ಮಕ್ಕಳಲ್ಲಿ ಅಡಗಿರುವ ಸುಪ್ತ ಪ್ರತಿಭೆಯನ್ನು ಹೊರತೆಗೆಯ ಬೇಕು ಆ ನಿಟ್ಟಿನಲ್ಲಿ ಶ್ರೀ ಹುಲಿ ಸಿದ್ದೇಶ್ವರ ಯಕ್ಷನೈದಿಲೆ ಕಲಾ ಬಳಗದ ಸದಸ್ಯರು ಇಂತಹ ಕಾರ್ಯಾಗಾರವನ್ನು ಹಮ್ಮಿಕೊಂಡು ಮಕ್ಕಳಲ್ಲಿನ ಪ್ರತಿಭೆಯನ್ನು ಗುರುತಿಸಿ ಅವರಿಗೆ ಕಲಾ ಕೌಶಲ್ಯದ ಬಗ್ಗೆ ಆಸಕ್ತಿ ಹುಟ್ಟುವಂತೆ ಮಾಡುತ್ತಿದೆ ಎಂದು ಯಕ್ಷಗಾನ ಹಾಗೂ ರಂಗಭೂಮಿ ಕಲಾವಿದರಾದ ಡಾ.ರಾಧಾಕೃಷ್ಣ ಉರಾಳರು ಅಭಿಪ್ರಾಯ ಪಟ್ಟರು.
ಶ್ರೀ ಹುಲಿ ಸಿದ್ದೇಶ್ವರ ಯಕ್ಷನೈದಿಲೆ ಕಲಾ ಬಳಗ ಬೆಂಗಳೂರಿನ ವಿಶ್ವೇಶ್ವರಯ್ಯ ಬಡಾವಣೆಯ ಕಲಾಗುಡಿಯಲ್ಲಿ ಇತ್ತೀಚೆಗೆ ಹಮ್ಮಿಕೊಂಡ ಯಕ್ಷಗಾನ ಮುಖವರ್ಣಿಕೆಯ ಕಾರ್ಯಾಗಾರದಲ್ಲಿ ಅವರು ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ಈ ಒಂದುಕಾರ್ಯಾಗಾರದಲ್ಲಿ ವಿಶ್ವನಾಥ ಉರಾಳ, ಭರತ್‌ಗೌಡ ಹಾಗೂ ರಾಜೇಶ್ ಆಚಾರ್ಯ ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಂಡಿದ್ದರು.
ಮುಖವರ್ಣಿಕೆಯ ಕಾರ್ಯಾಗಾರದ ನಂತರ ಕಂಸವಧೆ ಯಕ್ಷಗಾನ ಪ್ರಸಂಗದ ಸಣ್ಣ ಸನ್ನಿವೇಶವನ್ನು ಈ ಒಂದು ಕಾರ್ಯಾಗಾರದಲ್ಲಿ ಪಾಲ್ಗೊಂಡ ಮಕ್ಕಳು ಅಭಿನಯಿಸಿ ಪ್ರಶಂಸೆಗೆ ಪಾತ್ರರಾದರು.
ಶ್ರೀ ಹುಲಿ ಸಿದ್ದೇಶ್ವರ ಯಕ್ಷನೈದಿಲೆ ಕಲಾ ಬಳಗದ ಅಧ್ಯಕ್ಷರಾದ ನಾಗರಾಜರವರು ಈ ಒಂದು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.