Saturday, January 18, 2025
Homeಯಕ್ಷಗಾನಸ್ತ್ರೀ ಪಾತ್ರಧಾರಿ ಶ್ರೀ ಸಂದೀಪ್ ಕೋಳ್ಯೂರು

ಸ್ತ್ರೀ ಪಾತ್ರಧಾರಿ ಶ್ರೀ ಸಂದೀಪ್ ಕೋಳ್ಯೂರು

ಫೋಟೋ ಕೃಪೆ: ಕಿಶನ್ ಹೊಳ್ಳ, ನೂಜಿಪ್ಪಾಡಿ

ಸ್ತ್ರೀ ಪಾತ್ರಧಾರಿ ಶ್ರೀ ಸಂದೀಪ್ ಕೋಳ್ಯೂರು ಅವರು ಕಟೀಲು ಶ್ರೀ ದುರ್ಗಾಪರಮೇಶ್ವರಿ ದಶಾವತಾರ ಯಕ್ಷಗಾನ ಮಂಡಳಿಯಲ್ಲಿ ಕಳೆದ ಹದಿನಾಲ್ಕು ವರ್ಷಗಳಿಂದ ಕಲಾ ಸೇವೆಯನ್ನು ಮಾಡುತ್ತಿದ್ದಾರೆ. ನಿಷ್ಠಾವಂತ, ಅರ್ಪಣಾ ಭಾವದ ಕಲಾವಿದ. ಸದಾ ಅಧ್ಯಯನಶೀಲ. ಸಾಕಷ್ಟು ಸಿದ್ಧರಾಗಿಯೇ ರಂಗವೇರುತ್ತಾರೆ.

ಯಕ್ಷಗಾನದಲ್ಲಿ ಸ್ತ್ರೀ ವೇಷಗಳನ್ನು ನಿರ್ವಹಿಸುವುದು ಅಷ್ಟು ಸುಲಭವಲ್ಲ. ತಾನು ಧರಿಸಿದ್ದು ಹೆಣ್ಣು ವೇಷ ಎಂಬ ಎಚ್ಚರ ಕೊನೆಯ ತನಕವೂ ಬೇಕು. ಅದನ್ನು ಉಳಿಸಿಕೊಳ್ಳಬೇಕು. ಗಂಡು ಕಲೆಯಾದ ಯಕ್ಷಗಾನದಲ್ಲಿ ಈಗ ನಾರಿಯರೂ ಮೆರೆಯುತ್ತಿದ್ದಾರೆ. ಸಂತೋಷದ ವಿಚಾರ. ಆದರೂ ಸ್ತ್ರೀಯರು ಪುರುಷ ವೇಷಗಳನ್ನು ಧರಿಸಿ ಅಭಿನಯಿಸುವುದು ಸುಲಭವಲ್ಲ. ಪಾತ್ರದ ಕೊನೆವರೆಗೂ ತಾನು ಧರಿಸಿದ್ದು ಪುರುಷ ವೇಷ ಎಂಬ ಎಚ್ಚರ ಹೊಂದಿರಬೇಕಾಗುತ್ತದೆ. ಇಲ್ಲದಿದ್ದರೆ ಪಾತ್ರವೂ ಪ್ರದರ್ಶನವೂ ಪೇಲವವಾಗುತ್ತದೆ.

