ನಡೆದಿವೆ. ಯಕ್ಷಗಾನ ಸಂಶೋಧಕರಿಗೆ, ವಿಮರ್ಶಕರಿಗೆ, ಕಲಾವಿದರಿಗೆ, ವಿದ್ಯಾರ್ಥಿಗಳಿಗೆ ಯಕ್ಷಗಾನ ಅಧ್ಯಯನದ ಕೇಂದ್ರದಲ್ಲಿರುವ ‘ಯಕ್ಷವಾಙ್ಮಯ’ ಗ್ರಂಥಾಲಯವು ಬಹಳ ಉಪಯುಕ್ತವಾಗಿವೆ.

ಯಕ್ಷಗಾನ, ಕರಾವಳಿ ರಂಗಭೂಮಿ, ಕರ್ನಾಟಕ ರಂಗಭೂಮಿಗೆ  ಸಂಬಂಧಿಸಿದ ಆಕರ ಗ್ರಂಥಗಳು ಇಲ್ಲಿವೆ. ಅಪೂರ್ವವೂ, ಹಳೆಯದೂ ಆದ ಮಹತ್ವದ ಯಕ್ಷಗಾನ ಪ್ರಸಂಗಗಳ ಹಸ್ತಪ್ರತಿಗಳ ಸಂಗ್ರಹವೂ ಇಲ್ಲಿದೆ. ಪಿಎಚ್‌ಡಿ ಸಂಶೋಧನಾ ಗ್ರಂಥಗಳು, ಯಕ್ಷಗಾನ ಪತ್ರಿಕೆಗಳ ಸಂಗ್ರಹ, ಯಕ್ಷಗಾನ ಲೇಖನಗಳ ಸಂಗ್ರಹ, ಸಿ.ಡಿ.ಕ್ಯಾಸೆಟ್‌ಗಳ ಸಂಗ್ರಹ ಕೂಡಾ ಇಲ್ಲಿದ್ದು ಅಧ್ಯಯನಾಸಕ್ತರಿಗೆ ಪ್ರಮುಖ ಆಕರಕೇಂದ್ರವಾಗಿ ರೂಪುಗೊಂಡಿದೆ.

‘ಯಕ್ಷಮಂಗಳ’ ವಸ್ತುಸಂಗ್ರಹಾಲಯ:
        ಮಂಗಳೂರು ವಿಶ್ವವಿದ್ಯಾನಿಲಯದ ಯಕ್ಷಗಾನ ಅಧ್ಯಯನ ಕೇಂದ್ರದಲ್ಲಿರುವ ‘ಯಕ್ಷಮಂಗಳ’ ವಸ್ತುಸಂಗ್ರಹಾಲಯವು ಸುಸಜ್ಜಿತವಾಗಿ, ಆಕರ್ಷಣೀಯವಾಗಿ ನಿರ್ಮಾಣಗೊಂಡಿದೆ. ತೆಂಕು- ಬಡಗು ತಿಟ್ಟುಗಳ ಯಕ್ಷಗಾನದ ವಿವಿಧ ಪಾತ್ರಗಳ ಪುಂಡು ವೇಷ, ಸ್ತ್ರೀವೇಷ, ರಾಕ್ಷಸವೇಷ, ರಾಜ ವೇಷದ ಆಳೆತ್ತರದ ಮಾದರಿಗಳು, ಕಲಾವಿದರು ಬಳಸುವ ಪರಿಕರಗಳು, ರಂಗಸ್ಥಳ, ಚೌಕಿಯ ಮಾದರಿಗಳು, ಮುಖವರ್ಣಿಕೆಗಳು, ಹಿರಿಯ ಕಿರಿಯ ಕಲಾವಿದರ ಪರಂಪರೆಯ ಛಾಯಾಚಿತ್ರಗಳನ್ನು ಇಲ್ಲಿ ಜೋಡಿಸಿಡಲಾಗಿದೆ.

ಮ್ಯೂಸಿಯಂ ಪ್ರವೇಶಿಸಿದೊಡನೆ ಅತ್ಯಾಕರ್ಷಕ ವಿದ್ಯುದೀಪದ ಅಲಂಕಾರದೊಂದಿಗೆ ಹಿಮ್ಮೇಳ ಸಂಗೀತವು ಯಕ್ಷಲೋಕದೆಡೆಗೆ ನಮ್ಮನ್ನು ಸೆಳೆದೊಯ್ಯುತ್ತದೆ. ಈ ವಸ್ತುಸಂಗ್ರಹಾಲಯಕ್ಕೆ ದೇಶವಿದೇಶಗಳ ರಂಗಭೂಮಿ ತಜ್ಞರು, ವಿಮರ್ಶಕರು, ಸಂಶೋಧಕರು, ವಿವಿಧ ಶಾಲಾ ವಿದ್ಯಾರ್ಥಿಗಳು, ಕಲಾವಿದರು, ಯಕ್ಷಗಾನ ಆಸಕ್ತರು ಆಗಮಿಸುತ್ತಿದ್ದಾರೆ. ಪದ್ಮಶ್ರೀ ಪುರಸ್ಕೃತ ಕಲಾವಿದ ಚಿಟ್ಟಾಣಿ, ಕವಿ ನಿಸಾರ್ ಅಹ್ಮದ್, ಸಾಹಿತಿ ಚಂದ್ರಶೇಖರ ಕಂಬಾರ, ದೇ.ಜವರೇಗೌಡ ಮೊದಲಾದವರು ಈ ವಸ್ತುಸಂಗ್ರಹಾಲಯಕ್ಕೆ ಆಗಮಿಸಿ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.

ಉಚಿತ ಯಕ್ಷಗಾನ ತರಬೇತಿ- ಪ್ರದರ್ಶನ:
      ಯಕ್ಷಗಾನ ಕೇಂದ್ರದ ಆಶಯದಂತೆ ವಿದ್ಯಾರ್ಥಿಗಳಲ್ಲಿ, ಯುವ ಸಮುದಾಯದಲ್ಲಿ ಯಕ್ಷಗಾನದ ಕಲಾಸಕ್ತಿ, ಅಭಿರುಚಿಯನ್ನು ಬೆಳೆಸಿ, ಕಲೆಯ ಮಹತ್ಚವನ್ನು ತಿಳಿಯಪಡಿಸುವ ಉದ್ದೇಶದಿಂದ ಯಕ್ಷಗಾನ ಕೇಂದ್ರದಲ್ಲಿ ವಿದ್ಯಾರ್ಥಿಗಳ ‘ಯಕ್ಷಮಂಗಳ ತಂಡ’ವನ್ನು ಕಟ್ಟಿ ಯಕ್ಷಗುರುಗಳಿಂದ ಉಚಿತ ಯಕ್ಷತರಬೇತಿಯನ್ನು ನೀಡಲಾಗುತ್ತಿದೆ.

ಅಲ್ಲದೆ ವಿಶ್ವವಿದ್ಯಾಲಯದಲ್ಲಿ ಹಾಗೂ ಇತರಡೆಗಳಲ್ಲಿ ಯಕ್ಷಗಾನ ಪ್ರದರ್ಶನಕ್ಕೂ ಅವಕಾಶ ನೀಡಲಾಗುತ್ತಿದೆ. ಮಾತುಗಾರಿಕೆ, ಬಣ್ಣಗಾರಿಕೆಯ ಬಗ್ಗೆಯೂ ಅವರಿಗೆ ಪ್ರಾತ್ಯಕ್ಷಿಕೆ, ಕಮ್ಮಟವನ್ನು ಏರ್ಪಡಿಸಿ ಕೇಂದ್ರದಿಂದ ಪ್ರಮಾಣಪತ್ರವನ್ನು ಒದಗಿಸಲಾಗುತ್ತಿದೆ. ಪ್ರತೀ ವರ್ಷವೂ 50 ರಿಂದ 60 ವಿದ್ಯಾರ್ಥಿಗಳು ಯಕ್ಷಗಾನದ ಅಭ್ಯಾಸ ನಡೆಸುತ್ತಾರೆ. ಕೇಂದ್ರದಿಂದ ಒಟ್ಟು 400 ಕ್ಕೂ ಹೆಚ್ಚು ವಿದ್ಯಾರ್ಥಿಗಳು ತರಬೇತಿಯನ್ನುಪಡೆದಿದ್ದಾರೆ.

ಯಕ್ಷಮಂಗಳ ಕೃತಿ ಮಾಲಿಕೆ:
         ಯಕ್ಷಗಾನ ಅಧ್ಯಯನ ಕೇಂದ್ರವು ಯಕ್ಷಮಂಗಳ ಕೃತಿಮಾಲಿಕೆಯ ಮೂಲಕ ಯಕ್ಷವಾಙ್ಮಯಕ್ಕೆ ಜ್ಞಾನ ಹಾಗೂ ತಿಳುವಳಿಕೆಯನ್ನು ತುಂಬಬಲ್ಲ ಕೃತಿಗಳನ್ನು ಪ್ರಕಟಿಸುತ್ತಿದೆ. ಯಕ್ಷಸಿರಿ, ಯಕ್ಷಮುಡಿ, ಯಕ್ಷಸ್ತ್ರೀ, ಯಕ್ಷತರು, ಯಕ್ಷ ಕೇದಗೆ, ಜಿನ ಯಕ್ಷಗಾನ ಸಂಪುಟ-2, ಕೋಟ ಶಿವರಾಮ ಕಾರಂತರು, ಯಕ್ಷಗಾನ ಸ್ಥಿತಿಗತಿ, ಬಲಿಪಗಾನಯಾನ, ಯಕ್ಷಗಾನ ಪ್ರಸಂಗ ಸಂಪುಟ 1, ಯಕ್ಷಾಮೃತ, ಯಕ್ಷಗಾನ ಪ್ರಸಂಗ ಸಂಪುಟ 2, ಯಕ್ಷಗಾನ ಪ್ರಸಂಗಗಳು ಹೀಗೆ ಒಟ್ಟು ಹದಿನಾಲ್ಕು ಕೃತಿಗಳು ಕೇಂದ್ರದ ಮೂಲಕ ಪ್ರಕಟಗೊಂಡಿದ್ದು,   ಪ್ರಸಂಗ ಸಂಪುಟ -3 ಹಾಗೂ ಯಕ್ಷಹಾಸ್ಯ ಎಂಬ ಎರಡು ಕೃತಿಗಳು ಬಿಡುಗಡೆಗೆ ಸಿದ್ಧಗೊಂಡಿದೆ. ದಶಮಾನೋತ್ಸವದ ಸಂದರ್ಭದಲ್ಲಿ ಈ ಎರಡು ಕೃತಿಗಳ ಬಿಡುಗಡೆಯು ನಡೆಯಲಿದೆ.

ಯಕ್ಷಮಂಗಳ ಪ್ರಶಸ್ತಿ:
       ಯಕ್ಷಗಾನ ಅಧ್ಯಯನ ಕೇಂದ್ರವು ಯಕ್ಷಗಾನದ ಅಧ್ಯಯನ, ವಿಚಾರಸಂಕಿರಣ, ಪ್ರದರ್ಶನ, ಪ್ರಕಟನೆ, ತರಬೇತಿ ಮೊದಲಾದ ಶೈಕ್ಷಣಿಕ ಯೋಜನೆಗಳೊಂದಿಗೆ ಯಕ್ಷಗಾನ ಕಲಾವಿದರಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಪ್ರತೀ ವರ್ಷ ಹಿರಿಯ ಕಲಾವಿದರಿಗೆ ಯಕ್ಷಮಂಗಳ ಪ್ರಶಸ್ತಿ ನೀಡಿ ಗೌರವಿಸುತ್ತಿದೆ. ಅಲ್ಲದೆ ಉತ್ತಮ ಮೌಲ್ಯಯುತ ಯಕ್ಷಗಾನಕ್ಕೆ ಸಂಬಂಧಿಸಿದ ಕೃತಿಗೆ ಯಕ್ಷಮಂಗಳ ಕೃತಿ ಪ್ರಶಸ್ತಿಯನ್ನು ನೀಡಿ ಗೌರವಿಸುತ್ತಿದೆ.

ಯಕ್ಷಮಂಗಳ ಪ್ರಶಸ್ತಿ 25,000 ನಗದು ಪ್ರಶಸ್ತಿ ಹಾಗೂ ಕೃತಿ ಪ್ರಶಸ್ತಿ 10,000 ನಗದು ಪುರಸ್ಕಾರ,ಸನ್ಮಾನವನ್ನು ಒಳಗೊಂಡಿದೆ. ಕೇಂದ್ರದಿಂದ ಇಲ್ಲಿಯವರೆಗೆ ಒಟ್ಟು 18 ಜನ ಹಿರಿಯ ಸಾಧಕ ಕಲಾವಿದರಿಗೆ ಯಕ್ಷಮಂಗಳ ಪ್ರಶಸ್ತಿ ಹಾಗೂ 5 ಕೃತಿಗೆ ಯಕ್ಷಮಂಗಳ ಕೃತಿ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಕೇಂದ್ರದ ಮಹತ್ವದ ಯೋಜನೆಗಳು:
      ಹಲವಾರು ಶೈಕ್ಷಣಿಕ ಯೋಜನೆಯೊಂದಿಗೆ ಮುನ್ನಡೆಯುತ್ತಿರುವ ಯಕ್ಷಗಾನ ಅಧ್ಯಯನ ಕೇಂದ್ರವು ಇದೀಗ ಯಕ್ಷಗಾನಕ್ಕೆ  ಸಂಬಂಧಿಸಿದಂತೆ ಸಮಗ್ರ ಮಾಹಿತಿ ಕೋಶವನ್ನು ಪ್ರಕಟಿಸಲು ಮುಂದಾಗಿದೆ. ಈಗಾಗಲೇ ಇದರ ಆರಂಭಿಕ ಬಾಗವಾಗಿ ಯಕ್ಷಗಾನ ಸಂಘ ಸಂಸ್ಥೆಗಳ ವಿವರಣೆಯನ್ನು, ಮಾಹಿತಿ ಸಂಗ್ರಹ ಯೋಜನೆಯನ್ನು ಕೈಗೆತ್ತಿಕೊಂಡಿದೆ. ಹಾಗೆಯೇ ‘ಯಕ್ಷ ಭಾರತ’ ಎಂಬ ಪರಿಕಲ್ಪನೆಯಲ್ಲಿ ಅರ್ಥಗಾರಿಕೆಗೆ ಅನುಕೂಲವಾಗುವಂತೆ ಮಹಾಭಾರತ ಯಕ್ಷಗಾನ ಪ್ರಸಂಗಗಳ ಕುರಿತ ವಿವರಣೆ, ವಿಶ್ಲೇಷಣೆ ಮಾಡುವ ಯೋಜನೆಯನ್ನು ಕೇಂದ್ರ ಕೈಗೆತ್ತಿಕೊಂಡು ಕಾರ್ಯೋನ್ಮುಖವಾಗಿದೆ.


ಯಕ್ಷಗಾನವನ್ನು ವಿಶ್ವವಿದ್ಯಾನಿಲಯ ಮಟ್ಟದಲ್ಲಿ ಅಥವಾ ಅಥವಾ ಅಕಾಡೆಮಿಕ್ ವಲಯದಲ್ಲಿ ಮತ್ತಷ್ಟು ಬೆಳೆಸಿ ಪೋಷಿಸುವ ಉದ್ದೇಶದಿಂದ ಮಂಗಳಗಂಗೋತ್ರಿಯಲ್ಲಿ ಯಕ್ಷಗಾನ ಸರ್ಟಿಫಿಕೆಟ್ ಕೋರ್ಸ್ ಆರಂಭಿಸುವ ಬಗ್ಗೆಯೂ   ಯೋಜನೆಯನ್ನು ಕೇಂದ್ರವು ರೂಪಿಸಿಕೊಂಡಿದೆ. ಹೀಗೆ ಹತ್ತು ಹಲವಾರು ಮಹತ್ವದ ಯೋಜನೆಗಳನ್ನು ಮಂಗಳೂರು ವಿಶ್ವವಿದ್ಯಾನಿಲಯದ ಯಕ್ಷಗಾನ ಅಧ್ಯಯನ ಕೇಂದ್ರವು ಹಮ್ಮಿಕೊಂಡಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments