Saturday, January 18, 2025
Homeಯಕ್ಷಗಾನಬಹುಮುಖ ಪ್ರತಿಭೆಯ ಸಾಧಕ - ಬೆಳ್ಳಾರೆ ಕೆ. ಸೂರ್ಯನಾರಾಯಣ ಭಟ್ (ಜಲಜ ಸಖ)

ಬಹುಮುಖ ಪ್ರತಿಭೆಯ ಸಾಧಕ – ಬೆಳ್ಳಾರೆ ಕೆ. ಸೂರ್ಯನಾರಾಯಣ ಭಟ್ (ಜಲಜ ಸಖ)

ಬೆಳ್ಳಾರೆ ಕೆ. ಸೂರ್ಯನಾರಾಯಣ ಭಟ್ಟರು ಬಹುಮುಖ ಪ್ರತಿಭೆಯ ಸಾಧಕರು. ಯಕ್ಷಗಾನ ಸಂಘಟಕರಾಗಿ, ತಾಳಮದ್ದಳೆ ಅರ್ಥಧಾರಿಯಾಗಿ, ಒಳ್ಳೆಯ ಬರಹಗಾರರಾಗಿ. ಸಜ್ಜನ ವ್ಯಕ್ತಿಯಾಗಿ ಎಲ್ಲರಿಗೂ ಪರಿಚಿತರು. ಕಲಾಸೇವೆಯ ಜತೆ ಸಾಹಿತ್ಯಸೇವೆಯನ್ನೂ ಮಾಡಿ ಹೆಸರು ಗಳಿಸಿದ್ದಾರೆ. ಅನೇಕ ಪುಸ್ತಕಗಳನ್ನೂ ರಚಿಸಿರುತ್ತಾರೆ. ‘ಜಲಜ ಸಖ’ ಎಂಬುದು ಇವರ ಕಾವ್ಯನಾಮ. ಕಲಾವಿದರು, ಕಲಾಭಿಮಾನಿಗಳಿಗೆ ಶ್ರೀಯುತರು ಪ್ರೀತಿಯ ಬೆಳ್ಳಾರೆ ಸೂರ್ಯಣ್ಣ. ತೆರೆದು ಕಾಣಿಸಿಕೊಳ್ಳದೆ ಸದಾ ಮುಚ್ಚಿಕೊಳ್ಳುವ ಸ್ವಭಾವ ಇವರದು. ಆದರೂ ಎಲೆಮರೆಯ ಕಾಯಿಯಂತೆ ಕಲಾಸೇವೆಯನ್ನು ಮಾಡಿಕೊಂಡು ಬಂದವರು. 


ಬೆಳ್ಳಾರೆ ಕೆ. ಸೂರ್ಯನಾರಾಯಣ ಭಟ್ಟರ ಮೂಲಮನೆ ಕುಂಞಿಹಿತ್ತಿಲು ಎಂಬಲ್ಲಿ. 1938ನೇ ಇಸವಿ ಜುಲೈ 14ರಂದು ಕುಂಞಿಹಿತ್ತಿಲು ಶ್ರೀ ಗೋವಿಂದ ಭಟ್ ಮತ್ತು ಸರಸ್ವತಿ ಅಮ್ಮ ದಂಪತಿಗಳ ಮಗನಾಗಿ ಈ ಲೋಕದ ಬೆಳಕನ್ನು ಕಂಡವರು. ಅಜ್ಜನ ಮನೆ ಕುತ್ಯಾಡಿಯಲ್ಲಿ ಜನನ. ಕುಂಞಿಹಿತ್ತಿಲು ಗೋವಿಂದ ಭಟ್ ದಂಪತಿಗಳಿಗೆ ಎಂಟು ಮಂದಿ ಮಕ್ಕಳು. (ಐವರು ಪುತ್ರಿಯರು ಮತ್ತು ಮೂವರು ಪುತ್ರರು). ಗೋವಿಂದ ಭಟ್ಟರು ತಾಳಮದ್ದಳೆ ಅರ್ಥಧಾರಿಯೂ ಕೃಷಿಕರೂ ಆಗಿದ್ದರು. ಆ ಕಾಲದಲ್ಲಿ ಯಕ್ಷಗಾನ ಹಿಮ್ಮೇಳಕ್ಕೆ ಶ್ರುತಿ ಪೆಟ್ಟಿಗೆ ಇರಲಿಲ್ಲ. ಸೋರೆ ಕಾಯಿಯ ಬುರುಡೆಯಿಂದ ಶ್ರುತಿ ಪೆಟ್ಟಿಗೆ ತಯಾರಿಸುತ್ತಿದ್ದರಂತೆ.

