Saturday, January 18, 2025
Homeಯಕ್ಷಗಾನ‘ಕೋಳ್ಯೂರು ವೈಭವ’ ಉದ್ಘಾಟನೆ

‘ಕೋಳ್ಯೂರು ವೈಭವ’ ಉದ್ಘಾಟನೆ

ಯಕ್ಷಗಾನದ ಶ್ರೇಷ್ಠ ಕಲಾಸಾಧಕರಾದ ಕೋಳ್ಯೂರಿಗೆ ತೊಂಭತ್ತು ತುಂಬಿದ ಶುಭಾವಸರದಲ್ಲಿ ಉಡುಪಿಯ ಯಕ್ಷಗಾನ ಕಲಾರಂಗ ಆಯೋಜಿಸಿದ್ದ ಕೋಳ್ಯೂರು ವೈಭವದ ಉದ್ಘಾಟನಾ ಸಮಾರಂಭ 14-10-2021ರಂದು ಶ್ರೀಕ್ಷೇತ್ರ ಧರ್ಮಸ್ಥಳದ ಪ್ರವಚನ ಮಂಟಪದಲ್ಲಿ ಸಂಪನ್ನಗೊಂಡಿತು.

ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಒಂದು ತಿಂಗಳ ಪರ್ಯಂತ ನಡೆಯಲಿರುವ ಕಾರ್ಯಕ್ರಮಗಳ ಮತ್ತು ಕೋಳ್ಯೂರರ ಕುರಿತು ಸಮಗ್ರ ಪರಿಚಯ ಒಳಗೊಂಡಿರುವ ‘ಕ್ವೀನ್ ಆಫ್ ಯಕ್ಷಗಾನ’ ಜಾಲತಾಣವನ್ನು ಉದ್ಘಾಟಿಸಿದರು. ನಾವು ಎಲ್ಲವನ್ನೂ ಸರಕಾರದಿಂದ ನಿರೀಕ್ಷಿಸುವುದು ಸರಿಯಲ್ಲ. ಕಲೆ, ಕಲಾವಿದರ ಕ್ಷೇಮ ಚಿಂತನೆಯು ಸೇರಿದಂತೆ ಯಕ್ಷಗಾನ ಕಲಾರಂಗ ಮಾಡುತ್ತಿರುವ ಸಮಾಜಮುಖಿ ಕಾರ್ಯಗಳು ಸಂಘಟನೆಗಳಿಗೆ ಮಾದರಿಯಾಗಿದೆ ಎಂದು ಹೇಳಿದರು.

ರಂಗದ ಮೇಲೆ ರಾಣಿಯಾಗಿ ಮೆರೆದ ಕೋಳ್ಯೂರರು ನಿಜ ಬದುಕಿನಲ್ಲಿ ನಿಗರ್ವಿಯಾಗಿ ಎಲ್ಲರೊಂದಿಗೆ ಆತ್ಮೀಯತೆಯಿಂದಿರುವುದು ಅನುಕರಣೀಯವಾದ ನಡವಳಿಕೆ. ಎಲ್ಲ ಪ್ರತಿಕೂಲಗಳ ನಡುವೆ ಏಳು ದಶಕಗಳ ಕಾಲ ನಿರಂತರವಾಗಿ ಯಕ್ಷಗಾನ ಕ್ಷೇತ್ರದಲ್ಲಿ ಕಲಾಸೇವೆ ಮಾಡುತ್ತಾ ಬಂದ ಕೊಳ್ಯೂರರ ಕಲಾತಪಸ್ಸು ಈಗಿನ ಕಲಾವಿದರಿಗೆ ಅನುಸರಣೀಯವಾದುದಾಗಿದೆ. ವೆಬ್‌ಸೈಟ್ ನಿರ್ಮಾಣದ ಮೂಲಕ ಅವರ ಕಲಾಸಾಧನೆ ಶಾಶ್ವತವಾಗಿ ಉಳಿಯುವಂತಾದುದು ಸ್ತುತ್ಯರ್ಹ ಕಾರ್ಯ ಎಂದು ನುಡಿದು, ಶ್ರೀ ಮಂಜುನಾಥ ಸ್ವಾಮಿಯ ಕೃಪೆ ಇರಲೆಂದು ಶುಭ ಹಾರೈಸಿದರು.

ಶ್ರೀಕ್ಷೇತ್ರದ ವತಿಯಿಂದ ಕೋಳ್ಯೂರಿಗೆ ಶಾಲು ಸ್ಮರಣಿಕೆ ನೀಡಿ ಗೌರವಿಸಿದರು. ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್ ಸ್ವಾಗತಿಸಿದರು. ಉಪಾಧ್ಯಕ್ಷರಾದ ಪಿ.ಕಿಶನ್ ಹೆಗ್ಡೆ ಹಾಗೂ ವಿ.ಜಿ.ಶೆಟ್ಟಿ ಹೆಗ್ಗಡೆಯವರಿಗೆ ಫಲಪುಷ್ಪ ಸಮರ್ಪಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ನಿರೂಪಿಸಿದ ಕಾರ್ಯಕ್ರಮದ ಕೊನೆಗೆ ಜತೆಕಾರ್ಯದರ್ಶಿ ಪ್ರೊ.ನಾರಾಯಣ ಎಂ. ಹೆಗಡೆ ವಂದನಾರ್ಪಣೆಗೈದರು.

ಸಮಾರಂಭದಲ್ಲಿ ಕೋಳ್ಯೂರರ ಪತ್ನಿ ಶ್ರೀಮತಿ ಭಾಗೀರಥಿ ರಾವ್, ಶಾಂತಿವನ ಟ್ರಸ್ಟ್ನ ಕಾರ್ಯದರ್ಶಿ ಸೀತಾರಾಮ ತೋಳ್ಪಡಿತ್ತಾಯ, ಕಲಾವಿದ ಚಂದ್ರಶೇಖರ ಧರ್ಮಸ್ಥಳ, ಯಕ್ಷಗಾನ ಕಲಾರಂಗದ ಸದಸ್ಯರುಗಳಾದ ಅನಂತರಾಜ ಉಪಾಧ್ಯ, ಪೃಥ್ವಿರಾಜ ಕವತ್ತಾರ್, ಎಚ್.ಎನ್. ಶೃಂಗೇಶ್ವರ, ಕಿಶೋರ್ ಸಿ. ಉದ್ಯಾವರ ಉಪಸ್ಥಿತರಿದ್ದರು. ಕಾರ್ಯಕ್ರಮದ ಸಂಯೋಜನೆಯನ್ನು ಕೊಳ್ಯೂರರ ಸುಪುತ್ರ ಕೆ. ಶ್ರೀಧರ ರಾವ್ ಹಾಗೂ ಮೊಮ್ಮಗ ನಟರಾಜ್ ಗೋಪಾಡಿ ಮಾಡಿದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments