ಯಕ್ಷಗಾನದ ಪ್ರಸಿದ್ಧ ಕಲಾವಿದ ದೇವಿ ಭಟ್ರು ಎಂದೇ ಹೆಸರು ಪಡೆದಿದ್ದ ಮುಳಿಯಾಲ ಭೀಮ ಭಟ್ (85 ವರ್ಷ) ಇವರು 25-01-2022 ಮಂಗಳವಾರ ಬೆಳಗ್ಗೆ ಕಾಂತಾವರದಲ್ಲಿ ನಿಧನರಾದರು.
ಸಕ್ರಿಯ ಯಕ್ಷಗಾನ ರಂಗದಿಂದ ನಿವೃತ್ತರಾದ ಬಳಿಕ ಕಾಂತಾವರ ದೇವಸ್ಥಾನದಲ್ಲಿ ಸೇವೆಸಲ್ಲಿಸುತ್ತಿದ್ದ ಇವರು ಕಳೆದ ಕೆಲವು ತಿಂಗಳಿಂದ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು.
ಶ್ರೀದೇವಿ ಮಹಾತ್ಮೆ ಯಕ್ಷಗಾನ ಪ್ರಸಂಗದಲ್ಲಿ ದೇವಿಯ ಪಾತ್ರಕ್ಕೆ ಜೀವ ತುಂಬಿದ್ದ ಇವರನ್ನು ಯಕ್ಷಗಾನ ಅಭಿಮಾನಿಗಳು ದೇವಿ ಭಟ್ರು ಎಂದೇ ಕರೆಯುತ್ತಿದ್ದರು.
ದಿವಂಗತ ಕುರಿಯ ವಿಠಲ ಶಾಸ್ತ್ರಿಗಳ ಗರಡಿಯಲ್ಲಿ ಪಳಗಿದ್ದ ಭೀಮ ಭಟ್ಟರು 5ನೇ ತರಗತಿ ಓದಿದವರು. ಅನಂತರ ಯಕ್ಷಗಾನ ಕಲಿತು ಧರ್ಮಸ್ಥಳ, ಕೂಡ್ಲು, ಕುಂಡಾವು, ಕಟೀಲು ಹಾಗೂ ಸುಂಕದಕಟ್ಟೆ ಮೇಳಗಳಲ್ಲಿ ಸುಮಾರು ನಾಲ್ಕು ದಶಕಗಳ ಕಾಲ ಕಲಾಸೇವೆಗೈದಿದ್ದಾರೆ.
ಸ್ತ್ರೀವೇಷಗಳಲ್ಲದೆ ಪುರುಷ ಪಾತ್ರಗಳಿಗೂ ಜೀವ ತುಂಬಿದವರು.
ಮಳೆಗಾಲದಲ್ಲಿ ಯಕ್ಷಗಾನದ ತಂಡ ಕಟ್ಟಿಕೊಂಡು ರಾಜ್ಯ ಹಾಗೂ ದೇಶದ ವಿವಿಧೆಡೆ ಯಕ್ಷಗಾನ ಪ್ರದರ್ಶನಗಳನ್ನು ಮಾಡಿಸಿದ್ದರು. ಮೃತರು ಪತ್ನಿ ಹಾಗೂ ಮಗಳನ್ನು ಅಗಲಿದ್ದಾರೆ. ಇವರ ನಿಧನಕ್ಕೆ ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ್ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್ ತೀವ್ರ ಸಂತಾಪ ಸೂಚಿಸಿದ್ದಾರೆ.