ಶ್ರೀ ಗೋವಿಂದ ಭಟ್ಟರು ಬೆಳ್ಳಾರೆಯಲ್ಲಿ ವಾಸವಾಗಿದ್ದರು. ಸೂರ್ಯನಾರಾಯಣ ಭಟ್ಟರು ಓದಿದ್ದು, ಬೆಳೆದದ್ದು ಬೆಳ್ಳಾರೆಯಲ್ಲಿ. ಆದ ಕಾರಣ ಕುಂಞಿಹಿತ್ತಿಲು ಮನೆಯವರಾದರೂ ಬೆಳ್ಳಾರೆ ಸೂರ್ಯನಾರಾಯಣ ಭಟ್ ಎಂದೇ ಕರೆಸಿಕೊಂಡರು. ಓದಿದ್ದು ಬೆಳ್ಳಾರೆ ಮತ್ತು ಕಲ್ಮಡ್ಕ ಶಾಲೆಗಳಲ್ಲಿ. 9ನೇ ಕ್ಲಾಸಿನ ವರೆಗೆ(4th Form). ಆಗ ಹನ್ನೊಂದನೇ ಇಯತ್ತೆಗೆ ಎಸ್.ಎಸ್.ಎಲ್.ಸಿ ಎಂದು ಹೇಳುತ್ತಿದ್ದರಂತೆ  10ನೇ ತರಗತಿಯನ್ನು 5th Form ಎಂದು ಹೇಳುತ್ತಿದ್ದರು.

ಎಳವೆಯಲ್ಲೇ ಯಕ್ಷಗಾನಾಸಕ್ತಿ ಇತ್ತು. ಬೆಳ್ಳಾರೆ ಶಾಲೆಯಲ್ಲಿ ಓದುತ್ತಿರುವಾಗ ಕಾವೇರಿಕಾನ ಶ್ರೀ ಮಹಾಲಿಂಗ ಭಟ್ಟರು ಅಧ್ಯಾಪಕರಾಗಿದ್ದರು. ವಾರದಲ್ಲಿ ಎರಡು ಪೀರಿಯಡ್ ಸಿಟಿಜನ್ ಶಿಪ್ ಟ್ರೈನಿಂಗ್’ ಎಂಬ ಕಾರ್ಯಕ್ರಮವು ಅಭ್ಯಾಸ ರೂಪದಲ್ಲಿ ನಡೆಯುತ್ತಿತ್ತು. ಈ ಅಭ್ಯಾಸ ತರಗತಿಯಲ್ಲಿ ತಾಳಮದ್ದಳೆ ನಡೆಸೋಣ ಎಂದು ಸೂರ್ಯನಾರಾಯಣ ಭಟ್ಟರು ಕೇಳಿಕೊಂಡಿದ್ದರು. ಪುರಾಣ ಜ್ಞಾನವನ್ನು ನೀಡಿ ಮಕ್ಕಳ ಪ್ರತಿಭೆಯನ್ನು ಬೆಳಗಿಸಲು ಅವಕಾಶ ಇರುವ ಕಾರಣ ಅಧ್ಯಾಪಕರ ಅನುಮತಿಯೂ ದೊರೆತಿತ್ತು. ಖ್ಯಾತ ತಾಳಮದ್ದಳೆ ಅರ್ಥಧಾರಿ ಉಡುವೆಕೋಡಿ ಸುಬ್ಬಪ್ಪಯ್ಯನವರು ಶಾಲೆಯಲ್ಲಿ ಬೆಳ್ಳಾರೆ ಸೂರ್ಯನಾರಾಯಣ ಭಟ್ಟರ ಸಹಪಾಠಿಯಾಗಿದ್ದರು.

ಶ್ರೀ ಚಿನ್ನಪ್ಪ ಗೌಡರು ಭಾಗವತಿಕೆಗೆ. ಕಾವಿನಮೂಲೆ ಕೃಷ್ಣಕುಮಾರರು ಮದ್ದಳೆಗೆ. ಎಲ್ಲರೂ ಶಾಲಾ ವಿದ್ಯಾರ್ಥಿಗಳು. ಗ್ಲುಕೋಸ್ ಕರಡಿಗೆಗಳನ್ನು ಬೇಕಾದಂತೆ ಜೋಡಿಸಿ ಮದ್ದಳೆಯನ್ನು ತಯಾರಿಸಿದ್ದರಂತೆ. ಅರ್ಥಗಾರಿಕೆಗೆ ಇವರಿಗೆಲ್ಲಾ ರಸಋಷಿ ದೇರಾಜೆ ಶ್ರೀ ಸೀತಾರಾಮಯ್ಯನವರು ನಿರ್ದೇಶಕರು. ಅಂದವಾಗಿ ಅರ್ಥವಾಗುವಂತೆ ಅರ್ಥ ಬರೆದು ಕೊಡುತ್ತಿದ್ದರಂತೆ. ದೇರಾಜೆಯವರು ಆಗ ಬೆಳ್ಳಾರೆ ಗ್ರಾಮ ಪಂಚಾಯತ್ ಅಧ್ಯಕ್ಷರಾಗಿದ್ದರು.

ಬೆಳ್ಳಾರೆ ಬೋರ್ಡಿಂಗ್ ನಲ್ಲಿ ಪ್ರತಿವಾರ ತಾಳಮದ್ದಳೆ ನಡೆಯುತ್ತಿತ್ತು. ದೇರಾಜೆ, ಭೀಮಗುಳಿ ಗೋಪಾಲಕೃಷ್ಣಯ್ಯ. ಗಟ್ಟಿಗಾರು ನಾರಾಯಣ ಭಟ್ ಮೊದಲಾದವರು ಸಕ್ರಿಯರಾಗಿ ಭಾಗವಹಿಸುತ್ತಿದ್ದರು. ರಾತ್ರಿ ಒಂಬತ್ತು ಘಂಟೆಯಿಂದ ಎರಡು ಘಂಟೆಯ ವರೆಗೆ ತಾಳಮದ್ದಳೆ. ಆರನೇ ತರಗತಿಯಲ್ಲಿರುವಾಗ ಮೊದಲ ಬಾರಿ ತಾಳಮದ್ದಳೆಯಲ್ಲಿ ಅರ್ಥ ಹೇಳಿದ್ದರು. ಕಲ್ಮಡ್ಕದಲ್ಲಿ ವಾರಣಾಸಿ ಶ್ರೀ ಸೀತಾರಾಮಯ್ಯನವರು ಆಯೋಜಿಸುತ್ತಿದ್ದ ತಾಳ ಮದ್ದಳೆ. ಬಳಿಕ ಅಲ್ಲಲ್ಲಿ ನಡೆಯುತ್ತಿದ್ದ ತಾಳಮದ್ದಳೆಗಳಲ್ಲಿ ಅರ್ಥ ಹೇಳಿ ಅನುಭವಗಳನ್ನು ಗಳಿಸಿಕೊಂಡರು. ಬಡತನ, ಆರ್ಥಿಕ ಸಮಸ್ಯೆಯಿಂದಾಗಿ ಓದು ಮುಂದುವರಿಸಲಾಗಲಿಲ್ಲ. ಆದರೂ ಬದುಕು ಎಂಬ ಪಾಠ ಶಾಲೆಯಲ್ಲಿ ಕಲಿಯುತ್ತಾ ಬೆಳ್ಳಾರೆ ಸೂರ್ಯನಾರಾಯಣ ಭಟ್ಟರು ಬಹಳಷ್ಟು ಕಲಿತಿದ್ದರು. 

ಬದುಕಿಗಾಗಿ ಉದ್ಯೋಗವನ್ನು ಅರಸಲೇ ಬೇಕಾಗಿತ್ತು. ಮೈಸೂರಿಗೆ ತೆರಳಿ ಶ್ರೀ ದಾಸ ಪ್ರಕಾಶ್ ಮತ್ತು ನಿಯೋ ಮೈಸೂರ್ ಎಂಬ ಹೊಟೇಲುಗಳಲ್ಲಿ ದುಡಿದಿದ್ದರು. ಈ ಹೋಟೆಲ್ ಮಾಲೀಕರು ದಕ್ಷಿಣ ಕನ್ನಡದವರು. ಯಕ್ಷಗಾನ ಪ್ರಿಯರೂ ಆಗಿದ್ದರು. ಕುಬಣೂರು ಶ್ರೀ ಬಾಲಕೃಷ್ಣ ರಾಯರು ಯಕ್ಷಗಾನದ ಖ್ಯಾತ ಅರ್ಥಧಾರಿಗಳು ಮತ್ತು ಸಂಘಟಕರು. ಅವರ ನೇತೃತ್ವದ ತಂಡವು ಮೈಸೂರಿಗೆ ಬಂದಾಗ ಆಟಕೂಟಗಳನ್ನು ತಪ್ಪದೆ ನೋಡುತ್ತಿದ್ದರು. ಐದು ವರ್ಷಗಳ ಕಾಲ ಮೈಸೂರಿನಲ್ಲಿ ಹೋಟೆಲ್ ಕೆಲಸ. ಬಳಿಕ ಎರಡು ವರ್ಷ ಮದ್ರಾಸಿನಲ್ಲಿ. ಮತ್ತೆ ಅನಿವಾರ್ಯವಾಗಿ ಊರಿಗೆ ಮರಳಬೇಕಾಗಿ ಬಂತು.

ಕೈಂತಜೆ ಡಾ. ಕೃಷ್ಣ ಭಟ್ಟರ ಆಸ್ಪತ್ರೆಯಲ್ಲಿ ಕಂಪೌಂಡರ್ ಆಗಿ ಐದು ವರ್ಷಗಳ ಕಾಲ ಕೆಲಸ ಮಾಡಿದರು. ಬಳಿಕ ಬೆಂಗಳೂರು ಹೈಕೋರ್ಟ್ ವಕೀಲರೂ, ಜಡ್ಜರೂ ಆಗಿದ್ದ ಶ್ರೀ ಜಿ.ಕೆ ಗೋವಿಂದ ಭಟ್ಟರ ಬಳಿ ಮೂರು ವರ್ಷಗಳ ಕಾಲ ದುಡಿದಿದ್ದರು. ಬಳಿಕ ಬೆಳ್ಳಾರೆ ಜಾಗದಲ್ಲಿ ವಾಸ್ತವ್ಯ. ಬದುಕಿಗಾಗಿ ವ್ಯಾಪಾರವನ್ನು ಆರಂಭಿಸಿದ್ದರು. ಮುಳಿ ಮಾಡಿನ, ಮಣ್ಣಿನ ಗೋಡೆಯ ಕಟ್ಟಡ. ಒಮ್ಮೆ ಮನೆ, ಅಂಗಡಿಯು ಬೆಂಕಿಗೆ ಆಹುತಿಯಾಗಿತ್ತು. ಮತ್ತೆ ಹಂಚು ಮತ್ತು ಶೀಟ್ ಹಾಕಿ ಕಟ್ಟಿಸಿದ್ದರು. ಈ ಕಾರ್ಯಕ್ಕೆ ಊರ ಮಹನೀಯರು ಸಹಕರಿಸಿದ್ದರು. ಈ ಸಂದರ್ಭಗಳಲ್ಲೂ ಸೂರ್ಯನಾರಾಯಣ ಭಟ್ಟರು ಯಕ್ಷಗಾನದಿಂದ ದೂರ ಉಳಿದವರಲ್ಲ.

ಶ್ರೀ ವಾಣೀ ಗಣೇಶ ಪ್ರಸಾದಿತ ಕಲಾ ವೃಂದ, ಬೆಳ್ಳಾರೆ ಎಂಬ ಸಂಸ್ಥೆಯಡಿ ಕಲಾಕಾರ್ಯಕ್ರಮಗಳನ್ನು ನಡೆಸಿಕೊಂಡು ಬಂದಿದ್ದರು. ತಿಂಗಳಿನ ಪ್ರಥಮ ಶನಿವಾರದಂದು ರಾತ್ರಿಯಿಂದ ಬೆಳಗಿನ ವರೆಗೆ ವಾರಕ್ಕೊಂದು ಮತ್ತು ವಿಶೇಷ ದಿನಗಳಲ್ಲಿ ತಾಳಮದ್ದಲೆಗಳನ್ನು ನಡೆಸುತ್ತಿದ್ದರು. ಯಕ್ಷಗಾನ ಹಿಮ್ಮೇಳದ ಎಲ್ಲಾ ವಾದ್ಯೋಪಕರಣಗಳೂ ಈ ಸಂಸ್ಥೆಯಲ್ಲಿ ಇತ್ತು. ಇದು ಪ್ರಾರಂಭವಾದುದು 1976ರಲ್ಲಿ. ಬೆಳ್ಳಾರೆ ಸೂರ್ಯನಾರಾಯಣ ಭಟ್ಟರ ಸಂಘಟನೆಯ ಈ ತಾಳಮದ್ದಳೆಗಳಲ್ಲಿ ಶೇಣಿ, ಶಾಸ್ತ್ರಿಗಳು, ಪೆರ್ಲ ಕೃಷ್ಣ ಭಟ್, ಉಡುವೆಕೋಡಿ ಸುಬ್ಬಪ್ಪಯ್ಯನವರು, ಡಾ. ಎಂ. ಪ್ರಭಾಕರ ಜೋಶಿ ಮೊದಲಾದ ಹಿರಿಯ ವಿದ್ವಾಂಸರೆಲ್ಲರೂ ಭಾಗವಹಿಸಿದ್ದರು.

ಸಾಹಿತ್ಯಾಸಕ್ತಿಯನ್ನು ಹೊಂದಿದ್ದ ಇವರು ಬರೆಯುವಲ್ಲಿಯೂ ತೊಡಗಿಸಿಕೊಂಡಿದ್ದರು. 1986ರಲ್ಲಿ ಶ್ರೀ ವಾಣೀ ಗಣೇಶ ಪ್ರಸಾದಿತ ಕಲಾ ವೃಂದದ ದಶಮಾನೋತ್ಸವ ಕಾರ್ಯಕ್ರಮವನ್ನು ನಡೆಸಿದ್ದರು. ಶ್ರೀ ಶೇಣಿ ಗೋಪಾಲಕೃಷ್ಣ ಭಟ್ಟರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ‘ಸಾಧನೆ’ ಎಂಬ ಪುಸ್ತಕವೂ ಪ್ರಕಟಗೊಂಡಿತ್ತು. ಕಲಾಸೇವೆಯ ಜತೆ ಸಾಹಿತ್ಯಸೇವೆಯೂ ನಿರಂತರವಾಗಿ ಸಾಗಿತ್ತು.

1970ರಲ್ಲಿ ವಿವಾಹ. ಬೆಳ್ಳಾರೆ ಸೂರ್ಯನಾರಾಯಣ ಭಟ್ಟರ ಪತ್ನಿ ಶ್ರೀಮತಿ ಸರಸ್ವತಿ. ಬೆಳ್ಳಾರೆ ಸೂರ್ಯನಾರಾಯಣ ಭಟ್ಟರು ಸಾತ್ವಿಕ ಪಾತ್ರಗಳಲ್ಲಿ ಹೆಚ್ಚಾಗಿ ಅರ್ಥ ಹೇಳುತ್ತಿದ್ದರು. ಸ್ತ್ರೀ ಪಾತ್ರಗಳ, ಭಾವನಾತ್ಮಕ ಸನ್ನಿವೇಶಗಳನ್ನು ಉತ್ತಮವಾಗಿ ಚಿತ್ರಿಸುತ್ತಿದ್ದರು. ಹೆಚ್ಚಿನ ಎಲ್ಲಾ ಹಿರಿಯ ಕಲಾವಿದರ ಒಡನಾಟವೂ ಇವರಿಗೆ ದೊರಕಿದೆ. ಶೇಣಿಯವರ ವಾಲಿಗೆ ತಾರೆ, ರಾವಣನಿಗೆ ಮಂಡೋದರಿ (ಮೈಸೂರು ಅರಮನೆಯಲ್ಲಿ), ಭೀಮನಿಗೆ ದ್ರೌಪದಿ ಮೊದಲಾದ ಪಾತ್ರಗಳಲ್ಲಿ ಅರ್ಥ ಹೇಳುವ ಅವಕಾಶವೂ ಸಿಕ್ಕಿತ್ತು.

ಬೆಳ್ಳಾರೆ ಪರಿಸರದಲ್ಲಿ ತೆಂಕು ಬಡಗಿನ ಪ್ರದರ್ಶನಗಳು ನಡೆದರೆ ಹಿರಿಯ ಕಲಾವಿದರು ಇವರ ಮನೆಗೆ ಬಂದೇ ಬರುತ್ತಿದ್ದರು. ಉಪಾಹಾರ ವಿಶ್ರಾಂತಿಗೆ ಇವರದೇ ವ್ಯವಸ್ಥೆ. ಬೆಳ್ಳಾರೆಯಲ್ಲಿ ಸುಮಾರು ಮೂವತ್ತೈದು ವರ್ಷಗಳ ಕಾಲ ಯಕ್ಷಗಾನ ಕಲೆಯೊಂದಿಗೆ ಬಾಂಧವ್ಯ ಇರಿಸಿಕೊಂಡೇ ಬದುಕಿದ್ದರು. 1999ರಲ್ಲಿ ಉಜಿರೆಯ ಸಮೀಪದ ಬೆಳಾಲು ಎಂಬಲ್ಲಿಗೆ ಬಂದು ವಾಸವಾಗಿದ್ದರು.

ಕಳೆದ ಹತ್ತು ವರ್ಷಗಳಿಂದ ಮಚ್ಚಿನ ಗ್ರಾಮದ ಕಲ್ಲಗುಡ್ಡೆ ಎಂಬಲ್ಲಿ ವಾಸವಾಗಿದ್ದಾರೆ. ಬೆಳ್ಳಾರೆ ಸೂರ್ಯನಾರಾಯಣ ಭಟ್ಟರು ಸುಮಾರು ನಲುವತ್ತಕ್ಕೂ ಮಿಕ್ಕಿ ಪುಸ್ತಕಗಳನ್ನು ರಚಿಸಿರುತ್ತಾರೆ. ಇವುಗಳಲ್ಲಿ ಹೆಚ್ಚಿನವು ಯಕ್ಷಗಾನ ಪ್ರಸಂಗಗಳು. ಅಲ್ಲದೆ ಚುಟುಕು, ಕವನ, ನಾಟಕ, ಕಾದಂಬರಿ, ಮಕ್ಕಳ ಕಥೆ, ಅನುಭವ ಕಥನ, ಭಜನೆ, ಸಣ್ಣ ಕಥೆಗಳು, ಸುಪ್ರಭಾತ ಮೊದಲಾದ ಪುಸ್ತಕಗಳನ್ನೂ ರಚಿಸಿರುತ್ತಾರೆ. 

ಇವರು ರಚಿಸಿದ ಪುಸ್ತಕಗಳು: ಕೀರ್ತನಮಾಲಾ, ಅಕ್ಷರಮಾಲಾ, ಶ್ರೀಹರಿ ಸ್ತೋತ್ರಂ, ಶ್ರೀ ಗಣೇಶ ಮಹಾತ್ಮೆ, ಭಕ್ತ ವಿಜಯ, ಕುಶಲವ ವಿಜಯ, ದೇವಶಕ್ತಿ, ಕನಪಡಿತ್ತಾಯ ಚರಿತ್ರೆ, ಚಂದ್ರಾವತೀ ಕಲ್ಯಾಣ, ಅನಾರ್ಕಲಿ, ಸತಿ ವೈಶಾಲಿನಿ, ಶಿವಲೀಲಾ, ಗೌತಮ ಬುದ್ಧ, ಯಜ್ಞಫಲ, ಅಂಗುಲಿಮಾಲಾ, ಸೂರ್ಯೋದಯ, ಹವ್ಯಕ ಗೀತಂ, ಇಂಚಾಂಡ ಎಂಚ?, ಸುಗ್ರೀವ ