ಫೋಟೋ: ನವೀನ ಕೃಷ್ಣ ಭಟ್
ಯಕ್ಷಗಾನದಲ್ಲಿ ಸ್ತ್ರೀ ಪಾತ್ರಗಳನ್ನು ನಿರ್ವಹಿಸುವುದು ಅಷ್ಟು ಸುಲಭವಲ್ಲ. ಗಂಡುಕಲೆಯಲ್ಲಿ ಗಂಡಸರೇ ಸ್ತ್ರೀ ಪಾತ್ರಗಳನ್ನು ಮಾಡಿಕೊಂಡು ಬರುತ್ತಿದ್ದುದು ಮೊದಲಿನಿಂದಲೂ ನಡೆದುಬಂದ ರೀತಿ. ಇದಕ್ಕೆ ಕಾರಣಗಳು ಹಲವು ಇರಬಹುದು. ತಾನು ಧರಿಸಿದ ಪಾತ್ರವು ಹೆಣ್ಣು ಎಂಬ ಪ್ರಜ್ಞೆಯು ಕೊನೆಯ ತನಕವೂ ಕಲಾವಿದನಿಗೆ ಇರಲೇಬೇಕು. ಎಚ್ಚರ ತಪ್ಪಿದರೆ ಪಾತ್ರಕ್ಕೆ ಅಪಚಾರವಾಗುವುದಂತೂ ಖಂಡಿತ.
ಪೂರ್ವರಂಗದ ಮುಖ್ಯ ಸ್ತ್ರೀವೇಷವು ಸ್ತ್ರೀಸಹಜವಾದ ಹಾವಭಾವಗಳನ್ನೂ, ನಾಟ್ಯದಲ್ಲಿ ಲಯ ಸಾಮರ್ಥ್ಯವನ್ನೂ ಸಿದ್ಧಿಸಿಕೊಳ್ಳಲು ಅನುಕೂಲವಾಗುತ್ತದೆ. ಬಳಿಕ ಪ್ರಸಂಗಗಳಲ್ಲಿ ಪೋಷಕ ಪಾತ್ರಗಳನ್ನು ಮಾಡುತ್ತಾ, ಕಲಿತು ಬೆಳೆಯುತ್ತಾ ಪ್ರತಿಭೆಯ ಆಧಾರದಲ್ಲೇ ಮುಖ್ಯ ಸ್ತ್ರೀಪಾತ್ರಗಳನ್ನು ಮಾಡಿದಾಗ ಆ ಪಾತ್ರವು ಗೆಲ್ಲುತ್ತದೆ. ಪ್ರದರ್ಶನವೂ ರಂಜಿಸುತ್ತದೆ. ಹಿತಮಿತವಾದ ನಾಟ್ಯ, ಮಾತುಗಾರಿಕೆ ಯಕ್ಷಗಾನದ ಸ್ತ್ರೀ ಪಾತ್ರಗಳಿಗೆ ಸಾಕಾಗುತ್ತದೆ. ಆದರೆ ಭಾವನಾತ್ಮಕವಾಗಿ ಅಭಿನಯಿಸುವ ಕಲೆಯು ಕರಗತವಾಗಿರಲೇಬೇಕು. ಕೆಲವೊಂದು ಪದ್ಯಗಳಿಗೆ ಮಾತನಾಡಬೇಕೆಂದಿಲ್ಲ. ಭಾಗವತರ ಹಾಡನ್ನು ಅನುಸರಿಸುತ್ತಾ ಅಭಿನಯಿಸಿದರೆ ಸಾಕಾಗುತ್ತದೆ.
ಶೃಂಗಾರ, ಕರುಣ, ಭಕ್ತಿ ರಸಗಳಲ್ಲಿ ಅಭಿನಯಿಸಿ ತನ್ನ ಪ್ರತಿಭಾ ಪ್ರಕಟೀಕರಣಕ್ಕೆ ಸ್ತ್ರೀ ವೇಷಧಾರಿಗೆ ಯಕ್ಷಗಾನದಲ್ಲಿ ಹೆಚ್ಚು ಅವಕಾಶಗಳು ಇರುತ್ತವೆ. ಕಸೆ ಸ್ತ್ರೀ ವೇಷಗಳು ವೀರರಸ ಪ್ರಧಾನವಾಗಿರುತ್ತದೆ. (ಮೀನಾಕ್ಷಿ, ಶಶಿಪ್ರಭೆ, ಪ್ರಮೀಳೆ, ಸ್ವಯಂಪ್ರಭೆ ಮೊದಲಾದುವು). ಶೃಂಗಾರಕ್ಕೆ ಸಂಬಂಧಪಟ್ಟ ಪಾತ್ರಗಳಲ್ಲದೆ ಚಂದ್ರಮತಿ, ದಮಯಂತಿ, ದಾಕ್ಷಾಯಣಿ, ಅಕ್ಷಯಾಂಬರ ವಿಲಾಸದ ದ್ರೌಪದಿ ಮೊದಲಾದ ಪಾತ್ರಗಳನ್ನು ಪ್ರಬುದ್ಧ ಕಲಾವಿದರಿಂದ ಮಾತ್ರ ಮಾಡಲು ಸಾಧ್ಯ. ಕುಣಿತಕ್ಕೇ ಅವಕಾಶ ಇಲ್ಲದ ದಮಯಂತಿ ಪುನಃ ಸ್ವಯಂವರ ಪ್ರಸಂಗದ ದಮಯಂತಿ, ಚೈದ್ಯರಾಣಿ, ಸೌದಾಸ ಚರಿತ್ರೆಯ ಮದಯಂತಿ, ಕರ್ಣಬೇಧನದ ಕುಂತಿ, ಶ್ರೀಕೃಷ್ಣಲೀಲೆ ಕಂಸ ವಧೆ ಪ್ರಸಂಗದ ದೇವಕಿ, ಯಶೋದೆ, ಶಕುಂತಲಾ ಪರಿಣಯದ ಎರಡನೇ ಭಾಗದ ಶಕುಂತಲೆ ಮೊದಲಾದ ಪಾತ್ರಗಳನ್ನು ನಿರ್ವಹಿಸಿದಾಗ ಸ್ತ್ರೀ ಪಾತ್ರಧಾರಿಯೂ ಎಷ್ಟು ಪಕ್ವವಾಗಿದ್ದಾನೆ ಎಂದು ನೋಡುಗರಿಗೆ ತಿಳಿದುಕೊಳ್ಳಲು ಸಾಧ್ಯ.
ತೆಂಕುತಿಟ್ಟಿನಲ್ಲಿ ನಮಗೆ ತಿಳಿದಂತೆ ಕೋಳ್ಯೂರು ಶ್ರೀ ರಾಮಚಂದ್ರ ರಾವ್, ಪಾತಾಳ ವೆಂಕಟ್ರಮಣ ಭಟ್, ಮಂಕುಡೆ ಸಂಜೀವ ಶೆಟ್ರು, ಕೊಕ್ಕಡ ಈಶ್ವರ ಭಟ್, ಎಂ.ಕೆ. ರಮೇಶಾಚಾರ್ಯ, ಕುಂಬಳೆ ಶ್ರೀಧರ ರಾವ್, ಸಂಜಯ ಕುಮಾರ್ ಗೋಣಿಬೀಡು ಮೊದಲಾದವರು ತೆಂಕುತಿಟ್ಟಿನ ಸಂಪ್ರದಾಯದ ಚೌಕಟ್ಟಿನೊಳಗೇ ಅಭಿನಯಿಸಿ ಪ್ರಸಿದ್ಧರಾದವರು. ಹೊಸ ತಲೆಮಾರಿನ ಉದಯೋನ್ಮುಖರಿಗೆ ಇವರುಗಳು ಹಾಕಿ ಕೊಟ್ಟ ದಾರಿಯೇ ಸೂಕ್ತವಾದುದು. ಸಾಗಿದರೆ ಖಂಡಿತಾ ಅವರಂತೆಯೇ ಹೆಸರು ಗಳಿಸುತ್ತಾರೆ ಎಂಬುದು ನಿಸ್ಸಂಶಯ. ಹೀಗೆ ಪರಂಪರೆಯ ಚೌಕಟ್ಟನ್ನು ಮೀರದೆ ಪ್ರಸ್ತುತ ಕಲಾಸೇವೆಯನ್ನು ಮಾಡುತ್ತಿರುವವರಲ್ಲಿ ಒಬ್ಬರು ಶ್ರೀ ಅಂಬಾಪ್ರಸಾದ್ ಪಾತಾಳ.
ಶ್ರೀ ಅಂಬಾಪ್ರಸಾದ್ ಪಾತಾಳ ಅವರು ತೆಂಕುತಿಟ್ಟಿನ ಖ್ಯಾತ ಸ್ತ್ರೀ ವೇಷಧಾರಿಯಾಗಿ ಮೆರೆದು ಪ್ರಸ್ತುತ ವಿಶ್ರಾಂತಿ ಜೀವನವನ್ನು ನಡೆಸುತ್ತಿರುವ ಪಾತಾಳ ಶ್ರೀ ವೆಂಕಟ್ರಮಣ ಭಟ್ಟರ ಪುತ್ರ. ಪಾತಾಳ ವೆಂಕಟ್ರಮಣ ಭಟ್ ಮತ್ತು ಶ್ರೀಮತಿ ಪರಮೇಶ್ವರೀ ಅಮ್ಮ ದಂಪತಿಗಳ ಮಗನಾಗಿ ಪುತ್ತೂರು ತಾಲೂಕು ಉಪ್ಪಿನಂಗಡಿ ಗ್ರಾಮದ ಪಾತಾಳ ಎಂಬಲ್ಲಿ 1963 ಫೆಬ್ರವರಿ 21ರಂದು ಜನನ. ಇವರ ಮೂಲ ಮನೆ ಪುತ್ತೂರು ತಾಲೂಕು ಕಬಕ ಗ್ರಾಮದ ಬೆರಿಪದವು. ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾಗಿದ್ದ ಶ್ರೀ ಮಂಜಯ್ಯ ಹೆಗ್ಗಡೆಯವರು ಅಂಬಾ ಪ್ರಸಾದರ ಹಿರಿಯರಿಗೆ (ಅಜ್ಜ ಮತ್ತು ತಂದೆಯವರಿಗೆ) ಕೊಡಿಸಿದ ಸ್ಥಳವೇ ಪ್ರಸ್ತುತ ವಾಸಮಾಡುತ್ತಿರುವ ಪಾತಾಳ.
ಅಂಬಾ ಪ್ರಸಾದರು 3ನೇ ತರಗತಿ ವರೆಗೆ ಓದಿದ್ದು ಸಂಪಾಜೆ ಶಾಲೆಯಲ್ಲಿ. (ಅಜ್ಜನ ಮನೆಯಲ್ಲಿದ್ದು ಶಾಲೆಗೆ ಹೋಗಿದ್ದರು. ಅಂಬಾಪ್ರಸಾದರ ಅಜ್ಜ ತಾಳಮದ್ದಳೆಯ ಅರ್ಥಧಾರಿಯಾಗಿದ್ದರು). 4ರಿಂದ 7ನೇ ಕ್ಲಾಸಿನ ವರೆಗೆ ಉಪ್ಪಿನಂಗಡಿ ಸಂತ ಫಿಲೋಮಿನಾ ಶಾಲೆಯಲ್ಲಿ, ಹತ್ತನೇ ತರಗತಿ ವರೆಗೆ ಉಪ್ಪಿನಂಗಡಿ ಸರಕಾರಿ ಶಾಲೆಯಲ್ಲಿ ಓದಿದ್ದರು. ಎಳವೆಯಲ್ಲೇ ಯಕ್ಷಗಾನಾಸಕ್ತರಾಗಿ ಪ್ರದರ್ಶನಗಳನ್ನು ನೋಡುತ್ತಿದ್ದರು. ಶಾಲೆಯ ಅಧ್ಯಾಪಕರು ‘ನೀನು ಪಾತಾಳ ವೆಂಕಟ್ರಮಣ ಭಟ್ಟರ ಮಗ. ವೇಷ ಮಾಡು’ ಎಂದು ಹೇಳುತ್ತಿದ್ದರಂತೆ. ಅವರ ಪ್ರೋತ್ಸಾಹದ ನುಡಿಗಳು ನಾಟ್ಯ ಕಲಿಯುವಂತೆ ಪ್ರೇರೇಪಿಸಿತ್ತು. ನಾಟ್ಯ ಕಲಿಯದೆ ವೇಷ ಮಾಡಿ ತೀರ್ಥರೂಪರ ಹೆಸರಿಗೆ ಕೊರತೆಯಾಗಬಾರದು ಎಂಬ ಎಚ್ಚರವೂ ಅಂಬಾಪ್ರಸಾದರಿಗಿತ್ತು. ರಜಾದಿನಗಳಲ್ಲಿ ಉಪಾನ್ಯಾಸಕರೂ, ಕಲಾವಿದರೂ ಆಗಿದ್ದ ಆಳಿಕೆಯ ಕೆ.ವಿ.ಸುಬ್ರಾಯ ಅವರ ಮನೆಗೆ ತೆರಳಿ ಅವರಿಂದ ನಾಟ್ಯ ಕಲಿತರು.
ಶಾಲಾ ವಾರ್ಷಿಕೋತ್ಸವದ ಪ್ರದರ್ಶನಕ್ಕೆ ಗಿರಿಜಾ ಕಲ್ಯಾಣ ಪ್ರಸಂಗದ ಗಿರಿಜೆಯಾಗಿ ರಂಗವೇರಿದ್ದರು. ಬಳಿಕ ಅತಿಕಾಯ ಮೋಕ್ಷ ಪ್ರಸಂಗದ ಅತಿಕಾಯನಾಗಿಯೂ ವೇಷ ಮಾಡಿದ್ದರು. ವೃತ್ತಿ ಕಲಾವಿದನಾಗಿ ಮೇಳದ ತಿರುಗಾಟವನ್ನು ಮಾಡುವ ಬಯಕೆಯಾಗಿತ್ತು. ತಂದೆ ಬೇಡ ಎಂದು ಹೇಳಿದರೂ ಕೇಳದಷ್ಟು ತೀವ್ರವಾಗಿತ್ತು ಯಕ್ಷಗಾನದ ಸೆಳೆತ! ತನ್ನ ಕಷ್ಟ ಮಗನಿಗೆ ಬೇಡ ಎಂಬುದು ವೆಂಕಟರಮಣ ಭಟ್ಟರ ಆಕ್ಷೇಪಕ್ಕೆ ಕಾರಣವಿದ್ದಿರಬಹುದು. ಶಾಲಾ ದಿನಗಳಲ್ಲಿ ತಂದೆಯವರ ಜತೆ ಧರ್ಮಸ್ಥಳ ಮೇಳದ ಆಟಕ್ಕೆ ಹೋಗುತ್ತಿದ್ದರು. ಕಲಾವಿದರೆಲ್ಲಾ ಅಂಬಾಪ್ರಸಾದರನ್ನು ಪಾತಾಳ ವೆಂಕಟ್ರಮಣ ಭಟ್ಟರ ಮಗನೆಂಬ ಮಮತೆಯಿಂದ ಮಾತನಾಡಿಸುತ್ತಿದ್ದರು. ಶ್ರೀ ಕುಂಬಳೆ ಶ್ರೀಧರ ರಾಯರಿಂದ ಬಣ್ಣ ಕೇಳಿ ಮನೆಗೆ ತಂದು ಮೇಕಪ್ ಅಭ್ಯಾಸ ಮಾಡುತ್ತಿದ್ದರು.
ಕುಂದಾಪುರದ ಅಂಪಾರು ಶಾಲೆಯಲ್ಲಿ ಧರ್ಮಸ್ಥಳ ಮೇಳದ ಪ್ರದರ್ಶನ. ದ್ರೌಪದಿ ಸ್ವಯಂವರ ಪ್ರಸಂಗ. ಮೇಳದ ಕಲಾವಿದರೆಲ್ಲಾ ವೇಷ ಮಾಡಲು ಪ್ರೋತ್ಸಾಹ ನೀಡಿದ್ದರು. ಕುಂಬಳೆ ಶ್ರೀಧರ ರಾಯರೇ ಮೇಕಪ್ ಮಾಡಿ ವೇಷ ಮಾಡಿಸಿದ್ದರು. ಇವರು ದ್ರೌಪದಿಯಾಗಿ ಅಂಪಾರು ಶಾಲಾ ಮೈದಾನದಲ್ಲಿ ಧರ್ಮಸ್ಥಳ ಮೇಳದಲ್ಲಿ ಅಭಿನಯಿಸಲು ಅವಕಾಶವಾದುದನ್ನು ಈಗಲೂ ನೆನಪಿಸುತ್ತಾರೆ. ಆ ವರ್ಷವೇ ಶಾಸ್ತ್ರೀಯವಾಗಿ ನಾಟ್ಯ ಕಲಿಯಲು ನಿರ್ಧಾರವನ್ನೂ ಮಾಡಿದ್ದರು. 1978-79 ರಲ್ಲಿ ಧರ್ಮಸ್ಥಳ ಲಲಿತ ಕಲಾ ಕೇಂದ್ರಕ್ಕೆ ಶ್ರೀ ಕೆ. ಗೋವಿಂದ ಭಟ್ಟರಿಂದ ನಾಟ್ಯ ಕಲಿಯುವ ಸದವಕಾಶ ಸಿಕ್ಕಿತ್ತು. ಆಗ ನೆಡ್ಲೆ ನರಸಿಂಹ ಭಟ್ಟರು ಹಿಮ್ಮೇಳಕ್ಕೆ ಗುರುಗಳಾಗಿದ್ದವರು. ಕೇಂದ್ರದಲ್ಲಿ ಶ್ರೀ ಸುಬ್ರಹ್ಮಣ್ಯ ಶಾಸ್ತ್ರಿ. ತಾರಾನಾಥ ಬಲ್ಯಾಯ ವರ್ಕಾಡಿ, ಸರಪಾಡಿ ವಿಠಲ, ಮೇಗರವಳ್ಳಿ ಕೃಷ್ಣಮೂರ್ತಿ ಮೊದಲಾದವರು ಇವರ ಸಹಪಾಠಿಗಳಾಗಿದ್ದರು. ಕೇಂದ್ರದ ಪ್ರದರ್ಶನಗಳಲ್ಲಿ ದಕ್ಷಯಜ್ಞದ ಈಶ್ವರ, ಇಂದ್ರಕೀಲಕ ಪ್ರಸಂಗದ ಈಶ್ವರ, ಪಟ್ಟಾಭಿಷೇಕ ಪ್ರಸಂಗದ ಕೈಕೇಯಿ, ಪಂಚವಟಿ ಪ್ರಸಂಗದ ಸೀತೆಯಾಗಿ ಅಭಿನಯಿಸಿದ್ದರು.
ಅಂಬಾ ಪ್ರಸಾದರ ಮೊದಲ ತಿರುಗಾಟ ಶ್ರೀ ಧರ್ಮಸ್ಥಳ ಮೇಳದಲ್ಲಿ. ತಂದೆ ಪಾತಾಳ ವೆಂಕಟ್ರಮಣ ಭಟ್ಟರ ಜತೆ ತಿರುಗಾಟ (1978-79- ಕೆ.ಎಂ. ರಾಘವ ನಂಬಿಯಾರರು ಬರೆದ ‘ವಜ್ರಧರ ವಿಲಾಸ’ ಪ್ರಸಂಗ ವಿಜೃಂಭಿಸಿದ ವರ್ಷ) ಬಳಿಕ 4 ವರ್ಷ ಸುಂಕದಕಟ್ಟೆ ಮೇಳದಲ್ಲಿ ವ್ಯವಸಾಯ. ಪುತ್ತಿಗೆ ತಿಮ್ಮಪ್ಪ ರೈ ಭಾಗವತರು, ಕಟೀಲು ಶ್ರೀನಿವಾಸ ರಾವ್, ಮುಳಿಯಾಲ ಭೀಮ ಭಟ್, ತ್ರಿವಿಕ್ರಮ ಶೆಣೈ, ಬೇತ ಕುಂಞ ಕುಲಾಲ್, ಕರುವೊಳು ದೇರಣ್ಣ ಮೊದಲಾದವರ ಒಡನಾಟವೂ ಸಿಕ್ಕಿತ್ತು. ಅವಕಾಶಗಳೂ ಸಿಕ್ಕಿತ್ತು. ಭೂತರಾಜ ಕುಂಡಲೇಶ ವಿಜಯದಲ್ಲಿ ರಂಭೆ ಮತ್ತು ವಿಷ್ಣುವಿನ ಪಾತ್ರಗಳು ಒಳ್ಳೆಯ ಹೆಸರನ್ನು ನೀಡಿತ್ತು. ಗಂಧರ್ವ ಮೋಕ್ಷ ಪ್ರಸಂಗದ ವಿಮಲೆ, ಪ್ರತಾಪ ಜಯಂತಿ ಪ್ರಸಂಗದಲ್ಲಿ ಜಯಂತಿ ಪಾತ್ರದಲ್ಲೂ ಅಭಿನಯಿಸಿದರು. ಪ್ರತಾಪ ಜಯಂತಿ ಪ್ರಸಂಗವನ್ನು ತುಳುವಿನಲ್ಲಿ ಸ್ವರ್ಗದ ಪೊಣ್ಣು ಎಂಬ ಹೆಸರಿನಿಂದಲೂ ಆಡುತಿದ್ದರಂತೆ.
ಕೆ.ಗೋವಿಂದ ಭಟ್ ವಿರಚಿತ ಮೇಣಿಮೇಖಲಾ ರತ್ನಕಂಕಣ ಪ್ರಸಂಗದಲ್ಲಿ ಮಣಿಮೇಖಲೆಯಾಗಿ (ಕಸೆ ಸ್ತ್ರೀ ವೇಷ) ಅವಕಾಶವೂ ಸಿಕ್ಕಿತ್ತು. ದೇವಿಮಹಾತ್ಮೆ ಪ್ರಸಂಗದಲ್ಲಿ ಆದಿಮಾಯೆ, ಮಾಲಿನಿ,ಬ್ರಹ್ಮ, ಚಂಡಮುಂಡರು ಮೊದಲಾದ ಪಾತ್ರಗಳನ್ನು ಮಾಡುವ ಅವಕಾಶವೂ ಸಿಕ್ಕಿತ್ತು. ಪುತ್ತಿಗೆ ಶ್ರೀ ತಿಮ್ಮಪ್ಪ ರೈಗಳು, ಮುಳಿಯಾಲ ಭೀಮ ಭಟ್ಟರ ನಿರ್ದೇಶನದಲ್ಲಿ ಬೆಳೆಯುತ್ತಾ ಸಾಗಿದರು. ಸುಂಕದಕಟ್ಟೆ ಮೇಳಕ್ಕೆ ಅಗರಿ ಶ್ರೀನಿವಾಸ ಭಾಗವತರು ಆಗ ಅತಿಥಿ ಕಲಾವಿದರಾಗಿ ಬರುತ್ತಿದ್ದರು. ಕುಮಾರ ವಿಜಯ ಪ್ರಸಂಗ. ಅಗರಿಯವರು ಹೇಳಿಕೊಟ್ಟು ಅಂಬಾ ಪ್ರಸಾದರಿಂದ ಮಾಯಾ ಅಜಮುಖಿ ಪಾತ್ರವನ್ನು ಮಾಡಿಸಿದ್ದರಂತೆ.
ನಂತರ ಕರ್ನೂರು ಕೊರಗಪ್ಪ ರೈಗಳ ಸಂಚಾಲಕತ್ವದ ಕದ್ರಿ ಮೇಳದಲ್ಲಿ ವ್ಯವಸಾಯ. ಈ ಸಂದರ್ಭದಲ್ಲಿ ಮಾಂಬಾಡಿ ಸುಬ್ರಹ್ಮಣ್ಯ ಭಟ್, ಪುತ್ತಿಗೆ ರಘುರಾಮ ಹೊಳ್ಳರು, ಪೆರುವಡಿ ನಾರಾಯಣ ಭಟ್, ಪುಂಡಿಕಾಯಿ ಕೃಷ್ಣ ಭಟ್, ಮಂಕುಡೆ ಸಂಜೀವ ಶೆಟ್ರು, ಮೂಡಬಿದಿರೆ ಮಾಧವ ಶೆಟ್ರು, ಸಿದ್ದಕಟ್ಟೆ ಚೆನ್ನಪ್ಪ ಶೆಟ್ರು, ಡಿ. ಮನೋಹರ ಕುಮಾರ್, ಪೆರುವಡಿ ಶ್ಯಾಮ ಭಟ್ ಸಹಕಲಾವಿದರಾಗಿದ್ದರು. ಅಪರೂಪಕ್ಕೆ ಪೊಲ್ಯ ಲಕ್ಷ್ಮೀನಾರಾಯಣ ಶೆಟ್ಟರೂ ಅತಿಥಿ ಕಲಾವಿದರಾಗಿ ಭಾಗವಹಿಸುತ್ತಿದ್ದರು. ಗೆಜ್ಜೆದ ಪೂಜೆ ಪ್ರಸಂಗದಲ್ಲಿ ಹೊಳ್ಳರ ಹಾಡು, ಡಿ. ಮನೋಹರ ಕುಮಾರರ ನಾಗ ಎಂಬ ಪಾತ್ರ, ಅಂಬಾಪ್ರಸಾದರ ತುಳಸಿ ಪಾತ್ರಗಳನ್ನು ಪ್ರೇಕ್ಷಕರು ಬಹುವಾಗಿ ಮೆಚ್ಚಿಕೊಂಡಿದ್ದರು. ಅಲ್ಲದೆ ಜಾಲತುಳಸಿ (ಈ ಪ್ರಸಂಗದಲ್ಲಿ ಅಂಬಾ ಪ್ರಸಾದರದ್ದು ಈಶ್ವರ- ಶಿವತಾಂಡವ ನೃತ್ಯದೊಂದಿಗೆ), ಕಾಡಕಾಳಿಂಗ, ಕುಜುಂಬ ಕಾಂಜವೆ, ದಳವಾಯಿ ಮುದ್ದಣ್ಣೆ (ಈ ಪ್ರಸಂಗದಲ್ಲಿ ಅಂಬಾ ಪ್ರಸಾದರದ್ದು ಶಾಂತಲೆ ಪಾತ್ರ) ಮೊದಲಾದ ಪ್ರಸಂಗಗಳಲ್ಲಿ ವೇಷ ಮಾಡುವ ಅವಕಾಶ ಸಿಕ್ಕಿತ್ತು.
ನಂತರ ಕಸ್ತೂರಿ ಶ್ರೀ ವರದರಾಯ ಪೈಗಳ ಸುರತ್ಕಲ್ಲು ಮೇಳದಲ್ಲಿ ತಿರುಗಾಟ. ಪೂಕಳ ಲಕ್ಷ್ಮೀನಾರಾಯಣ ಭಟ್, ವೇಣೂರು ಸುಂದರ ಆಚಾರ್ಯ, ಎಂ.ಕೆ ರಮೇಶಾಚಾರ್ಯ, ಶಿವರಾಮ ಜೋಗಿ ಬಿ.ಸಿ.ರೋಡು ಸಹಕಲಾವಿದರಾಗಿದ್ದರು. ಅಗರಿ ಶ್ರೀ ರಘುರಾಮ ಭಾಗವತರು, ಪದ್ಯಾಣ ಗಣಪತಿ ಭಟ್ ಮತ್ತು ಕಡಬ ನಾರಾಯಣ ಆಚಾರ್ಯ ಮೊದಲಾದವರ ಸಮರ್ಥ ಹಿಮ್ಮೇಳವೂ ಸಿಕ್ಕಿತ್ತು. ಬಳಿಕ ಮಧೂರು ಶ್ರೀ ರಾಧಾಕೃಷ್ಣ ನಾವಡ, ಶ್ರೀ ಡಿ. ಮನೋಹರ ಕುಮಾರ್ ಮತ್ತು ಕುಂಬಳೆ ಗೋಪಾಲರ ನೇತೃತ್ವದ ಮಧೂರು ಮೇಳದಲ್ಲಿ 3 ವರ್ಷಗಳ ತಿರುಗಾಟ. ಪೂತ ಪೂಜೆ, ಮಣ್ಣುದ ಮಾಣಿಕ್ಯ ಮೊದಲಾದ ಪ್ರಸಂಗಗಳಲ್ಲಿ ಅಭಿನಯ. ಕಾಂಚನ ಸಂಜೀವ ರೈ, ಬೆಳ್ಳಾರೆ ವಿಶ್ವನಾಥ ರೈ, ಡಿ. ಸಂತೋಷಕುಮಾರ್, ಕೆದಿಲ ಜಯರಾಮ ಭಟ್ ಮೊದಲಾದ ಕಲಾವಿದರ ಜತೆ ತಿರುಗಾಟ.
ಬಳಿಕ ಬಡಗು ತಿಟ್ಟಿನ ಶಿರಸಿ ಮೇಳದಲ್ಲಿ 2 ವರ್ಷ ಕಲಾಸೇವೆ. ಬಡಗು ನಾಟ್ಯ ಕಲಿತದ್ದು ತಿರುಗಾಟದ ಸಂದರ್ಭ ಹಗಲು ಹೊತ್ತು. ಅದೂ ಸಹಕಲಾವಿದರಿಂದ. ಹಗಲು ಮಧ್ಯಾಹ್ನದ ವರೆಗೆ ನಾಟ್ಯಾಭ್ಯಾಸ. ಬಳಿಕ ವಿಶ್ರಾಂತಿ. ಕಪ್ಪೆಕೆರೆ ಮಹಾದೇವ ಹೆಗಡೆ, ಶಂಕರ ಭಾಗವತ ಯಲ್ಲಾಪುರ, ಹೆರಂಜಾಲು ಗೋಪಾಲ ಗಾಣಿಗ, ಎಂ. ಎ. ನಾಯ್ಕ, ಸದಾಶಿವ ಅಮೀನ್, ಉಪ್ಪುಂದ ನಾಗೇಂದ್ರ ಮೊದಲಾದ ಕಲಾವಿದರ ಒಡನಾಟ. ಪುರಾಣ ಪ್ರಸಂಗಗಳು. ಈ 2 ವರ್ಷಗಳ ತಿರುಗಾಟ ಮರೆಯಲಾಗದ ಅನುಭವ ಎಂದು ಅಂಬಾಪ್ರಸಾದರ ಅಭಿಪ್ರಾಯ.
ಬಳಿಕ ಶ್ರೀ ಡಿ. ಮನೋಹರ ಕುಮಾರರ ಕದ್ರಿ ಮೇಳದಲ್ಲಿ 3 ವರ್ಷ ತಿರುಗಾಟ. ಕದಿರೆದ ಬೊಳ್ಳಿ ಮೊದಲಾದ ಪ್ರಸಂಗಗಳಲ್ಲಿ ಮನೋಹರ ಕುಮಾರರ ಜತೆ ಜೋಡಿ ಪಾತ್ರಗಳಲ್ಲಿ ಅಂಬಾಪ್ರಸಾದರು ರಂಜಿಸಿದ್ದರು. ಬಳಿಕ ಶ್ರೀ ಕಿಶನ್ ಕುಮಾರ್ ಹೆಗ್ಡೆಯವರ ಮಂಗಳಾದೇವಿ ಮೇಳದಲ್ಲಿ 6 ವರ್ಷ. ಆಗ ಶಬರಾಯರು ಮತ್ತು ರವಿಚಂದ್ರ ಕನ್ನಡಿಕಟ್ಟೆ ಭಾಗವತರಾಗಿದ್ದರು. ಬಳಿಕ ವರ್ಕಾಡಿ ಐತಪ್ಪ, ಸರಪಾಡಿ ಅಶೋಕ ಶೆಟ್ರು, ಸೀತಾರಾಮ್ ಕುಮಾರ್ ಅವರ ಪುತ್ತೂರು ಮೇಳದಲ್ಲಿ 2 ವರ್ಷ. ಆಗ ಕೊಳ್ತಿಗೆ ನಾರಾಯಣ ಗೌಡರೂ ಸದ್ರಿ ಮೇಳದಲ್ಲಿ ಸಹಕಲಾವಿದರಾಗಿದ್ದರು.
ಬಳಿಕ ಕಿಶನ್ ಹೆಗ್ಡೆಯವರ ಕರ್ನಾಟಕ ಮೇಳದಲ್ಲಿ 3 ವರ್ಷ. ಬಳಿಕ 1 ವರ್ಷ ಎಡನೀರು ಮೇಳದಲ್ಲಿ. ಪದ್ಯಾಣ, ದಿನೇಶ್ ಅಮ್ಮಣ್ಣಾಯರು, ಶಬರಾಯರು ಭಾಗವತರಾಗಿದ್ದು, ಪ್ರಸಿದ್ಧ ಕಲಾವಿದರನ್ನೊಳಗೊಂಡ ತಂಡವಾಗಿತ್ತು. ಆ ವರ್ಷ ತಾರಾನಾಥ ಬಲ್ಯಾಯ ವಿರಚಿತ ‘ಗೋಕರ್ಣ’ ಎಂಬ ಪ್ರಸಂಗವು ರಂಜಿಸಿತ್ತು. ಬಳಿಕ ಹೊಸನಗರ ಮೇಳದಲ್ಲಿ 10 ವರ್ಷಗಳ ಕಲಾಸೇವೆ. ಕನ್ಯಾಂತರಂಗ, ಪುಣ್ಯಕೋಟಿ, ಶ್ರೀರಾಮ ಸೇತು, ಶಬರಿ ಪ್ರಸಂಗಗಳಲ್ಲಿ ಕ್ರಮವಾಗಿ ಅಹಲ್ಯೆ, ಪುಣ್ಯಕೋಟಿ, ಸೀತೆ ಮತ್ತು ಬಕುಳೆ ಪಾತ್ರಗಳನ್ನು ನಿರ್ವಹಿಸಿದ್ದರು. ಉಜಿರೆ ಅಶೋಕ ಭಟ್ಟರು ಗೌತಮನಾಗಿ, ಅಂಬಾ ಪ್ರಸಾದರು ಅಹಲ್ಯೆಯಾಗಿ, ಸಹಕಲಾವಿದರೆಲ್ಲರ ಸಹಕಾರಗಳಿಂದ ಕನ್ಯಾಂತರಂಗ ಎಂಬ ಪ್ರಸಂಗವು ಪ್ರೇಕ್ಷಕರನ್ನು ಬಹುವಾಗಿ ಆಕರ್ಷಿಸಿತ್ತು. ಬಳಿಕ 1 ವರ್ಷ ಸರಪಾಡಿ ಅಶೋಕ ಶೆಟ್ರ ಬಾಚಕೆರೆ ಮೇಳದಲ್ಲಿ ವ್ಯವಸಾಯ.
ಪ್ರಸ್ತುತ 3 ವರ್ಷಗಳಿಂದ ಅಂಬಾಪ್ರಸಾದ್ ಪಾತಾಳ ಅವರು ದೇಂತಡ್ಕ ಮೇಳದಲ್ಲಿ ಕಲಾಸೇವೆಯನ್ನು ಮಾಡುತ್ತಿದ್ದಾರೆ. ಛತ್ರಪತಿ ಶಿವಾಜಿ ಪ್ರಸಂಗದಲ್ಲಿ ಇವರು ನಿರ್ವಹಿಸಿದ ಜೀಜಾಬಾಯಿ ಪಾತ್ರವನ್ನು ಪ್ರೇಕ್ಷಕರನ್ನು ಮೆಚ್ಚಿಕೊಂಡಿದ್ದಾರೆ. ಶೃಂಗಾರ ರಸದ ಪಾತ್ರಗಳಿಗಿಂತಲೂ ಕರುಣರಸದ ಭಾವನಾತ್ಮಕ ಪಾತ್ರಗಳಲ್ಲಿ ಅಂಬಾಪ್ರಸಾದರಿಗೆ ಒಲವು ಹೆಚ್ಚು. ಬಾಚಕೆರೆ ಮೇಳದಲ್ಲಿ ಕಥಾನಾಯಕನೇ ಖಳನಾಯಕನಾಗಿ ಪರಿವರ್ತನೆ ಹೊಂದುವ ನೀಲಕಂಠ ಶಾಸ್ತ್ರಿ, ಬೇಡರ ಕಣ್ಣಪ್ಪದ ಕೈಲಾಸ ಶಾಸ್ತ್ರಿ, ರಾಣಿ ಮತ್ತು ಲೀಲಾ, ಶಬರಿಮಲೆ ಅಯ್ಯಪ್ಪ ಪ್ರಸಂಗದ ಕೇಳುಪಂಡಿತ ಮೊದಲಾದ ಪಾತ್ರಗಳನ್ನೂ ನಿರ್ವಹಿಸಿದ್ದಾರೆ. ಸಖಿ ಪಾತ್ರ ಸಣ್ಣದೆಂಬ ತಾತ್ಸಾರ ಸಲ್ಲದು. ಪೋಷಕ ಪಾತ್ರಗಳನ್ನು ಮಾಡಿಯೇ ಅನುಭವದಿಂದ ಬೆಳೆಯಬೇಕು. ರಂಗದಲ್ಲಿ ನಡೆಯಬೇಕಾದುದು ಭಾವಪ್ರಯೋಗ. ಮಾನ ಪ್ರಯೋಗ ಅಲ್ಲ ಎನ್ನುವ ಇವರು, ಧರಿಸುವ ಉಡುಪುಗಳು ಮಾನಮುಚ್ಚುವಂತಿರಬೇಕು ಎಂಬ ನಿಲುಮೆಯನ್ನು ಹೊಂದಿರುತ್ತಾರೆ.
ಬದುಕಿನಲ್ಲಿ ಸಾಕಷ್ಟು ಏಳುಬೀಳುಗಳನ್ನು ಕಂಡ ಅಂಬಾಪ್ರಸಾದರು ಕಲಾಪೋಷಕರಾದ ಡಾ. ಟಿ.ಶ್ಯಾಮ ಭಟ್ಟರು ನೀಡಿದ ಪ್ರೋತ್ಸಾಹ ಮತ್ತು ಸಹಕಾರಗಳನ್ನು ನೆನಪಿಸಿ ಅವರಿಗೆ ಗೌರವವನ್ನು ಸಲ್ಲಿಸುತ್ತಾರೆ. ಶ್ರೀ ಅಂಬಾಪ್ರಸಾದರದು ಒತ್ತಿ ನಾಲ್ಕು ದಶಕಗಳಿಗೂ ಮಿಕ್ಕಿದ ತಿರುಗಾಟ (43 ವರ್ಷ). ಹೊಸ ನಮೂನೆಗೆ ಅಂಟಿಕೊಳ್ಳದೆ ಪರಂಪರೆಯ ರೀತಿಯಲ್ಲೇ ಪಾತ್ರ ನಿರ್ವಹಣೆಯಿರಬೇಕು ಎನ್ನುವವರು. ತೀರ್ಥರೂಪರಾದ ಪಾತಾಳ ವೆಂಕಟ್ರಮಣ ಭಟ್ಟರ ರೀತಿಯಲ್ಲೇ ವೇಷಭೂಷಣಗಳನ್ನು ಉಪಯೋಗಿಸುತ್ತಾರೆ. ಯಕ್ಷಗಾನದಲ್ಲಿ ಕುಣಿತವೂ, ಅಭಿನಯವೂ ಜತೆಯಾಗಿ ಸಾಗಬೇಕಾದರೆ ಭರತನಾಟ್ಯವು ಪೂರಕವಾಗಿರುತ್ತದೆ ಎಂಬುದು ಇವರ ಅನುಭವದ ಮಾತುಗಳು. ಸುಂಕದಕಟ್ಟೆ ಮೇಳದಲ್ಲಿರುವಾಗ ಹಗಲು ಮಂಗಳೂರಿನ ಶ್ರೀ ವಿಠಲ ಮಾಸ್ತರ್ ಅವರಿಂದ ಭರತನಾಟ್ಯ ಕಲಿತು ಯಕ್ಷಗಾನಕ್ಕೆ ಅಳವಡಿಸಿದ್ದರು.
ಹೊಸನಗರ ಮಠಾಧೀಶರಾದ ರಾಘವೇಶ್ವರ ಸ್ವಾಮಿಗಳ ನೇತೃತ್ವದ ರಾಮಕಥೆ, ಗೋಕಥೆ, ಶಿವಕಥೆ, ಅಂಬಾಕಥೆ ಮೊದಲಾದ ರೂಪಕ ಪ್ರದರ್ಶನಗಳಲ್ಲೂ ಭಾಗವಹಿಸಿರುತ್ತಾರೆ. ಪೂರ್ವರಂಗದ ಅರ್ಧನಾರೀಶ್ವರ, ಚಪ್ಪರಮಂಚ ಮೊದಲಾದ ಪಾತ್ರಗಳಲ್ಲಿ ಪರಿಣತರು. ಉಪ್ಪನಂಗಡಿ ಶ್ರೀರಾಮ ಶಾಲೆ, ಸರಕಾರೀ ಶಾಲೆಗಳಲ್ಲಿ ಮನೆಯಲ್ಲಿ ಕಲಿಕಾಸಕ್ತರಿಗೆ ಉಚಿತವಾಗಿ ನಾಟ್ಯ ತರಬೇತಿಯನ್ನೂ ನೀಡುತ್ತಿದ್ದಾರೆ. ಅಂಬಾಪ್ರಸಾದರು ಚಂದ್ರಮತಿ, ದಮಯಂತಿ, ಸುಭದ್ರೆ, ಚಿತ್ರಣಗದೆ, ಚೈದ್ಯರಾಣಿ ಮೊದಲಾದ ಪಾತ್ರಗಳನ್ನು ಅತೀವವಾಗಿ ಪ್ರೀತಿಸುತ್ತಾರೆ.
ಶ್ರೀಯುತರ ಮೊದಲ ಪತ್ನಿ ಶ್ರೀಮತಿ ಶಾಲಿನಿ ಅವರು ಇಬ್ಬರು ಪುತ್ರರಿಗೆ ತಾಯಿಯಾದ ಬಳಿಕ ಅನಾರೋಗ್ಯದ ಕಾರಣದಿಂದ ಮರಣಿಸಿದ್ದರು. ಬಳಿಕ ಜಯಂತಿ ಅವರು ಅಂಬಾಪ್ರಸಾದರ ಪತ್ನಿಯಾಗಿ ಈ ಇಬ್ಬರು ಮಕ್ಕಳಿಗೆ ತಾಯಿಯಾಗಿ ಒದಗಿದ್ದರು. ಅಲ್ಲದೆ ಇಬ್ಬರು ಹೆಣ್ಣುಮಕ್ಕಳನ್ನು ಹೆತ್ತು ಅಂಬಾಪ್ರಸಾದರ ಬಾಳಿಗೆ ಬೆಳಕಾಗಿದ್ದರು. ಅಂಪಾಪ್ರಸಾದ ಪಾತಾಳ ಮತ್ತು ಜಯಂತಿ ದಂಪತಿಗಳ ಬದುಕಿಗೆ ಹೀಗೆ ಬೆಳಕಾದವರು ನಾಲ್ಕು ಮಕ್ಕಳು. ಹಿರಿಯ ಪುತ್ರ ವೆಂಕಟೇಶ ಪ್ರಣವ ಪ್ರಸನ್ನ ಉದ್ಯೋಗಿ. ವಿವಾಹಿತ. ಇವರ ಪತ್ನಿ ಶ್ರೀಮತಿ ಶುಭಶ್ರೀ. ವೆಂಕಟೇಶ ಪ್ರಣವ ಪ್ರಸನ್ನರು ನಾಟ್ಯ ಕಲಿತು ವೇಷ ಮಾಡಿ ಅನುಭವವುಳ್ಳವರು. ದ್ವಿತೀಯ ಪುತ್ರ ತಿರುಮಲ ಪ್ರದೀಪ ಉದ್ಯೋಗಿ. ಜ್ಯೇಷ್ಠ ಪುತ್ರಿ ಪೌಷ ವಿವಾಹಿತೆ. ಗೃಹಣಿ. ಅಳಿಯ ಶ್ರೀ ಮಧುಕೇಶ್ವರ. ಕಿರಿಯ ಪುತ್ರಿ ಕು| ಪೂರ್ಣಶ್ರೀ. ೭ನೇ ತರಗತಿ ವಿದ್ಯಾರ್ಥಿನಿ. ಈಕೆ ಭರತನಾಟ್ಯ, ಸಂಗೀತ, ಯಕ್ಷಗಾನ ನಾಟ್ಯ ಕಲಿಯುತ್ತಿದ್ದಾಳೆ. ಜ್ಯೇಷ್ಠ ಪುತ್ರಿ ಪೌಷಳೂ ಯಕ್ಷಗಾನ ಅಭ್ಯಸಿಸಿದ್ದಳು.
ಅಂಬಾಪ್ರಸಾದರ ನಾಲ್ಕು ಮಂದಿ ಮಕ್ಕಳೂ ವೇಷಮಾಡಿ ಅನುಭವವುಳ್ಳವರು. ಶ್ರೀ ಅಂಬಾಪ್ರಸಾದರು ಸಂಪ್ರದಾಯದ ಚೌಕಟ್ಟನ್ನು ಮೀರದ ಸ್ತ್ರೀ ಪಾತ್ರಧಾರಿ. ಮಳೆಗಾಲದಲ್ಲಿ ಕುಂಬಳೆ ಚಂದು, ಮುಳಿಯಾಲ ಭೀಮ ಭಟ್, ಕುಂಬಳೆ ಸುಂದರ ರಾವ್, ನಯನಕುಮಾರ್, ಡಿ.ಮನೋಹರ ಕುಮಾರ್, ಪುತ್ತೂರು ಶ್ರೀಧರ ಭಂಡಾರಿ, ನಿಡ್ಲೆ ಗೋವಿಂದ ಭಟ್ಟರ ಪ್ರವಾಸೀ ತಂಡಗಳ ಪ್ರದರ್ಶನಗಳಲ್ಲೂ ಭಾಗವಹಿಸಿರುತ್ತಾರೆ. ಹೊಂದಾಣಿಕೆಯ ಸ್ವಭಾವವನ್ನು ಮೈಗೂಡಿಸಿಕೊಂಡಿರುವ ಇವರು ಯಾವ ಪಾತ್ರಗಳನ್ನೂ ಮಾಡಬಲ್ಲರು. ಸವ್ಯಸಾಚೀ ಆಪದ್ಬಾಂಧವ ಕಲಾವಿದ ಎಂದೂ ಹೇಳಬಹುದು. ಅನಿವಾರ್ಯಕ್ಕೆ ಮೇಳದ ತಿರುಗಾಟದಲ್ಲಿ ಪೂಜೆ, ಅಡುಗೆ ಕೆಲಸಗಳನ್ನು ನಿರ್ವಹಿಸಿ ಆಡಳಿತಕ್ಕೆ ನೆರವಾದ ಕಲಾವಿದರಿವರು. ಶ್ರೀ ಅಂಬಾಪ್ರಾಸಾದ ಪಾತಾಳ ಅವರಿಂದ ಇನ್ನಷ್ಟು ಕಲಾಸೇವೆಯು ನಡೆಯಲಿ. ಕಲಾಮಾತೆಯು ಸಕಲಭಾಗ್ಯಗಳನ್ನೂ ಅನುಗ್ರಹಿಸಲಿ. ಬದುಕು ನೆಮ್ಮದಿಯಿಂದ ಕೂಡಿದ್ದು, ಸುಂದರವಾಗಿರಲಿ. ಕಲಾಭಿಮಾನಿಗಳ ಪರವಾಗಿ ಶುಭಹಾರೈಕೆಗಳು.
- 10th Standard, Social – Economics Chapter 31 – ‘PUBLIC FINANCE AND BUDGET’ – Solutions
- 10th Standard, English Poem 8 – ‘Mending Wall’ – Solutions
- 10th Standard Social Science, Chapter 19 – ‘INDIA AFTER INDEPENDENCE’ – Solutions
- 9th Standard – English – UNIT 8 PROSE – ‘THE STORY-TELLER’ – Solutions
- 9th Social Science – Chapter 26 – ‘Community’ – Solutions