Thursday, November 21, 2024
Homeಯಕ್ಷಗಾನವಾಮನಮೂರ್ತಿ ಉಜಿರೆ ಅಶೋಕ ಭಟ್ಟರ ಯಕ್ಷಕಲಾಯಾನ

ವಾಮನಮೂರ್ತಿ ಉಜಿರೆ ಅಶೋಕ ಭಟ್ಟರ ಯಕ್ಷಕಲಾಯಾನ

ಸರಿಯಲ್ಲ ಎಂದು ಕಾಣಿಸಿದ್ದನ್ನು ನೇರವಾಗಿ ಹೇಳುವವರು. ನೋಡಲು ವಾಮನಮೂರ್ತಿ. ಯಕ್ಷಗಾನ ಕಲಾವಿದನಾಗಿ, ಸಂಘಟಕನಾಗಿ, ಭಾಷಣಕಾರನಾಗಿ, ತಾಳಮದ್ದಳೆ ಅರ್ಥಧಾರಿಯಾಗಿ, ನಿರೂಪಕನಾಗಿ ಇವರು ತ್ರಿವಿಕ್ರಮ. ತಾಳಮದ್ದಳೆ ಅರ್ಥಧಾರಿಯಾಗಿ ತನ್ನದೇ ಸ್ವತಂತ್ರ ಶೈಲಿಯನ್ನು ಬೆಳೆಸಿಕೊಂಡು ಪ್ರಸಿದ್ಧಿಯನ್ನು ಪಡೆದರೂ ಇವರ ಅರ್ಥಗಾರಿಕೆಯಲ್ಲಿ ಶೇಣಿ ಗೋಪಾಲಕೃಷ್ಣ ಭಟ್ಟರ ಅರ್ಥಗಾರಿಕೆಯ ಪ್ರಭಾವ ಇದೆ.

ಉಜಿರೆ ಅಶೋಕ ಭಟ್ಟರದು ಹವ್ಯಕ ಸಮಾಜದಲ್ಲಿ ಗೌರಿಮೂಲೆ ಜೋತಿಷ್ಯ ಕುಟುಂಬ, ವರಂಬುಡಿ ಮನೆತನ, ಒಂದು ಕಾಲದ ಸೀಮೆ ಗುರಿಕಾರರ ಮನೆತನ. ವರಂಬುಡಿ ಕವಲಿನಲ್ಲಿ ನೇರಳು ಮನೆ, ಕೃಷಿ ಪ್ರಧಾನ ಕುಟುಂಬ, ಅಜ್ಜ ಜೋತಿಷ್ಯ ಹೇಳುತ್ತಿದ್ದರು. ತಂದೆಯವರ ಹೆಸರು ನೇರಳು ಈಶ್ವರ ಭಟ್ಟರು ತಾಯಿ ಕಲ್ಯಾಣಿಯಮ್ಮ. 27-7-1964ರಲ್ಲಿ ಜನನ. 1980ರಲ್ಲಿ ಬಣ್ಣ ಹಚ್ಚಿದ್ದು. 40 ವರ್ಷದ ಅನುಭವ, ಪೂರ್ಣಕಾಲಿಕ ಮೇಳ ತಿರುಗಾಟ 7 ವರ್ಷ ಹೊಸನಗರ ಮೇಳದಲ್ಲಿ, ಆಮೇಲೆ ಬಡಗಿನ ಮೇಳಗಳಿಗೆ ಅತಿಥಿ ಕಲಾವಿದನಾಗಿ, ಅರುವ ಮೇಳ, ಸದಾಶಿವ ಮಹಾಗಣಪತಿ ಮೇಳಗಳಲ್ಲಿ ಪೂರ್ಣಕಾಲಿಕ ತಿರುಗಾಟವಲ್ಲ. ಎಲ್ಲ ತೆಂಕು ಬಡಗಿನ ಎರಡು ತಲೆಮಾರಿನ ಕಲಾವಿದರ ಒಡನಾಟ ಆಟ ಮತ್ತು ತಾಳಮದ್ದಳೆ ಎರಡರಲ್ಲೂ ಇತ್ತು.

ತಾಯಿಯ ತಂದೆ (ಅಜ್ಜ) ಹರಿಕಥೆ ಸುಬ್ರಾಯ ಭಟ್ಟ. ಹರಿಕಥೆ ಮಾಡಿ ಜೀವನ ಮಾಡಿದವರು. ಮತ್ತು ಆಶುಕವಿ. ತಾಯಿಯ ಸೋದರ ಮಾವಂದಿರು ದಿ| ವಾಟೆ ಕೇಶವ ಭಟ್ ಅದ್ಭುತ ಕವಿ, ಕನ್ನಡ ಮತ್ತು ಹವೀಕ ಭಾಷೆಯಲ್ಲಿ ಹಲವಾರು ಕವಿತೆಗಳನ್ನು ರಚಿಸಿದವರು. ಇನ್ನೊಬ್ಬ ಸೋದರಮಾವ ವಿ.ಮ. ಭಟ್ಟ ಅಡ್ಯನಡ್ಕ. ಶಿಶುಸಾಹಿತ್ಯದಲ್ಲಿ ಕೈಯಾಡಿಸಿದವರು ಮತ್ತು ಶಿಕ್ಷಕರು. ಉಜಿರೆ ಅಶೋಕ ಭಟ್ಟರ ಸೋದರಮಾವ ಅಡ್ಯನಡ್ಕ ಗಣಪತಿ ಭಟ್ ಸಂಘದಲ್ಲಿ ಮೇಲ್ಮಟ್ಟದ ಕಾರ್ಯಕರ್ತರು. ಅವರು ತುರ್ತುಪರಿಸ್ಥಿತಿಯಲ್ಲಿ ಜೈಲುವಾಸ ಮಾಡಿದವರು.

 “ಐದು ಜನ ಮಕ್ಕಳು. ಹಿರಿಯವಳು ಅಕ್ಕ. ಆಮೇಲೆ ನಾಲ್ಕು ಗಂಡು ಮಕ್ಕಳು. ಅಶೋಕ ಭಟ್ಟರು ಮಕ್ಕಳಲ್ಲಿ ನಾಲ್ಕನೆಯವರು. ಎಲ್ಲರೂ ಅವರವರ ವ್ಯವಹಾರದಲ್ಲಿ Settle ಆಗಿದ್ದಾರೆ. ಎಲ್ಲ ಕಾರ್ಯಕ್ರಮಕ್ಕೆ ಮನೆಯಲ್ಲಿ ಒಟ್ಟು ಸೇರುತ್ತೇವೆ. ತಂದೆಯವರು ಶ್ರಮಜೀವಿ ಆಗಿದ್ದರು. ಅವರ ಶ್ರಮದ ಮುಂದೆ ನಮ್ಮದು ಏನೂ ಅಲ್ಲ. ಆರ್ಥಿಕವಾಗಿ ನಾವು ಶ್ರೀಮಂತರೇನಲ್ಲ. ಹಾಗೆಂದು ತಂದೆಯವರು ತನ್ನ ಬಡತನವನ್ನು ಯಾರ ಮುಂದೆಯೂ ತೋಡಿಕೊಂಡವರಲ್ಲ. ಸ್ವಲ್ಪ ಖಡಕ್, ನೇರನುಡಿ ಅವರದು. ಅವರ ಈ ಗುಣವೂ ನನಗೆ ಬಂದದ್ದಿರಬಹುದು. ಅಥವಾ ಸಂಘದಿಂದ ಬಂದಿರಲೂಬಹುದು” ಎಂದು ಅಶೋಕ ಭಟ್ಟರು ಹೇಳುತ್ತಾರೆ.

ಉಜಿರೆ ಅಶೋಕ ಭಟ್ಟರು 2017ರಲ್ಲಿ ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ    ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಅದಲ್ಲದೆ ಅಜೆಕಾರು ಕಲಾಭಿಮಾನಿ ಬಳಗದ ಮುಂಬಯಿ ಯಕ್ಷರಕ್ಷಾ ಪ್ರಶಸ್ತಿ ಸೇರಿದಂತೆ ಸುಮಾರು 40ಕ್ಕೂ ಮಿಕ್ಕಿ    ಪ್ರಶಸ್ತಿ / ಸನ್ಮಾನಗಳು ದೊರಕಿವೆ.   ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿಯ ಮಾಜಿ ಸದಸ್ಯರೂ  ಆಗಿರುವ ಭಟ್ಟರು ಆಕಾಶವಾಣಿ     ಹಾಗೂ ದೂರದರ್ಶನದ ‘ಬಿ’ ಹೈಗ್ರೇಡ್ ಕಲಾವಿದರೂ ಹೌದು. ಉಜಿರೆ ಅಶೋಕ ಭಟ್ಟರಿಗೆ   ಯಕ್ಷಗಾನ ರಂಗದಲ್ಲಿ ಗುರುಗಳಾಗಿ  ನಾಟ್ಯಕ್ಕೆ ನರೇಂದ್ರ ಮಾಸ್ಟ್ರು ಎಂದೇ ಕರೆಯಲ್ಪಡುವ ಎಸ್. ಕೆ. ನರೇಂದ್ರ ಕುಮಾರ್ ಅವರು ಮಾರ್ಗದರ್ಶನ ಮಾಡಿದ್ದರು. ಅವರು ತೆಂಕುತಿಟ್ಟಿನ ಸಮಗ್ರ ನಾಟ್ಯಗಾರಿಕೆಯ ಅನುಭವಿ.


ಕೆ. ಗೋವಿಂದ ಭಟ್ಟರು ಕಾಲೇಜಿನ ವಿದ್ಯಾರ್ಥಿಗಳಿಗೆ ನಾಟ್ಯ ಕಲಿಸುವಾಗ ಅವರ ಹೆಜ್ಜೆಗಾರಿಕೆಯ ಪ್ರೇರಣೆಯೂ ಆಗಿತ್ತು. ಅರ್ಥಗಾರಿಕೆಗೆ ಗುರುಗಳು ಶೇಣಿಯವರು. ಮಾರ್ಗದರ್ಶನ ಅನೇಕರಿಂದ ಇರಬಹುದು. ಮೂಡಂಬೈಲು ಶಾಸ್ತ್ರಿಗಳು, ಪ್ರಭಾಕರ ಜೋಶಿ, ಸಾಮಗರು ಹೀಗೆ ಸಹಕಲಾವಿದರು ಅನೇಕರಿರಬಹುದು. ಆದರೆ ಆಕರ್ಷಣೆ ಮತ್ತು ಪ್ರೇರಣೆ ಶೇಣಿ ಗೋಪಾಲಕೃಷ್ಣ ಭಟ್ಟರಿಂದ. ಅಶೋಕ ಭಟ್ಟರು ಶೇಣಿಯವರನ್ನು ನೆನಪಿಸದೆ ತಾಳಮದ್ದಳೆ  ವೇದಿಕೆಯಲ್ಲಿ ಕುಳಿತುಕೊಳ್ಳುವುದಿಲ್ಲ. “ನನ್ನಲ್ಲಿ ಅವರಿಗೆ ತುಂಬಾ ವಾತ್ಸಲ್ಯ. 2002ರಲ್ಲಿ ನಿರ್ಮಿಸಿದ ಉಜಿರೆಯ ನನ್ನ ನೂತನ ಗೃಹಪ್ರವೇಶೋತ್ಸವಕ್ಕೆ ಬಂದು ತಾಳಮದ್ದಳೆಯಲ್ಲಿ ಭಾಗವಹಿಸಿದ್ದರು. ತಾಳಮದ್ದಳೆಯ ಮೊದಲು ಕಾರ್ಯಕ್ರಮದ ಕಲಾವಿದರ ಪರಿಚಯ ಮಾಡಲು ಶೇಣಿಯವರು ನನ್ನನ್ನೇ ಹೇಳುತ್ತಿದ್ದರು. ‘ನಮ್ಮ ಹುಡುಗ’ ಎಂಬ ಭಾವದಿಂದ ಹಾಗೂ ನಿರೂಪಣೆಯನ್ನು ಚೆನ್ನಾಗಿ ಮಾಡುತ್ತೇನೆ ಎಂಬ ಕಾರಣದಿಂದ ಅವರು ಈ ಕೆಲಸ ನನಗೆ ಒಪ್ಪಿಸುತ್ತಿದ್ದರು. ಇದೆಲ್ಲಾ ನನ್ನ ಬೆಳವಣಿಗೆಗೆ ಪೂರಕವಾಯಿತು” ಎಂದು ಅಶೋಕ ಭಟ್ ಹೇಳುತ್ತಾರೆ.

ಬನ್ನಿ, ಉಜಿರೆ ಅಶೋಕ ಭಟ್ಟರ ಜೊತೆ ಸ್ವಲ್ಪ ಮಾತಾಡೋಣ.

ಪ್ರಶ್ನೆ: ಯಕ್ಷಗಾನ ಕ್ಷೇತ್ರಕ್ಕೆ ಬರಲು ಮುಖ್ಯ ಪ್ರೇರೇಪಣೆ ಎಲ್ಲಿಂದ?
ಉಜಿರೆ: ಬಾಲ್ಯದಲ್ಲಿ ಆಟ ನೋಡುತ್ತಿದ್ದೆವು. ಹೆಚ್ಚಾಗಿ ಧರ್ಮಸ್ಥಳ ಮೇಳ ಮತ್ತು ಕಟೀಲು ಮೇಳದ ಆಟಗಳನ್ನು ನೋಡುತ್ತಿದ್ದೆವು. ನಮಗಾಗ ಆರ್ಥಿಕವಾಗಿ ಅನುಕೂಲವಿರಲಿಲ್ಲ. ಬದಲಾಗಿ ಬಡತನವಿತ್ತು. 1975ನೇ ಇಸವಿಯಲ್ಲಿ ತುರ್ತುಪರಿಸ್ಥಿತಿಯ ಸಮಯದಲ್ಲಿ ಆಗ ಔಷಧ ಸಿಂಪಡಿಸದ, ಅಡಿಕೆ ತೆಗೆಯದ ಸಣ್ಣ ತೋಟ. ರಾತ್ರಿಯ ಆಹಾರವಾಗಿ ಹುರುಳಿ ಮತ್ತು ಬಾಳೆಕಾಯಿ, ಗೆಣಸುಗಳನ್ನು ಉಪಯೋಗಿಸುತ್ತಿದ್ದೆವು. ಮಧ್ಯಾಹ್ನದ ಒಂದು ಊಟ ಮಾತ್ರ. ಕರ್ನಾಟಕದಿಂದ ಕೇರಳಕ್ಕೆ ಅಕ್ಕಿ ಬರುತ್ತಿರಲಿಲ್ಲ. ನಾವು ಗಡಿಪ್ರದೇಶದವರು. ಇಂತಹಾ ಬಡತನವೂ ಗೊತ್ತುಂಟು. ಆಗ ಬಡತನದಲ್ಲಿಯೂ ಸಂತೋಷ. ಆದರೂ ಆಟದ ನೆಲದ ಟಿಕೇಟಿಗೆ 50 ಪೈಸೆ. ಆಟಕ್ಕೆ ಅಪ್ಪ ಹಣ ಕೊಡುತ್ತಿರಲಿಲ್ಲ. ನಾವು ಸುತ್ತುಮುತ್ತ ಪರಿಸರದಲ್ಲಿ ಗೇರುಬೀಜ ಹೆಕ್ಕಿ ಹಣ ಸಂಪಾದಿಸಿ ಆಟಕ್ಕೆ ಹೋಗಿ ನೆಲದಲ್ಲಿ ಕುಳಿತುಕೊಂಡು ಆಟ ನೋಡುತ್ತಿದ್ದೆವು. ರಾತ್ರಿ ಎರಡು ಗಂಟೆಯ ಮೇಲೆ ಬಳ್ಳಿಯನ್ನು ದಾಟಿ ಆರಾಮ ಕುರ್ಚಿಗೆ ಹೋಗಿ ಕುಳಿತುಕೊಳ್ಳುತ್ತಿದ್ದೆವು. ಹೀಗೆ ಧರ್ಮಸ್ಥಳ ಮೇಳದ ಆಟ ಮತ್ತು ಕಟೀಲು ಮೇಳದ ಆಟವನ್ನು ನೋಡುತ್ತಾ ಇದ್ದುದು ಕಲಾಸಕ್ತಿಗೆ ಪ್ರೇರಣೆಯಾಯಿತು.

1975-85ರ ಸಮಯದಲ್ಲಿ ಯಕ್ಷಗಾನ ಬಯಲಾಟಗಳಲ್ಲಿ ಕಾಣಿಸುತ್ತಿದ್ದ ರಮ್ಯಾದ್ಭುತ ಸನ್ನಿವೇಶಗಳು ಈಗ ಕಾಣಲಿಕ್ಕೆ ಸಿಗುವುದಿಲ್ಲ. ನಾನು ದೂರುವುದಲ್ಲ. ಆಗಿನ ರಸ ಸನ್ನಿವೇಶಗಳು, ಗತ್ತು ಗಮ್ಮತ್ತು ವೈಭವಗಳು ಅಷ್ಟು ಆಕರ್ಷಕವಾಗಿತ್ತು. ಬಣ್ಣದ ಮಾಲಿಂಗ, ತ್ರಿವಿಕ್ರಮ ಶೆಣೈ, ಕುಂಞಣ್ಣ ಶೆಟ್ಟಿ, ಕಾಟುಕುಕ್ಕೆ ಕುಂಞರಾಮ ಮಣಿಯಾಣಿ, ಚಂದ್ರಗಿರಿ ಅಂಬು, ಪಕಳಕುಂಞ ಕೃಷ್ಣ ನಾೈಕ ಹೀಗೆ ಒಂದೊಂದು ಹೆಸರು ಹೇಳಿದರೆ ಆ ಬಣ್ಣದ ವೇಷಧಾರಿಗಳ ಅದ್ಭುತ ದೃಶ್ಯಗಳು, ಆಗಿನ ಚಂಡ-ಮುಂಡರ ಜೋಡಿ, ನಾರಾಯಣ ಹೆಗ್ಡೆ- ಎಂಪೆಕಟ್ಟೆಯವರ ಮಧು-ಕೈಟಭರ ಜೋಡಿ, ಮಂಜೇಶ್ವರ ಜನಾರ್ದನ- ಪುತ್ತೂರು ಕೃಷ್ಣ ಭಟ್ಟರ ಮಧು-ಕೈಟಭರ ಜೋಡಿಯ ವೇಷಗಳನ್ನೆಲ್ಲಾ ಮೆಲುಕು ಹಾಕುವಾಗ ನಮಗೆ ಈಗ ಆ ಮಟ್ಟಕ್ಕೆ ನಾವು ಏರಲು ಕಷ್ಟವಾಗುತ್ತಿದೆಯೋ ಎಂದು ಅನಿಸುತ್ತದೆ. ಬಲಿಪರ ಕಪ್ಪು ವರ್ಣದ ತಾರಸ್ಥಾಯಿ, ಕಡತೋಕರ ಬಳಿ ಐದು ಶೃತಿ, ಕಿರಾತ ಹೊರಡುವಾಗ ಸುಮಾರು ಹತ್ತಕ್ಕೂ ಹೆಚ್ಚು ಸಂಖ್ಯೆಯ ಕಿರಾತಪಡೆ. ಮೊದಲಾದುವುಗಳನ್ನೆಲ್ಲಾ ನೋಡುತ್ತಾ ನೋಡುತ್ತಾ ನಾನು ಬೆಳೆದವನಾದ ಕಾರಣ ಸಹಜವಾಗಿಯೇ ಯಕ್ಷಗಾನದತ್ತ ಆಕರ್ಷಣೆಯುಂಟಾಯಿತು.

ಆಮೇಲೆ ಉಜಿರೆಯ ಕಾಲೇಜಿಗೆ ಬಂದೆ. ಅಲ್ಲಿ ಬೆಳಾಲು ಸಾಂತಪ್ಪ ಅಂತ ಅಟೆಂಡರ್ ಇದ್ದರು. ಧರ್ಮಸ್ಥಳದ ನರೇಂದ್ರ ಮಾಸ್ಟ್ರು ನನಗೆ ಬಹಳ ಅವಕಾಶ ಕೊಟ್ಟವರು. ಅವರ ಎಲ್ಲಾ ಕಾರ್ಯಕ್ರಮಗಳಿಗೂ, ಧರ್ಮಸ್ಥಳ ಸಣ್ಣ ಮೇಳದ ತಂಡಕ್ಕೆ ನನ್ನನ್ನು ಕರೆದುಕೊಂಡು ಹೋಗಿದ್ದರು. ಪದ್ಯಾಣ ಕೇಶವ ಭಟ್ಟರು ಕೂಡಾ  ಪ್ರೋತ್ಸಾಹಿಸಿದ್ದರು. ಹಾಗೂ ನನಗೆ ಹೆಚ್ಚು ಅವಕಾಶ ಕೊಟ್ಟವರು ಶ್ರೀ ಭುಜಬಲಿ ಧರ್ಮಸ್ಥಳ. ಅವರ ಎಲ್ಲಾ ಪ್ರದರ್ಶನದಲ್ಲಿ ಅವಕಾಶ ಕೊಟ್ಟರು. ಆಕಾಶವಾಣಿ ತಂಡಕ್ಕೆ ಸೇರಿಸಿದರು. ಸ್ವಾಗತ, ಧನ್ಯವಾದ, ನಿರೂಪಣೆಗಳಿಗೂ ಅವಕಾಶ ಕೊಟ್ಟರು. ಹಾಗೆಯೇ ಧರ್ಮಸ್ಥಳದ ಸಂಪರ್ಕ ಇಲ್ಲಿಯ ಕಾಲೇಜಿನಲ್ಲಿ ಇದ್ದಂತಹಾ ಸಾಂಸ್ಕೃತಿಕ ಚಟುವಟಿಕೆಗಳು ನನ್ನನ್ನು ಕಲಾವಿದನಾಗಿ ಬೆಳೆಸಿದುವು. ಬೆಳಾಲು ಸಾಂತಪ್ಪ, ಕುರಿಯ  ವಿಠಲ ಶಾಸ್ತ್ರಿಗಳ ಶಿಷ್ಯ. ಅವರು ಯಕ್ಷಗಾನವನ್ನು ಬಿಟ್ಟು ಧರ್ಮಸ್ಥಳ ಕಾಲೇಜಿನಲ್ಲಿ ಅಟೆಂಡರ್ ಆಗಿ ಸೇರಿದ್ದರು. ಎಲ್ಲಾ ನಾಟ್ಯ, ನಡೆಗಳು ಗೊತ್ತಿದ್ದುವು. ಕಾಲೇಜು ಮಕ್ಕಳಿಗೆ ಅವರೇ ಯಕ್ಷಗಾನ ಕಲಿಸುತ್ತಿದ್ದರು. ರಾತ್ರಿಯ ಹವ್ಯಾಸಿ ಆಟಗಳಿಗೆ ಕರೆದುಕೊಂಡು ಹೋಗುತ್ತಿದ್ದರು. ಆಗ ನಮಗೆ ದೇವೇಂದ್ರ ಬಲ, ಅಭಿಮನ್ಯು ಸಾರಥಿ ಇಂತಹಾ ಪಾತ್ರಗಳನ್ನು ಮಾಡುತ್ತಿದ್ದೆವು. ಆಗ ನಮಗೆ ಎರಡು ರೂಪಾಯಿ, ಐದು ರೂಪಾಯಿ ಖರ್ಚಿಗೆ ಸಿಗುತ್ತಿತ್ತು. ಅದೊಂದು ಆಕರ್ಷಣೆಯೂ ಆಗಿತ್ತು.


ಶೇಣಿಯವರ ಒಡನಾಟದಿಂದ ಉತ್ತರ ಕನ್ನಡ, ಸಾಗರ ಕಡೆಗಳಿಗೆ ಅವರು ನನ್ನನ್ನು ಕರೆದುಕೊಂಡು ಹೋಗುತ್ತಿದ್ದರು. ಅಲ್ಲಿ ನನಗೆ ಸಣ್ಣಪುಟ್ಟ ಪಾತ್ರಗಳಿಗೆ ಅರ್ಥ ಹೇಳುವ ಅವಕಾಶ ಕೊಡಿಸುತ್ತಿದ್ದರು. ಕೊನೆಗೆ ಸಣ್ಣ ಸಂಭಾವನೆಯನ್ನೂ ಕೊಡಿಸುತ್ತಿದ್ದರು. ಯಾಕೆಂದರೆ ನನ್ನ ಆರ್ಥಿಕ ಸ್ಥಿತಿ ಶೇಣಿಯವರಿಗೆ ಗೊತ್ತಿತ್ತು.


ಇದರೊಂದಿಗೆ ಧ್ವನಿಸುರುಳಿಗಳ (ಕ್ಯಾಸೆಟ್) ಸಂಯೋಜನೆ ಮಾಡುತ್ತಿದ್ದೆ. ಕಲಾವಿದರ ಜೊತೆ ನಾನು ಆತ್ಮೀಯವಾಗಿದ್ದರಿಂದ ಕ್ಯಾಸೆಟ್ ನಿರ್ಮಾಪಕರು ನನ್ನ ಮೂಲಕವಾಗಿ ಕಲಾವಿದರನ್ನು ಸಂಘಟಿಸುತ್ತಿದ್ದರು. ಶಿಶಿಲದಲ್ಲಿ ಒಮ್ಮೆ ಶೇಣಿಯವರಿಗೂ ಸಾಮಗರಿಗೂ ಭೀಷ್ಮ-ಕೃಷ್ಣ ಜಟಾಪಟಿಯಾಗಿ ತಾಳಮದ್ದಳೆ ನಿಂತಿತ್ತು. ಪುನಃ ಅವರನ್ನು ಪೆರ್ಲದಲ್ಲಿ ಬಲಿ-ವಾಮನರಾಗಿ ತಾಳಮದ್ದಳೆಯಲ್ಲಿ ಜೊತೆಯಾಗಿ ಅರ್ಥ ಹೇಳುವಂತೆ ಮಾಡಿದುದರಲ್ಲಿ ನನ್ನ ಪಾತ್ರವೂ ಇತ್ತು ಎಂದು ಹೇಳಲು ಹೆಮ್ಮೆಯಿದೆ. ನನ್ನ ತಾಳಮದ್ದಳೆಗೆ ಇಬ್ಬರೂ ಜೊತೆಯಾದರು. ಹಾಗಾಗಿ ತಾಳಮದ್ದಳೆಗಳು ಆಗಬೇಕಾದರೆ ಕಲಾವಿದರನ್ನು ಸಂಘಟಿಸಲು ನನ್ನಲ್ಲಿ ಹೇಳುತ್ತಿದರು. ನನಗೂ ಸಣ್ಣ ಅರ್ಥ, ಕವರು ಸಿಗುತ್ತಿತ್ತು. ನಾನು ಯಾವತ್ತೂ ತಾಳಮದ್ದಳೆಯನ್ನು Contract ಆಗಿ ತೆಗೆದುಕೊಳ್ಳುವ ಕ್ರಮವಿರಲಿಲ್ಲ. ಈಗಲೂ ನಾನು Contract ಪದ್ಧತಿಯಿಂದ ಸಂಘಟಿಸುತ್ತಾ ಇಲ್ಲ. ತಾಳಮದ್ದಳೆ ಮಾಡಿಸುವವರಲ್ಲಿಯೇ ಕಲಾವಿದರಿಗೆ ಸಂಭಾವನೆ ಕೊಡಿಸುತ್ತೇನೆ. ನನಗೂ ಒಂದು ಸಂಭಾವನೆ ಸಿಗುತ್ತಿತ್ತು. ಆಗ ವರ್ಷಕ್ಕೆ ಹತ್ತಿಪ್ಪತ್ತು ಹವ್ಯಾಸೀ ಆಟಗಳನ್ನು ಸಂಯೋಜನೆ ಮಾಡುತ್ತಿದ್ದೆ. ಅದು ನನ್ನ ಬದುಕಿಗೆ ಒಂದು ಆಧಾರವಾಗಿತ್ತು. ಹವ್ಯಾಸೀ ಆಟಗಳು, ಭುಜಬಲಿಯವರ ಆಕಾಶವಾಣಿ ಬಳಗ, ಹಾಗೆಲ್ಲಾ ಅವಕಾಶಗಳು ಸಿಕ್ಕಿತು.

ಜೀವನೋಪಾಯಕ್ಕಾಗಿ ಜೀನಸು ಅಂಗಡಿಗಳ ಲೆಕ್ಕ ಬರೆಯುವುದು, ಸಿಂಡಿಕೇಟ್ ಬ್ಯಾಂಕ್‍ನ ಪಿಗ್ಮಿ ಸಂಗ್ರಾಹಕನಾಗಿ ಕೆಲಸ ಮಾಡುವುದು, ದಿನಸಿ ಅಂಗಡಿ ವ್ಯಾಪಾರಿಯಾಗಿ ಹೀಗೆ ಹತ್ತು ಹಲವು ಕೆಲಸ ಮಾಡಿ ನಷ್ಟವಾಗಿ ಕೈ ಸುಟ್ಟುಕೊಂಡಿದ್ದೇನೆ.
ಸ್ವಂತ ವ್ಯಾಪಾರ ಮಾಡಿ ಸಾಲ ನೀಡಿ ನಷ್ಟ ಅನುಭವಿಸಿ ವ್ಯಾಪಾರವನ್ನು ನಿಲ್ಲಿಸಬೇಕಾಗಿ ಬಂತು. ಕುಬಣೂರು ಶ್ರೀಧರ ರಾಯರ ಪ್ರೇರಣೆಯಿಂದ ದಿಲೀಪ್ ಸುವರ್ಣರ ಸುರತ್ಕಲ್ ಸದಾಶಿವ ಮಹಾಗಣಪತಿ ಮೇಳದಲ್ಲಿ ತಿರುಗಾಟ ಮಾಡಿದ್ದೇನೆ. ಅರುವ ನಾರಾಯಣ ಶೆಟ್ಟರ ಮೇಳದಲ್ಲಿಯೂ ಅತಿಥಿ ಕಲಾವಿದನಾಗಿ ತಿರುಗಾಟ ಮಾಡಿದ್ದೇನೆ. ಹೀಗೆ ಕೆಲವು ಮೇಳಗಳಲ್ಲಿ ಬಿಡು ಆಟಗಳಿಗೆ ಹೋಗುತ್ತಿದ್ದೆ. ಹವ್ಯಾಸಿ ಆಟಗಳು ಹೊರಗಿನಿಂದ ತುಂಬಾ ಸಿಕ್ಕಿತು. ರಾಘವದಾಸರ ಭಾರತೀ ಕಲಾ ಆರ್ಟ್ಸ್, ದೇವಕಾನ ಕೃಷ್ಣ ಭಟ್ಟರ ಗಣೇಶ ಕಲಾವೃಂದ ಹೀಗೆ ಭಾಗವಹಿಸುವ ಅವಕಾಶ ಸಿಕ್ಕಿತು. ತಾಳಮದ್ದಳೆಗಳೂ ಸಿಕ್ಕಿತು. ಹಿರಿಯ ಕಲಾವಿದರ ಒಡನಾಟ ಹಾಗೂ ಸಂಘಟಕನಾದುದರಿಂದ ನನಗೂ ತಾಳಮದ್ದಳೆಯ ಅವಕಾಶ ಸಿಕ್ಕಿತು.

ಪದ್ಯಾಣ ಶಂಕರನಾರಾಯಣ ಭಟ್ಟರ ಮೂಲಕ ಕುರಿಯ ಮನೆತನದ ಸಂಬಂಧ ಬೆಳೆಯಿತು. 1998ರಲ್ಲಿ ಕುರಿಯ ವಿಠಲ ಶಾಸ್ತ್ರಿಗಳ ಹೆಸರಿನ ಪ್ರತಿಷ್ಠಾನ ಮಾಡಿದೆ. ಅಲ್ಲಿಂದ ನನ್ನ ಸಂಘಟನೆಯ ವಿಸ್ತಾರ ವಿರಾಟ್ ಸ್ವರೂಪವನ್ನು ಪಡೆಯಿತು. ಪ್ರಾರಂಭದ ವರ್ಷದಲ್ಲಿಯೇ ಶೇಣಿ, ದೊಡ್ಡ ಸಾಮಗ, ನೆಡ್ಲೆಯವರಿಗೆ ಪ್ರಶಸ್ತಿ ಪ್ರದಾನ, ಹದಿನೈದು ಮಂದಿ ಕುರಿಯದವರ ಒಡನಾಡಿಗಳಿಗೆ ಸನ್ಮಾನ. ಇತ್ತೀಚೆಗೆ ಪ್ರತಿಷ್ಠಾನದ ವಿಂಶತಿ ಸಂಭ್ರಮವೂ ನಡೆಯಿತು. ಒಟ್ಟು ಈ ಇಪ್ಪತ್ತು ವರ್ಷಗಳಲ್ಲಿ ಸುಮಾರು 200 ಮಂದಿ ಕಲಾವಿದರಿಗೆ ಗೌರವಧನ ಸಹಿತ ಸನ್ಮಾನಗಳು ಹಾಗೂ 25 ಮಂದಿಗೆ ಕುರಿಯ ಪ್ರಶಸ್ತಿಪ್ರದಾನ, ಯಕ್ಷಗಾನ  ಸಂಘಟಕರಿಗೆ ಸನ್ಮಾನ ಇಂತಹಾ ಕಾರ್ಯಕ್ರಮಗಳನ್ನು ಪ್ರತಿಷ್ಠಾನದ ಹೆಸರಿನಲ್ಲಿ ಕುರಿಯ ಮನೆಯವರ ಸಹಕಾರದಲ್ಲಿ, ಕಲಾಪೋಷಕರ, ದಾನಿಗಳ ಸಹಕಾರದಿಂದ, ಸಂಘ ಸಂಸ್ಥೆಗಳ ಸಹಕಾರದಲ್ಲಿ ಮಾಡಲಾಗಿದೆ. ಎಲ್ಲಕ್ಕಿಂತಲೂ ಮುಖ್ಯವಾಗಿ ನಮ್ಮ ಪ್ರತಿಷ್ಠಾನದ ಸಂರಕ್ಷಕರು ಪೂಜ್ಯ ಶ್ರೀ ವೀರೇಂದ್ರ ಹೆಗ್ಗಡೆಯವರು. ಅವರು ಈ ಪ್ರತಿಷ್ಠಾನಕ್ಕೆ ಬೆನ್ನೆಲುಬಾಗಿ ನಿಂತಿದ್ದಾರೆ. ಕೀಲಾರು ಶ್ರೀ ಗೋಪಾಲಕೃಷ್ಣಯ್ಯ ಪ್ರತಿಷ್ಠಾನವು ಈ ಕಾರ್ಯಕ್ರಮಗಳಿಗೆ ದೊಡ್ಡ ಮಟ್ಟಿನ ಸಹಕಾರವನ್ನು ಮಾಡುತ್ತಿದೆ.


2006ರಲ್ಲಿ ಹೊಸನಗರ ಮೇಳದ ಸಂಚಾಲಕನಾದೆ. ನನ್ನ ಈ ಸಂಘಟನೆ ಪ್ರತಿಷ್ಠಾನದ ಅನುಭವ ಇದನ್ನೆಲ್ಲಾ ಕಂಡು ಡಾ| ಟಿ. ಶ್ಯಾಮ ಭಟ್ಟರು ನನ್ನನ್ನು ವ್ಯವಸ್ಥಾಪಕ ಮತ್ತು ಮುಖ್ಯ ವೇಷಧಾರಿಯಾಗಿ ನಿಯುಕ್ತಿಗೊಳಿಸಿದರು. ನನ್ನನ್ನು ಒಬ್ಬ ಪೂರ್ಣಕಾಲಿಕ ಕಲಾವಿದನಾಗಿ ರೂಪುಗೊಳ್ಳುವಂತೆ ಮಾಡಿದುದರಲ್ಲಿ ಟಿ. ಶ್ಯಾಮ ಭಟ್ಟರ ಕೃಪಾದೃಷ್ಟಿ ಇತ್ತು.
ಮೇಳದ ಅನುಭವಗಳಿಂದ ಅನುಕೂಲ ಪಡೆದ ನನಗೆ ಮೇಳದ ಜವಾಬ್ದಾರಿಯಿಂದ ಮುಕ್ತನಾದ ಮೇಲೂ ನನಗೆ ಕಾರ್ಯಕ್ರಮದ ಸಂಖ್ಯೆ ಹೆಚ್ಚಾಯಿತು. ತೆಂಕಿನ ಆಟಗಳು, ಬಡಗಿನ ಆಟಗಳು ಮತ್ತು ತಾಳಮದ್ದಳೆಗಳಲ್ಲದೆ ಅನೇಕ ಸಭೆ, ಸಮಾರಂಭ, ಕಮ್ಮಟ, ಗೋಷ್ಠಿಗಳಲ್ಲಿ ಭಾಗವಹಿಸುವ ಅವಕಾಶ ಸಿಕ್ಕಿದೆ. ಇದರ ನಡುವೆ ನಾನು ಒಂದು ಅವಧಿಗೆ ಯಕ್ಷಗಾನ ಅಕಾಡಮಿಯ ಸದಸ್ಯನಾಗಿಯೂ ಕೆಲಸ ಮಾಡಿದ್ದೇನೆ.


ನಾನು ಈಗಲೂ ಸಮರ್ಥವಾಗಿ ನಾಟ್ಯವನ್ನು ಬಲ್ಲ ವೃತ್ತಿಪರ ಕಲಾವಿದನೆಂದು ಹೇಳಿಕೊಳ್ಳುವುದಿಲ್ಲ. ಅಕಾಡಮಿಕ್ ಆಗಿ ಒಂದು ಕಮ್ಮಟ, ಪ್ರದರ್ಶನಕ್ಕೋ ನಾನು ಒಬ್ಬ ನೃತ್ಯಗಾರ ಅಲ್ಲ. ಸಮರ್ಥವಾಗಿ ಅಭಿನಯಿಸಿ ತೋರಿಸುವ ಕಲಾವಿದ ಅಲ್ಲ. ವೇಷಕ್ಕೆ ಬೇಕಾದಷ್ಟು ರಂಗಸ್ಥಳದಲ್ಲಿ ಅಭಿನಯಿಸುತ್ತೇನೆ. ಹಿಮ್ಮೇಳದವರು ನನ್ನ ಮೇಲಿನ ಪ್ರೀತಿಯಿಂದ ನನ್ನ ದೌರ್ಬಲ್ಯವನ್ನು ಕಾಣದಂತೆ ಮರೆಸುತ್ತಾರೆ. ನಾನು ಮಾತುಗಾರನಾಗಿ ರಂಗದಲ್ಲಿ ಗುರುತಿಸಲ್ಪಟ್ಟವನು. ಆದರೆ ಹಿರಿಯರ ಒಡನಾಟದಲ್ಲಿ ಯಕ್ಷಗಾನವನ್ನು ಅಕಾಡಮಿಕ್ ಆಗಿ ಒಂದು ಶಾಸ್ತ್ರೀಯ ಚೌಕಟ್ಟಿನಲ್ಲಿ ವಿವೇಚಿಸುವ, ವಿಮರ್ಶಿಸುವ ಮತ್ತು ನಿರ್ದೇಶಿಸುವ ತಕ್ಕಮಟ್ಟಿನ ಜ್ಞಾನ ಹಿರಿಯರಾದ ನೆಡ್ಲೆ ನರಸಿಂಹ ಭಟ್ಟರು, ಕೆ. ಗೋವಿಂದ ಭಟ್, ಬಲಿಪರ ಒಡನಾಟದಿಂದ ನನಗೆ ಬಂದಿದೆ. ಆದುದರಿಂದ ನನ್ನ ವಿಮರ್ಶೆ ಕಟುವಾಗಿದ್ದರೂ ಹಿರಿಯ ಕಲಾವಿದರೂ ಸ್ವೀಕರಿಸುತ್ತಾರೆ. 1990 ರಿಂದ 2005ರ ವರೆಗೆ 15 ವರ್ಷಗಳ ಕಾಲ ಉಜಿರೆ ಕಾಲೇಜಿನ ಯಕ್ಷಗಾನ ತಂಡದ ನಿರ್ದೇಶಕನಾಗಿದ್ದೆ. ನಾನು ಗುರು ಅಂತ ಹೇಳಿಕೊಳ್ಳುವುದಿಲ್ಲ. ಕೇವಲ ನಿರ್ದೇಶಕ ಅಷ್ಟೆ. ಅಷ್ಟೂ ವರ್ಷಗಳಲ್ಲಿ ಮಂಗಳೂರು ವಿಶ್ವವಿದ್ಯಾಲಯದ ಮಟ್ಟದಲ್ಲಿ ನಿರಂತರ ಪ್ರಥಮ ಬಹುಮಾನ ಮತ್ತು ವೈಯುಕ್ತಿಕ ಪ್ರಶಸ್ತಿಗಳು ಬಂದಿವೆ. ಅಲ್ಲಿ ತರಬೇತಿ ಕೊಡುವಾಗ ಅದು ನನ್ನ ಬೆಳವಣಿಗೆಗೂ ಪೂರಕವಾಯಿತು. ನನಗೂ ಬೆಳೆಯಲು ಅವಕಾಶವಾಯಿತು. ವೃತ್ತಿಪರ ಹಿಮ್ಮೇಳವನ್ನೂ ಕರೆಯುತ್ತಿದುದರಿಂದ ನನಗೂ ಕಲಿಯಲು ಅವಕಾಶವಾಯಿತು.


ಮುಂಬಯಿ ಪ್ರವಾಸದಲ್ಲಿ ಕರ್ಗಲ್ಲು ವಿಶ್ವೇಶ್ವರ ಭಟ್ಟರ, ನೆಡ್ಲೆ ನರಸಿಂಹ ಭಟ್ಟರ ಒಡನಾಟವೂ ಕಲಿಯುವುದಕ್ಕೆ ಅವಕಾಶವಾಯಿತು. ಹೀಗೆ ಹಲವರ ಒಡನಾಟದಿಂದ ನಾನು ವೃತ್ತಿಪರರ ಸಾಲಿನಲ್ಲಿ ಗುರುತಿಸಲ್ಪಟ್ಟೆ. ಹೊರತು ನಾನು ದೊಡ್ಡ ಕಲಾವಿದ ಅಂತ ಹೇಳುವುದಿಲ್ಲ. ಆದರೆ ಜನ ಆ ಸಾಲಿನಲ್ಲಿ ಗುರುತಿಸಿದರು. ನಾನು ಎಲ್ಲ ವಿಭಾಗದ ಅರ್ಥವನ್ನು ಹೇಳುತ್ತೇನೆ. ಸ್ತ್ರೀ ಪಾತ್ರವೂ ಹೇಳಿದ್ದೇನೆ. ಆದರೆ ಅದರಲ್ಲಿ ಸಮರ್ಥನಲ್ಲ. ಶೇಣಿ, ಸಾಮಗರ ಜೊತೆ ಹಾಸ್ಯಪಾತ್ರ ಮಾಡಿದ್ದೆ. ಉಳಿದಂತೆ ಎಲ್ಲಾ ಪಾತ್ರಗಳ ಅರ್ಥ ಹೇಳಿದ್ದೇನೆ. ಸ್ತ್ರೀ ಪಾತ್ರದಲ್ಲಿ ಒಲವು ಕಡಿಮೆ. ದೊಡ್ಡ ಅಗರಿ ಭಾಗವತರಿಂದ ತೊಡಗಿ ಈಗಿನ ವರೆಗೆ. ದೊಡ್ಡ ಅಗರಿಯವರ ಪದಕ್ಕೆ ಅರ್ಥ ಹೇಳಿದ್ದೇನೆ.
ಸದ್ಯ ಯಕ್ಷಗಾನವೇ ಪೂರ್ಣಕಾಲಿಕ ವೃತ್ತಿ. ನಾನು ಸಂಸಾರಿಯಲ್ಲ. ಬ್ರಹ್ಮಚಾರಿ. ಹಾಗಾದ ಕಾರಣ ದೊಡ್ಡ ಕೌಟುಂಬಿಕ ಸಮಸ್ಯೆ ಇಲ್ಲ. ಎರಡು ಜನ ಅಣ್ಣಂದಿರು, ಒಬ್ಬ ತಮ್ಮ,, ಹಿರಿಯಕ್ಕ, ಅಕ್ಕನ ಮಕ್ಕಳಿಗೂ ಮದುವೆಯಾಗಿದೆ. ಒಂದು ಕುಟುಂಬ ನಿರ್ವಹಣೆಗೆ ಬೇಕಾದ ಕೃಷಿ ಇದೆ.

ಪ್ರಶ್ನೆ: ತಾಳಮದ್ದಳೆಯ ಆಸಕ್ತಿ ಹೇಗೆ ಬೆಳೆಯಿತು?
ಉಜಿರೆ: ತಾಳಮದ್ದಳೆ ಮತ್ತು ಯಕ್ಷಗಾನ ವೇಷಧಾರಿ ಇವೆರಡರಲ್ಲಿ ತಾಳಮದ್ದಳೆ ನನಗೆ ಹೆಚ್ಚು ಪ್ರಿಯ ಮತ್ತು ಅದರಲ್ಲಿ ಆಕರ್ಷಣೆಯೂ ಇತ್ತು. ಶೇಣಿಯವರ ಹಲವಾರು ರಸ ಸನ್ನಿವೇಶ ನಿರ್ಮಾಣದ ವೈಖರಿಯಿಂದ ನಾನು ತಾಳಮದ್ದಳೆಗೆ ಆಕರ್ಷಿತನಾದೆ.
ಹೈಸ್ಕೂಲ್ ದಿನಗಳಿಂದಲೇ ಪ್ರತಿಯೊಂದು ಡಿಬೇಟ್, ಚರ್ಚೆ, ಭಾಷಣಗಳಲ್ಲೆಲ್ಲಾ ಭಾಗವಹಿಸುತ್ತಿದ್ದೆ. ಶಾಲಾ ಕಾಲೇಜುಗಳಲ್ಲಿ ಆಗುವ ಮಂತ್ರಿಮಂಡಲಗಳಲ್ಲಿ ಹೆಚ್ಚಾಗಿ ವಿರೋಧಪಕ್ಷದ ನಾಯಕನಾಗುತ್ತಿದ್ದೆ. ನಾನು ಹೆಚ್ಚಾಗಿ ಚರ್ಚಾಪ್ರಿಯನಾದುದರಿಂದ ತಾಳಮದ್ದಳೆಯ ವಾದಗಳನ್ನು ಕೇಳಿ ಆಕರ್ಷಣೆಯುಂಟಾಯಿತು. ಕಾಲೇಜಿನ ಎಟೆಂಡರ್ ಸದಾಶಿವ ಶೆಟ್ಟರು ‘‘ಈರ್ ಈತ್ ಚರ್ಚೆ ಮಲ್ಪುವರ್ ಮಾರಾಯರೆ, ತಾಳಮದ್ದಳೆಗ್ ಬಲೆ’’ ಅಂತ ಹುರಿದುಂಬಿಸಿದರು. ಆದ್ದರಿಂದ ನಾನು ಪಿಯುಸಿ ಓದುತ್ತಿರುವಾಗಲೇ ನನ್ನ 16-17ನೇ ವಯಸ್ಸಿನಲ್ಲಿ ಉಜಿರೆಯ ಯಕ್ಷಗಾನ ಸಂಘಕ್ಕೆ ವಾರಕ್ಕೊಮ್ಮೆ ನಡೆಯುವ ತಾಳಮದ್ದಳೆಯಲ್ಲಿ ಭಾಗವಹಿಸಲು ಪ್ರಾರಂಭಿಸಿದೆ. ಅಲ್ಲಿಂದ ಆಸಕ್ತಿ ಬೆಳೆಯಿತು.

ಅದರೊಡನೆಯೇ ಕಾಲೇಜಿನಲ್ಲಿ ಬೆಳಾಲು ಶಾಂತಪ್ಪರು ಮತ್ತು ಧರ್ಮಸ್ಥಳದ ನರೇಂದ್ರ ಮಾಸ್ತರರು ನಮಗೆ ಕಾಲೇಜ್ ಡೇಗೆ ತರಬೇತಿ ಕೊಡಲು ಬರುತ್ತಿದ್ದರು. ನನ್ನ ಮಾತುಗಾರಿಕೆ ಮತ್ತು ವೇಷಗಾರಿಕೆ ಒಟ್ಟೊಟ್ಟಿಗೇ ಬೆಳೆಯಿತು. ಬೆಳಾಲು ಶಾಂತಪ್ಪರು ಮತ್ತು ನರೇಂದ್ರ ಮಾಸ್ತರರ ಒಟ್ಟಿಗೆ ಹವ್ಯಾಸಿ ಆಟಗಳಲ್ಲಿ ಮತ್ತು ಧರ್ಮಸ್ಥಳದ ಸಣ್ಣ ಮೇಳದಲ್ಲಿ ಅವಕಾಶ ಸಿಕ್ಕಿತು. ನರೇಂದ್ರ ಮಾಸ್ತರರು ನನಗೆ ಹೆಜ್ಜೆಗಾರಿಕೆಯನ್ನು ಕಲಿಸಿದರು. ಪದ್ಯಾಣ ಕೇಶವ ಭಟ್ಟರು, ಜನಾರ್ದನ ತೋಳ್ಪಾಡಿತ್ತಾಯರು, ಸೀತಾರಾಮ ತೋಳ್ಪಾಡಿಯವರ ಸಹಯೋಗ ಮತ್ತು ಒಟ್ಟಾರೆಯಾಗಿ ಹೇಳುವುದಿದ್ದರೆ ಧರ್ಮಸ್ಥಳದ ಪರಿಸರ ನನ್ನ ಬೆಳವಣಿಗೆಯಲ್ಲಿ ಕಾರಣವಾಯಿತು. ನನ್ನ ನಾಟ್ಯಗಾರಿಕೆ ಚಂದವಿಲ್ಲದಿದ್ದರೂ ಮಾತುಗಾರಿಕೆ ಬೆಳೆಯಿತು. ಆದ್ದರಿಂದ ರಾಮ, ಕೃಷ್ಣ, ಮುನಿಗಳ ಪಾತ್ರವೇ ಮೊದಲಾದ ಮಾತನಾಡುವ ಪಾತ್ರಗಳು ನನಗೆ ಸಿಕ್ಕಿದುವು. ಬಡಗಿನಲ್ಲಿಯೂ ವೇಷ ಮಾಡುವುದಿದ್ದರೂ ನನ್ನನ್ನು ಮಾತುಗಾರ ಎಂದೇ ಕರೆಯುವುದು. ಬಡಗಿನಲ್ಲಿ ನಾನು ಕುಣಿತಗಾರ ಅಲ್ಲ. ಚಲನೆ ಮತ್ತು ಮಾತುಗಳಿಂದ ಬಡಗಿನ ಜನರು ನನ್ನನ್ನು ಮಾನಿಸಿದ್ದಾರೆ.

ನಾನು ಚಿಕ್ಕಂದಿನಲ್ಲಿಯೇ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸದಸ್ಯನಾಗಿದ್ದೆ. ಶಿಬಿರಗಳಲ್ಲಿ ಭಾಗವಹಿಸುವಿಕೆ, ITC, OTC ಗಳಲ್ಲಿ ಭಾಗವಹಿಸಿದ್ದು, ಸಂಘದ ಹಿರಿಯರ ಒಡನಾಟ, ಬೌದ್ದಿಕ್‍ಗಳು, ಬೈಠಕ್ ಗಳಲ್ಲಿ ಭಾಗವಹಿಸಿ ನನ್ನ ಮಾತುಗಾರಿಕೆ ಬೆಳೆಯಿತು. ನನ್ನ ಮಾತುಗಾರಿಕೆ ಬೆಳೆಯಲು ಮೂಲ ಪ್ರೇರಕರು ನನ್ನ ಮಾನಸ ಗುರು ಶೇಣಿ ಗೋಪಾಲಕೃಷ್ಣ ಭಟ್ಟರು. ನನ್ನ ಬಾಲ್ಯದಿಂದ ಅವರ ಕೊನೆಯ ಕಾಲದ ವರೆಗೂ ನಾನು ಶೇಣಿಯವರ ಒಡನಾಡಿ. ನನ್ನನ್ನು ಅತೀವ ವಾತ್ಸಲ್ಯದಿಂದ ಕಂಡು ಅನೇಕ ಮಾರ್ಗದರ್ಶನ ಮಾಡಿದ್ದಾರೆ. ಈಗಲೂ ಹಲವರು ನನ್ನ ಅರ್ಥಗಾರಿಕೆಯಲ್ಲಿ ಶೇಣಿ ಶೈಲಿಯನ್ನು ಗುರುತಿಸುತ್ತಾರೆ. ಆದರೆ ಅವರ ಪ್ರಭಾವ ಖಂಡಿತ ನನ್ನ ಅರ್ಥಗಾರಿಕೆಯಲ್ಲಿ ಇದೆ.

ವೇಷಗಾರಿಕೆಯಲ್ಲಿ ನಾನು ಮೆಚ್ಚುವ ಕಲಾವಿದರು ಸೂರಿಕುಮೇರಿ ಗೋವಿಂದ ಭಟ್ಟರು. ಅವರ ರಂಗನಡೆ, ಸಂಪ್ರದಾಯ, ಅವರ ವೇಷದಲ್ಲಿರುವ ಅಕಾಡೆಮಿಕ್ ಕೊರಿಯೋಗ್ರಫಿ ಎಲ್ಲವನ್ನೂ ನಾನು ಮೆಚ್ಚುತ್ತೇನೆ. ನೆಡ್ಲೆ ನರಸಿಂಹ ಭಟ್ಟರ ಜೊತೆ ಮುಂಬಯಿಯ ‘ಅಪ್ನಾ ಉತ್ಸವ್’ ಎಂಬ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೆ. ಕರ್ಗಲ್ಲು ವಿಶ್ವೇಶ್ವರ ಭಟ್ಟರೂ ಇದ್ದರು. ಆ ಒಂದು ತಿಂಗಳಿನ ಕಾಲದ ನೆಡ್ಲೆ ನರಸಿಂಹ ಭಟ್ಟರ ಒಡನಾಟ ಯಕ್ಷಗಾನದ ರಂಗಭೂಮಿಯ ಪರಂಪರೆಯ ಹಿನ್ನೆಲೆಯ ಅನುಭವಕ್ಕೆ ನನಗೆ ಬಹಳಷ್ಟು ಸಹಕಾರಿಯಾಯಿತು. ಹಾಗೆ ಬಲಿಪ, ಕಡತೋಕ ಮೊದಲಾದ ಹಿರಿಯರ ಒಡನಾಟ ನನ್ನ ಕಲಾ ಜೀವನಕ್ಕೆ ಪ್ರೇರಕವಾದುವು. ಶೇಣಿಯವರಿಂದ ತೊಡಗಿ ಪೆರ್ಲ, ಸಾಮಗರು, ತೆಕ್ಕಟ್ಟೆ, ಮೂಡಂಬೈಲು, ಜೋಷಿಯವರೇ ಮೊದಲಾದವರೆಲ್ಲರ ಜೊತೆಗೆ ಕಾಲೇಜು ವಿದ್ಯಾರ್ಥಿ ದೆಸೆಯಿಂದಲೇ ಭಾಗವಹಿಸಿದ್ದರಿಂದ ಎಲ್ಲರೂ ನನ್ನನ್ನು ಪ್ರೋತ್ಸಾಹಿಸಿದ್ದಾರೆ. ಹಾಗೆ ಎಲ್ಲಾ ಹಿರಿಯರಿಂದಲೂ ಪ್ರೋತ್ಸಾಹ ಮತ್ತು ಅವಕಾಶಗಳು ಬಂದು ನನ್ನ ಕಲಾಜೀವನದಲ್ಲಿ ಬೆಳವಣಿಗೆಗೆ ಸಹಕಾರಿಯಾಯಿತು. ಹಾಗೆ ನಾನಾ ಕ್ಷೇತ್ರದಲ್ಲಿ ಮೇಲೆ ಬಂದೆ.

ಪ್ರಶ್ನೆ: ಹಿರಿಯ ಕಲಾವಿದರ ಜೊತೆಗಿನ ಮರೆಯಲಾರದ ಕ್ಷಣಗಳನ್ನು ಹಂಚಿಕೊಳ್ಳಬಹುದೇ?
ಉಜಿರೆ: ಖಂಡಿತಾ. ಶೇಣಿಯವರ ಜೊತೆಗೆ ನಾನು ಅವರ ಮನೆಗೆ ತುಂಬಾ ಸಲ ಹೋಗುತ್ತಿದ್ದೆ. ಶೇಣಿಯವರು ಕುಣಿಯ ಹೊಗೆಸೊಪ್ಪು ವೀಳ್ಯ ಹಾಕಲು ಇಷ್ಟಪಡುತ್ತಿದ್ದರು. ಸಂಜೆಯವರೆಗೆ ಅವರ ಜೊತೆ ಕುಳಿತುಕೊಳ್ಳುತ್ತಿದ್ದೆ. ಅವರು ನಿರ್ವಹಿಸಿದ ಎಲ್ಲಾ ಪಾತ್ರಗಳನ್ನು ಮೆಲುಕು ಹಾಕುತ್ತಿದ್ದರು. ಅನೇಕ ಸಲ ಅವರು ಅರ್ಥ ಹೇಳಿದ ಪಾತ್ರವೊಂದರಲ್ಲಿನ ವೈವಿಧ್ಯತೆಗಳನ್ನು ಗುರುತಿಸಲು ಹೇಳುತ್ತಿದ್ದರು. ನಾನು ಅವರು ಬೇರೆ ಬೇರೆ ಕಡೆಯಲ್ಲಿ ರಾವಣನಾಗಿ ಬೇರೆ ಬೇರೆ ರೀತಿ ಹೇಳಿದ ಅರ್ಥಗಳನ್ನು ಉಲ್ಲೇಖಿಸುತ್ತಿದ್ದೆ. ಆಗೆಲ್ಲಾ ತುಂಬಾ ಸಂತೋಷಪಟ್ಟುಕೊಳ್ಳುತ್ತಿದ್ದರು.


ಅವರ ಮನೆ ‘ದಾಸ ನಿವಾಸ’ ಮತ್ತು ಗಣೇಶ ಪ್ರಸಾದ್ ಹೋಟೆಲ್‍ಗೆ ಆಗಾಗ ಹೋಗುತ್ತಿದ್ದೆ. ಆಗೆಲ್ಲಾ ಅವರು ಪಾತ್ರಗಳ ಬಗ್ಗೆ ನಿರರ್ಗಳವಾಗಿ ಚರ್ಚಿಸುತ್ತಿದ್ದರು. ಅವರ ಅನೇಕ ಪಾತ್ರಗಳ ಜೊತೆಗೆ ಸಹಪಾತ್ರಧಾರಿಯಾಗಿ ಅರ್ಥ ಹೇಳುವ ಸೌಭಾಗ್ಯ ನನ್ನದಾಗಿತ್ತು. ಶೇಣಿಯವರ ಕೌರವನಿಗೆ ಸಂಜಯ, ಅವರ ಭೀಷ್ಮನೆದುರು ಅಭಿಮನ್ಯು ಹಾಗೂ ಅರ್ಜುನ, ಹೀಗೆಲ್ಲಾ ಹೇಳುವ ಅವಕಾಶ ಸಿದ್ಧಿಸಿತ್ತು. ನನ್ನ ದೀರ್ಘ ಕಲಾಜೀವನದಲ್ಲಿ ಅವರು ಬೇರೆ ಬೇರೆ ಪಾತ್ರಗಳ ಸ್ವಭಾವದ ಬಗೆಗೆ, ಅವರು ಹೇಗೆ ನಿರ್ವಹಿಸುತ್ತಿದ್ದರು ಹಾಗೂ ನಾವು ಹೇಗೆ ಮಾತನಾಡಬೇಕು ಎಂಬುದನ್ನು ಹೇಳಿ ಕೊಡುವುದರ ಜೊತೆಗೆ ಚರ್ಚಿಸುತ್ತಿದ್ದರು. ಅವರು ನಾಯಕ ಪಾತ್ರಕ್ಕಿಂತ ಹೆಚ್ಚು ಖಳನಾಯಕ ಪಾತ್ರದ ಬಗೆಗೆ ಮಾತನಾಡುತ್ತಿದ್ದರು. ಕೌರವ, ಮಾಗಧ, ರಾವಣ, ವಾಲಿ ಈ ಪಾತ್ರಗಳ ಬಗ್ಗೆ ಚರ್ಚಿಸುತ್ತಿದ್ದರು. ‘‘ಈ ನೋಟದಲ್ಲಿ ಹೇಳಬೇಕು ಅಶೋಕ’’ ಎಂದು ಹೇಳುತ್ತಿದ್ದರು.


ಅದೇ ರೀತಿ ರಾಮದಾಸ ಸಾಮಗರು ಕೂಡಾ ಪಾತ್ರ ನಿರ್ವಹಣೆಯ ಬಗ್ಗೆ ಮಾರ್ಗದರ್ಶನ ಮಾಡುತ್ತಿದ್ದರು. ಯಲ್ಲಾಪುರ ಸಂಕಲ್ಪ ಸಪ್ತಾಹದಲ್ಲಿ ನಾವು ಜೊತೆಗೆ ಅರ್ಥ ಹೇಳಿದ್ದೆವು. ಆ ಸಂದರ್ಭದಲ್ಲಿ ಕೃಷ್ಣನ ಜೊತೆ ವಿಜಯ, ದಾರುಕ, ಮಕರಂದರ ಅರ್ಥಗಾರಿಕೆಯಲ್ಲಿನ ಪಾತ್ರ ಸ್ವಭಾವ, ಸೂಕ್ಷ್ಮ ವ್ಯತ್ಯಾಸಗಳನ್ನು ಹೇಳುತ್ತಿದ್ದರು. ಕರುಣರಸದಲ್ಲಿ ರಾಮದಾಸ ಸಾಮಗರದು ಅದ್ಭುತ ನಿರ್ವಹಣೆ.
ಹಾಗೆಯೇ ಕೋಳ್ಯೂರುರವರ ಜೊತೆಯೂ ಪಾತ್ರ ಸ್ವಭಾವಗಳನ್ನು ಅರಿತು ಅರ್ಥ ಹೇಳುವ ಬಗ್ಗೆ ಮಾತನಾಡುತ್ತಿದ್ದರು. ಧರ್ಮಸ್ಥಳದಲ್ಲಿ ಕರ್ಣಾವಸಾನದಲ್ಲಿ ಕರ್ಣನಾಗಿ ‘‘ಶಿವಶಿವಾ ಸಮರದೊಳು-’’ ಪದ್ಯಕ್ಕೆ ಅರ್ಥ ಹೇಳಿದಾಗ ಅವರು ಭಾವುಕರಾಗಿದ್ದರು. ಹಾಗೂ ನನ್ನ ಅರ್ಥವನ್ನು ಮೆಚ್ಚಿಕೊಂಡಿದ್ದರು. ಹಿರಿಯ ಕಲಾವಿದರಾದ ಮೂಡಂಬೈಲು ಗೋಪಾಲಕೃಷ್ಣ ಶಾಸ್ತ್ರಿಗಳು ಮತ್ತು ಪ್ರಭಾಕರ ಜೋಶಿಯವರು ನನಗೆ ಯಾವಾಗಲೂ ನಿರ್ದೇಶಿಸಿ, ಪ್ರೋತ್ಸಾಹಿಸಿದ್ದಾರೆ. ಕೆಲವೊಮ್ಮೆ ಮುಖ್ಯ ಪಾತ್ರಗಳನ್ನು ನನಗೆ ಬಿಟ್ಟುಕೊಟ್ಟು ತಾವು ಸಣ್ಣ ಪಾತ್ರಗಳನ್ನು ನಿರ್ವಹಿಸಿ ಅರ್ಥ ಹೇಳಿದ್ದಾರೆ. ಮೂಡಂಬೈಲು ಶಾಸ್ತ್ರಿಗಳು ನನ್ನಲ್ಲಿ ಕರ್ಣನ ಅರ್ಥ ಹೇಳಿಸಿ ತಾನು ಅರ್ಜುನ ಹೇಳಿದ್ದಾರೆ. ಆಮೇಲೆ ಅರ್ಥವನ್ನು ಮೆಚ್ಚಿಕೊಂಡು ಪ್ರೋತ್ಸಾಹಿಸಿದ್ದರು. ಪ್ರಭಾಕರ ಜೋಶಿಯವರು ಯಾವಾಗಲೂ ಕೃಷ್ಣ ಸಂಧಾನದ ಕೌರವನ ಅರ್ಥವನ್ನು ಹೇಳುತ್ತಿದ್ದವರು. ಒಮ್ಮೆ ನನಗೆ ಕೌರವನ ಪಾತ್ರವನ್ನು ಬಿಟ್ಟುಕೊಟ್ಟು ತಾನು ಕೃಷ್ಣನ ಅರ್ಥವನ್ನು ಹೇಳಿದ್ದಾರೆ. ನನ್ನಲ್ಲಿ ವಾಲಿಯ ಅರ್ಥ ಹೇಳಿಸಿ ಅವರು ರಾಮನ ಪಾತ್ರ ನಿರ್ವಹಿಸಿದ್ದರು. ಅವರ ಹಿರಿತನಕ್ಕೆ ಅವರೇ ವಾಲಿಯ ಅರ್ಥ ಹೇಳಬೇಕಿತ್ತು.


ಕಿರಾತಾರ್ಜುನದಲ್ಲಿ ಕೆ. ಗೋವಿಂದ ಭಟ್ಟರ ಅರ್ಜುನನ ಎದುರು ಒಮ್ಮೆ ಕಿರಾತ ಪಾತ್ರ ನಿರ್ವಹಿಸಿದ್ದೇನೆ. ಅವರು ಉತ್ತಮ ರೀತಿಯಲ್ಲಿ ಮುನ್ನಡೆಸಿಕೊಂಡು ಹೋಗಿದ್ದಾರೆ. ಬಲಿಪರು, ನೆಡ್ಲೆ ನರಸಿಂಹ ಭಟ್ಟರ ಹಿಮ್ಮೇಳದಲ್ಲಿ ಭೀಷ್ಮ ಪಾತ್ರ ನಿರ್ವಹಿಸುವ ಯೋಗ ಬಂತು. ಈ ಪಾತ್ರದಲ್ಲಿ ನೆಡ್ಲೆ ನರಸಿಂಹ ಭಟ್ಟರ ನಿರ್ದೇಶನವೂ ನನಗೆ ಸಹಕಾರಿಯಾಗಿತ್ತು. ಹಾಗೆಯೇ ಶೇಣಿ ಸಾಮಗರು ಮಾತ್ರವಲ್ಲ, ಹಲವಾರು ಮಂದಿ ಹಿರಿಯರು ನನ್ನ ಬೆಳವಣಿಗೆಗೆ ಕಾರಣರಾಗಿದ್ದಾರೆ. ಹವ್ಯಾಸಿ ಕಲಾವಿದರಾದ ಪುಚ್ಚೆಕೆರೆ ಕೃಷ್ಣ ಭಟ್ಟರೇ ಮೊದಲಾದವರು ಕೂಡಾ ಪ್ರೋತ್ಸಾಹಿಸಿ ಬೆಳೆಸಿದ್ದಾರೆ. ಉಜಿರೆಯಲ್ಲಿ ಕುಬಣೂರು ಶ್ರೀಧರ ರಾಯರು ಕೂಡಾ ತುಂಬಾ ಮಾರ್ಗದರ್ಶನ ಮಾಡಿದ್ದಾರೆ. ಹೀಗೆ ಅನೇಕ ಮಂದಿ ಹಿರಿಯರ ಒಡನಾಟದಿಂದ, ನನ್ನ ಮೇಲೆ ಅವರು ತೋರಿಸಿದ ಪ್ರೀತಿಯಿಂದ ‘ಬೆಳೆದಿದ್ದೇನೆ’ ಅನ್ನುವುದಕ್ಕಿಂತಲೂ ಈ ಮಟ್ಟಕ್ಕೆ ಬಂದಿದ್ದೇನೆ ಎಂದು ಹೇಳಬಹುದು.


ಬಡಗಿನಲ್ಲಿ ಕೂಡಾ ಅನೇಕ ಹಿಮ್ಮೇಳ-ಮುಮ್ಮೇಳ ಕಲಾವಿದರ ಪ್ರೋತ್ಸಾಹ ಸಹಕಾರಗಳಿಂದ ಬಡಗಿನಲ್ಲಿಯೂ ಉತ್ತಮ ನಿರ್ವಹಣೆ ನೀಡಲು ಸಾಧ್ಯವಾಯಿತು. ಹಾಗೆಂದು ರಂಗಸ್ಥಳದಲ್ಲಿ ವಾದಗಳು ಬೆಳೆದಿರಬಹುದು. ವಾದಗಳು, ಖಡಾಖಡಿ ಮಾತಿನ ಸಮರಗಳು ನಡೆದಿರಬಹುದು. ಅದು ರಂಗಭೂಮಿ, ಕರ್ಣಾರ್ಜುನ ಮಾಡಿದಾಗ, ವಾಲಿ-ಸುಗ್ರೀವ ಮಾಡಿದಾಗ ಜಟಾಪಟಿ ಆದದ್ದು ಉಂಟು. ವಾದ ಜೋಶಿಯವರ ಜೊತೆಗೆ ಆಗಿದೆ, ಶಾಸ್ತ್ರಿಗಳ ಜೊತೆಗೂ ಆಗಿರಬಹುದು. ಅಥವಾ ಈಗ ಇರುವಂತಹಾ ನನ್ನ ಎಲ್ಲ ಸಹಕಲಾವಿದರ ಜೊತೆಗೂ ಆಗಿದೆ. ಎಂದೂ ರಂಗದ ಮುನಿಸನ್ನು ನಾನು ಹೊರಗಡೆ ತೋರ್ಪಡಿಸಿದ್ದೇ ಇಲ್ಲ. ರಂಗಸ್ಥಳ ಇಳಿದ ಕೂಡಲೇ ಮರೆತಿದ್ದೇನೆ. ಸಹಕಲಾವಿದರೂ ಕೂಡಾ ಮರೆತಿದ್ದಾರೆ. ನಾನು ಇಲ್ಲದ ಕಡೆಯೂ ಸಹಕಲಾವಿದರು ನನ್ನ ಬಗ್ಗೆ ಉತ್ತಮ ಅಭಿಪ್ರಾಯವನ್ನು ಹೇಳಿದ್ದಾರೆ.
‘‘ಅಶೋಕ ಭಟ್ಟರು ರಂಗಸ್ಥಳದಲ್ಲಿ ಮಾತ್ರ ಚರ್ಚೆ. ರಂಗಸ್ಥಳ ಇಳಿದ ಕೂಡಲೇ ಅವರು ಮರೆಯುತ್ತಾರೆ. ಮತ್ತು ಎಂದಿನ ಹಾಗೆ ಅವರು ಇರುತ್ತಾರೆ’’ ಎಂದು ಸಹಕಲಾವಿದರು ಒಳ್ಳೆಯ ಮಾತುಗಳನ್ನೇ ಆಡಿದ್ದಾರೆ.


ತಾಳಮದ್ದಳೆ ನಿಂತು ಹೋಗುತ್ತದೆಯೋ ಅಥವಾ ಆಟ ನಿಂತು ಹೋಗುತ್ತದೆಯೋ ಎಂಬ ಸಂಶಯ ನಮ್ಮ ಚರ್ಚೆಯಿಂದ ಉದ್ಭವಿಸಿದ್ದೂ ಉಂಟು. ಆದರೆ ನಾವು ಎಲ್ಲಿಯೂ ಮುನಿಸು ತೋರ್ಪಡಿಸಲಿಲ್ಲ. ರಂಗದ ಹೊರಗೆ ನಮ್ಮ ಹಾರ್ದಿಕ ಸಂಬಂಧ ಮುಂದುವರಿದಿದೆ.
ಎಡನೀರು ಸ್ವಾಮೀಜಿಗಳ ಆಶ್ರಯದಲ್ಲಿ ಶ್ರೀಗಳ ಭಾಗವತಿಕೆಯಲ್ಲೇ ಶೇಣಿಯವರ ಕರ್ಣನ ಎದುರು ಶಲ್ಯನ ಅರ್ಥವನ್ನು ಹೇಳುವ ಸಂದರ್ಭ ಬಂದಿತ್ತು. ಶೇಣಿಯವರೇ ನನಗೆ ಶಲ್ಯನ ಪಾತ್ರವನ್ನು ಕೊಡುವಂತೆ ಸೂಚಿಸಿದ್ದರು. ನಿಜವಾಗಿ ಶೇಣಿಯವರ ಎದುರು ಶಲ್ಯನ ಅರ್ಥ ಹೇಳುವಷ್ಟು ಯೋಗ್ಯತೆ ನನ್ನಲ್ಲಿ ಆಗ ಇರಲಿಲ್ಲ. ಆದರೆ ಶೇಣಿಯವರು ನನ್ನಲ್ಲಿರುವ ಪ್ರತಿಭೆಯನ್ನು ಗುರುತಿಸಿದ್ದರು. ಹಾಗೂ ಪ್ರೋತ್ಸಾಹಿಸಿ ಪೋಷಿಸಿದ್ದರು.
ಎಡನೀರು ಮಠದಲ್ಲಿ ನಡೆದ ತಾಳಮದ್ದಳೆ ಯೊಂದರಲ್ಲಿ ಎಡನೀರು ಸ್ವಾಮೀಜಿಗಳ ಭೀಷ್ಮನ ಎದುರು ಕೌರವನ ಅರ್ಥ ಹೇಳುವ ಸುಯೋಗ ಬಂದಿತ್ತು. ಇದು ಅಪರೂಪದ ಸಂಗತಿ. ಸ್ವಾಮೀಜಿಯವರ ಜೊತೆ ಅರ್ಥ ಹೇಳಿದ್ದು ಒಂದು ಭಾಗ್ಯವೆಂದೇ ಹೇಳಬೇಕು.

ಪ್ರಶ್ನೆ: ಅಂದಿನ ತಾಳಮದ್ದಳೆ ಹಾಗೂ ಇಂದಿನ ತಾಳಮದ್ದಳೆಗಳಿಗೆ ಏನು ವ್ಯತ್ಯಾಸ?
ಉಜಿರೆ:  ನಾನು ನಲುವತ್ತು ವರುಷಗಳ ನೆನಪನ್ನು ಹೇಳಬಲ್ಲೆ. ಸಾಧಾರಣ 1978ನೇ ಇಸವಿಯ ನನ್ನ ಹೈಸ್ಕೂಲ್ ದಿನಗಳ ಕಾಲದ ನೆನಪುಗಳು. ತಾಳಮದ್ದಳೆಯ ಒಟ್ಟೂ ಹೂರಣವನ್ನು ನೋಡಿದರೆ ಶೇಣಿ, ಸಾಮಗ, ತೆಕ್ಕಟ್ಟೆ, ಪೆರ್ಲದವರದ್ದು ಒಂದು ಕಾಲ ಏನಿತ್ತೋ ಆಗ ಇದ್ದ ತಾಳಮದ್ದಳೆಯ ರಂಗದ ಗಂಭೀರತೆ ಮತ್ತು ಪಾತ್ರಗಳ ಸೃಷ್ಟಿಗೂ ಮೀರಿದ ಪಾತ್ರಗಳ ಪ್ರತಿಸೃಷ್ಟಿಯ ಬೆರಗು ಅದ್ಭುತವಾದದ್ದು. ಪ್ರಭಾಕರ ಜೋಶಿಯವರಂತಹಾ ಹಿರಿಯರು ಬರಹಗಳಲ್ಲಿ ಹೇಳಿರುವಂತೆ ಮಹಾಕಾವ್ಯಗಳ ಜನಕರಾದ ವಾಲ್ಮೀಕಿ, ವ್ಯಾಸ, ಕುಮಾರವ್ಯಾಸ ಇವರೇನಾದರೂ ಈಗ ಪ್ರತ್ಯಕ್ಷರಾದರೆ ಆಶ್ಚರ್ಯಗೊಳ್ಳುವಂತೆ ಮಾಡಬಹುದಾಗಿದ್ದ ಅದ್ಭುತ ಪಾತ್ರಚಿತ್ರಣ, ಶೇಣಿ, ಸಾಮಗ, ತೆಕ್ಕಟ್ಟೆ, ಪೆರ್ಲದವರದ್ದಾಗಿತ್ತು. ಅವರೆಲ್ಲಾ ಪೂರ್ಣಪ್ರಮಾಣದ ಕಲಾವಿದರಾಗಿದ್ದರು. ದಿನದ 24 ಗಂಟೆಯೂ ಯಕ್ಷಗಾನವನ್ನೇ ಯೋಚಿಸುವ ಶೇಣಿ, ಸಾಮಗರು, ಅಂತರ್ಮುಖಿಯಾಗುವ ತೆಕ್ಕಟ್ಟೆಯವರು ನಾವು ಪ್ರಶ್ನಿಸಿದರೆ ಬಹಳಷ್ಟು ಹೇಳುವವರು. ರಾಮದಾಸ ಸಾಮಗರಂತೂ ಭಾವುಕ ಪಾತ್ರಗಳಲ್ಲಿ ಹಾಗೂ ರಸಪ್ರತಿಪಾದನೆಯಲ್ಲಿ ಅದ್ಭುತಹಸ್ತರು. ಅವರ ಮಯೂರಧ್ವಜ, ವಿದುರ, ಹನುಮಂತ, ವಿಭೀಷಣ, ಸಂಜಯ ಮೊದಲಾದ ಪಾತ್ರಗಳ ರಸಪೋಷಣೆಯಲ್ಲಿ ಅದ್ಭುತಹಸ್ತರು. ಕಣ್ಣೀರು ಹರಿಸಿ ಅರ್ಥ ಹೇಳುವವರು. ಹಿಮ್ಮೇಳವೂ ಅದಕ್ಕೆ ಪೂರಕವಾಗಿತ್ತು. ಅಗರಿ, ಕಡತೋಕ, ಮಂಡೆಚ್ಚ, ಬಲಿಪ, ಕುಬಣೂರು, ಹೊಳ್ಳ, ಪದ್ಯಾಣ, ಅಮ್ಮಣ್ಣಾಯರೇ ಮೊದಲಾದವರಿದ್ದರು.


ಆ ದೃಷ್ಟಿಯಿಂದ ನೋಡಿದರೆ ಈಗ ಪಾತ್ರಸೃಷ್ಟಿ ಆಗುವುದಿಲ್ಲ ಅಂತ ನಾನು ಹೇಳುವುದಿಲ್ಲ. ಆದರೆ ಪಾತ್ರಗಳ ಪ್ರತಿಸೃಷ್ಟಿಗಳನ್ನೂ ನಮಗೆ ಕಾಣುವುದಕ್ಕೆ ಕಷ್ಟವಾಗುತ್ತದೆ. ಮತ್ತು ಆಗ ಇದ್ದ ಗಂಭೀರತೆಯೂ ಈಗ ಕಾಣುವುದಿಲ್ಲ. ಅದಕ್ಕೆ ಕಾರಣವೇನೆಂದು ಸ್ಪಷ್ಟವಾಗಿ ಹೇಳಲು ಸಾಧ್ಯವಿಲ್ಲ. ಆಗ ವಾರಕ್ಕೆ ಒಂದು ತಾಳಮದ್ದಳೆ ಇದ್ದಿರಬಹುದು. ಈಗ ಒಂದು ದಿನಕ್ಕೆ ಒಬ್ಬ ಕಲಾವಿದರಿಗೆ ಎರಡು ಅಥವಾ ಮೂರು ತಾಳಮದ್ದಳೆಗಳು ಇರುವುದೂ ಉಂಟು. ಆದುದರಿಂದ ಈಗ ಚಿಂತನೆ ಮತ್ತು ಓದುವಿಕೆಗೆ ಅವಕಾಶ ಕಡಿಮೆ ಕಾಣಿಸುತ್ತದೆ. ಮೂರು ಗಂಟೆಯ ನಮ್ಮ ಪಾತ್ರವನ್ನು ನಿರ್ವಹಿಸುವುದು. ವ್ಯಾವಹಾರಿಕವಾಗಿ ಹೇಳುವುದಾದರೆ Duty ಮಾಡುವುದು. ಒಂದೆಡೆಯಲ್ಲಿ ಅರ್ಥ ಹೇಳುತ್ತಿರುವಾಗ ಇನ್ನೊಂದು ಕಡೆಗೆ ಹೋಗುವ ಆತುರ. ಅಲ್ಲಿ ಹೇಳುವಾಗ ಮತ್ತೊಂದೆಡೆಯ ಭಾಗವಹಿಸುವಿಕೆಯ ತುಡಿತ. ಆದಕಾರಣ ಪಾತ್ರವನ್ನು ಒಪ್ಪಿಸುವುದು. ಪಾತ್ರದ ತುಂಬಾ ಆಳಕ್ಕೆ ಇಳಿಯಲು ಅಸಾಧ್ಯ. ಕಾಲಮಿತಿಯೂ ಬಂದಿರುವುದರಿಂದ ಅವಕಾಶಗಳೂ ಕಡಿಮೆ. ಆಗ ಕಲಾವಿದರಿಗೆ ಸವಾಲುಗಳೂ ಇತ್ತು. ಶೇಣಿ-ಸಾಮಗ, ಶೇಣಿ-ಪೆರ್ಲ, ಕುಂಬ್ಳೆ-ಜೋಶಿ, ಮೂಡಂಬೈಲು-ಕುಂಬ್ಳೆ, ಜೋಶಿ-ಉಡುವೆಕೋಡಿ ಹೀಗೆ ಅರ್ಥಗಾರಿಕೆಯ ಜೋಡಿಗಳು ಇದ್ದುವು. ಈಗ ಅಂತಹಾ ನಿಶ್ಚಿತ ಜೋಡಿಗಳೂ ಗುರುತಿಸಲ್ಪಡುವುದಿಲ್ಲ.


ಶಂಭು ಹೆಗಡೆಯವರು ಅದೇ ಧೋರಣೆಯುಳ್ಳವರು. ‘‘ಪ್ರೇಕ್ಷಕನಿಗೆ ಬೇಕಾದ್ದನ್ನು ನಾವು ಕೊಡುವುದಲ್ಲ, ನಮ್ಮಲ್ಲಿ ಇರುವುದು ಪ್ರೇಕ್ಷಕರ ಬುದ್ಧಿಮಟ್ಟವನ್ನು ಎತ್ತರಿಸುವಂತಹುದಾಗಿರಬೇಕು. ಕೆಲವರು ನಮ್ಮಲ್ಲಿ ಅಮಲು ಪದಾರ್ಥವನ್ನು ಬಯಸಬಹುದು. ಆದರೆ ನಮ್ಮ ಮಳಿಗೆಯಲ್ಲಿ ಅದು ದೊರಕುವುದಿಲ್ಲ’’ ಎಂದು ಹೇಳಿದ್ದರು. ಪ್ರೇಕ್ಷಕರನ್ನು ಗುಣಮಟ್ಟದ ಕಡೆಗೆ ಎತ್ತರಿಸಬೇಕು. ಈ ಗಾಂಭೀರ್ಯತೆ ಹಿಂದಿನ ಪ್ರೇಕ್ಷಕರಲ್ಲಿ ಇತ್ತು. ಕೆಲವೊಂದು ಹಿರಿಯ ಪ್ರೇಕ್ಷಕರು ಈಗಲೂ ಹೇಳುವುದನ್ನು ಕೇಳಿದ್ದೇನೆ. ‘‘ಮೊದಲಿನ ಶೇಣಿಯವರ ಕಾಲದ ಗಂಭೀರತೆ ಈಗ ನಿಮ್ಮಲ್ಲಿ ಇಲ್ಲ’’ ಎಂದು ಆಕ್ಷೇಪಿಸಿದ್ದೂ ಉಂಟು.


ನಾನು ಕೂಡಾ ವಧೆಯ ರಾವಣ, ಬಲಿ, ಭೀಷ್ಮ, ವಾಲಿ ಪಾತ್ರಗಳನ್ನು ಹೇಳಿದ್ದೇನೆ. ಹೇಳಿದ್ದೇನೆ ಎಂದು ಮಾತ್ರ ಹೇಳುವುದು. ಅರ್ಥಕ್ಕೆ ಕುಳಿತುಕೊಳ್ಳುವಾಗ ಫಕ್ಕನೆ ಶೇಣಿಯವರ ನೆನಪಾದರೆ ಒಂದು ಅಳುಕು ಉಂಟಾಗುತ್ತದೆ. ಯಾಕೆಂದರೆ ಶೇಣಿಯವರ ಅರ್ಥಗಾರಿಕೆ ಕೇಳಿದ ಕಾರಣ ಆ ಮಟ್ಟಕ್ಕೆ ನಮಗೆ ಮುಟ್ಟಲಾಗುವುದಿಲ್ಲ ಎಂಬ ಯೋಚನೆ. ಅದರಲ್ಲೂ ಶೇಣಿಯವರ ಅರ್ಥಗಾರಿಕೆ ಕೇಳಿದ ಹಿರಿಯ ಪ್ರೇಕ್ಷಕರಂತೂ ಎದುರು ಬಂದು ಕುಳಿತಾಗ ಖಂಡಿತವಾಗಿ ನಮ್ಮ ಅರ್ಥವನ್ನು ಯಾವ ರೀತಿ ಸ್ವೀಕರಿಸುತ್ತಾರೆ ಎಂಬ ಯೋಚನೆ ಮೂಡುತ್ತದೆ.
ಈ ಎಲ್ಲಾ ಕಾರಣಗಳಿಂದ ಸ್ವಾಭಾವಿಕವಾಗಿ ನಾವು ಒಪ್ಪಬೇಕಾದ ವಿಷಯವೇನೆಂದರೆ, ಆಟ-ಕೂಟಗಳ ಸುವರ್ಣಯುಗವೆಂದು ಕರೆಯಬಹುದಾದ ಸುಮಾರು 1970ನೇ ಇಸವಿಯಿಂದ 2000ನೇ ಇಸವಿಯ ವರೆಗಿನ ಯಕ್ಷಗಾನದ ಮಟ್ಟ ಈಗ ಕಾಣುವುದಿಲ್ಲ. ಇದು ಪ್ರಾಮಾಣಿಕವಾಗಿ ನಾವು ಒಪ್ಪಬೇಕಾದ ಸಂಗತಿ.

ಪ್ರಶ್ನೆ: ಹಿಂದಿನ ತಲೆಮಾರಿನ ಕೊಂಡಿಯೂ ಆಗಿರುವ ನೀವು ಕಾಲಮಿತಿಗೆ ಹೇಗೆ ಹೊಂದಿಕೊಂಡಿರಿ ಮತ್ತು ಕಾಲಮಿತಿಯ ಬಗ್ಗೆ ನಿಮ್ಮ ಅಭಿಪ್ರಾಯವೇನು?
ಉಜಿರೆ:  ಮೊದಲ ಕಾಲಮಿತಿ ಮಾಡಿದವರು ಕಾಂಚನ ಮೇಳದ ಮಾಣಂಗಾಯಿ ಕೃಷ್ಣ ಭಟ್ಟರು. 1955ರಲ್ಲಿ ಯಕ್ಷಗಾನ ಸಂಗೀತ ನಾಟಕ ಸಭಾ, ಕಾಂಚನ ಎಂಬ ಕಾಲಮಿತಿ ಮೇಳ ಮಾಡಿದರು. ಉಜಿರೆಯಲ್ಲಿ ನಡೆದ ಕಾಲಮಿತಿ ಪ್ರದರ್ಶನದಲ್ಲಿ ಮೂರೇ ಜನ ಪ್ರೇಕ್ಷಕರ ಎದುರು ಪ್ರದರ್ಶನ ಮಾಡಿದ್ದರಂತೆ! ಉಡುಪಿಯಲ್ಲಿ ಪ್ರೇಕ್ಷಕರು ಒಬ್ಬರೇ ಇದ್ದ ಕಾರಣ ಆಟ ಆಡದೆ ನಿಲ್ಲಿಸಿದ್ದರಂತೆ. ಆ ಕಾಂಚನ ಮೇಳದಲ್ಲಿ ಪಾತಾಳ ವೆಂಕಟ್ರಮಣ ಭಟ್, ಶಿವರಾಮ ಜೋಗಿ ಮೊದಲಾದವರಿದ್ದರಂತೆ. ಆಮೇಲೆ ಕಾಲಮಿತಿಗೆ ತಂದವರು ಶ್ರೀ ಶಂಭು ಹೆಗಡೆಯವರು. ಇಡಗುಂಜಿ ಮೇಳವನ್ನು 1985 ಪೂರ್ಣಕಾಲಿಕ ತಿರುಗಾಟವನ್ನು ನಿಲ್ಲಿಸಿ ಕಾಲಮಿತಿಗೊಳಪಡಿಸಿದರು.

ಆಮೇಲೆ ಪೂರ್ಣ ಪ್ರಮಾಣದ ಕಾಲಮಿತಿ ಮೇಳವನ್ನು ಮೊದಲು ಮಾಡಿದ ಹೆಗ್ಗಳಿಕೆಯು ಮಹಾ ಕಲಾಪೋಷಕರಾದ ಡಾ| ಟಿ. ಶ್ಯಾಮ ಭಟ್ಟರ ಸಂರಕ್ಷಕತ್ವದಲ್ಲಿ ಹೊಸನಗರ ರಾಮಚಂದ್ರಾಪುರ ಮಠದ ಹೆಸರಿನಲ್ಲಿ 2006ರಲ್ಲಿ ಹೊರಟ ಮೇಳಕ್ಕೆ ಸಲ್ಲುತ್ತದೆ. ಆ ಮೇಳ ದಿಗ್ವಿಜಯ ಸಾಧಿಸಿತು. ಆ ಮೇಳದಲ್ಲಿ ವ್ಯವಸ್ಥಾಪಕನಾಗಿ ಏಳು ವರ್ಷ ಇದ್ದೆ. ಅದನ್ನು ನಾನು ಅಭಿಮಾನದಿಂದ, ಹೆಮ್ಮೆಯಿಂದ ಹೇಳುತ್ತೇನೆ. ಡಾ| ಟಿ. ಶ್ಯಾಮ್ ಭಟ್ಟರು ಸ್ವಭಾವತಃ ಪುರಾಣ, ಕಥೆ, ಪಾತ್ರಗಳ ಬಗ್ಗೆ ಸಮಗ್ರ ಅನುಭವ ವಿರುವವರು. ಅವರು ಅತ್ಯಂತ ಪ್ರೀತಿಸುವ ಮತ್ತು ಗೌರವಿಸುವ ಅರ್ಥಧಾರಿ ಶೇಣಿಯವರು. ಶೇಣಿಯವರ ಎಲ್ಲಾ ವಿವರಗಳನ್ನು ಈಗಲೂ ಅವರು ಹೇಳಬಲ್ಲರು. ಅವರು ಚಿಟ್ಟಾಣಿ ಮತ್ತು ಗೋವಿಂದ ಭಟ್ಟರ ಅಭಿಮಾನಿ. ಯಕ್ಷಗಾನದಲ್ಲಿ ಅವರ Involvement ಅಷ್ಟುಂಟು. ಆದಕಾರಣ ಅವರ ಮಾರ್ಗದರ್ಶನದಲ್ಲಿ ವ್ಯವಸ್ಥಾಪಕನಾಗಿ ನಿರ್ವಹಿಸಲು ನನಗೆ ಬಹಳ ಸುಲಭವಾಯಿತು. ಅದಕ್ಕೆ ಸರಿಯಾಗಿ ಪದ್ಯಾಣ ಗಣಪತಿ ಭಟ್, ಪದ್ಯಾಣ ಶಂಕರನಾರಾಯಣ ಭಟ್‍ರಂತಹಾ ಅನುಭವಿಗಳ ನೆರಳಿನಲ್ಲಿ ಕೆಲಸ ಮಾಡಲು ಸುಲಭ.


ನಿಮ್ಮ ಪ್ರಶ್ನೆಗೆ ಉತ್ತರವಾಗಿ ‘ಕಾಲಮಿತಿ’ ಯನ್ನು ನಾನು ದೋಷ ಅಂತ ಹೇಳುವುದಕ್ಕಾಗುವುದಿಲ್ಲ. ಆದರೆ ಕಾಲಮಿತಿಯ ಕಾರಣದಿಂದ ರಂಗದ ಲಯ ಸ್ವಲ್ಪ ವೇಗವನ್ನು ಪಡೆದುಕೊಂಡಂತೆ ಅನಿಸುತ್ತದೆ. ಹೆಚ್ಚಿನ ವಿಮರ್ಶಕರು ಮೇಳದ ಮೇಲಿನ ಗೌರವದಿಂದ ಅದನ್ನು ಹೇಳದಿದ್ದರೂ ಗುಟ್ಟಿನಲ್ಲಿ ‘‘ಯಕ್ಷಗಾನವನ್ನು ಸ್ವಲ್ಪ ವೇಗ ಮಾಡಿದಿರಿ’’ ಎಂದು ಹೇಳಿದವರೂ ಇದ್ದರು. ಪೂರ್ವರಂಗ ಇರದಿದ್ದರೂ ಆ ಕಾಲದಲ್ಲಿ ಒಂದು ಹೊಸ ಕ್ರಾಂತಿಯೇ ಆಯಿತು.   ಆ ಮೇಲಿನ ವರ್ಷಗಳಲ್ಲಿ ಎಲ್ಲಿ ನೋಡಿದರೂ ನಮ್ಮ ಮೇಳವೇ.


ಆಮೇಲೆ ಪೂಜ್ಯ ಹೆಗಡೆಯವರು ಮತ್ತು ಹರ್ಷೇಂದ್ರ ಕುಮಾರ್ ಅವರು ಅನೇಕ ವಿದ್ವಾಂಸರನ್ನು ಕರೆದು ಮೂರು ವರ್ಷ ಗಂಭೀರ ಚಿಂತನೆ ಮಾಡಿ ಅದಕ್ಕೊಂದು ಸರಿಯಾದ ಆವರಣದ ಚೌಕಟ್ಟಿನೊಳಗೆ ಪೂರ್ವರಂಗದ ಭಾಗವನ್ನು ಉಳಿಸಿಕೊಂಡು ಧರ್ಮಸ್ಥಳ ಮೇಳವನ್ನು ಕಾಲಮಿತಿಗೆ ಒಳಪಡಿಸಿದರು. ಆ ಸಂದರ್ಭದಲ್ಲಿ ನನ್ನನ್ನೂ ಕರೆಸಿಕೊಂಡು ನಮ್ಮ ಮೇಳದ ಕಾಲಮಿತಿ ಪ್ರದರ್ಶನದ ಅನುಭವಗಳನ್ನು ಕೇಳಿದ್ದರು. ಇದು ನನಗೆ ಹೆಮ್ಮೆಯ ವಿಷಯ. ಧರ್ಮಸ್ಥಳ ಮೇಳದಲ್ಲಿ ಅನುಭವಿಗಳಾದ ಕೆ. ಗೋವಿಂದ ಭಟ್ಟರು, ಪುತ್ತಿಗೆ ರಘುರಾಮ ಹೊಳ್ಳರಂತಹಾ ಸಮರ್ಥರು ರಂಗದ ವೇಗಕ್ಕೆ ಆದಷ್ಟು ಕಡಿವಾಣ ಹಾಕಿದ್ದಾರೆ. ಇದಕ್ಕೆ ಪೂಜ್ಯ ಹೆಗಡೆಯವರ ನಿರ್ದೇಶನವೂ ಇತ್ತು.


ಪುನಶ್ಚೇತನ ಶಿಬಿರ ಪ್ರತಿ ವರ್ಷ ಆದರೆ ಒಳ್ಳೆಯದು. ಬಹುಮಂದಿ ಎಲ್ಲರೂ ಮೊಬೈಲ್, ವಾಟ್ಸಾಪ್, ಫೇಸ್‍ಬುಕ್‍ನಲ್ಲಿ ಇರುವ ಕಾಲ ಇದು. ಆ ಕಾರಣದಿಂದ ಇಂತಹಾ ಶಿಬಿರಗಳಿಂದ ಕಲಾವಿದರಿಗೂ ಚಿಂತನೆ ಸಿಗುತ್ತದೆ. ಈ ವರ್ಷ ಧರ್ಮಸ್ಥಳದಲ್ಲಿ ಮೇಳ ಹೊರಡುವ ಮೊದಲೇ ಎರಡು ದಿನಗಳ ಪುನಶ್ಚೇತನ ಶಿಬಿರ ಆಯಿತು. ಆ ಶಿಬಿರದಲ್ಲಿ ಪೂಜ್ಯ ಖಾವಂದರು ಮತ್ತು ಶ್ರೀ ಹರ್ಷೇಂದ್ರ ಕುಮಾರ್ ಅವರು ಕಲಾವಿದರಿಗೆ ಮಾರ್ಗದರ್ಶನ ಮಾಡಿದ್ದರು. ನನಗೂ ಆ ಶಿಬಿರದಲ್ಲಿ ಭಾಗವಹಿಸಲು ಅವಕಾಶ ಸಿಕ್ಕಿದ್ದು ಭಾಗ್ಯ ಎಂದು ಭಾವಿಸುತ್ತೇನೆ. ಅನೇಕ ಸಂಗತಿಗಳನ್ನು, ವಿಚಾರಗಳನ್ನು, ರಂಗಭೂಮಿಯನ್ನು ಹೇಗೆ ಕಾಣಬೇಕು ಎಂಬುದನ್ನು ಖಾವಂದರು ಆ ಶಿಬಿರದಲ್ಲಿ ಮಾರ್ಗದರ್ಶನ ಮಾಡಿದರು.
ಪುನಶ್ಚೇತನ ಶಿಬಿರದ ಬಗ್ಗೆ ಶಂಭು ಹೆಗಡೆಯವರು, ಪ್ರಭಾಕರ ಜೋಶಿಯವರೂ ಹಿಂದೆ ಬಹಳಷ್ಟು ಬಾರಿ ಹೇಳಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು. ನನ್ನ ಪ್ರಕಾರ ಕಾಲಮಿತಿ ಪ್ರಸ್ತುತವೇ ಆದರೆ ಕಾಲಮಿತಿಗೊಳ್ಳುವಾಗ ಕಥಾಲೋಪ, ಹಾಸ್ಯಲೋಪ, ಸನ್ನಿವೇಶಗಳ ಲೋಪ ಆಗಬಾರದು. ಯಕ್ಷಗಾನದ ಚೌಕಟ್ಟಿನಲ್ಲಿರಬೇಕು.

ಪ್ರಶ್ನೆ: ವ್ಯವಸ್ಥಾಪಕರ ನೆಲೆಯಲ್ಲಿ ನಿಮ್ಮ ಅನುಭವವನ್ನು ಕೇಳಿದರೆ ಕಲಾವಿದರ ಶಿಸ್ತು, ಸಮಯಪರಿಪಾಲನೆ ಯನ್ನು ಹೇಗೆ ಉತ್ತಮಗೊಳಿಸಬಹುದು?
ಉಜಿರೆ: ‘ಉಜಿರೆ ಅಶೋಕ ಭಟ್ಟ’ ಎಂದರೆ ನಿಷ್ಠುರವಾದಿ ಎಂಬ ಮಾತು ಯಕ್ಷಗಾನ ವಲಯದಲ್ಲಿ ಪ್ರಚಲಿತವಿದೆ. ಇತ್ತೀಚೆಗಂತೂ ನಾನು ತುಂಬಾ ಸಂಯಮವನ್ನು ಕಾಪಾಡಿಕೊಂಡಿದ್ದೇನೆ. ಅರ್ಥಗಾರಿಕೆಯಲ್ಲಿ ಮತ್ತು ಒಟ್ಟು ವ್ಯವಹಾರದಲ್ಲಿ ಹತ್ತು ವರುಷದ ಹಿಂದಿನ ಆಕ್ರಮಣಶೈಲಿ ನನ್ನಲ್ಲಿ ಈಗ ಇಲ್ಲ. ನಾನು ಏಳು ವರ್ಷ ಮೇಳ ತಿರುಗಾಟ ಮಾಡಿ ಪಕ್ವವಾದದ್ದೇ ಇದಕ್ಕೆ ಕಾರಣವಿರಲೂಬಹುದು. ಯಾಕೆಂದರೆ ಹತ್ತಾರು ಊರುಗಳಲ್ಲಿ ಸಂಚಾರ, ಆಟ ಆಡಿಸುವ ಬೇರೆ ಬೇರೆ ಊರುಗಳ ಗಣ್ಯ ವ್ಯಕ್ತಿಗಳ ಒಡನಾಟ, ಬೇರೆ ಬೇರೆ ಮನೋಧರ್ಮದ ಜನಗಳ ಸಂಪರ್ಕ, ಕಲಾವಿದರು, ಕೆಲಸಗಾರರ ಮೇಲ್ವಿಚಾರಣೆ, 40 ವಿಭಿನ್ನ ಮನಸ್ಸಿನವರನ್ನೂ ಒಂದಾಗಿ ನಡೆಸುವ ವ್ಯವಸ್ಥಾಪಕತ್ವ, ನನ್ನನ್ನು ಪಕ್ವಗೊಳಿಸಿ ಬೆಳೆಸಿರಬಹುದು. ನನ್ನ ಮೇಲೆ ಇದ್ದ ಜವಾಬ್ದಾರಿ ಮತ್ತು ಹೊಣೆಗಾರಿಕೆ ಹಾಗೂ ಜನರ ಸಂಪರ್ಕ ಹೆಚ್ಚಾದಂತೆ ಜೀವನದಲ್ಲಿ ಪಕ್ವತೆ ಬರುತ್ತದೆ.


ಆಗಾಗ ಪೂಜ್ಯ ಖಾವಂದರು ವಾತ್ಸಲ್ಯದಿಂದ ಮಾತನಾಡುವಾಗ ಹಾಗೂ ಮಾನ್ಯ ಹರ್ಷೇಂದ್ರ ಕುಮಾರ್ ಅವರನ್ನು ಭೇಟಿಯಾದಾಗ ಹಲವಾರು ಸಲ ಕಿವಿಮಾತುಗಳನ್ನೂ ಹೇಳಿದ್ದಾರೆ. ‘‘ನಿಮ್ಮ ಆಕ್ರಮಣಶೈಲಿ ಇರಬಾರದು, ತುಂಬಾ ಸಾತ್ವಿಕವಾಗಿ ವ್ಯವಹರಿಸಬೇಕು’’ ಎಂದು ಮಾರ್ಗದರ್ಶನ ಮಾಡಿದ್ದಾರೆ. ಅವರ ಮಾತುಗಳು ನನ್ನ ಬೆಳವಣಿಗೆಗೆ ಕಾರಣವಾಯಿತು. ಕೆ. ಗೋವಿಂದ ಭಟ್‍ರಂತಹಾ ಹಿರಿಯರು ನನಗೆ ಎಷ್ಟೋ ಸಲ ‘‘ತಾಳ್ಮೆಯಲ್ಲಿ ವರ್ತಿಸಬೇಕು’’ ಎಂದು ಹೇಳಿದ್ದಾರೆ. ಇಂತಹಾ ಬುದ್ಧಿಮಾತುಗಳು ನಮ್ಮನ್ನು ಗಟ್ಟಿಗೊಳಿಸುತ್ತವೆ.


ಇನ್ನು ನಿಮ್ಮ ಪ್ರಶ್ನೆಗೆ ಬರುವುದಿದ್ದರೆ ಕಲಾವಿದರು ಪ್ರದರ್ಶನವನ್ನು ಉತ್ಕೃಷ್ಟ ಗೊಳಿಸುವಲ್ಲಿ ಯಾವುದೇ ಹಿರಿ ಕಿರಿತನವನ್ನು ತೋರಿಸದೆ ಸಹಕರಿಸಿದ್ದಾರೆ. ಕೆಲವೊಮ್ಮೆ ಮೇಳದಲ್ಲಿ ಕೆಲಸಗಾರರ ಸಂಖ್ಯೆ ಕಡಿಮೆಯಿದ್ದಲ್ಲಿ ಅನಿವಾರ್ಯ ಸಂದರ್ಭಗಳಲ್ಲಿ ಕಲಾವಿದರು ಯಾವುದೇ ಕೆಲಸವನ್ನು ಮಾಡಲು ಹಿಂಜರಿಯುವುದಿಲ್ಲ. ಕೆಲಸಗಾರರ ಹಾಜರಾತಿ ಕಡಿಮೆ ಇದ್ದಲ್ಲಿ ಅನಿವಾರ್ಯ ಸಂದರ್ಭದಲ್ಲಿ Load, Unload ಮಾಡಬೇಕಾದ ಸಂದರ್ಭಗಳಲ್ಲಿಯೂ ಕಲಾವಿದರು ತಮ್ಮ ಸೇವಾ ಹಿರಿತನವನ್ನು ಕೂಡಾ ನೋಡದೆ ಸಹಕರಿಸಿದವರಿದ್ದಾರೆ. ಆದ್ದರಿಂದ ಆ ಕಲಾವಿದರನ್ನೆಲ್ಲಾ ನಾನು ಅಭಿನಂದಿಸುತ್ತೇನೆ.


ಆದರೆ ಕೆಲವೊಮ್ಮೆ ಹಿರಿ ಕಿರಿಯ ಭೇದವಿಲ್ಲದೆ ಕೆಲವರು ಚಂಡಿ ಹಿಡಿದದ್ದೂ ಉಂಟು. ಆಟದ ಕ್ಯಾಂಪ್ ದೂರ ಹೋದಾಗ ಉದ್ದೇಶಪೂರ್ವಕವಾಗಿ ಹಲವು ಕಲಾವಿದರು ಒಂದೇ ದಿನ ರಜೆ ಮಾಡುವುದು. ಆಗ ಆಟ ಆಡಿಸುವವರು ನಮ್ಮನ್ನು ಪ್ರಶ್ನಿಸುವುದು. ಸ್ವಭಾವತಃ ನಾನು ವೇಷಧಾರಿಯಾದುದರಿಂದ ಕೆಲವೊಮ್ಮೆ  ಎರಡು ವೇಷ ಮಾಡಿದ್ದೂ ಉಂಟು. ಹಿರಿಯರಾದ ಶ್ರೀ ಶಿವರಾಮ ಜೋಗಿ, ಸಂಪಾಜೆ ಶೀನಪ್ಪ ರೈ, ಸಿದ್ಧಕಟ್ಟೆ ಚೆನ್ನಪ್ಪ ಶೆಟ್ಟಿ ಹಾಗೂ ಹೆಚ್ಚಿನ ಕಲಾವಿದರು ಒಂದೇ ದಿನ ಎರಡೆರಡು ವೇಷಗಳನ್ನು ಮಾಡಿದ್ದೂ ಉಂಟು. ಪದ್ಯಾಣ, ಕನ್ನಡಿಕಟ್ಟೆಯವರು ಒಬ್ಬರೇ ಒಂದು ದಿನ ಪೂರ್ತಿ ಭಾಗವತಿಕೆ ಮಾಡಿದ್ದೂ ಉಂಟು.


ಹೀಗೆ ಮೇಳದಲ್ಲಿ ಹಲವಾರು ಒಳ್ಳೆಯ ಸಂಗತಿಗಳೂ ಧನಾತ್ಮಕ ವಿಷಯಗಳೂ ಉಂಟು. ಹಾಗೆಯೇ ಋಣಾತ್ಮಕ ಅಂಶಗಳೂ ಇರುತ್ತವೆ. ಆದರೆ ಕೆಲವೊಮ್ಮೆ ಬಿಡಾರದ ವಿಷಯಕ್ಕೆ ಚರ್ಚೆ, ಊಟ, ತಿಂಡಿ ಸರಿಯಾಗಲಿಲ್ಲ ಎಂಬ ದೂರುಗಳು ಹೀಗೆ ಕೆಲವರು ಋಣಾತ್ಮಕವಾಗಿ ವರ್ತಿಸುವುದು. ಇಂತಹಾ ಒಳ್ಳೆಯ, ಕೆಟ್ಟ ಅಂಶಗಳು ಎಲ್ಲಾ ಸಂಸ್ಥೆಗಳಲ್ಲೂ ಇರುವಂತದ್ದು. ಬರೀ ಯಕ್ಷಗಾನ ಮೇಳಗಳಲ್ಲಿ ಮಾತ್ರ ಅಲ್ಲ. ಸಂಘಟನೆ ಮಾಡಿ ಗೊತ್ತಿಲ್ಲದವರು ಒಟ್ಟು ವ್ಯವಸ್ಥೆಯನ್ನು ದೂರುವುದು ಇದ್ದದ್ದೇ.


ಕಹಿ ಅನುಭವಕ್ಕಿಂತಲೂ ಸಿಹಿ ಅನುಭವಗಳೇ ಜಾಸ್ತಿ. ಅನುಭವ, ವ್ಯಕ್ತಿತ್ವ ನಿರ್ಮಾಣ, ದೊಡ್ಡ ಮಟ್ಟದ ಸ್ನೇಹಿತರ ವಲಯದ ನಿರ್ಮಾಣ, ಲೋಕಾನುಭವ, ನನ್ನ ತಾಳಮದ್ದಳೆಯ ಕ್ಷೇತ್ರದ ಬೆಳವಣಿಗೆ ಹೀಗೆ ಹಲವಾರು ಪ್ರಯೋಜನಗಳು ನನಗೆ ಮೇಳದಿಂದ ಆಗಿದೆ. ಮುಖ್ಯವಾಗಿ ಏಳು ವರ್ಷಗಳ ನನ್ನ ಮೇಳದ ಅನುಭವದಲ್ಲಿ Accountability ಹಾಗೂ ಹಣಕಾಸಿನ ನಿರ್ವಹಣೆಯ ಬಗ್ಗೆ ಯಜಮಾನಿಕೆಯ ಕಡೆಯಿಂದ ಒಂದೇ ಒಂದು ಆಕ್ಷೇಪ ಬರಲಿಲ್ಲ. ಮಾನ್ಯ ಡಾ| ಟಿ. ಶ್ಯಾಮ ಭಟ್ ಹೊರಗಿನ ಜನರಲ್ಲಿಯೂ ಕೂಡಾ ನನ್ನ ಬಗ್ಗೆ ಅಭಿಮಾನದ ಮಾತನ್ನಾಡಿದ್ದಾರೆ. ನಾನು ಮೇಳದ ಜವಾಬ್ದಾರಿಯಿಂದ ಮುಕ್ತನಾದ ಮೇಲೂ ನನ್ನ Accountability, ನಿರ್ವಹಣೆ ಮತ್ತು ಶಿಸ್ತುಬದ್ಧತೆಗಳ ಬಗ್ಗೆ ಶ್ರೀಯುತ ಶ್ಯಾಮ ಭಟ್ಟರು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಅದಕ್ಕಿಂತ ಹೆಚ್ಚು ಇನ್ನೇನು ಬೇಕು?


ವೈಯಕ್ತಿಕವಾಗಿ ನಾನು Strict. ಕೇಳದೆ ರಜೆ ಮಾಡಿದರೆ, ತಡವಾಗಿ ಬಂದರೆ ವೇಷ ಕೊಡದೆ ರಜೆ ಹಾಕಿದ್ದೂ ಉಂಟು. ಅದು ಸಾಮಾನ್ಯ ಕೆಲಸಗಾರನಿಂದ ತೊಡಗಿ ಭಾಗವತರ ವರೆಗೆ ನನ್ನ ಶಿಸ್ತು, ನಿಯಮಗಳು ಒಂದೇ ರೀತಿ ಇತ್ತು. ಅದನ್ನು ಕಾಪಾಡಿದ್ದೇನೆ ಎಂದು ಹೇಳಲು ಅಭಿಮಾನ, ಹೆಮ್ಮೆ ಇದೆ. ಅದನ್ನು ಈಗಲೂ ಕಲಾವಿದರು ಮುಕ್ತಕಂಠದಿಂದ ಹೊಗಳುತ್ತಾರೆ.
ಹಾಗೆಯೆ ನಾನು ಬಿಡಾರದಲ್ಲಿ ಅಥವಾ ಆಟ ಮುಗಿದ ಮೇಲೆ ಮುಕ್ತವಾಗಿ ವ್ಯವಹರಿಸುತ್ತಿದ್ದೆ. Enjoy ಮಾಡುತ್ತಾ ಇದ್ದೆವು. ಊಟ, ಕಾಫಿಗೆ ನಾನು ಪ್ರತ್ಯೇಕವಾಗಿ ಕುಳಿತಿರುತ್ತಿರಲಿಲ್ಲ. ನಾನು ಮೆನೇಜರ್ ಎಂದು ಅವರಿಂದ ದೂರವಿರುತ್ತಿರಲಿಲ್ಲ. ನನ್ನ ಶಿಸ್ತುಕ್ರಮಗಳಿಗೆ ಒಳಗಾದ ಕಲಾವಿದರೂ ಕೂಡಾ ಆಮೇಲೆ ‘‘ಆ ಸಂದರ್ಭದಲ್ಲಿ ಬೇಸರ ಆಗಿದ್ದರೂ ಈಗ ಆಲೋಚಿಸುವಾಗ ನಿಮ್ಮ ಶಿಸ್ತು ಸರಿ ಎಂದು ಕಾಣುತ್ತದೆ’’ ಎಂದು ಹೇಳುತ್ತಾರೆ.

ಪ್ರಶ್ನೆ: ಪರಂಪರೆಯ ಉಳಿಕೆ ಹೇಗೆ?
ಉಜಿರೆ: ಎಷ್ಟೋ ವರ್ಷಗಳಿಂದ ಈ ಪ್ರಶ್ನೆ ಕೇಳುತ್ತಲೇ ಇದ್ದಾರೆ. ಚರ್ಚಿಸುತ್ತಲೇ ಇದ್ದಾರೆ. ಎಲ್ಲಾ ಗೋಷ್ಠಿ, ಕಮ್ಮಟಗಳಲ್ಲಿ ವಿದ್ವಾಂಸರು ಮಾತನಾಡುತ್ತಲೇ ಬಂದಿದ್ದಾರೆ. ಆದರೆ ಪರಂಪರೆಯ ಅಂಶಗಳು ನಿಧಾನವಾಗಿ ಮರೆಯಾಗುತ್ತಲೇ ಇವೆ.
ಪರಂಪರೆಯ ಅಂಶವನ್ನು ಉಳಿಸುವ ಹೊಣೆ ಈಗ ಬಯಲಾಟದ ಮೇಳಗಳ ಹೆಗಲಿ ಗೇರಿದೆ. ಧರ್ಮಸ್ಥಳ, ಕಟೀಲು, ಮಂದಾರ್ತಿ, ಕಮಲಶಿಲೆಯಂತಹಾ ಮೇಳಗಳಿಗೆ ಕಲೆಕ್ಷನ್ ಅಥವಾ ಗಲ್ಲಾಪೆಟ್ಟಿಗೆಯ ದೃಷ್ಟಿ ಇಲ್ಲದಿರು ವುದರಿಂದ ಈ ಮೇಳಗಳಲ್ಲಿ ಪೂರ್ವರಂಗ ಇನ್ನೂ ಕೂಡಾ ಜೀವಂತವಾಗಿದೆ. ಪರಂಪರೆಯನ್ನು ಉಳಿಸುವುದು ಮುಖ್ಯ.


ಭಾರತೀಯ ರಂಗಭೂಮಿಯಲ್ಲಿ 2500-3000 ಕಲೆಗಳು ಉಂಟು. ಅದರಲ್ಲಿ ಶಾಸ್ತ್ರೀಯ ಕಲೆಗಳು ಎಂಟು. ಇಷ್ಟೂ ಕಲೆಗಳಲ್ಲಿ ಯಕ್ಷಗಾನದಷ್ಟು ಶ್ರೀಮಂತ ಕಲೆ ಇನ್ನೊಂದಿಲ್ಲ. ಯಕ್ಷಗಾನದ ಶ್ರೀಮಂತಿಕೆ ಇರುವುದು ನಾಲ್ಕಂಗಗಳಲ್ಲಿ. ಇದನ್ನು ಉಳಿಸದಿದ್ದರೆ ಯಕ್ಷಗಾನ ಶ್ರೀಮಂತ ಕಲೆ ಎಂದು ಹೇಳಿಕೊಳ್ಳುವುದು ಹೇಗೆ? ಅದನ್ನು ಉಳಿಸುವ ಬದ್ಧತೆ ಬೇಕು. ಆ ನಿಟ್ಟಿನಲ್ಲಿ ಕಲಾವಿದರುಗಳು, ಮೇಳದ ಯಜಮಾನರು ಗಂಭೀರ ಚಿಂತನೆಯನ್ನು ಮಾಡಬೇಕು. ಯಕ್ಷಗಾನಕ್ಕೆ ಈಗ ಹರಿದು ಬರುತ್ತಿರುವ ಪ್ರೋತ್ಸಾಹ, ಸಂಪನ್ಮೂಲಗಳು ಹೆಮ್ಮೆಪಡುವಂತಹುದು ಆಗಿದೆ. ಕಲೆ, ಕಲಾವಿದರ ಮೇಲೆ ಅಭಿಮಾನ, ಪ್ರೀತಿಗಳು ಜಾಸ್ತಿಯಾಗಿದೆ. ಅದು ಸಂತೋಷಪಡುವ ವಿಚಾರವೇ. ಸ್ವಲ್ಪ ಶ್ರಮಪಟ್ಟರೆ ಕಲಾವಿದರಿಗೆ ಬಡತನವಿಲ್ಲ. ಬರಿಯ ವೈಯಕ್ತಿಕ ಅಭಿಮಾನಿಗಳನ್ನಷ್ಟೇ ಕಲಾಪೋಷಕರಾಗಿ, ಪ್ರಾಯೋಜಕರಾಗಿ ತೋರ್ಪಡಿಸುವ ಬದಲು ಕಲೆಯ, ಪರಂಪರೆಯ ಪೋಷಕರಾಗಬೇಕು.
ಬರಿಯ ಅಭಿಮಾನದಿಂದ ಕಲಾವಿದನ ಹೆಸರು ಹೇಳುವಾಗ ಚಪ್ಪಾಳೆ ತಟ್ಟುವುದು ಮಾತ್ರವಲ್ಲ, ಒಬ್ಬ ಕಲಾವಿದ ತಪ್ಪಿದಾಗ ಕರೆದು ಹೇಳುವ ಗುಣ ಬರಬೇಕು.


ಹೀಗೆ ನಮ್ಮ ಹಿರಿಯರು ಯಾವ ದಾರಿಯಲ್ಲಿ ಪರಂಪರೆಯ ಅಂಶಗಳನ್ನೂ ಮೈಗೂಡಿಸಿಕೊಂಡಿದ್ದಾರೆ ಎಂಬುದನ್ನು ನಾವು ಹಿಂತಿರುಗಿ ನೋಡದೆ ನಮಗೆ ಬೇಕಾದಂತೆ ಹೋದರೆ ಅದು ಯಕ್ಷಗಾನದ ದಾರಿಯಾಗುವುದಿಲ್ಲ.
ಇಂತಹಾ ಹಲವಾರು ಸಂಗತಿಗಳನ್ನು ಮನನ ಮಾಡಿಕೊಳ್ಳಬೇಕಾದರೆ ಕಲಾವಿದರಿಗೆ ಪುನಶ್ಚೇತನ ಶಿಬಿರದ ಅಗತ್ಯವಿದೆ. ವರ್ತಮಾನಕ್ಕೆ ಸ್ಪರ್ಧಿಯಾಗಿ ಹೋಗಬೇಕಾದ್ದು ಸತ್ಯ.


ಜೋಶಿಯವರು ಹೇಳುವಂತೆ ‘‘ಹಳತೆಲ್ಲವೂ ನಿಷೇಧವೂ ಅಲ್ಲ, ಹೊಸತೆಲ್ಲವೂ ಸ್ವೀಕಾರಾರ್ಹವೂ ಅಲ್ಲ’’. ಹಳೆಯ ಬಂದಣಿಕೆಗಳನ್ನು ತೆಗೆದು ಹೊಸತನ್ನಾಗಿ ಮಾಡಬೇಕು. ಹಳೆಯ ಹೂರಣವನ್ನು ಹೊಸ ಆವರಣದಲ್ಲಿ ಕಲೆಯನ್ನು ಅನಾವರಣ ಮಾಡಬೇಕು.
ಭಾರತೀಯ ರಂಗಭೂಮಿಯಲ್ಲಿ ಇತರ ಉತ್ತಮ ಕಲೆಗಳಾದ ಕಥಕ್ಕಳಿ, ಭರತನಾಟ್ಯ ಇತ್ಯಾದಿ ಕಲೆಗಳ ಉತ್ತಮ ಅಂಶಗಳನ್ನು ಮೈಗೂಡಿಸಿಕೊಂಡು ಯಕ್ಷಗಾನದ ಸ್ವರೂಪದಲ್ಲೇ ಬಳಸಿಕೊಂಡರೆ ಅಪರಾಧವೂ ಅಲ್ಲ, ಆಕ್ಷೇಪಾರ್ಹವೂ ಅಲ್ಲ. ಆದರೆ, ಯಕ್ಷಗಾನವೇ ಆಗಿರಬೇಕೇ ಹೊರತು ಅದು ಇತರ ಕಲೆಗಳೇ ಆಗಿ ರೂಪಾಂತರಗೊಂಡಂತೆ ಕಾಣಬಾರದು.


ಹವ್ಯಾಸೀ ತಂಡಗಳು ಮಹಿಳಾ ತಂಡಗಳು ಮತ್ತು ವಿದ್ಯಾಸಂಸ್ಥೆಯ ಮಕ್ಕಳ ತಂಡಗಳು ಮೊದಲಾದುವುಗಳಲ್ಲಿ ಪೂರ್ವರಂಗದ ಸೊಗಡು ಮತ್ತು ಇತರ ಪರಂಪರೆಗಳನ್ನು ಅನುಸರಿಸುವುದು ಕಾಣಿಸುತ್ತದೆ. ಇದು ಒಳ್ಳೆಯ ಬೆಳವಣಿಗೆ.
ಆದರೆ ಕೆಲವು ಮಕ್ಕಳು ಕೆಲವೊಮ್ಮೆ ವೃತ್ತಿಪರ ರಂಗದಲ್ಲಿ ನಡೆಯುವ ಆಭಾಸಗಳನ್ನು ಸಾಮಾಜಿಕ ಜಾಲತಾಣದ ಮುಖೇನ ಅನುಸರಿಸುತ್ತಿರುವುದು ಆತಂಕದ ವಿಚಾರ.


ಆದರೆ ಒಟ್ಟು ಸಮಗ್ರವಾಗಿ ನೋಡಿದರೆ ಕಥಾನಿರೂಪಣೆ, ಪಾತ್ರ ನಿರೂಪಣೆಯ ಅಂಶ ಕಡಿಮೆ ಕಾಣುತ್ತಾ ಉಂಟು. ಮಾತುಗಾರಿಕೆಯಿಂದಲೇ ಬೆಳೆದ ಮಹಾನ್ ಕಲಾವಿದರಿರುವಾಗ ಈಗ ಬರಿಯ ಕುಣಿತಕ್ಕೆ ಪ್ರಾಧಾನ್ಯತೆ ಕೊಡುತ್ತಿರುವುದರಿಂದ ಒಟ್ಟು ಕಥೆಯು ಪ್ರೇಕ್ಷಕನಿಗೆ ಮುಟ್ಟಿರುವುದಿಲ್ಲ. ಮಾತುಗಾರಿಕೆಯ ಅಂಶ ಬಹಳ ಕಡಿಮೆಯಾಗುತ್ತಿರುವುದರಿಂದ ಪ್ರೇಕ್ಷಕನಿಗೆ ಕಥಾನಿರೂಪಣೆ ಆಗಿರುವುದಿಲ್ಲ.
ಸ್ವಗತದಲ್ಲಿ ಸನ್ನಿವೇಶದ ವಿವರಣೆ ಇಲ್ಲದಿರುವುದು, ಪಾತ್ರಾಪಾತ್ರಗಳ ಸ್ಪಂದನ ಇಲ್ಲದಿರುವುದು, ಏಕವ್ಯಕ್ತಿ ನಿರೂಪಣೆಯಂತೆ ಮಾತುಗಾರಿಕೆ ಇರುವುದು ಇವುಗಳೆಲ್ಲಾ ಕೊರತೆಯೆಂದು ಕಾಣಿಸುತ್ತಿದೆ. ನಾನು ನಿಷ್ಠುರವಾದಿ ಅಂತ ಅನ್ನಿಸಿಕೊಂಡರೂ ಪರವಾಗಿಲ್ಲ. ಇದರಿಂದ ಆರೋಗ್ಯಪೂರ್ಣ ಬೆಳವಣಿಗೆಯಾದರೆ ನಾನು ಹೆಮ್ಮೆಪಡುತ್ತೇನೆ.

ಪ್ರಶ್ನೆ: ಸಿಳ್ಳು, ಚಪ್ಪಾಳೆಯಲ್ಲಿ ಕಲಾವಿದ ಬೆಳೆಯುತ್ತಾ ಇದ್ದಾನೆ. ಕಲೆ ಕಳೆದುಹೋಗುತ್ತದೆ ಎಂಬ ಆರೋಪವಿದೆಯಲ್ಲ?
ಉಜಿರೆ:  ಅಭಿಮಾನಿ, ಪ್ರೇಕ್ಷಕರು ಹೊಡೆದ ಚಪ್ಪಾಳೆಗೆ ನಾವು ವಶವರ್ತಿಯಾಗಿರದೆ ನಮ್ಮ ನಿರ್ವಹಣೆ ಹೇಗಿತ್ತು ಎಂಬುದನ್ನು ಪ್ರತಿ ಕಲಾವಿದರು ಆತ್ಮಾವಲೋಕನ ಮಾಡಿಕೊಳ್ಳಬೇಕು. ಹಿಂದೆಲ್ಲಾ ಹಿರಿಯ ಕಲಾವಿದರು ವೇಷಕಟ್ಟಿ ತಯಾರಾಗಿ ಚಿಂತನೆಯಲ್ಲಿ ಮುಳುಗಿರುತ್ತಿದ್ದರು. ವೇಷ ಮುಗಿದ ಮೇಲೆ ಬಣ್ಣ ತೆಗೆಯುವ ಮೊದಲು ಇವತ್ತಿನ ತನ್ನ ಒಟ್ಟಾರೆ ನಿರ್ವಹಣೆ ಹೇಗಾಗಿದೆ ಎಂದು ಆಲೋಚಿಸುತ್ತಾ ಸುಮ್ಮನೆ ಕುಳಿತುಕೊಳ್ಳುತ್ತಿದ್ದರು.
ಸನ್ಮಾನ ಆಯಿತು, ಪ್ರಶಸ್ತಿ ಬಂತು ಎಂದು ಉಬ್ಬಿಕೊಳ್ಳದೆ, ಮೀಡಿಯಾ, ಪತ್ರಿಕೆಗಳಲ್ಲಿ ತನ್ನ ಬಗ್ಗೆ ಲೇಖನ ಬಂತು ಎಂದು ಅದಕ್ಕೆ ವಶವರ್ತಿಯಾಗದೆ ತನ್ನ ಇತಿಮಿತಿಗಳ ಪ್ರಜ್ಞೆ ಕಲಾವಿದರಿಗಿದ್ದರೆ ಒಳ್ಳೆಯದು. ತಾನೂ ಇನ್ನೂ ಬೆಳೆಯುವುದಕ್ಕಿದೆ, ಕಲಿಯುವುದಕ್ಕಿದೆ ಎಂಬ ಜ್ಞಾನ ಜಾಗೃತವಾಗಿದ್ದರೆ ಇನ್ನೂ ಎತ್ತರಕ್ಕೆ ಏರಬಹುದು.


ಸಿಳ್ಳು, ಚಪ್ಪಾಳೆಗಳು ವೇಷದ ಪ್ರವೇಶಕ್ಕೆ ಬರುವುದಲ್ಲ. ಉದ್ಗಾರ, ಚಪ್ಪಾಳೆಗಳು ಒಂದು ಪಾತ್ರದ ರಸ ಪ್ರತಿಪಾದನೆ, ನಿರ್ವಹಣೆ ಉತ್ತುಂಗ ಸ್ಥಿತಿಗೆ ಹೋದಾಗ ಬರಬೇಕು. ರಂಗಕ್ಕೆ ಬರುವಾಗ ಚಪ್ಪಾಳೆ ಅಲ್ಲ, ರಂಗದಿಂದ ಪಾತ್ರ ನಿರ್ಗಮಿಸುವಾಗ ಚಪ್ಪಾಳೆ ಬಂದರೆ ಅದು ಉತ್ತಮ ಪ್ರದರ್ಶನ.
ನನಗೆ ಮತ್ತು ಸುಬ್ರಾಯ ಹೊಳ್ಳರಿಗೆ ಗೌತಮ ಮತ್ತು ದೇವೇಂದ್ರರಾಗಿ ಕನ್ಯಾಂತರಂಗ ಪ್ರಸಂಗದಲ್ಲಿ ಒಂದು ಗೋವಿನ ವಿಚಾರಕ್ಕೆ ರಂಗದಲ್ಲಿ ಚರ್ಚೆ ಬೆಳೆಯುತ್ತದೆ. ಗೋಪೂಜೆ ಮತ್ತು ಗೋವಿನ ಮಹತ್ವದ ಬಗ್ಗೆ ಚರ್ಚೆ ಮುಂದುವರಿದು ಚರ್ಚೆಯ ಕೊನೆಯಲ್ಲಿ ಪ್ರೇಕ್ಷಕರು ಪ್ರತಿಕ್ರಿಯೆ ನೀಡುತ್ತಿದ್ದುದು. ಅದೇ ಪ್ರಸಂಗದಲ್ಲಿ ನನ್ನ ಮತ್ತು ಅಂಬಾಪ್ರಸಾದ ಪಾತಾಳರ ಗೌತಮ ಮತ್ತು ಅಹಲ್ಯೆಯಾಗಿ ದುಃಖದ ಸನ್ನಿವೇಶದಲ್ಲಿ ನಮ್ಮ ಸಂಭಾಷಣೆ ಬೆಳೆದು ಕೊನೆಗೆ ಬ್ರಹ್ಮದಂಡವನ್ನು ಎಸೆದು ಕೊನೆಯಲ್ಲಿ ಆ ಪಾತ್ರಕ್ಕೆ ಮತ್ತು ಪ್ರಸಂಗಕ್ಕೊಂದು ಭರತವಾಕ್ಯ ಹೇಳಿ ನಿರ್ಗಮಿಸುವಾಗ ಪ್ರೇಕ್ಷಕರು ಚಪ್ಪಾಳೆ ಹೊಡೆಯುತ್ತಿದ್ದರು. ಪ್ರಸಂಗ ನೂರಕ್ಕೂ ಹೆಚ್ಚು ಬಾರಿ ಪ್ರದರ್ಶಿತವಾದಾಗಲೂ ಈ ಕೊನೆಯ ಸಂದರ್ಭದಲ್ಲಿ ಪ್ರೇಕ್ಷಕರು ಚಪ್ಪಾಳೆ ಹೊಡೆದಿದ್ದರು.


ರಾಮಸೇತು ಪ್ರಸಂಗದಲ್ಲಿ ಅಗ್ನಿಪರೀಕ್ಷೆಯ ಭಾಗ. ಅಂಬಾಪ್ರಸಾದರ ಸೀತೆ, ನನ್ನದು ರಾಮ, ಲಾೈಲ ರಾಧಾಕೃಷ್ಣರ ಲಕ್ಷ್ಮಣ. ಪದ್ಯಾಣರ ಹಿಮ್ಮೇಳ. ಆಗಲೂ ಹಾಗೆಯೇ. ಇಪ್ಪತ್ತು ನಿಮಿಷ ರಾಮ ಒಂದು ಸ್ಥಿತಿಯಲ್ಲಿ ಮೌನವಾಗಿ ಬಿಲ್ಲನ್ನು ಊರಿ ನಿಲ್ಲುವುದು. ಆ ಕೊನೆಯ ಸಂದರ್ಭದಲ್ಲಿ ಪ್ರೇಕ್ಷಕರು ಚಪ್ಪಾಳೆ ಹೊಡೆಯುತ್ತಿದ್ದರು.
ಮುಂಬಯಿಯಲ್ಲಿ ನಡೆದ ಪ್ರದರ್ಶನದಲ್ಲಿ ಅಗ್ನಿಪರೀಕ್ಷೆಯ ಕೊನೆಗೆ ರಾಮ-ಸೀತೆ ಒಂದಾಗುವ ಸನ್ನಿವೇಶದಲ್ಲಿ ಸಭೆಯಿಂದ ನಾಲ್ಕು ಜನ ಪ್ರೇಕ್ಷಕರು ರಂಗಸ್ಥಳಕ್ಕೆ ಬಂದು ಸಾಷ್ಟಾಂಗ ನಮಸ್ಕಾರ ಮಾಡಿದ್ದರು. ಪ್ರೇಕ್ಷಕರ Involvement ಅಷ್ಟಿತ್ತು.
ಆದ್ದರಿಂದ ಒಣಪ್ರತಿಷ್ಠೆ, ಪಾತ್ರ ಪ್ರತಿಷ್ಠೆಗಿಂತಲೂ ರಂಗಭೂಮಿಯಲ್ಲಿಯೂ ಭಾವನಾತ್ಮಕವಾಗಿ ರಸಪ್ರತಿಪಾದನೆ ಮಾಡಿದರೆ ಪ್ರೇಕ್ಷಕರ Involvement ಉಂಟು ಎಂಬುದಕ್ಕೆ ಇದೇ ಸಾಕ್ಷಿ. ಪಾತ್ರದ ನಿರ್ವಹಣೆಯ ಮೊದಲು ಮತ್ತು ನಂತರ ಪಾತ್ರಾವಲೋಕನ ಅಗತ್ಯ. ಈಗ ಅದಕ್ಕೆಲ್ಲಾ ಸಮಯವೆಲ್ಲಿದೆ? ಈಗ ಹೆಚ್ಚಿನವರು ಪದ್ಯ, ಪ್ರವೇಶಕ್ಕೆ ಆಗುವಾಗಲೇ ಕಿರೀಟ ಕಟ್ಟುವುದಷ್ಟೇ. ಇನ್ನೂ ಚಿಂತನೆಗೆ ಸಮಯವೆಲ್ಲಿದೆ?

ಪ್ರಶ್ನೆ: ಮೊದಲು ಮತ್ತು ಈಗ ತಾಳಮದ್ದಳೆಯಲ್ಲಿ ಕೆಲವೊಮ್ಮೆ ನಡೆಯುವ ವಿಪರೀತ ಚರ್ಚೆ, ವಾದಗಳ ಬಗ್ಗೆ ಏನು ಹೇಳುತ್ತೀರಿ?
ಉಜಿರೆ: 
 ಎಷ್ಟೋ ತಾಳಮದ್ದಳೆಗಳಲ್ಲಿ ಜಟಾಪಟಿಯಾಗಿವೆ. ಆದರೆ ಅರ್ಧಕ್ಕೆ ನಿಲ್ಲುವುದನ್ನು ಸಮರ್ಥಿಸಲಿಕ್ಕಾಗುವುದಿಲ್ಲ. ಆದರೆ ಹಿಂದಿನ ಆ ಮಹಾನ್ ಕಲಾವಿದರನ್ನು ಅದಕ್ಕಾಗಿ ವಿಮರ್ಶಿಸುವಷ್ಟು ದೊಡ್ಡ ವ್ಯಕ್ತಿ ನಾನಲ್ಲ. ಯಾಕೆಂದರೆ ನಾವು ಹಿಂದಿನ ಆ ಕಲಾವಿದರು ತಾಳಮದ್ದಳೆ ಹಾಗೂ ಯಕ್ಷಗಾನ ಕ್ಷೇತ್ರಕ್ಕೆ ಕೊಟ್ಟ ಅದ್ಭುತ ಕೊಡುಗೆಗಳನ್ನು ಸ್ಮರಿಸಬೇಕು. ಅಂತಹಾ ಅದ್ಭುತ ಸಾಧನೆ, ಕೊಡುಗೆ, ಅರ್ಥಗಾರಿಕೆಗಳ ನಡುವೆ ನಿಂತು ಹೋದ ತಾಳಮದ್ದಳೆಗಳು ಮರೆತು ಹೋಗುತ್ತದೆ. ಅದಕ್ಕಾಗಿ ಆ ಮಹಾನ್ ಹಿರಿಯ ಕಲಾವಿದರನ್ನು ಗೌರವಿಸುತ್ತೇನೆ.


ಆದರೆ ಈಗ ಅಂದರೆ ಈ ಕಾಲದಲ್ಲಿ ತಾಳಮದ್ದಳೆ ನಿಂತುಹೋಗದಿದ್ದರೂ ವಿಪರೀತ ಚರ್ಚೆ ಆಗಿದೆ. ವಾದ-ವಿವಾದ ವಿಕೋಪಕ್ಕೆ ಹೋಗಿ ಪ್ರೇಕ್ಷಕರಲ್ಲಿಯೂ ಎರಡು ಗುಂಪುಗಳಾಗುವುದು. ಅವನದ್ದು ಸರಿ ಮತ್ತು ಇವನದ್ದು ಸರಿ ಎಂದು ಗುಂಪುಗಾರಿಕೆ ಮಾಡುವುದು ಇತ್ಯಾದಿ ಪ್ರಸ್ತುತ ನಡೆದದ್ದೂ ಸರಿಯಾದ ಬೆಳವಣಿಗೆಯಲ್ಲ.
ಮುಂದೆ ನಡೆಯಬೇಕಿದ್ದ ವಿಷಯಗಳನ್ನು ಅರ್ಥಗಾರಿಕೆಯಲ್ಲಿ ಉಲ್ಲೇಖಿಸುವುದು, ಪಾತ್ರಕ್ಕೆ ತಿಳಿಯದಿದ್ದ ಘಟನೆಗಳನ್ನು ಆ ಪಾತ್ರಧಾರಿ ಉಲ್ಲೇಖಿಸುವುದು ಇತ್ಯಾದಿಗಳನ್ನು ನಾವು ಅಂಗೀಕರಿಸಲಿಕ್ಕಾಗುವುದಿಲ್ಲ. ಹೋಲಿಕೆ ಇರಬೇಕಾದ್ದೆ. ಆದರೆ ಹೋಲಿಸುವಾಗ ಪುರಾಣ ಪಾತ್ರಗಳು ವರ್ತಮಾನಕ್ಕೆ ಬರಬಾರದು. ಪ್ರೇಕ್ಷಕರನ್ನು ಪುರಾಣಲೋಕಕ್ಕೆ ಕೊಂಡೊಯ್ಯಬೇಕು.

ಅಶೋಕ ಭಟ್ಟರು ಮಾತುಕತೆಯ ನಡುವೆ ಹೇಳಿದ್ದು :

ಸುಣ್ಣಂಬಳ ವಿಶ್ವೇಶ್ವರ ಭಟ್ಟರು ಮತ್ತು ನಾನು ಸಹಪಾಠಿಗಳು. ಶಾಲಾ ದಿನಗಳಿಂದಲೇ ಅಂದರೆ ಅಡ್ಯನಡ್ಕ ಜನತಾ ಹೈಸ್ಕೂಲ್‍ನಲ್ಲಿ ನಡೆಯುತ್ತಿದ್ದ ಚರ್ಚಾ ಸ್ಪರ್ಧೆಗಳಲ್ಲಿ ನಾನು ಮತ್ತು ಸುಣ್ಣಂಬಳರು ಭಾಗವಹಿಸುತ್ತಿದ್ದೆವು. ಆಗಿನಿಂದಲೇ ಚರ್ಚಾಸ್ಪರ್ಧೆಯಲ್ಲಿ ಯಾವುದೇ ವಿಷಯಗಳಲ್ಲಿ ನಾವಿಬ್ಬರು ಪರ, ವಿರೋಧ ವಾದ ಮಾಡುತ್ತಿದ್ದೆವು. ಕಲಾವಿದ ಅಡ್ಯನಡ್ಕ  ಉದಯ ಕುಮಾರ್, ಪೆರುವೋಡಿ ಸುಬ್ರಹ್ಮಣ್ಯ ಕುಮಾರ್ ನನ್ನ ಸಹಪಾಠಿಗಳು. ದೇಲಂತ ಮಜಲು ಸುಬ್ರಹ್ಮಣ್ಯ ಭಟ್ ನನಗಿಂತ ಜೂನಿಯರ್. ಆಗ ನಾವು ಏಳೆಂಟು ಮಂದಿ ಯಕ್ಷಗಾನ ಆಸಕ್ತರಿದ್ದೆವು. ಇವೆಲ್ಲಾ ಯಕ್ಷಗಾನದಲ್ಲಿ ನನ್ನ ಬೆಳವಣಿಗೆಗೆ ಕಾರಣವಾಯಿತು.


           ನಾನು ನಿಜವಾಗಿ ಉಜಿರೆ ಕಾಲೇಜಿನಲ್ಲಿ ವಾಣಿಜ್ಯ ವಿಭಾಗವನ್ನು ಆಯ್ದುಕೊಂಡದ್ದು ಮುಂದಕ್ಕೆ M.Com, C.A. ಪದವೀಧರನಾಗಬೇಕೆಂದೂ ಅಥವಾ ಬ್ಯಾಂಕ್ ಉದ್ಯೋಗಿಯಾಗಬೇಕೆಂಬ ಬಯಕೆಯಿಂದಲೂ ಆಗಿತ್ತು. ಇದೆಲ್ಲಾ ಕಲ್ಪನೆಗಳಾಗಿತ್ತು. ನಾನು ಪಿಯುಸಿಯಲ್ಲಿರುವಾಗ ಅನಿರೀಕ್ಷಿತವಾಗಿ ನನ್ನ ತೀರ್ಥರೂಪರು ತೀರಿಕೊಂಡರು. ಮತ್ತೆ ಖಾಸಗಿಯಾಗಿ ಡಿಗ್ರಿ ಮುಗಿಸಿದೆ. ಆರ್ಥಿಕ ಹಿನ್ನಡೆಯ ಕಾರಣದಿಂದ ವಿದ್ಯಾಭ್ಯಾಸ ಮುಂದುವರಿಯಲಿಲ್ಲ. ಇಲ್ಲಿ ಖಾಸಗಿ ಉದ್ಯೋಗಿಯಾಗಿಯೂ ಇದ್ದೆ. ಸುಬ್ರಾಯ ಶೆಣೈ ಎಂಬ ಸಂಘ ಚಾಲಕರು ಆಶ್ರಯ ಕೊಟ್ಟರು. ಗುರುಗಳಾದ ಪ್ರೊ| ಎಸ್. ಎಸ್. ಐತಾಳರ ಮನೆಯಲ್ಲಿ ವಿದ್ಯಾರ್ಥಿಯಾಗಿದ್ದಾಗ ವಾಸ ಮಾಡುತ್ತಿದ್ದೆ. ಎಲ್ಲ ದೃಷ್ಟಿಯಿಂದಲೂ ಐತಾಳರು ಮತ್ತು ಅವರ ಶ್ರೀಮತಿ ಜಯಶ್ರೀ ಅಮ್ಮನವರು ಹಾಗೂ ಸುಬ್ರಾಯ ಶೆಣೈ ಅವರನ್ನು ನಾನು ಬದುಕಿನಲ್ಲಿ ನೆನಪಿಸಲೇ ಬೇಕು. ಹಾಗೂ ನನ್ನ ಅನೇಕ ಮಿತ್ರರು ನನ್ನ ಏಳ್ಗೆಗೆ ಕಾರಣರಾದರು. ಜೊತೆಗೆ ಧರ್ಮಸ್ಥಳದ ಕ್ಷೇತ್ರದ ಆಶ್ರಯವೂ ಸಿಕ್ಕಿತು. ಶ್ರೀ ಕ್ಷೇತ್ರದ ಪೂಜ್ಯ ಖಾವಂದರ ಹಾಗೂ ಹರ್ಷೇಂದ್ರಕುಮಾರ್ ಅವರ ಕೃಪೆಯಿಂದ ಆಶ್ರಯ ಅವಕಾಶಗಳು ದೊರಕಿದುವು.   RSS,VHPಯ ಜೊತೆಗೆ ಯಕ್ಷಗಾನ ಚಟುವಟಿಕೆಗಳೂ ಬೆಳೆದುಬಂದುವು. ಅದೇ ರೀತಿ ಉಜಿರೆ ಜನಾರ್ದನ ಸ್ವಾಮಿ ದೇವಸ್ಥಾನದ ಮೊಕ್ತೇಸರರಾದ ಶ್ರೀ ವಿಜಯ ರಾಘವ ಪಡ್ವೆಟ್ನಾಯರ ಪ್ರೋತ್ಸಾಹ, ಸಹಕಾರಗಳು ನನಗೆ ಶ್ರೀರಕ್ಷೆಯಾಗಿದೆ.


ಶೇಣಿಯವರ ಒಡನಾಟದಿಂದ ಯಕ್ಷಗಾನ ಸಂಘಟಕನೂ ಆದೆ. ತಾಳಮದ್ದಳೆಗಳನ್ನು ಆಯೋಜಿಸುವುದು, ಶೇಣಿಯವರ ಅರ್ಥ ಕೇಳುವ ಆಸಕ್ತಿ, ಅವಕಾಶಗಳು ಇತ್ತು. ನಾನೇ ಸಂಘಟನೆ ಮಾಡುವ ಕಾರಣ ಒಂದು ಅಥವಾ ಎರಡು ಪದ್ಯದ ಅರ್ಥವೂ ಹೇಳುವ ಅವಕಾಶವೂ ಸಿಗುತ್ತಿತ್ತು. ಒಂದು ಸಣ್ಣ ಸ್ವಾರ್ಥವೂ ಇತ್ತು. ತಾಳಮದ್ದಳೆ ಸಂಘಟಿಸುವುದರಿಂದ ನಾನೂ ಅರ್ಥ ಹೇಳುವ ಅವಕಾಶವಿತ್ತು. ಅಲ್ಲಿ ಸಿಗುವ ಇಪ್ಪತ್ತು, ಐವತ್ತು ರೂಪಾಯಿಗಳು ಜೀವನ ನಿರ್ವಹಣೆಗೆ ಆಧಾರವಾಯಿತು. ಶೇಣಿ, ತೆಕ್ಕಟ್ಟೆ, ಪೆರ್ಲ, ಜೋಶಿಯವರಂತ ಹಿರಿಯ ಕಲಾವಿದರ ಒಡನಾಟವೂ ಸಿಕ್ಕಿತು. ಯಕ್ಷಗಾನದ ಆಸಕ್ತಿ ಅನುಭವಗಳೂ ಬೆಳೆಯಿತು. ಇದು ವಾಸ್ತವ.


ಪೂರ್ಣ ಪ್ರಮಾಣದ ಕಾಲಮಿತಿ ಮೇಳವನ್ನು ಮೊದಲು ಮಾಡಿದ ಹೆಗ್ಗಳಿಕೆಯು ಮಹಾ ಕಲಾಪೋಷಕರಾದ ಡಾ| ಟಿ. ಶ್ಯಾಮ ಭಟ್ಟರ ಸಂರಕ್ಷಕತ್ವದಲ್ಲಿ ಹೊಸನಗರ ರಾಮಚಂದ್ರಾಪುರ ಮಠದ ಹೆಸರಿನಲ್ಲಿ 2006ರಲ್ಲಿ ಹೊರಟ ಮೇಳಕ್ಕೆ ಸಲ್ಲುತ್ತದೆ. ಆ ಮೇಳ ದಿಗ್ವಿಜಯ ಸಾಧಿಸಿತು. ಆ ಮೇಳ ದಲ್ಲಿ ವ್ಯವಸ್ಥಾಪಕನಾಗಿ ಏಳು ವರ್ಷ ಇದ್ದೆ. ಅದನ್ನು ನಾನು ಅಭಿಮಾನದಿಂದ, ಹೆಮ್ಮೆಯಿಂದ ಹೇಳುತ್ತೇನೆ. ಡಾ| ಟಿ. ಶ್ಯಾಮ್ ಭಟ್ಟರು ಸ್ವಭಾವತಃ ಪುರಾಣ, ಕಥೆ, ಪಾತ್ರಗಳ ಬಗ್ಗೆ ಸಮಗ್ರ ಅನುಭವವಿರುವವರು. ಒಂದು ಪ್ರಸಂಗವನ್ನು edit ಮಾಡುವುದು ಹೇಗೆ? ಯಾವ ಸನ್ನಿವೇಶವನ್ನು ಹ್ರಸ್ವಗೊಳಿಸಬೇಕು, ಯಾವ ಭಾಗವನ್ನು ಬೆಳೆಸಬೇಕು. ಒಂದು ಪ್ರಸಂಗವನ್ನು ಸಮಗ್ರವಾಗಿ ಅದರ ಚಿತ್ರಣವನ್ನು ಕೊಡಬಲ್ಲ ಪೂರ್ಣ ಸಾಮರ್ಥ್ಯವುಳ್ಳವರು ಶ್ಯಾಮ ಭಟ್ಟರು. ಅವರ ಪುರಾಣಜ್ಞಾನ ಮತ್ತು ಪ್ರಸಂಗಜ್ಞಾನ ಅಪಾರ. ಮೂಲೆ ಮೂಲೆಯಲ್ಲಿರುವ ಪ್ರಸಂಗಗಳು, ಇತ್ತೀಚೆಗೆ ಪ್ರದರ್ಶನಕ್ಕೆ ಬಾರದೆ ಇದ್ದ ಪ್ರಸಂಗಗಳ ಪದ್ಯಗಳು ಅವರಿಗೆ ಗೊತ್ತಿದೆ. ಯಾವಾಗ ಓದಿದ್ದು, ಎಲ್ಲಿ ಓದಿದ್ದು ಅಂತ ಗೊತ್ತಿಲ್ಲ. ಅವರು ಏಕಪಾಠಿ. ಒಮ್ಮೆ ಅವರು ಓದಿದ್ರೆ, ಕೇಳಿದ್ರೆ ಅವರಿಗೆ ಮನಸ್ಸಿನಲ್ಲಿ ಅಚ್ಚೊತ್ತಿದ ಹಾಗೆ ಇರುತ್ತದೆ. ವಿಶ್ವನಾಥ ಶೆಟ್ಟರು ಬರೆದ ಹೊಸ ಪ್ರಸಂಗಗಳಾದ ಕನ್ಯಾಂತರಂಗ, ರಾಮಸೇತು, ಶಶಿವಂಶವಲ್ಲರಿ ಪುಸ್ತಕದಲ್ಲಿ ಒಮ್ಮೆ ಕಣ್ಣಾಡಿಸಿ, ಮರುದಿನ ಇಡೀ ಪದ್ಯದ ಸಂದರ್ಭವನ್ನು ಹೇಳುತ್ತಾರೆ ಮತ್ತು ಪದ್ಯ ಎತ್ತುಗಡೆ ಮಾಡುತ್ತಾರೆ.

“ನಮ್ಮ ‘ಕನ್ಯಾಂತರಂಗ’ ಪ್ರಸಂಗ ದಿಗ್ವಿಜಯ ಸಾಧಿಸಿತು. ನನಗೆ Star Value ತಂದುಕೊಟ್ಟ ಪ್ರಸಂಗ. ನನ್ನದು ಗೌತಮನ ಪಾತ್ರ. ನನ್ನ ಯಶಸ್ಸಿಗೆ ಸುಬ್ರಾಯ ಹೊಳ್ಳರ ದೇವೇಂದ್ರ ಮತ್ತು ಅಂಬಾಪ್ರಸಾದರ ಅಹಲ್ಯೆ ಹಾಗೂ ಪದ್ಯಾಣರ ಹಿಮ್ಮೇಳ ಕಾರಣ. ಸಿದ್ಧಕಟ್ಟೆ ವಿಶ್ವನಾಥ ಶೆಟ್ಟರೂ ಬಹಳ ಅನುಕೂಲಕರವಾಗಿ ಸಾಹಿತ್ಯ ಬರೆದಿದ್ದಾರೆ. ನನ್ನ ಗೌತಮನನ್ನೂ 10 ಬಾರಿ ನೋಡಿದವರಿದ್ದಾರೆ. ನನ್ನನ್ನು ‘ಗೌತಮ ಭಟ್ರು’ ಅಂತ ಕರೆದವರೂ ಇದ್ದಾರೆ. ಆ ಪಾತ್ರ ಜನರಿಗೆ ಒಂದು ವಿದ್ಯುತ್ಪ್ರಚಾರ ಮಾಡಿದಂತಾಯಿತು.”


ಪೂಜ್ಯ ಹೆಗಡೆಯವರು ‘‘ಕಾಲಮಿತಿಗೊಳಿಸುವಾಗ ದೃಶ್ಯಗಳನ್ನು ಕತ್ತರಿಸಿ Cut and paste ಮಾಡುವುದಲ್ಲ. ಕಥೆಯ ಸಂದರ್ಭಗಳನ್ನು ಕತ್ತರಿಸಬಾರದು. ಕಥಾ ನಿರೂಪಣೆ ಸಮರ್ಥವಾಗಿರಬೇಕು. ಬಿಟ್ಟುಹೋದ ದೃಶ್ಯ ಗಳನ್ನು ಕಲಾವಿದ ಮಾತಿನಲ್ಲಿ ತುಂಬಿಸಬೇಕು. ಪ್ರೇಕ್ಷಕರಿಗೆ ಕಥೆ ಗೊತ್ತಾಗುವಂತೆ ಕಲಾವಿದರ ನಿರೂಪಣೆ ಇರಬೇಕು’’ ಎಂದು ಹೇಳುತ್ತಾರೆ. ವರ್ತಮಾನ ಕಾಲದಲ್ಲಿ ಕಾಲಮಿತಿ ಪ್ರಸ್ತುತವೇ. ಆದರೆ ಕಾಲಮಿತಿಗೊಳ್ಳುವಲ್ಲಿ ಗಂಭೀರ ಚಿಂತನೆ ಕಲಾವಿದರಲ್ಲಿ ಇರಬೇಕು. ಡಾ| ವೀರೇಂದ್ರ ಹೆಗ್ಗಡೆಯವರ ಆಶಯ ಹಾಗೂ ಮಾತುಗಳು ಸತ್ಯಕ್ಕೆ ಹಿಡಿದ ಕನ್ನಡಿಯಾಗಿದೆ. ಈ ವರ್ಷ ಧರ್ಮಸ್ಥಳದಲ್ಲಿ ಮೇಳ ಹೊರಡುವ ಮೊದಲೇ ಎರಡು ದಿನಗಳ ಪುನಶ್ಚೇತನ ಶಿಬಿರ ಆಯಿತು. ಆ ಶಿಬಿರದಲ್ಲಿ ಪೂಜ್ಯ ಖಾವಂದರು ಮತ್ತು ಶ್ರೀ ಹರ್ಷೇಂದ್ರ ಕುಮಾರ್ ಅವರು ಕಲಾವಿದರಿಗೆ ಮಾರ್ಗದರ್ಶನ ಮಾಡಿದ್ದರು. ನನಗೂ ಆ ಶಿಬಿರದಲ್ಲಿ ಭಾಗವಹಿಸಲು ಅವಕಾಶ ಸಿಕ್ಕಿದ್ದು ಭಾಗ್ಯ ಎಂದು ಭಾವಿಸುತ್ತೇನೆ. ಅನೇಕ ಸಂಗತಿಗಳನ್ನು, ವಿಚಾರಗಳನ್ನು, ರಂಗಭೂಮಿಯನ್ನು ಹೇಗೆ ಕಾಣಬೇಕು ಎಂಬುದನ್ನು ಖಾವಂದರು ಆ ಶಿಬಿರದಲ್ಲಿ ಮಾರ್ಗದರ್ಶನ ಮಾಡಿದರು.


ಶೇಣಿಯವರು ಹೇಳುವಂತೆ ‘‘ನನ್ನನ್ನು ಹೊಗಳಿದವರಿಗಿಂತ ಹೆಚ್ಚು ಟೀಕಿಸಿದವರನ್ನು ಮೆಚ್ಚುತ್ತೇವೆ. ಟೀಕಿಸಿದಾಗ ಆತ್ಮಾಭಿಮಾನದಿಂದ ಹಾಗೂ ಸ್ವಲ್ಪಮಟ್ಟಿನ ಅಹಂಕಾರದಿಂದ ನಾನು ಸಮರ್ಥಿಸಿಕೊಂಡಿರಬಹುದು. ಆದರೆ ಆಮೇಲೆ ಮನೆಗೆ ಹೋಗಿ ಆತ್ಮಾವಲೋಕನ ಮಾಡಿ ತಪ್ಪನ್ನು ತಿದ್ದಿಕೊಂಡಿದ್ದೇನೆ. ಆದ್ದರಿಂದ ಹೊಗಳುವವರಿಗಿಂತ ಟೀಕಿಸುವವರೇ ನಮ್ಮ ನಿಜವಾದ ಆಸ್ತಿ.’’ ಈ ಮಾತನ್ನು ನಾನು ಕೂಡಾ ಅನುಸರಿಸುತ್ತೇನೆ.

ಉಜಿರೆ ಅಶೋಕ ಭಟ್ಟರು ಬಹಳಷ್ಟು ಮಾತನಾಡಿದರು. ಅವರ ಅಷ್ಟೂ ಮಾತುಗಳನ್ನು ಮೆಲುಕು ಹಾಕಿ ಜಾಡಿಸಿದಾಗ ಒಂದೂ ಕೂಡಾ ಜೊಳ್ಳು, ಕಸ ಕಡ್ಡಿಗಳು ಸಿಗಲಿಲ್ಲ. ಆದರೂ ನಾನು ಎಲ್ಲವನ್ನೂ ಬರೆಯಲಿಲ್ಲ  !

ಲೇಖನ: ಮನಮೋಹನ್ ವಿ.ಎಸ್ 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments