‘ಶೈಲಿಬದ್ಧ ಭಾಗವತಿಕೆಯ ಮೂರು ಮಜಲುಗಳನ್ನು ಕಂಡ ಬಲಿಪ ಪರಂಪರೆ ಹಾಗೂ ಯಕ್ಷಾಂಬಿಕೆಯ ಸೇವೆಯಲ್ಲಿ ತಲೆಮಾರಿನ ಸಂಪ್ರದಾಯವನ್ನು ಶ್ರದ್ಧೆಯಿಂದ ಆಚರಿಸುತ್ತಿರುವ ಬೊಂಡಾಲ ಕುಟುಂಬ ಯಕ್ಷಗಾನದ ನೈಜ ಆರಾಧಕರು. ಇವೆರಡೂ ಯಕ್ಷಗಾನ ಕಲಾವಿದರು ಮತ್ತು ಕಲಾಪೋಷಕ ವಲಯದ ಸರ್ವ ಶ್ರೇಷ್ಠ ಮಾದರಿಗಳು’ ಎಂದು ಯಕ್ಷಗಾನ ವಿದ್ವಾಂಸ ಹಾಗೂ ಅರ್ಥದಾರಿ ಡಾ.ಎಂ.ಪ್ರಭಾಕರ ಜೋಶಿ ಹೇಳಿದ್ದಾರೆ.
ಬೊಂಡಾಲ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಶಂಭೂರು ಗ್ರಾಮದ ಬೊಂಡಾಲದಲ್ಲಿ ಜರಗಿದ ಕಟೀಲು ಶ್ರೀ ದುರ್ಗಾಪರಮೇಶ್ವರಿ ದಶಾವತಾರ ಯಕ್ಷಗಾನ ಮಂಡಳಿಯ ಎರಡು ದಿನಗಳ ಹರಕೆ ಬಯಲಾಟದ ವೇದಿಕೆಯಲ್ಲಿ ಫೆ.18 ರಂದು ಏರ್ಪಡಿಸಿದ್ದ ದಿ.ಬೊಂಡಾಲ ಜನಾರ್ಧನ ಶೆಟ್ಟಿ ಮತ್ತು ಬೊಂಡಾಲ ರಾಮಣ್ಣ ಶೆಟ್ಟಿ ಸಂಸ್ಮರಣೆ ಹಾಗೂ ಬೊಂಡಾಲ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು.
ಬಲಿಪ ಪ್ರಸಾದರಿಗೆ ಪ್ರಶಸ್ತಿ: ಇದೇ ಸಂದರ್ಭದಲ್ಲಿ ಭಾಗವತ ಬಲಿಪ ಪ್ರಸಾದ ಭಟ್ಟರಿಗೆ ಮಾಜಿ ಸಚಿವ ಬಿ.ರಮಾನಾಥ ರೈ ಅವರು 2021-22 ನೇ ಸಾಲಿನ ಬೊಂಡಾಲ ಪ್ರಶಸ್ತಿ ನೀಡಿ ಗೌರವಿಸಿದರು. ಕಟೀಲು ಕ್ಷೇತ್ರದ ಅರ್ಚಕ ವೇದಮೂರ್ತಿ ಅನಂತಪದ್ಮನಾಭ ಆಸ್ರಣ್ಣ ಆಶೀರ್ವಚನ ನೀಡಿದರು.
‘ಮೂವತ್ತು ವರ್ಷ ಕ್ಷೇತ್ರದ ಮೇಳದಲ್ಲಿ ಭಾಗವತರಾಗಿ ಮೆರೆದ ಪ್ರಸಾದ ಬಲಿಪರಿಗೆ ಭ್ರಮರಾಂಬಿಕೆ ಸಂಪೂರ್ಣ ಆರೋಗ್ಯ ನೀಡಲಿ’ ಎಂದವರು ಹಾರೈಸಿದರು. ಸಂಸ್ಮರಣಾ ಭಾಷಣ ಮಾಡಿದ ಪ್ರಶಸ್ತಿ ಆಯ್ಕೆ ಸಮಿತಿ ಸಂಚಾಲಕ ಮತ್ತು ಯಕ್ಷಗಾನ ಅರ್ಥದಾರಿ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ‘ದಿ. ಬೊಂಡಾಲ ಜನಾರ್ದನ ಶೆಟ್ಟಿ ಮತ್ತು ರಾಮಣ್ಣ ಶೆಟ್ಟರು ಬಂಟ್ವಾಳ ಪರಿಸರದ ಸಾಂಸ್ಕೃತಿಕ,ಧಾರ್ಮಿಕ ಹಾಗೂ ಸಾಮಾಜಿಕ ಸೇವೆಯಲ್ಲಿ ಮುಂಚೂಣಿಯಲ್ಲಿದ್ದು ಊರಿನ ಜನರಿಗೆ ಪ್ರೀತಿ ಪಾತ್ರರಾಗಿದ್ದರು. ಅವರ ಯಕ್ಷಗಾನ ಸೇವೆ ಸ್ಮರಣೀಯ’ ಎಂದು ನುಡಿದರು.
ಬೊಂಡಾಲ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಮತ್ತು ದುರ್ಗಾ ಫೆಸಿಲಿಟೀಸ್ ಸಂಸ್ಥೆಯ ಮುಖ್ಯಸ್ಥ ಬೊಂಡಾಲ ಸಚ್ಚಿದಾನಂದ ಶೆಟ್ಟಿ ಸ್ವಾಗತಿಸಿದರು. ಶಿಕ್ಷಕ ನಾರಾಯಣಗೌಡ ಸನ್ಮಾನ ಪತ್ರ ವಾಚಿಸಿದರು.
ಟ್ರಸ್ಟಿನ ಗೌರವಾಧ್ಯಕ್ಷ ಬೊಂಡಾಲ ಸೀತಾರಾಮ ಶೆಟ್ಟಿ ವಂದಿಸಿದರು. ಬಳಿಕ ಕಟೀಲು ಶ್ರೀ ದುರ್ಗಾಪರಮೇಶ್ವರಿ ಯಕ್ಷಗಾನ ದಶಾವತಾರ ಮಂಡಳಿಯ ಒಂದನೇ ಮೇಳದವರಿಂದ ‘ಶ್ರೀದೇವಿ ಮಹಾತ್ಮೆ’ ಸೇವಾ ಬಯಲಾಟ ಜರಗಿತು.