Saturday, January 18, 2025
Homeಇಂದಿನ ಕಾರ್ಯಕ್ರಮದಶಂಬರ 18-19 : ಯಕ್ಷಾಂಗಣದಿಂದ ಯಕ್ಷಗಾನ ತಾಳಮದ್ದಳೆ ಪರ್ವ - ಶಿವಾನಂದ ಸ್ಮೃತಿ, ಪುರುಷೋತ್ತಮ ಸರಣಿ...

ದಶಂಬರ 18-19 : ಯಕ್ಷಾಂಗಣದಿಂದ ಯಕ್ಷಗಾನ ತಾಳಮದ್ದಳೆ ಪರ್ವ – ಶಿವಾನಂದ ಸ್ಮೃತಿ, ಪುರುಷೋತ್ತಮ ಸರಣಿ ಮತ್ತು ಪದ್ಯಾಣ ಪ್ರಣತಿ.

ಯಕ್ಷಾಂಗಣ ಮಂಗಳೂರು, ಯಕ್ಷಗಾನ ಚಿಂತನ-ಮಂಥನ ಮತ್ತು ಪ್ರದರ್ಶನ ವೇದಿಕೆಯು, ಮಂಗಳೂರು ವಿಶ್ವವಿದ್ಯಾನಿಲಯ ಡಾ| ದಯಾನಂದ ಪೈ, ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರ ಮತ್ತು ಕರ್ನಾಟಕ ಯಕ್ಷಭಾರತಿ (ರಿ) ಪುತ್ತೂರು ಸಹಯೋಗದಲ್ಲಿ ನಡೆಸುವ ಒಂಭತ್ತನೇ ವರ್ಷದ ಕನ್ನಡ ನುಡಿ ಹಬ್ಬ ‘ಯಕ್ಷಗಾನ ತಾಳಮದ್ದಳೆ ಪರ್ವ – 2021’ ದಶಂಬರ 18 ಮತ್ತು 19 ಶನಿವಾರ, ಭಾನುವಾರ ನಗರದ ಹಂಪನಕಟ್ಟೆ ವಿಶ್ವವಿದ್ಯಾನಿಲಯ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ಎರಡು ದಿನ ಜರಗಲಿದೆ.


ಶಿವಾನಂದ ಸ್ಮೃತಿ :
ಯಕ್ಷಾಂಗಣದ ಉಪಾಧ್ಯಕ್ಷರಾಗಿದ್ದು, ಆಕಸ್ಮಿಕವಾಗಿ ಅಗಲಿ ಹೋದ ಹಿರಿಯ ಕವಿ, ಕನ್ನಡ – ತುಳು ಲೇಖಕ ಅತ್ತಾವರ ಶಿವಾನಂದ ಕರ್ಕೇರ ಅವರ ಸ್ಮರಣಾರ್ಥ ಮೊದಲ ದಿನ ನಡೆಯುವ ‘ಶಿವಾನಂದ ಸ್ಮೃತಿ’ ಕಾರ್ಯಕ್ರಮದಲ್ಲಿ ಅವರ ‘ಕಾರ್ನಿಕೊದ ದೈವ ವೈದ್ಯನಾಥೆ’ ಎಂಬ ನಾಟಕದ ಆಧಾರದಲ್ಲಿ ಡಾ. ದಿನಕರ ಎಸ್. ಪಚ್ಚನಾಡಿ ಬರೆದ ‘ಕಾರ್ನಿಕೊದ ವೈದ್ಯನಾಥೆ’ ತುಳು ತಾಳಮದ್ದಳೆ ಜರಗಲಿದೆ. ಸಮಾರಂಭವನ್ನು ಬ್ಯಾಂಕ್ ಆಫ್ ಬರೋಡಾದ ವಲಯ ಮುಖ್ಯಸ್ಥೆ ಗಾಯತ್ರಿ ಆರ್. ಉದ್ಘಾಟಿಸುವರು, ಸಿಎ.ಎಸ್.ಎಸ್. ನಾಯಕ್ ಅಧ್ಯಕ್ಷತೆ ವಹಿಸುವರು.


ಯಕ್ಷಗಾನ ಕಲಾಪೋಷಕÀ ಮತ್ತು ಉದ್ಯಮಿ ಮೂಡಬಿದಿರೆಯ ಶ್ರೀಪತಿ ಭಟ್ ಅವರಿಗೆ 2021-22 ನೇ ಸಾಲಿನ ‘ಯಕ್ಷಾಂಗಣ ರಾಜ್ಯೋತ್ಸವ ಪುರಸ್ಕಾರ’ ಮತ್ತು ನಿವೃತ್ತ ಬ್ಯಾಂಕ್ ಅಧಿಕಾರಿ ಹಾಗೂ ಸಾಂಸ್ಕೃತಿಕ ಸಂಘಟಕ ಎಂ. ಸುಂದರ ಶೆಟ್ಟ ಬೆಟ್ಟಂಪಾಡಿ ಅವರಿಗೆ ‘ಶಿವಾನಂದ ಸ್ಮೃತಿ ಗೌರವ’ ನೀಡಲಾಗುವುದು. ಕೆನರಾ ಬ್ಯಾಂಕ್ ವಲಯ ಮುಖ್ಯಸ್ಥ ಯೋಗೀಶ್ ಆಚಾರ್ಯ ಮತ್ತು ಹಿರಿಯ ನಾಟಕಕಾರ ಡಾ. ಸಂಜೀವ ದಂಡಕೇರಿ ಪ್ರಶಸ್ತಿ ಪ್ರದಾನ ಮಾಡುವರು. ಇದೇ ಸಂದರ್ಭ ಕೀರ್ತಿಶೇಷ ಅರ್ಥಧಾರಿಗಳಾದ ದಿ| ಎ.ಕೆ. ನಾರಾಯಣ ಶೆಟ್ಟಿ ಮತ್ತು ಎ.ಕೆ. ಮಹಾಬಲ ಶೆಟ್ಟಿ ಅವರ ಸಂಸ್ಮರಣೆಯನ್ನೂ ಏರ್ಪಡಿಸಲಾಗಿದೆ.


ಪುರುಷೋತ್ತಮ ಸರಣಿ – ಪದ್ಯಾಣ ಪ್ರಣತಿ :
ಇತ್ತೀಚೆಗೆ ಅಗಲಿ ಹೋದ ಪ್ರಸಿದ್ಧ ಭಾಗವತ ಮತ್ತು ಪ್ರಸಂಗಕರ್ತ ಯಕ್ಷಗಾನ ವಾಲ್ಮೀಕಿ ದಿ| ಬೊಟ್ಟಿಕೆರೆ ಪುರುಷೋತ್ತಮ ಪೂಂಜ ಅವರ ಪ್ರಸಂಗ ಸರಣಿಯನ್ನು ಕಾರ್ಯಕ್ರಮದಲ್ಲಿ ಆಳವಡಿಸಿಕೊಳ್ಳಲಾಗಿದ್ದು, ಪೂಂಜರ ಜನಪ್ರಿಯ ಪ್ರಸಂಗಗಳಾದ ‘ಗುರುದಕ್ಷಿಣೆ, ಗಂಗಾ ಸಾರಥ್ಯ ಮತ್ತು ಮಾ ನಿಷಾದ’ ದ ಆಯ್ದ ಭಾಗಗಳನ್ನು ತಾಳಮದ್ದಳೆ ರೂಪದಲ್ಲಿ ಪ್ರಸ್ತುತ ಪಡಿಸಲಾಗುವುದು. ಅಲ್ಲದೆ ಈ ವರ್ಷ ನಿಧನರಾದ ಯಕ್ಷಗಾನ ಭಾಗವತ ಗಾನಗಂಧರ್ವ ಪದ್ಯಾಣ ಗಣಪತಿ ಭಟ್ಟರ ಸ್ಮರಣಾರ್ಥ ‘ಪದ್ಯಾಣ ಪ್ರಣತಿ’ ಎಂಬ ವಿಶಿಷ್ಟ ಕಾರ್ಯಕ್ರಮವೂ ಜರಗುವುದು.

ಯಕ್ಷಾಂಗಣ ಗೌರವ ಪ್ರಶಸ್ತಿ :
ಯಕ್ಷಾಂಗಣ ವತಿಯಿಂದ ಪ್ರತಿವರ್ಷ ನೀಡಲಾಗುವ ‘ಯಕ್ಷಾಂಗಣ ಗೌರವ ಪ್ರಶಸ್ತಿ’ಗೆ ಯಕ್ಷ ಶಾಂತಲಾ ಬಿರುದಾಂಕಿತ ಹಿರಿಯ ಸ್ತ್ರೀ ವೇಷಧಾರಿ 88 ರ ಹರೆಯದ ಪಾತಾಳ ವೆಂಕಟ ರಮಣ ಭಟ್ಟರು ಆಯ್ಕೆಯಾಗಿದ್ದು ದಿನಾಂಕ 19 ರಂದು ಜರಗುವ ಸಮಾರೋಪ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಡಾ| ಪಿ. ಯಸ್. ಯಡಪಡಿತ್ತಾಯ ಅದನ್ನು ಪ್ರದಾನಿಸುವರು.

ಕರ್ನಾಟಕ ಬ್ಯಾಂಕ್ ಆಡಳಿತ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಮಹಾಬಲೇಶ್ವರ ಎಂ.ಎಸ್. ಸಂಸ್ಮರಣಾ ಜ್ಯೋತಿ ಬೆಳಗುವರು. ಯಕ್ಷಾಂಗಣದ ಗೌರವಾಧ್ಯಕ್ಷ ಡಾ. ಎ.ಜೆ. ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದು, ಮಾಜಿ ಸಚಿವ ಕೃಷ್ಣ ಜೆ. ಪಾಲೆಮಾರ್ ಪ್ರಧಾನ ಅಭ್ಯಾಗತರಾಗಿರುವರು.


ಕಾರ್ಯಕ್ರಮದಲ್ಲಿ ದಿ| ಪುರುಷೋತ್ತಮ ಪೂಂಜ ಮತ್ತು ಪದ್ಯಾಣ ಗಣಪತಿ ಭಟ್ಟರ ಸಾಕ್ಷ್ಯಚಿತ್ರ ಪ್ರದರ್ಶಿಸುವುದರೊಂದಿಗೆ ಡಾ. ದಯಾನಂದ ಪೈ, ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರದ ನಿರ್ದೇಶಕ ಡಾ. ಶ್ರೀಪತಿ ಕಲ್ಲೂರಾಯ ಪೂಂಜ-ಪದ್ಯಾಣ ಸಂಸ್ಮರಣೆಯನ್ನು ನೆರವೇರಿಸುವರು. ಇದೇ ಸಂದರ್ಭದಲ್ಲಿ ಹಿರಿಯ ಯಕ್ಷಗಾನ ಹಾಸ್ಯಪಟು ದಿ| ಬೆಟ್ಟಂಪಾಡಿ ಬಾಳಪ್ಪ ಶೆಟ್ಟಿ ಅವರ ಸಂಸ್ಮರಣಾ ಕಾರ್ಯಕ್ರಮವೂ ಜರಗುವುದು. ಸಮಾರಂಭದ ಎರಡೂ ದಿನಗಳಲ್ಲಿ ವಿವಿಧ ಕ್ಷೇತ್ರದ ಗಣ್ಯರು ಹಾಗೂ ಯಕ್ಷಗಾನ ಕ್ಷೇತ್ರದ ಪ್ರಸಿದ್ಧ ಕಲಾವಿದರು ಭಾಗವಹಿಸಲಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments