Saturday, January 18, 2025
Homeಯಕ್ಷಗಾನಅನುಭವಿ ಹಿರಿಯ ಕಲಾವಿದ ಬಾಯಾರು ಶ್ರೀ ರಘುನಾಥ ಶೆಟ್ಟಿ

ಅನುಭವಿ ಹಿರಿಯ ಕಲಾವಿದ ಬಾಯಾರು ಶ್ರೀ ರಘುನಾಥ ಶೆಟ್ಟಿ

ಯಾವುದೇ ಕ್ಷೇತ್ರದಲ್ಲಿ ಹಿರಿಯ ಅನುಭವಿಗಳು ಜತೆಗಿದ್ದರೆ ಕಿರಿಯರಿಗೆ, ಅಭ್ಯಾಸಿಗಳಿಗೆ ಅದರಿಂದ ಅನುಕೂಲವಾಗುತ್ತದೆ. ಹಿರಿಯರ ಅನುಭವ,ವಿದ್ಯೆಗಳನ್ನು ಪಡೆದು ಕಲಿಕಾಸಕ್ತರು ಮುನ್ನಡೆಯಲು ಅವಕಾಶವಾಗುತ್ತದೆ. ಅಧ್ಯಯನಕ್ಕೆ, ಮಾಹಿತಿ ಸಂಗ್ರಹಕ್ಕೆ, ಮುನ್ನಡೆಸುವುದಕ್ಕೆ ಹಿರಿಯ ಅನುಭವಿಗಳ ಉಪಸ್ಥಿತಿಯು ಇರಲೇಬೇಕು.

ಯಕ್ಷಗಾನ ಕಲಾ ಕ್ಷೇತ್ರದಲ್ಲಿ ಇಂದು ಅನೇಕ ಹಿರಿಯ ಅನುಭವಿ ಕಲಾವಿದರು ವ್ಯವಸಾಯ ಮಾಡುತ್ತಿದ್ದಾರೆ. ಶ್ರೀ ರಘುನಾಥ ಶೆಟ್ಟಿ ಬಾಯಾರು ಅವರು ತೆಂಕುತಿಟ್ಟಿನ ಹಿರಿಯ ಅನುಭವಿ ಕಲಾವಿದರು. ಕಟೀಲು ಶ್ರೀ ದುರ್ಗಾಪರಮೇಶ್ವರೀ ದಶಾವತಾರ ಯಕ್ಷಗಾನ ಮಂಡಳಿಯ ಕಲಾವಿದರು. 1964ರಿಂದ ಯಕ್ಷಗಾನ ಕ್ಷೇತ್ರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುತ್ತಾರೆ. 

ಅನುಭವೀ ಕಲಾವಿದ ಶ್ರೀ ರಘುನಾಥ ಶೆಟ್ಟರ ಹುಟ್ಟೂರು ಕಾಸರಗೋಡು ಜಿಲ್ಲೆಯ ಬಾಯಾರು ಸಮೀಪದ ಕುಳ್ಯಾರು. 1950 ಜೂನ್ 6ರಂದು ಪೈವಳಿಕೆ ಶ್ರೀ ಐತಪ್ಪ ಶೆಟ್ಟಿ ಮತ್ತು ಶ್ರೀಮತಿ ಕಲ್ಯಾಣಿ ಶೆಟ್ಟಿ ದಂಪತಿಗಳ ಹಿರಿಯ ಮಗನಾಗಿ ಜನನ. ಪೈವಳಿಕೆ ಶ್ರೀ ಐತಪ್ಪ ಶೆಟ್ಟರನ್ನು ಕಲಾಭಿಮಾನಿಗಳೆಲ್ಲರೂ ತಿಳಿದಿದ್ದಾರೆ. ಯಕ್ಷಗಾನ ಕ್ಷೇತ್ರದಲ್ಲಿ ಖ್ಯಾತ ಸ್ತ್ರೀ ವೇಷಧಾರಿಯಾಗಿ ಮೆರೆದವರು.

ಜಾಹೀರಾತು 

ರಘುನಾಥ ಶೆಟ್ಟಿ ಬಾಯಾರು ಅವರು ಓದಿದ್ದು 6ನೇ ತರಗತಿ ವರೆಗೆ. ಬಾಯಾರು ಹೆದ್ದಾರಿ ಶಾಲೆಯಲ್ಲಿ. ಎಳವೆಯಲ್ಲಿ ಯಕ್ಷಗಾನಾಸಕ್ತಿ ಇತ್ತು. ತೀರ್ಥರೂಪರ ಜತೆ ತೆರಳಿ ಯಕ್ಷಗಾನ ಪ್ರದರ್ಶನಗಳನ್ನು ನೋಡುವ ಅವಕಾಶವೂ ಸಿಕ್ಕಿತ್ತು. ತೀರ್ಥರೂಪರಿಂದ ಯಕ್ಷಗಾನ ಹೆಜ್ಜೆಗಾರಿಕೆಯನ್ನೂ ಕಲಿತಿದ್ದರು. ಆದರೂ ಮೇಳದ ತಿರುಗಾಟ  ಬೇಡ ಎಂಬ ತೀರ್ಮಾನಕ್ಕೆ ಬಂದಿದ್ದರು. ಎರಡು ವರ್ಷ ಟೈಲರಿಂಗ್ ಕೆಲಸ ಮಾಡಿದ್ದರು. ಬಳಿಕ ಯಕ್ಷಗಾನ ಕಲೆಯತ್ತ ಆಕರ್ಷಿತರಾಗಿ ಅದನ್ನೇ ವೃತ್ತಿಯಾಗಿ ಸ್ವೀಕರಿಸಿದರು. 

ಬಾಯಾರು ರಘುನಾಥ ಶೆಟ್ಟರ ಮೊದಲ ತಿರುಗಾಟ 1964ರಲ್ಲಿ. ಕಲ್ಲಾಡಿ ಶ್ರೀ ವಿಠಲ ಶೆಟ್ಟರ ಸಂಚಾಲಕತ್ವದ ಕರ್ನಾಟಕ ಮೇಳ. ಆಗ ಸೀನ್ ಸೀನರಿ ಪ್ರದರ್ಶನಗಳು ರಂಜಿಸುತ್ತಿದ್ದ ಕಾಲ. ಬಾಲ ಕಲಾವಿದನಾಗಿ ತಿರುಗಾಟ. ತ್ರಿಜನ್ಮ ಮೋಕ್ಷ ಪ್ರಸಂಗದಲ್ಲಿ ಕೌಪೀನಧಾರಿಯಾಗಿ ಸನತ್ಕುಮಾರರ ವೇಷದಲ್ಲಿ ಕಾಣಿಸಿಕೊಂಡಿದ್ದರು. ಸನಕ, ಸನಂದನ, ಸತ್ಸುಜಾತ, ಸನತ್ಕುಮಾರರಾಗಿ ಪೆರುವಾಯಿ ನಾರಾಯಣ ಶೆಟ್ಟಿ, ಬೆಳ್ಳಾರೆ ವಿಶ್ವನಾಥ ರೈ, ಬಾಯಾರು ರಘುನಾಥ ಶೆಟ್ಟಿ, ಕೌಡೂರು ರಾಮಕೃಷ್ಣಯ್ಯ ಎಂಬ ನಾಲ್ಕು ಮಂದಿ ಬಾಲ ಕಲಾವಿದರು ಕೌಪೀನಧಾರಿಗಳಾಗಿ ರಂಗದಲ್ಲಿ ಕಾಣಿಸಿಕೊಂಡಿದ್ದರು.

ಆಗ ಕರ್ನಾಟಕ ಮೇಳವು ಖ್ಯಾತ ಕಲಾವಿದರಿರುವ ತಂಡವಾಗಿತ್ತು. ಪೂರ್ವರಂಗದಲ್ಲಿ ಬಾಲಗೋಪಾಲ ವೇಷದಿಂದ ತೊಡಗಿ, ಪ್ರಸಂಗದಲ್ಲಿ ತನಗೆ ದೊರೆತ ಚಿಕ್ಕ ವೇಷಗಳನ್ನು ಮಾಡುತ್ತಾ ಬೆಳೆದವರು ಶ್ರೀ ರಘುನಾಥ ಶೆಟ್ಟರು. ಮೂವತ್ತರೆಡು ವರ್ಷಗಳ ಕಲಾಸೇವೆ ಕರ್ನಾಟಕ ಮೇಳದಲ್ಲಿ. ಸ್ತ್ರೀ ವೇಷ, ಪುಂಡುವೇಷ, ಕಿರೀಟ ವೇಷಗಳನ್ನು ನಿರ್ವಹಿಸುತ್ತಾ ಅನುಭವವನ್ನು ಗಳಿಸಿಕೊಂಡಿದ್ದರು. ಪುರಾಣ ಮತ್ತು ತುಳು ಪ್ರಸಂಗಗಳಲ್ಲಿ ಸಮಾನವಾಗಿ ಕಾಣಿಸಿಕೊಂಡರು.

ಕರ್ನಾಟಕ ಮೇಳದ ತಿರುಗಾಟದ ಸಂದರ್ಭದಲ್ಲಿ ಕಲ್ಲಾಡಿ ವಿಠಲ ಶೆಟ್ಟರ ಸೂಚನೆಯಂತೆ ಮಳೆಗಾಲದಲ್ಲಿ ಅನೇಕ ಬಾಲ ಕಲಾವಿದರಿಗೆ ನಾಟ್ಯ ತರಬೇತಿಯನ್ನು ನೀಡಿದ್ದರು ಬಾಯಾರು ರಘುನಾಥ ಶೆಟ್ಟರು. ಕರ್ನಾಟಕ ಮೇಳದಲ್ಲಿ ಸತತ ಮೂವತ್ತರೆಡು ತಿರುಗಾಟದ ನಂತರ ಬಾಯಾರು ರಘುನಾಥ ಶೆಟ್ಟಿ ಅವರು ಹತ್ತು ವರ್ಷಗಳ ಕಾಲ ಸುಂಕದಕಟ್ಟೆ ಮೇಳದಲ್ಲಿ ವ್ಯವಸಾಯ ಮಾಡಿದ್ದರು. ಅಲ್ಲಿಯೂ ಪುರಾಣ ಮತ್ತು ತುಳು ಪ್ರಸಂಗಗಳಲ್ಲಿ ವೇಷ ಮಾಡಲು ಅವಕಾಶವಾಗಿತ್ತು.

ಕಳೆದ ಎಂಟು ವರ್ಷಗಳಿಂದ ಕಲ್ಲಾಡಿ ದೇವಿಪ್ರಸಾದ ಶೆಟ್ಟರ ಸಂಚಾಲಕತ್ವದ ಕಟೀಲು ಮೇಳದಲ್ಲಿ ಕಲಾಸೇವೆ ಮಾಡುತ್ತಿದ್ದಾರೆ. ಅಲ್ಲದೆ ಕಟೀಲು ಒಂದನೇ ಮೇಳದ ಪ್ರಬಂಧಕರಾಗಿಯೂ, ಕಲಾವಿದರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ಕಲ್ಲಾಡಿ ಮನೆಯವರ, ಆಸ್ರಣ್ಣ ಬಂಧುಗಳ, ಸಹಕಲಾವಿದರ ಸಹಕಾರವನ್ನು ಸದಾ ನೆನಪಿಸುವ ಬಾಯಾರು ರಘುನಾಥ ಶೆಟ್ಟರು ಯಕ್ಷಗಾನ ವೇಷಭೂಷಣಗಳ ತಯಾರಿಕೆಯನ್ನೂ ಬಲ್ಲವರು. ಕಲ್ಲಾಡಿ ವಿಠಲ ಶೆಟ್ಟರ ಸೂಚನೆಯಂತೆ ಈ ವಿಚಾರದಲ್ಲಿ ತೊಡಗಿಸಿಕೊಂಡಿದ್ದರು. ಕಳೆದ ಇಪ್ಪತ್ತು ವರ್ಷಗಳಿಂದ ಈ ಕೆಲಸವನ್ನು ಮಾಡುತ್ತಿದ್ದಾರೆ. ಪ್ರಸ್ತುತ ಕಟೀಲು ಮೇಳದ ಸಂಚಾಲಕರಾದ ಕಲ್ಲಾಡಿ ಶ್ರೀ ದೇವಿಪ್ರಸಾದ ಶೆಟ್ಟರ ಸೂಚನೆಯಂತೆ ಮುನ್ನಡೆಯುತ್ತಿದ್ದಾರೆ.

ಜಾಹೀರಾತು 

ಬಾಯಾರು ರಘುನಾಥ ಶೆಟ್ಟರ ಐವರು ತಮ್ಮಂದಿರೂ ಯಕ್ಷಗಾನ ಕಲಾವಿದರು. ಬಾಯಾರು ರಮೇಶ ಶೆಟ್ಟಿ ಅವರು ಹವ್ಯಾಸಿ ಖ್ಯಾತ ಕಲಾವಿದರು. ಇವರು ಯಕ್ಷಗಾನದ ಹಿಮ್ಮೇಳ, ಮುಮ್ಮೇಳ ಕಲಾವಿದರಾಗಿ, ರಂಗ ಪ್ರಸಾಧನ ವಿಚಾರಗಳನ್ನೂ ಬಲ್ಲವರು. ಬಾಯಾರು ಶ್ರೀ ಜಗನ್ನಾಥ ಶೆಟ್ಟಿ ಅವರೂ ಕಲಾವಿದರು. ಬಾಯಾರು ಮೋಹನ ಶೆಟ್ಟಿ ಅವರು ಪ್ರಸ್ತುತ ಕಟೀಲು ಮೇಳದ ವೇಷಧಾರಿ. ಬಾಯಾರು ಶೇಖರ ಶೆಟ್ಟಿ ಅವರು ಅಧ್ಯಾಪಕರು. ಯಕ್ಷಗಾನ ಹಿಮ್ಮೇಳ, ಮುಮ್ಮೇಳ ಕಲಾವಿದರೂ ಆಗಿದ್ದಾರೆ. ಕಿರಿಯ ತಮ್ಮ ಬಾಯಾರು ಬಾಲಕೃಷ್ಣ ಶೆಟ್ಟಿ ಅವರು ಗಲ್ಫ್ ರಾಷ್ಟ್ರದಲ್ಲಿ ಉದ್ಯೋಗಿ. ಇವರೂ ಯಕ್ಷಗಾನ ವೇಷಧಾರಿ.

ಬಾಯಾರು ಶ್ರೀ ರಘುನಾಥ ಶೆಟ್ರ ಪತ್ನಿ ಶ್ರೀಮತಿ ಪುಷ್ಪ. ಶ್ರೀ ರಘುನಾಥ ಶೆಟ್ಟಿ – ಪುಷ್ಪ ದಂಪತಿಗಳಿಗೆ ಈರ್ವರು ಪುತ್ರಿಯರು. ಹಿರಿಯ ಪುತ್ರಿ ಶ್ರೀಮತಿ ಹೇಮಲತಾ. ಇವರ ಪತಿ ಶ್ರೀ ಅರುಣಕುಮಾರ ಶೆಟ್ಟಿ. ಇವರು ಕೃಷಿಕರು. ದ್ವಿತೀಯ ಪುತ್ರಿ ಶ್ರೀಮತಿ ಸುಮಲತಾ. ಇವರ ಪತಿ ಶ್ರೀ ಜಯಚಂದ್ರ ಶೆಟ್ಟಿ. ಇವರು ಕೃಷಿ ಮತ್ತು ಸ್ವಂತ ವ್ಯವಹಾರವನ್ನು ನಡೆಸುತ್ತಿದ್ದಾರೆ. ಹಿರಿಯ ಅನುಭವಿ ಕಲಾವಿದ ಶ್ರೀ ರಘುನಾಥ ಶೆಟ್ಟಿ ದಂಪತಿಗಳಿಗೆ, ಮನೆಯವರಿಗೆ ಶ್ರೀ ದೇವರು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ. ಇನ್ನಷ್ಟು ಕಲಾಸೇವೆಯನ್ನು ಮಾಡುವ ಅವಕಾಶವನ್ನು ನೀಡಲಿ ಎಂಬ ಹಾರೈಕೆಗಳು. 

ಲೇಖಕ: ರವಿಶಂಕರ್ ವಳಕ್ಕುಂಜ
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments