ಕರಾವಳಿ ಭಾಗದಲ್ಲಿ ಕನ್ನಡ ಭಾಷೆ, ಸಂಸ್ಕೃತಿ ಉಳಿಯಲು ಮುಖ್ಯ ಕಾರಣ ಯಕ್ಷಗಾನ . ಯಾವುದೇ ಲಾಭದ ಅಪೇಕ್ಷೆಯಿಲ್ಲದೆ ಕಲೆಯನ್ನು ಉಳಿಸಿ, ಬೆಳೆಸುವಲ್ಲಿ ಸಮಾಜ ಮತ್ತು ಸಂಘಟನೆಗಳು ಆಸಕ್ತಿ ಬೆಳೆಸಬೇಕು. ಸಾಮಾಜಿಕ ಕಳಕಳಿ ಹೊಂದಿ ಯಕ್ಷಗಾನ ಪ್ರದರ್ಶನದ ಜತೆಗೆ ಹಿರಿಯ ಕಲಾವಿದರ ಸನ್ಮಾನ, ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, ಶೈಕ್ಷಣಿಕ ಪ್ರೋತ್ಸಾಹ ನೀಡಿ ಯಕ್ಷಭಾರತಿ ಸಮಾಜದಲ್ಲಿ ಗುರುತಿಸಿಕೊಂಡಿದೆ . ಸಂಘಟನೆ ಉಜ್ವಲವಾಗಿ ಬೆಳೆದು ಯಕ್ಷಗಾನ ಕಲಾಸೇವೆಯಲ್ಲಿ ಯಕ್ಷಭಾರತಿ ಬಹುಕಾಲ ಮೆರೆದು ಸಾರ್ಥಕ್ಯಪಡೆಯಲಿ ಎಂದು ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತಿ ಶ್ರೀಗಳವರು ನುಡಿದರು.
ಅವರು ನ. 2 ರಂದು ಉಜಿರೆ ಶ್ರೀ ರಾಮಕೃಷ್ಣ ಸಭಾಮಂಟಪದಲ್ಲಿ ಶ್ರೀ ಜನಾರ್ದನ ದೇವಸ್ಥಾನದ ಆಶ್ರಯದಲ್ಲಿ ಬೆಳ್ತಂಗಡಿ ರೋಟರಿ ಕ್ಲಬ್ ಸಹಯೋಗದಲ್ಲಿ ಕನ್ಯಾಡಿಯ ಯಕ್ಷಭಾರತಿ (ರಿ) ಯ ಏಳನೇ ವಾರ್ಷಿಕ ಸಂಭ್ರಮದ ಸಮಾರೋಪ ಸಮಾರಂಭದಲ್ಲಿ ಆಶೀರ್ವಚನ ನೀಡಿ ಮಾತನಾಡುತ್ತಿದ್ದರು. ಉಜಿರೆ ಶ್ರೀ ಜನಾರ್ದನ ದೇವಸ್ಥಾನ ಪರಿಸರದಲ್ಲಿ ಮೊಕ್ತೇಸರ ವಿಜಯರಾಘವ ಪಡುವೆಟ್ನಾಯರ ಆಶ್ರಯ , ಸಹಕಾರ ,ಪ್ರೋತ್ಸಾಹದಿಂದ ಯಕ್ಷಗಾನ ಕಲಾ ಸೇವೆ ನಿರಂತರವಾಗಿ ನಡೆಯುತ್ತಿರುವುದು ಸ್ತುತ್ಯಾರ್ಹ. ಹಿರಿಯ ಶ್ರೀಗಳೊಂದಿಗೆ ಈ ಮೊದಲು ಆಗಮಿಸಿ , ಇಲ್ಲಿಯ ಅಭಿವೃದ್ಧಿ ಕಾರ್ಯ ಹಾಗು ಕಲಾಸೇವೆಯನ್ನು ಕಂಡು ಆನಂದಿಸಿದ್ದೇನೆ .. ಎಂದು ತಮ್ಮ ನೆನಪನ್ನು ಹಂಚಿಕೊಂಡರು .
ಮುಖ್ಯ ಅತಿಥಿ ರೋಟರಿ ಜಿಲ್ಲಾ ನಿಯೋಜಿತ ಗವರ್ನರ್ ಪ್ರಕಾಶ ಕಾರಂತ ಆಧುನಿಕ ಒತ್ತಡ ,ಪಾಶ್ಚಾತ್ಯೀಕರಣದ ಒತ್ತಡ ,ಮೌಲ್ಯಗಳು ಮಾಯವಾಗುತ್ತಿರುವ ಸಂದರ್ಭದಲ್ಲಿ ಸಂಗೀತ ,ನಾಟ್ಯ , ಮುಖವರ್ಣಿಕೆ , ಸಾಂಸ್ಕೃತಿಕ ಪ್ರಜ್ಞೆಯನ್ನು ಜನಮಾನಸಕ್ಕೆ ತಿಳಿಸಿ ಕಲಾಭಿಮಾನಿಗಳ ಮನಸ್ಸು ಅರಳಿಸುವ ಕೆಲಸ ಯಕ್ಷಗಾನದಿಂದ ನಡೆಯುತ್ತಿದೆ. ಭಾಷಾ ಸ್ಪಷ್ಟತೆ ,ಪಾರಂಪರಿಕ ಕಲೆಯಾದ ಯಕ್ಷಗಾನ ಎಳೆಯರ ಪ್ರತಿಭಾವಿಕಸನದಿಂದ ಕಲೆ ,ಸಮಾನತೆ ,ಏಕತೆ ಹಾಗು ಸೃಜನಶೀಲತೆಯನ್ನು ಕಲಿಸಿಕೊಡುತ್ತದೆ. . ಮಾನವೀಯ ಸಂಬಂಧ ಬೆಳೆಸುವ ಕಾರ್ಯ ಇತರರಿಗೆ ಪ್ರೇರಣೆಯಾಗಲಿ ಎಂದು ಶುಭಾಶಂಸನೆಗೈದರು.
ಅಧ್ಯಕ್ಷತೆ ವಹಿಸಿದ್ದ ಬೆಳ್ತಂಗಡಿ ರೋಟರಿ ಕ್ಲಬ್ ಅಧ್ಯಕ್ಷ ಹಾಗು ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಶರತ್ ಕೃಷ್ಣ ಪಡುವೆಟ್ನಾಯ ಉಜಿರೆ ಕ್ಷೇತ್ರ ಹಾಗು ಎಡನೀರು ಮಠ ಯಕ್ಷಗಾನ ಕಲೆಗೆ ನೀಡುತ್ತಿರುವ ಕೊಡುಗೆ ಅನನ್ಯವಾದುದು . ಶ್ರೀಗಳು ಪೀಠಾರೋಹಣ ಬಳಿಕ ಮೊದಲ ಬಾರಿಗೆ ಉಜಿರೆ ಕ್ಷೇತ್ರಕ್ಕೆ ಆಗಮಿಸಿ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವುದು ಸುಯೋಗ . ಯಕ್ಷಭಾರತಿ ಕಲೆಗೆ ಪ್ರೋತ್ಸಾಹ ನೀಡಿ ಕಲಾವಿದರನ್ನು ಗೌರವಿಸುತ್ತಿರುವುದು ಅಭಿನಂದನೀಯ ವೆಂದರು .
ಸನ್ಮಾನ,ವಿದ್ಯಾರ್ಥಿವೇತನ ವಿತರಣೆ: ಇದೆ ಸಂದರ್ಭದಲ್ಲಿ ಹಿರಿಯ ಸಮಾಜ ಸೇವಕ ಬಳ್ಳಮಂಜ ಸುಬ್ರಹ್ಮಣ್ಯ ಮತ್ತು ಹಿರಿಯ ಯಕ್ಷಗಾನ ಕಲಾವಿದ ಜನಾರ್ದನ ಆಚಾರ್ಯ ಕಲ್ಮಂಜ ಅವರನ್ನು ಶ್ರೀಗಳು ಸಮ್ಮಾನಿಸಿ ಗೌರವಿಸಿದರು .ಧರ್ಮಸ್ಥಳ ಪ್ರಾ.ಕೃ .ಪ .ಸಹಕಾರಿ ಸಂಘದ ಅಧ್ಯಕ್ಷ ಹರಿದಾಸ ಗಾಂಭೀರ ಸಮ್ಮಾನಿತರನ್ನು ಅಭಿನಂದಿಸಿದರು. ಭವ್ಯ ಹೊಳ್ಳ ಮತ್ತು ಸಾಯಿಸುಮ ನಾವಡ ಸಂಮಾನಪತ್ರ ವಾಚಿಸಿದರು. . ಸಮ್ಮಾನಿತ ಸುಬ್ರಹ್ಮಣ್ಯ ಬಳ್ಳಮಂಜ ಕೃತಜ್ಞತೆ ವ್ಯಕ್ತಪಡಿಸಿದರು .
ವಿದ್ಯಾರ್ಥಿಗಳಾದ ರಮ್ಯಾ ಕಲ್ಮಂಜ ,ಎನ್ .ಎಸ್ .ನಿಶಾಂತ್ ಪಿಲ್ಯ .,ಕಿರಣ್ ನಾಯ್ಕ್ ಗೇರುಕಟ್ಟೆ ಮತ್ತು ಪ್ರೀತಿಕಾ ಬೆಳಾಲು ಅವರಿಗೆ ವಿದ್ಯಾರ್ಥಿ ವೇತನ ಪ್ರೋತ್ಸಾಹಧನ ವಿತರಿಸಲಾಯಿತು. ಕಾರ್ಯದರ್ಶಿ ದಿವಾಕರ ಆಚಾರ್ಯ ಗೇರುಕಟ್ಟೆ ಯಕ್ಷಭಾರತಿಯ ಕಾರ್ಯಚಟುವಟಿಕೆಗಳ ಬಗ್ಗೆ ಪ್ರಸ್ತಾವಿಸಿದರು .
ಯಕ್ಷಭಾರತಿ ಅಧ್ಯಕ್ಷ ರಾಘವೇಂದ್ರ ಬೈಪಾಡಿತ್ತಾಯ ಸ್ವಾಗತಿಸಿ ,ಗುರುರಾಜ ಹೊಳ್ಳ ಬಾಯಾರು ನಿರೂಪಿಸಿ,ಸಾಯಿಸುಮ ನಾವಡ ವಂದಿಸಿದರು. ಹಿರಿಯ ಯಕ್ಷಗಾನ ಕಲಾವಿದರಿಂದ ಮಹೇಶ್ ಕನ್ಯಾಡಿ ಹಾಡುಗಾರಿಕೆಯಲ್ಲಿ “ಸಾಮ್ರಾಟ್ ನಹುಷೇನ್ದ್ರ ” ಪ್ರಸಂಗದ ಯಕ್ಷಗಾನ ಪ್ರದರ್ಶಿಸಲ್ಪಟ್ಟಿತು .
ಉಜಿರೆ ಶ್ರೀ ಜನಾರ್ದನ ದೇವಸ್ತಾನಕ್ಕೆ ಎಡನೀರು ಶ್ರೀ ಭೇಟಿ ಉಜಿರೆ: ಎಡನೀರು ಮಠಕ್ಕೆ ಪೀಠಾರೋಹಣಗೊಂಡ ಶ್ರೀ ಸಚ್ಚಿದಾನಂದ ಭಾರತಿ ಶ್ರೀಗಳವರು ಮೊದಲಬಾರಿಗೆ ಉಜಿರೆ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನಕ್ಕೆ ನ. 2 ರಂದು ರಾತ್ರಿ ಭೇಟಿ ನೀಡಿದಾಗ ಅವರನ್ನು ಉಜಿರೆ ಶ್ರೀ ಜನಾರ್ದನ ಸ್ವಾಮಿ ಮಹಾದ್ವಾರದ ಬಳಿ ಸಕಲ ಗೌರವ, ವಾದ್ಯ , ಪೂರ್ಣಕುಂಭ ಸಹಿತ ಭಕ್ತಿಪೂರ್ವಕವಾಗಿ ಸ್ವಾಗತಿಸಿ ಬರಮಾಡಿಕೊಳ್ಳಲಾಯಿತು. ದೇವಸ್ಥಾನದ ಪರವಾಗಿ ಶರತ್ ಕೃಷ್ಣ ಪಡುವೆಟ್ನಾಯ ಮಾಲಾರ್ಪಣೆಗೈದು ಸ್ವಾಗತಿಸಿದರು. ತುಳು ಶಿವಳ್ಳಿ ಸಮಾಜ ಬಾಂಧವರು ಉಪಸ್ಥಿತರಿದ್ದರು. ಶ್ರೀಗಳವರು ಶ್ರೀ ಜನಾರ್ದನಸ್ವಾಮಿ ಹಾಗು ಪರಿವಾರ ದೇವರ ದರ್ಶನ ಪಡೆದು, ಪೂಜೆ ಸಲ್ಲಿಸಿ ,ಪ್ರಸಾದ ಸ್ವೀಕರಿಸಿದರು.
ದೇವಸ್ಥಾನದ ಪರವಾಗಿ ಆಡಳಿತ ಮೊಕ್ತೇಸರ ವಿಜಯರಾಘವ ಪಡುವೆಟ್ನಾಯ ಶ್ರೀಗಳವರನ್ನು ಮಾಲಿಕೆ, ಫಲ ಸಮರ್ಪಿಸಿ ಗೌರವಿಸಿದರು. ಶ್ರೀಗಳವರು ಫಲ ಮಂತ್ರಾಕ್ಷತೆ ,ಶಾಲು ಹೊದಿಸಿ ಆಶೀರ್ವದಿಸಿದರು. ಶರತ್ ಕೃಷ್ಣ ಪಡುವೆಟ್ನಾಯ, ತುಳು ಶಿವಳ್ಳಿ ತಾಲೂಕು ಅಧ್ಯಕ್ಷ ರಾಘವೇಂದ್ರ ಬೈಪಾಡಿತ್ತಾಯ ,ಕಾರ್ಯದರ್ಶಿ ರಾಜಪ್ರಸಾದ್ ಪೊಲ್ನಾಯ , ಜನಾರ್ದನ ಸೊಸೈಟಿ ಅಧ್ಯಕ್ಷ ಗಂಗಾಧರ ರಾವ್ ಕೆವುಡೇಲು, ಪರಾರಿ ವೆಂಕಟ್ರಮಣ ಹೆಬ್ಬಾರ್ , ಮುರಳಿಕೃಷ್ಣ ಆಚಾರ್ , ಗಿರೀಶ್ ಕುದ್ರೆತ್ತಾಯ , ಅರ್ಚಕ ಶ್ರೀನಿವಾಸ ಹೊಳ್ಳ ಮೊದಲಾದವರು ಉಪಸ್ಥಿತರಿದ್ದರು.
- ನವವಿವಾಹಿತೆ ಆತ್ಮಹತ್ಯೆ – ಆಕೆ ಬರೆದಿಟ್ಟ ಡೆತ್ ನೋಟಿನಲ್ಲಿ ಏನಿದೆ?
- ತಾನು ಮದುವೆಯಾಗುವ ಹುಡುಗಿಗೆ ಮೂರು ಷರತ್ತುಗಳನ್ನು ವಿಧಿಸಿದ್ದ ಎ.ಆರ್. ರೆಹಮಾನ್: ಮದುವೆಯ ಮೂವತ್ತನೆಯ ವಾರ್ಷಿಕೋತ್ಸವ (ಗ್ರ್ಯಾಂಡ್ ಥರ್ಟಿ) ತಲುಪುವ ಭರವಸೆ ಹುಸಿಯಾಯಿತು ಎಂದ ಸಂಗೀತ ನಿರ್ದೇಶಕ
- ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ರಕ್ಷಕ-ಶಿಕ್ಷಕ ಸಂಘದ ಪದಾಧಿಕಾರಿಗಳ ಆಯ್ಕೆ
- ಎಲೆಕ್ಟ್ರಿಕ್ ಸ್ಕೂಟರ್ ಶೋರೂಮ್ ಬೆಂಕಿಗೆ ಆಹುತಿ – 20 ವರ್ಷದ ಯುವತಿ ಬೆಂಕಿಗೆ ಸಿಲುಕಿ ಸಾವು
- ಕಾಸರಗೋಡಿನ ಮಸೀದಿ ಪರಿಸರದ ಮಣ್ಣು ತೆಗೆದ ಜೆಸಿಬಿಗೆ 45 ಲಕ್ಷ ದಂಡ; ಬಡ ಕುಟುಂಬ ಸಂಕಷ್ಟದಲ್ಲಿ – ಕಬ್ರಿಸ್ತಾನ್ ಭೂಮಿಯ ಉಸ್ತುವಾರಿ ಮಸೀದಿ ಅಧಿಕಾರಿಗಳಿಗೆ ಶಿಕ್ಷೆ ಇಲ್ಲ