ಪುರುಷರು ಸ್ತ್ರೀ ಪಾತ್ರಧಾರಿಯಾಗಿ, ಸ್ತ್ರೀಯರು ಪುರುಷ ಪಾತ್ರಗಳಲ್ಲಿ ಸರಿಯಾಗಿ ಯಶಸ್ವಿಯಾದರೆ ಅದು ಒಂದು ಸಾಧನೆಯೇ ಹೌದು. ಅಭಿನಂದಿಸಲೇ ಬೇಕು. ಯಕ್ಷಗಾನದಲ್ಲಿ ಹಿರಿಯ ಖ್ಯಾತ ಅನೇಕ ಸ್ತ್ರೀ ವೇಷಧಾರಿಗಳು ತಮ್ಮ ಪ್ರತಿಭಾ ವ್ಯಾಪಾರದಿಂದ ರಂಗದಲ್ಲಿ ರಂಜಿಸಿದರು. ಅಂತಹಾ ಶ್ರೇಷ್ಠ ಕಲಾವಿದರೇ ಉದಯೋನ್ಮುಖರಿಗೆ ಆದರ್ಶರು. ಪ್ರಸ್ತುತ ಯಕ್ಷಗಾನದಲ್ಲಿ ವೃತ್ತಿ ಕಲಾವಿದರಾಗಿ ಅನೇಕ ಉದಯೋನ್ಮುಖ ಸ್ತ್ರೀ ವೇಷಧಾರಿಗಳು ವ್ಯವಸಾಯ ಮಾಡುತ್ತಿದ್ದಾರೆ. ಅಂತಹಾ ಕಲಾವಿದರಲ್ಲೊಬ್ಬರು ಶ್ರೀ ಸಂದೀಪ್  ಕೋಳ್ಯೂರು. 


ಸ್ತ್ರೀ ಪಾತ್ರಧಾರಿ ಶ್ರೀ ಸಂದೀಪ್ ಕೋಳ್ಯೂರು ಅವರ ಹುಟ್ಟೂರು ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ಕಳಿಯೂರು ಗ್ರಾಮದ ಕೋಳ್ಯೂರು ಪದವು. 1986ನೇ ಇಸವಿ ಜೂನ್ 4ರಂದು ಜನನ. ಶ್ರೀ ಚಂದ್ರಶೇಖರ ಎಸ್. ಮತ್ತು ಶ್ರೀಮತಿ ಕಲ್ಯಾಣಿ ಎಸ್. ದಂಪತಿಗಳ ಮೂವರು ಗಂಡುಮಕ್ಕಳಲ್ಲಿ ಇವರು ಹಿರಿಯವರು. ವಿದ್ಯಾರ್ಜನೆ ಪಿಯುಸಿ ವರೆಗೆ. ಕೋಳ್ಯೂರು ಶಾಲೆ, ಕೊಡ್ಲಮೊಗರು ವಾಣೀ ವಿಜಯ ಪ್ರೌಢಶಾಲೆ ಮತ್ತು ಮಂಗಳೂರು ಕುದ್ರೋಳಿ ನಾರಾಯಣಗುರು ಕಾಲೇಜಿನಲ್ಲಿ ವಿದ್ಯಾರ್ಜನೆ.

ಸಂದೀಪ್ ಅವರ ತಂದೆಯ ತಮ್ಮ ಶ್ರೀ ನಾರಾಯಣ ಎಸ್ ಮತ್ತು ತಾಯಿಯ ತಮ್ಮ ಶ್ರೀ ಲಿಂಗಪ್ಪ ಇವರು ಹವ್ಯಾಸಿ ನಾಟಕ ಕಲಾವಿದರು. ಕ್ಯಾಸೆಟ್ ಯುಗ. ಯಕ್ಷಗಾನ ಕ್ಯಾಸೆಟ್ ಗಳನ್ನು ಕೇಳಿ ಸಂತೋಷ ಪಡುತ್ತಿದ್ದ ಸಂದೀಪರಿಗೆ ಎಳವೆಯಲ್ಲೇ ಯಕ್ಷಗಾನಾಸಕ್ತಿಯು ಬೆಳೆದಿತ್ತು. ಸುಂಕದಕಟ್ಟೆ ಮತ್ತು ಆಸುಪಾಸಿನಲ್ಲಿ ನಡೆಯುತ್ತಿದ್ದ ಧರ್ಮಸ್ಥಳ, ಕರ್ನಾಟಕ, ಕದ್ರಿ ಮೇಳಗಳ ಆಟಗಳನ್ನು ನೋಡುತ್ತಿದ್ದರು.

ಪಾತಾಳ ಶ್ರೀ ಅಂಬಾಪ್ರಸಾದರ ಸುಭದ್ರೆಯ ವೇಷವನ್ನು ನೋಡಿ, ತಾನೂ ಸ್ತ್ರೀ ಪಾತ್ರಧಾರಿ ಆಗಬೇಕೆಂಬ ನಿರ್ಣಯವನ್ನು ಮಾಡಿದ್ದರು. ಯಕ್ಷಗಾನ ಕಲಾವಿದನಾಗಬೇಕೆಂಬ ಆಸೆಯೇ ವಿದ್ಯಾಭ್ಯಾಸ ನಿಲ್ಲಿಸಲು ಕಾರಣ. ಇದಕ್ಕೆ ಮನೆಯವರ ಆಕ್ಷೇಪ ಇತ್ತು. ಆದರೂ ಅಂದು ಆಕ್ಷೇಪಿಸಿದವರೆಲ್ಲರೂ ಇಂದು ಸಂದೀಪರ ಸಾಧನೆಯ ಬಗೆಗೆ ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಿದ್ದಾರೆ. ಮನೆಯವರಿಗೂ ಊರಿನವರಿಗೂ ಸಂದೀಪ್ ನಮ್ಮೂರಿನ ಕಲಾವಿದನೆಂಬ ಹೆಮ್ಮೆಯಿದೆ.

ಇವರ ಯಕ್ಷಗಾನ ಕಲಾಸಕ್ತಿಯನ್ನು ಬೆಳೆಸಿ ಪೋಷಿಸಿದವರು ವಾರಣಾಸಿ ಶ್ರೀ ಸದಾಶಿವ ಭಟ್. ಇವರು ಹವ್ಯಾಸಿ ಭಾಗವತರು. ಕಲಾವಿದರಾದ ಶ್ರೀ ತನಿಯಪ್ಪ ಭಂಡಾರಿ ಕಳಿಯಾರು ಮತ್ತು ಶ್ರೀ ಶಂಕರ ಆಚಾರ್ಯ ಕೋಳ್ಯೂರು ಇವರಿಂದ ನಾಟ್ಯಾಭ್ಯಾಸ. “ಶ್ರೀ ನಾರಾಯಣ ಗುರು ಯಕ್ಷಗಾನ ಮಂಡಳಿ, ವರ್ಕಾಡಿ, ಸುಂಕದಕಟ್ಟೆ’ ಈ ಸಂಘದ ಆಶ್ರಯದಲ್ಲಿ ಅಭ್ಯಾಸ. ಈ ಸಂಘದ ನೇತೃತ್ವ ವಹಿಸಿದವರು ಹವ್ಯಾಸಿ ಬಣ್ಣದ ವೇಷಧಾರಿ ಶ್ರೀ ನಾರಾಯಣ ಬೆಜ್ಜ ಅವರು. ಸಂಘದ ಪ್ರದರ್ಶನದಲ್ಲಿ ರಂಗಪ್ರವೇಶ. ಏಕಾದಶೀ ದೇವಿ ಮಹಾತ್ಮೆ ಪ್ರಸಂಗದಲ್ಲಿ ದೇವಿಯಾಗಿ ಎರಡು ಬಾರಿ ಅಭಿನಯಿಸಿದ್ದರು. ಕಾಂತಾಬಾರೆ ಬೂದಾಬಾರೆ ಪ್ರಸಂಗದಲ್ಲೂ ಎರಡು ಬಾರಿ ಪಾತ್ರ ನಿರ್ವಹಿಸಿದ್ದರು.

ಮತ್ತೆ ಎಂಟು ದಿನಗಳ ಕಾಲ ವರ್ಕಾಡಿ ಐತಪ್ಪರ ಕದ್ರಿ ಮೇಳದಲ್ಲಿ ವೇಷ ಮಾಡಿದ್ದರು. ಈ ಸಂದರ್ಭದಲ್ಲಿ ಚಂದ್ರಮಂಡಲ ಶ್ರೀ ಗಣೇಶ ಮತ್ತು ಕಡಬ ದಿನೇಶ ರೈಗಳು ಪ್ರೋತ್ಸಾಹಿಸಿದ್ದರು. ಇವರ ಹೇಳಿಕೆಯಂತೆ ಶ್ರೀ ಕ್ಷೇತ್ರ ಧರ್ಮಸ್ಥಳದ ಲಲಿತ ಕಲಾ ಕೇಂದ್ರಕ್ಕೆ ತೆರಳಿದರು. ಮನೆಯಲ್ಲಿ ತಿಳಿಸದೇ ಧರ್ಮಸ್ಥಳಕ್ಕೆ ತೆರಳಿದ್ದರು. ಕೇಂದ್ರಕ್ಕೆ ಸೇರಿದ ವಿಚಾರ, ಕೆಲ ದಿನಗಳ ಬಳಿಕವೇ ಮನೆಯವರಿಗೆ ತಿಳಿಯಿತು.

ಕೇಂದ್ರದ ಗುರುಗಳಾದ ದಿವಾಣ ಶ್ರೀ ಶಿವಶಂಕರ ಭಟ್ಟರಿಂದ ನಾಟ್ಯಾಭ್ಯಾಸ. ಕೇಂದ್ರದಲ್ಲಿ ಇವರು ಸಹಪಾಠಿಗಳಾಗಿದ್ದವರು ತಿರುಮಲೇಶ್ವರ ಅಳಿಕೆ, ವಿಠಲ ತ್ರಾಸಿ, ಚಿದಾನಂದ ಗೌಡ, ನೇಜಿಕಾರು ಗಣೇಶ, ಹರೀಶ ಕಳಸ, ಪ್ರವೀಣ ಮರ್ಕಮೆ. 
2008ನೇ ಇಸವಿಯಲ್ಲಿ ಸಂದೀಪ್ ಕೋಳ್ಯೂರು ಅವರು ತಿರುಗಾಟ ಆರಂಭಿಸಿದ್ದರು. ಕಟೀಲು ಎರಡನೇ ಮೇಳ. ಶ್ರೀ ಬಲಿಪ ಪ್ರಸಾದರು ಮತ್ತು ಪಟ್ಲ ಶ್ರೀ ಸತೀಶ ಶೆಟ್ಟರು ಭಾಗವತರಾಗಿದ್ದರು. ಪೂರ್ವರಂಗದಲ್ಲಿ ಮುಖ್ಯ ಸ್ತ್ರೀ ವೇಷ ಮತ್ತು ಪ್ರಸಂಗದ ಸಣ್ಣಪುಟ್ಟ ಮಾಡುತ್ತಿದ್ದರು.

ಮೇಳಕ್ಕೆ ಸೇರಿದ ಮೂರನೆಯ ದಿನ ದೇವಿ ಮಹಾತ್ಮೆ ಪ್ರಸಂಗದಲ್ಲಿ ಆದಿಮಾಯೆ ಪಾತ್ರವನ್ನು ಮಾಡುವ ಅವಕಾಶವೂ ಸಿಕ್ಕಿತ್ತು. ಎರಡನೇ ವರ್ಷದಲ್ಲಿ ಮಾಲಿನಿ, ಸೌಗಂಧಿಕೆ ಮೊದಲಾದ ಪಾತ್ರಗಳನ್ನೂ ನಿರ್ವಹಿಸಿದ್ದರು. ಭಾವನಾತ್ಮಕ ಪಾತ್ರಗಳಲ್ಲಿ ಅಭಿನಯಿಸುವುದು ಸಂದೀಪರಿಗೆ ತುಂಬಾ ಇಷ್ಟದ ವಿಚಾರ. ಎರಡನೇ ಮೇಳದಲ್ಲಿ ನಾಲ್ಕು ವರ್ಷಗಳ ತಿರುಗಾಟ. ಮತ್ತೆ ಎರಡನೇ ಸ್ತ್ರೀ ವೇಷಧಾರಿಯಾಗಿ ನಾಲ್ಕನೇ ಮೇಳಕ್ಕೆ.

ನಾಲ್ಕನೇ ಮೇಳದಲ್ಲಿ ಆರು ವರ್ಷಗಳ ವ್ಯವಸಾಯ. ಈ ಸಂದರ್ಭದಲ್ಲಿ ಎರಡನೇ ವೇಷದ ಜತೆಗೆ ಪ್ರಸಂಗದ ಮುಖ್ಯ ಸ್ತ್ರೀ ಪಾತ್ರಗಳನ್ನೂ ಮಾಡುವ ಅವಕಾಶವೂ ದೊರೆಯಿತು. ಹೀಗೆ ಪುರಾಣ ಪ್ರಸಂಗದ ಅನುಭವಗಳನ್ನು ಗಳಿಸಿಕೊಂಡರು. ಬಳಿಕ ಐದನೇ ಮೇಳದಲ್ಲಿ ಒಂದು ವರ್ಷ ಕಲಾಸೇವೆ. ಮರಳಿ ನಾಲ್ಕನೇ ಮೇಳಕ್ಕೆ ಮುಖ್ಯ ಸ್ತ್ರೀ ಪಾತ್ರಧಾರಿಯಾಗಿ ಪುನರಾಗಮನ. ಶ್ರೀದೇವಿ ಪಾತ್ರಧಾರಿಯಾಗಿ.

ಸಂದೀಪರ ಹೆಚ್ಚಿನ ಎಲ್ಲಾ ವೇಷಗಳನ್ನು ನೋಡಿದ್ದೇನೆ. ಸಹಕಲಾವಿದನಾಗಿ ಅಭಿನಯಿಸಿದ್ದೇನೆ. ಒಳ್ಳೆಯ ನಾಟಕೀಯ ಪ್ರಜ್ಞೆಯನ್ನು ಹೊಂದಿರುತ್ತಾರೆ. ಚೆನ್ನಾಗಿ ಸಂಭಾಷಣೆ ಮಾಡುತ್ತಾರೆ. ನಾಟ್ಯ ಮತ್ತು ಮಾತುಗಾರಿಕೆ ಎರಡರಲ್ಲೂ ಅವರ ಪ್ರತಿಭೆಯನ್ನು ಗುರುತಿಸಬಹುದು. ವೃತ್ತಿ ಕಲಾವಿದನಾಗಿ ಹದಿನಾಲ್ಕು ವರ್ಷಗಳ ಅನುಭವ. ಸ್ತ್ರೀ ವೇಷಗಳು ಹೆಚ್ಚಾಗಿ ಶೃಂಗಾರ ಮತ್ತು ಕರುಣ ರಸಕ್ಕೆ ಸಂಬಂಧಪಟ್ಟವುಗಳು. ಈ ಎರಡೂ ವಿಭಾಗಗಳಲ್ಲಿ ಸಂದೀಪರು ಉತ್ತಮವಾಗಿ ಅಭಿನಯಿಸುತ್ತಾರೆ ಎಂಬುದು ನೋಟಕನಾಗಿ, ಸಹಕಲಾವಿದನಾಗಿ ನನ್ನ ಅನಿಸಿಕೆ.

ಸಂದೀಪ್ ಕೋಳ್ಯೂರು ಅವರ ಪತ್ನಿ ಶ್ರೀಮತಿ ಮೋಹಿನಿ. 2018ರಲ್ಲಿ ವಿವಾಹ. ಸಂದೀಪ್ ಮೋಹಿನಿ ದಂಪತಿಗಳಿಗೆ ಒಬ್ಬ ಪುತ್ರ. ಹೆಸರು ಮಾಸ್ಟರ್ ಪುನೀಶ್ (ಎರಡು ವರ್ಷ). ಬಾಲಕ ಪುನೀಶ್ ಗೆ ಉಜ್ವಲ ಭವಿಷ್ಯವು ದೊರಕಲಿ. ಶ್ರೀ ಸಂದೀಪ್ ಕೋಳ್ಯೂರು ಅವರಿಂದ ಕಲಾಸೇವೆಯು ನಿರಂತರವಾಗಿ ನಡೆಯುತ್ತಿರಲಿ. ಅವರಿಗೆ ಶ್ರೀ ದೇವರು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂಬ ಹಾರೈಕೆಗಳು. 

ಲೇಖಕ: ರವಿಶಂಕರ್ ವಳಕ್ಕುಂಜ 
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments