ತೆಂಕುತಿಟ್ಟಿನ ಅನುಭವಿ ಕಲಾವಿದ ಶ್ರೀ ವಾಮನ್ ಕುಮಾರ್ ವೇಣೂರು ಅವರು ಇಂದು ಮೂಡಬಿದ್ರೆ ಸಮೀಪ ನಡೆದ ರಸ್ತೆ ಅಪಘಾತವೊಂದರಲ್ಲಿ ನಿಧನ ಹೊಂದಿದ್ದಾರೆ. ಅವರು ಸಂಚರಿಸುತ್ತಿದ್ದ ಬೈಕ್ ಎದುರು ಭಾಗದಿಂದ ಬರುತ್ತಿದ ಮಾರುತಿ ಓಮ್ನಿ ಕಾರಿಗೆ ಢಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ. ಢಿಕ್ಕಿಯ ರಭಸಕ್ಕೆ ವಾಮನ್ ಕುಮಾರ್ ಅವರ ದೇಹ ರಸ್ತೆ ಪಕ್ಕದ ಚರಂಡಿಗೆ ಎಸೆಯಲ್ಪಟ್ಟಿದೆ. ಓಮ್ನಿಯ ಮುಂಭಾಗ ನುಜ್ಜುಗುಜ್ಜಾಗಿದೆ.
ಶ್ರೀ ವಾಮನ ಕುಮಾರರು ಬೆಳ್ತಂಗಡಿ ತಾಲೂಕು ವೇಣೂರು ಗ್ರಾಮದ ಗೋಳಿತ್ಯಾರು ಎಂಬಲ್ಲಿ ಶ್ರೀ ಅಣ್ಣು ದೇವಾಡಿಗ ಮತ್ತು ಶ್ರೀಮತಿ ಮೋನಮ್ಮ ದಂಪತಿಗಳ ಪುತ್ರನಾಗಿ 1974 ಎಪ್ರಿಲ್ 18ರಂದು ಜನಿಸಿದರು. ಅವರ ಮನೆಯವರು (ಹಿರಿಯರಿಂದಲೂ) ವೇಣೂರು ಅಜಿಲ ಸೀಮೆಯ ಶ್ರೀ ಮಹಾಲಿಂಗೇಶ್ವರ ದೇವಳದಲ್ಲಿ ಪದಾರ್ಥಿಗಳಾಗಿ ಸೇವೆ ಸಲ್ಲಿಸುತ್ತಾ ಬಂದವರು.
ವಾಮನಕುಮಾರರು ಓದಿದ್ದು ವೇಣೂರು ವಿದ್ಯೋದಯ ಶಾಲೆಯಲ್ಲಿ. ಎಂಟನೇ ತರಗತಿ ವರೆಗೆ. ಇವರೂ ಮದ್ದಳೆಗಾರರಾದ ಕೊಂಕಣಾಜೆ ಚಂದ್ರಶೇಖರ ಭಟ್ಟರೂ ಶಾಲೆಯಲ್ಲಿ ಸಹಪಾಠಿಗಳಾಗಿದ್ದರು. ಬಾಲ್ಯದಲ್ಲೇ ಯಕ್ಷಗಾನಾಸಕ್ತರಾಗಿದ್ದರು.
1989ರಲ್ಲಿ ಲಲಿತ ಕಲಾ ಕೇಂದ್ರದ ವಿದ್ಯಾರ್ಥಿಯಾಗಿ ಕರ್ಗಲ್ಲು ಶ್ರೀ ವಿಶ್ವೇಶ್ವರ ಭಟ್ಟರಿಂದ ಯಕ್ಷಗಾನ ಹೆಜ್ಜೆಗಾರಿಕೆ ಕಲಿತರು.ಕಲಿಕಾ ಕೇಂದ್ರದಲ್ಲಿ ಶಂಭಯ್ಯ ಭಟ್, ಮಹೇಶ ಮಣಿಯಾಣಿ. ಪಂಜ ಕಿರಣ್ ಕುಮಾರ್, ಸುಜಯ ಹೆಗ್ಡೆ ಕುತ್ಲೂರು ಇವರ ಸಹಪಾಠಿಗಳಾಗಿದ್ದರು. ಕಲಿಕಾ ಕೇಂದ್ರದ ಮೊದಲ ಪ್ರದರ್ಶನ ಪಂಚವಟಿ ಪ್ರಸಂಗದಲ್ಲಿ ಸೀತೆಯಾಗಿ ರಂಗಪ್ರವೇಶ. ಬಳಿಕ ರತಿಕಲ್ಯಾಣ ಪ್ರಸಂಗದ ಮನ್ಮಥ. ಬಾಲಲೀಲೆ ಪ್ರಸಂಗದ ಶ್ರೀಕೃಷ್ಣನಾಗಿ ಅಭಿನಯಿಸುವ ಅವಕಾಶವು ಸಿಕ್ಕಿತ್ತು.
ಶ್ರೀ ವಾಮನ ಕುಮಾರರ ಮೊದಲ ತಿರುಗಾಟ ಶ್ರೀ ಧರ್ಮಸ್ಥಳ ಮೇಳದಲ್ಲಿ. ಕಲಿಕಾ ಕೇಂದ್ರದ ಸಹಪಾಠಿ ಪಂಜ ಕಿರಣ್ ಕುಮಾರರ ಜತೆ ಬಾಲಗೋಪಾಲರಾಗಿ ವ್ಯವಸಾಯ ಆರಂಭ. ಎರಡು ವರ್ಷಗಳ ಕಾಲ ಧರ್ಮಸ್ಥಳ ಮೇಳದಲ್ಲಿ. ಹಿರಿಯ ಹೆಸರಾಂತ ಕಲಾವಿದರ ಒಡನಾಟ ಕಲಿಕೆಗೆ ಅವಕಾಶವಾಗಿತ್ತು.
ಹಿರಿಯ ಕಲಾವಿದ ಡಿ. ಮನೋಹರ ಕುಮಾರರ ಸಂಚಾಲಕತ್ವದ ಕದ್ರಿ ಮೇಳದಲ್ಲಿ 4 ವರ್ಷಗಳ ವ್ಯವಸಾಯ ಮಾಡಿದ್ದರು. ಪುರಾಣ ಪ್ರಸಂಗಗಳಲ್ಲಿ ಸಿದ್ದಕಟ್ಟೆ ಶ್ರೀ ವಿಶ್ವನಾಥ ಶೆಟ್ಟರ ನಿರ್ದೇಶನ, ಸಹಕಾರಗಳು ವಾಮನ ಕುಮಾರರಿಗೆ ದೊರಕಿತ್ತು. ಅವರ ಜತೆ, ಜತೆಪಾತ್ರಗಳಲ್ಲಿ ರಂಜಿಸಿದರು. (ವಿಷ್ಣು-ಸುದರ್ಶನ, ಶ್ರೀರಾಮ-ತರಣಿಸೇನ ಮೊದಲಾದವುಗಳು). ಕದ್ರಿ ಮೇಳದಲ್ಲಿ ನಾಲ್ಕು ವರ್ಷಗಳ ತಿರುಗಾಟ. ಬಳಿಕ ಶ್ರೀ ಕಿಶನ್ ಹೆಗ್ಡೆ ಅವರ ಸಂಚಾಲಕತ್ವದ ಮಂಗಳಾದೇವಿ ಮೇಳದಲ್ಲಿ. ಆರಂಭದಿಂದ ಕೊನೆ ತನಕ ಹದಿನೈದು ವರ್ಷ ಸದ್ರಿ ಮೇಳದಲ್ಲಿ ವ್ಯವಸಾಯ. ಖ್ಯಾತ ಕಲಾವಿದರ ಒಡನಾಟ ದೊರಕಿತ್ತು. ಖ್ಯಾತ ಪುಂಡುವೇಷಧಾರಿಯಾಗಿದ್ದ ಶ್ರೀ ಉದಯ ನಾವಡರೊಂದಿಗೆ ಜತೆ ವೇಷಗಳಲ್ಲಿ ರಂಜಿಸಿದ್ದರು.
ಪುರಾಣ ಪ್ರಸಂಗದ ಹೆಚ್ಚಿನ ಎಲ್ಲಾ ಪುಂಡುವೇಷ ಮತ್ತು ಸ್ತ್ರೀ ಪಾತ್ರಗಳಲ್ಲಿ ವಾಮನ ಕುಮಾರರು ಅಭಿನಯಿಸಿದ್ದಾರೆ. ಚಂಡಮುಂಡರು, ಬಬ್ರುವಾಹನ, ವಿಷ್ಣು, ಶ್ರೀಕೃಷ್ಣ, ಭಾರ್ಗವ, ಶ್ರೀರಾಮ, ಲಕ್ಷ್ಮಣ, ಶ್ವೇತಕುಮಾರ, ತ್ರಿಲೋಕಸುಂದರಿ, ಪದ್ಮಾವತಿ, ಲಕ್ಷ್ಮಿ ಅಲ್ಲದೆ ಅನೇಕ ಶೃಂಗಾರಕ್ಕೆ ಸಂಬಂಧಿಸಿದ ಸ್ತ್ರೀ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಶ್ವೇತಕುಮಾರ ಚರಿತ್ರೆ ಪ್ರಸಂಗದಲ್ಲಿ ಶ್ವೇತಕುಮಾರ, ತ್ರಿಲೋಕಸುಂದರಿ, ಸಿತಕೇತ, ರಂಭೆ ಈ ನಾಲ್ಕೂ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಶ್ರೀನಿವಾಸ ಕಲ್ಯಾಣ ಪ್ರಸಂಗದಲ್ಲಿ ಕಿರಾತನ ಪಾತ್ರವನ್ನೂ, ಪದ್ಮಾವತಿಯ ಪಾತ್ರವನ್ನೂ ಮಾಡಿದ್ದಾರೆ.
ಕಸೆ ಸ್ತ್ರೀ ವೇಷಗಳಲ್ಲೂ ವಾಮನ ಕುಮಾರರು ಕಾಣಿಸಿಕೊಂಡರು. ಮೀನಾಕ್ಷಿ, ಶಶಿಪ್ರಭೆ, ಭ್ರಮರಕುಂತಳೆ, ಪ್ರಮೀಳೆ, ಸ್ವಯಂಪ್ರಭೆ ಮೊದಲಾದ ಪಾತ್ರಗಳನ್ನೂ ನಿರ್ವಹಿಸಿದ್ದರು. ಶ್ರೀ ವಾಮನ ಕುಮಾರರು ಕಳೆದ ಎಂಟು ವರ್ಷಗಳಿಂದ ಹಿರಿಯಡಕ ಮೇಳದಲ್ಲಿ ವ್ಯವಸಾಯ ಮಾಡುತ್ತಿದ್ದರು. ಈಗ ಸದ್ರಿ ಮೇಳದ ಮ್ಯಾನೇಜರ್ ಆಗಿಯೂ ಕಾರ್ಯ ನಿರ್ವಹಿಸುತ್ತಿದ್ದರು.
ವಾಮನ ಕುಮಾರರಂತಹಾ ಉತ್ತಮ ಕಲಾವಿದನೊಬ್ಬನನ್ನು ಅಕಾಲಿಕವಾಗಿ ಕಳಕೊಂಡ ಯಕ್ಷಗಾನ ರಂಗಕ್ಕೆ ಅವರ ಅಗಲಿಕೆ ತುಂಬಲಾರದ ನಷ್ಟ. ಈ ದುಃಖವನ್ನು ಸಹಿಸುವ ಶಕ್ತಿಯನ್ನು ಅವರ ಕುಟುಂಬಕ್ಕೂ ಎಲ್ಲಾ ಯಕ್ಷಗಾನ ಪ್ರೇಮಿಗಳಿಗೂ ಆ ಭಗವಂತನು ನೀಡಲಿ ಎಂಬ ಪ್ರಾರ್ಥನೆ. ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ.
- 6th Standard, Social Studies, Civics, Chapter 21 – National Symbols and National Day Celebration
- 8th Standard, Social, Business Studies, Chapter 29 – EMERGENCE OF DIFFERENT BUSINESS ORGANISATIONS
- 6th Standard, Social, History, Chapter 16 – Indian Ideology and Bhakti cult
- 8th Standard, Mathematics, Chapter 12 – Factorisation
- 9th Standard, Social, History, CHAPTER 20 – REVOLUTION AND RISE OF NATION STATES
