Saturday, January 18, 2025
Homeಯಕ್ಷಗಾನಮಾಡಾವು ಕೊರಗಪ್ಪ ರೈಗಳಿಗೆ ಯಕ್ಷಗಾನ ಕಲಾರಂಗ ಪ್ರಶಸ್ತಿ

ಮಾಡಾವು ಕೊರಗಪ್ಪ ರೈಗಳಿಗೆ ಯಕ್ಷಗಾನ ಕಲಾರಂಗ ಪ್ರಶಸ್ತಿ

ಮಾಡಾವು ಕೊರಗಪ್ಪ ರೈಗಳು ಈ ಬಾರಿಯ ಯಕ್ಷಗಾನ ಕಲಾರಂಗ ಕೊಡಮಾಡುವ ಬಿ. ಜಗಜ್ಜೀವನ್‌ದಾಸ್ ಶೆಟ್ಟಿ ಸ್ಮರಣಾರ್ಥ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಮಾಡಾವು ಶ್ರೀ ಕೊರಗಪ್ಪ ರೈಗಳು ತೆಂಕುತಿಟ್ಟಿನ ವಿವಿಧ ಮೇಳಗಳಲ್ಲಿ ವ್ಯವಸಾಯವನ್ನು ಮಾಡಿ ಅನುಭವವನ್ನು ಹೊಂದಿದವರು. 2021-22ನೇ ಸಾಲಿನದು ಪ್ರಾಯಶಃ ಇವರ 40ನೇ ತಿರುಗಾಟ. ಯಕ್ಷಗಾನದ ಪುಂಡುವೇಷಧಾರಿಯಾಗಿ ತನ್ನನ್ನು ತಾನು ಗುರುತಿಸಿಕೊಂಡಿದ್ದಾರೆ. ಪ್ರಸ್ತುತ ಕಟೀಲು ಶ್ರೀ ದುರ್ಗಾಪರಮೇಶ್ವರೀ ದಶಾವತಾರ ಯಕ್ಷಗಾನ ಮಂಡಳಿಯಲ್ಲಿ ವ್ಯವಸಾಯ ಮಾಡುತ್ತಿದ್ದಾರೆ.    

ಶ್ರೀ ಕೊರಗಪ್ಪ ರೈಯವರು ಪುತ್ತೂರು ತಾಲೂಕು ಕೈಯ್ಯೂರು ಗ್ರಾಮದ ಸನಂಗಳ ಎಂಬಲ್ಲಿ 1955ನೇ ಇಸವಿ ಡಿಸೆಂಬರ್ 26ರಂದು ಜನಿಸಿದರು.  ತಂದೆ ಮಹಾಬಲ ರೈ. ತಾಯಿ ಶ್ರೀಮತಿ ಕಮಲಾ. ಇವರದು ಕೃಷಿಕ ಕುಟುಂಬ.  ಕೈಯ್ಯೂರು ಹಿರಿಯ ಪ್ರಾಥಮಿಕ ಶಾಲೆಯಲ್ಲಿ 7ನೇ ತರಗತಿಯ ವರೆಗೆ ಓದಿದ್ದರು.

ಮೊದಲ ತಿರುಗಾಟ 1972ರಿಂದ. ಕಲ್ಲಾಡಿ ವಿಠಲ ಶೆಟ್ಟರ ಸಂಚಾಲಕತ್ವದ ಕರ್ನಾಟಕ ಮೇಳದಲ್ಲಿ. ಕರ್ನಾಟಕ ಮೇಳದಲ್ಲಿ ಐದು ವರ್ಷಗಳ ತಿರುಗಾಟ. ಆ ಬಳಿಕ ಮುಂಬೈಯಲ್ಲಿ ಕೆಲವು ವರ್ಷಗಳ ಕಾಲ ಉದ್ಯೋಗಿಯಾಗಿದ್ದರು. ಮಾಡಾವು ಕೊರಗಪ್ಪ ರೈಗಳು 1984ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದರು. ಹೇಮಾವತಿ ಜತೆ ವಿವಾಹ. ವಿವಾಹದ ಬಳಿಕ ಮುಂಬಯಿಗೆ ಗುಡ್ ಬೈ ಹೇಳಿ ಊರಿಗೆ ಮರಳಿದ್ದರು.

ಆ ಹೊತ್ತಿಗೆ ಶೇಖರ ಶೆಟ್ರು ಮುಂಬಯಿಯಿಂದ ಊರಿಗೆ ಮರಳಿದ್ದರು. ಅವರ ಸಂಚಾಲಕತ್ವದ ಬಪ್ಪನಾಡು ಮೇಳದಲ್ಲಿ 2 ವರ್ಷ ತಿರುಗಾಟ, ನಂತರ ಶೇಖರ ಶೆಟ್ರು  ಬೆಳ್ಮಣ್ ಮೇಳ ಆರಂಭಿಸಿದ್ದರು. 1987-88ರಲ್ಲಿ ಕದ್ರಿ ಮೇಳದಲ್ಲಿ ತಿರುಗಾಟ. ಕರ್ನೂರು ಕೊರಗಪ್ಪ ರೈಗಳ ಸಂಚಾಲಕತ್ವ, ಕದ್ರಿ ಮೇಳದಲ್ಲಿ ಎರಡು ತಿರುಗಾಟ. ಬಳಿಕ ಒಂದು ವರ್ಷ ಪುತ್ತೂರು ಶ್ರೀಧರ ಭಂಡಾರಿಗಳ ಕಾಂತಾವರ ಮೇಳದಲ್ಲಿ ತಿರುಗಾಟ. ಬಳಿಕ ಮೇಳದ ತಿರುಗಾಟ ನಿಲ್ಲಿಸಿ ಒಂದು ವರ್ಷ ಮನೆಯಲ್ಲಿಯೇ ಇದ್ದರು.

1993ರಲ್ಲಿ ಭಾಗವತರಾದ ಕುಬಣೂರು ಶ್ರೀಧರ ರಾಯರ ಬೇಡಿಕೆಯಂತೆ ಕೊರಗಪ್ಪ ರೈಗಳು ಕಟೀಲು ಮೇಳಕ್ಕೆ ಸೇರಿದ್ದರು.  ಕಟೀಲು ನಾಲ್ಕನೇ ಮೇಳ ಆರಂಭವಾದಾಗ ಆ ಮೇಳಕ್ಕೆ. ನಿರಂತರ 28 ವರ್ಷಗಳಿಂದ ಅದೇ ಮೇಳದಲ್ಲಿ ವ್ಯವಸಾಯ ಮಾಡುತ್ತಿದ್ದಾರೆ. ಇವರು ಹಂತ ಹಂತವಾಗಿ ಮೇಲೇರಿಯೇ ಕಲಾವಿದನಾಗಿ ಗಟ್ಟಿಗರಾದವರು. ಪೂರ್ವರಂಗದಲ್ಲಿ ಬಾಲಗೋಪಾಲನಿಂದ ತೊಡಗಿ ನಿಧಾನವಾಗಿ, ದೃಢವಾಗಿ ಬೆಳೆದೇ ಈ ಎತ್ತರವನ್ನು ಏರಿದವರು.

ಬಾಲಲೀಲೆಯ ಶ್ರೀಕೃಷ್ಣ, ಮಾರ್ಕಂಡೇಯ, ಸರ್ವದಮನ, ಧ್ರುವ,ಪ್ರಹ್ಲಾದ, ಲಕ್ಷ್ಮಣ, ಸಿತಕೇತ, ಸುದರ್ಶನ, ಬಬ್ರುವಾಹನ, ಪರಶುರಾಮ, ಅಭಿಮನ್ಯು ಹೀಗೆ ಪುಂಡುವೇಷಕ್ಕೆ ಸಂಬಂಧಿಸಿದ ಎಲ್ಲಾ ಪಾತ್ರಗಳನ್ನು ಮಾಡಿದ್ದಾರೆ. ಪ್ರಸ್ತುತ ಅನೇಕ ವರ್ಷಗಳ ಕಾಲ ದೇವಿ ಮಹಾತ್ಮೆಯ ಬ್ರಹ್ಮ, ಚಂಡ ಮುಂಡರಾಗಿ ಅಭಿನಯಿಸಿದ್ದರು. ಈಗ ಶ್ರೀಕೃಷ್ಣ, ವಿಷ್ಣು ಮೊದಲಾದ ಮಾತುಗಾರಿಕೆ ಪ್ರಧಾನವಾದ ವೇಷಗಳನ್ನು ಮಾಡುತ್ತಾರೆ. ಕೊರಗಪ್ಪ ರೈಗಳು ಹಾಸ್ಯರಸಕ್ಕೆ ಸಂಬಂಧಿಸಿ ಕೆಲವು ಪಾತ್ರಗಳನ್ನೂ ಚೆನ್ನಾಗಿ ಮಾಡುತ್ತಾರೆ. ಶಿವಪ್ರಭ ಪರಿಣಯದ ಚಂದ್ರದ್ಯುಮ್ನ, ಯಶೋಮತಿ ಏಕಾವಳೀ ಪ್ರಸಂಗದ ವೀರಕೀರ್ತಿ, ಚಂದ್ರಹಾಸ ಪ್ರಸಂಗದ ಮದನ ಮೊದಲಾದ ಪಾತ್ರಗಳಿಗೆ ತನ್ನದೇ ಶೈಲಿಯಲ್ಲಿ ಕಲ್ಪನೆಯಿಂದ ಜೀವ ತುಂಬಿದ್ದಾರೆ. 

ಮಾಡಾವು ಕೊರಗಪ್ಪ ರೈಗಳನ್ನು ಅನೇಕ ಸಂಸ್ಥೆಗಳು ಸನ್ಮಾನಿಸಿವೆ. ಪ್ರಶಸ್ತಿಗಳಿಗೂ ಭಾಜನರಾಗಿದ್ದಾರೆ. ಒಟ್ಟು ಮೇಳದ ತಿರುಗಾಟ 38. ಆದರೂ ಯಕ್ಷಗಾನ ಕ್ಷೇತ್ರದಲ್ಲಿ 48 ವರ್ಷಗಳ ಅನುಭವಿ ಇವರು. ಅಳಿಕೆ ಪ್ರಶಸ್ತಿ, ಕದ್ರಿ ವಿಷ್ಣು ಪ್ರಶಸ್ತಿಯನ್ನು ಪಡೆದುದಲ್ಲದೆ ಕಟೀಲು ಶ್ರೀ ಗೋಪಾಲಕೃಷ್ಣ ಅಸ್ರಣ್ಣರ ಸಂಸ್ಮರಣೆಯ ರಜತ ಮಹೋತ್ಸವದ ಸಂದರ್ಭದಲ್ಲಿ ಸನ್ಮಾನಿತರಾಗಿದ್ದಾರೆ.

ಕಳೆದ ವರ್ಷ ಮುಂಬಯಿಯಲ್ಲಿ ಸ್ವರ್ಗೀಯ ಶ್ರೀ ಶೇಖರ್ ಶೆಟ್ಟಿ  ಬೆಳ್ಮಣ್ ಸಂಸ್ಮರಣಾ ಸಮಿತಿಯವರೂ ಸನ್ಮಾನಿಸಿರುತ್ತಾರೆ. ಮಾಡಾವು ಕೊರಗಪ್ಪ ರೈಗಳಿಗೆ ಯಕ್ಷಗಾನ ಕಲಾರಂಗದ ಈ ಬಿ. ಜಗಜ್ಜೀವನ್‌ದಾಸ್ ಶೆಟ್ಟಿ ಸ್ಮರಣಾರ್ಥ ಪ್ರಶಸ್ತಿ ಅರ್ಹವಾಗಿಯೇ ಸಂದಿದೆ. 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments