“ಕೊರೋನ ಮಹಾ ಮಾರಿಯಿಂದ ಸಾಕಷ್ಟು ಸಂಕಟಕ್ಕೆ ಒಳಗಾದವರು ಯಕ್ಷಗಾನ ಕಲಾವಿದರು. ತೆಂಕು, ಬಡಗು, ಬಡಾ ಬಡಗು ತಿಟ್ಟಿನ ಅನೇಕ ಕಲಾವಿದರು ಪ್ರದರ್ಶನಗಳಿಲ್ಲದೆ ನೊಂದಿದ್ದಾರೆ, ಅವರ ನೋವಿಗೆ ಸ್ಪಂದಿಸುವ ನಿಟ್ಟಿನಲ್ಲಿ, ಯಾವುದೇ ಆತಂಕವಿಲ್ಲದೆ ಮುಕ್ತ ವಾತಾವರಣದಲ್ಲಿ ಪ್ರದರ್ಶನ ನಡೆಯುವಂತೆ ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳೊಂದಿಗೆ ಈಗಾಗಲೆ ಮಾತುಕತೆ ನಡೆದಿದೆ. ಕಲೆ ಕಲಾವಿದರ ಬಲವಾಗಿ ಘನ ಸರಕಾರ ಸದಾ ನಿಮ್ಮೊಂದಿಗಿದೆ” ಎಂದು ಸಮಾಜ ಕಲ್ಯಾಣ ಇಲಾಖೆಯ ಸಚಿವರಾದ ಮಾನ್ಯ ಕೊಟ ಶ್ರೀನಿವಾಸ ಪೂಜಾರಿ ಹೇಳಿದರು.
ಕೋಟ ಪಟೇಲರ ಮನೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕೆನರಾ ಬ್ಯಾಂಕ್ ಮಣಿಪಾಲ, ಕರ್ಣಾಟಕ ಬ್ಯಾಂಕ್ ನ ಸಹಕಾರದೊಂದಿಗೆ ನಡೆದ ಸಾಲಿಗ್ರಾಮ ಗುರು ಪ್ರಸಾದಿತ ಯಕ್ಷಗಾನ ಮಂಡಲಿಯ ಯಕ್ಷಗಾನ ಪ್ರದರ್ಶನದಲ್ಲಿ ಸರ್ವ ಕಲಾವಿದರನ್ನು ಗೌರವಿಸಿ ಅವರು ಮಾತನಾಡಿದರು.
ಪಿ. ಕಿಶನ್ ಹೆಗ್ಡೆ ಸಾರಥ್ಯದ ಸಾಲಿಗ್ರಾಮ ಮೇಳದ ಹಿರಿಯ ಕಲಾವಿದರಾದ ಬಳ್ಕೂರು ಕೃಷ್ಣ ಯಾಜಿ, ಹಾಸ್ಯಗಾರರಾದ ರಮೇಶ್ ಭಂಡಾರಿ, ಭಾಗವತ ರಾಮಕೃಷ್ಣ ಹಿಲ್ಲೂರು, ನೀಲ್ಕೋಡು ಶಂಕರ ಹೆಗಡೆ, ಶಶಿಕಾಂತ ಶೆಟ್ಟಿ ಸಹಿತ ಸಾಲಿಗ್ರಾಮ ಮೇಳದ ಎಲ್ಲಾ ಕಲಾವಿದರೂ ಹಾಗೂ ಸಿಬ್ಬಂದಿ ವರ್ಗದವರನ್ನು ಸಾಲಿಗ್ರಾಮ ಮಕ್ಕಳ ಮೇಳದ ಪರವಾಗಿ ಗೌರವಿಸಲಾಯಿತು.
ಸಾಲಿಗ್ರಾಮ ಮಕ್ಕಳ ಮೇಳದ ನಿರ್ದೇಶಕ ಶ್ರೀಧರ ಹಂದೆ ಎಚ್., ಮಣಿಪಾಲ ಕೆನರಾ ಬ್ಯಾಂಕ್‌ನ ಮಹಾ ಪ್ರಬಂಧಕ ರಾಮ ನಾಯ್ಕ್ ಕೆ, ಬೆಂಗಳೂರಿನ ಸಾಫ್ಟ್ವೇರ್ ಇಂಜನಿಯರ್ ಹಾಗೂ ಕಲಾವಿದರೂ ಆದ ಎಂ. ಸುಧೀಂದ್ರ ಹೊಳ್ಳ, ಕಲಾ ಸಾಹಿತಿ ಜನಾರ್ದನ ಹಂದೆ ಮಂಗಳೂರು, ಯಕ್ಷದೇಗುಲದ ಸುದರ್ಶನ ಉರಾಳ, ಉಪಸ್ಥಿತರಿದ್ದರು.
ವೆಂಕಟೇಶ ವೈದ್ಯ ಸ್ವಾಗತಿಸಿ, ಲಂಬೋದರ ಹೆಗಡೆ ವಂದಿಸಿದರು. ಮಕ್ಕಳ ಮೇಳದ ಕಾರ್ಯದರ್ಶಿ ಉಪನ್ಯಾಸಕ ಸುಜಯೀಂದ್ರ ಹಂದೆ ನಿರ್ವಹಿಸಿದರು.
ಬಳಿಕ ಸುಜಯೀಂದ್ರ ಹಂದೆ ವಿರಚಿತ ರುರು ಪ್ರಮದ್ವರಾ ಹಾಗೂ ನಿತ್ಯಾನಂದ ಅವಧೂತ ವಿರಚಿತ ಕನಕಾಂಗಿ ಕಲ್ಯಾಣ ಪ್ರದರ್ಶನಗೊಂಡಿತು.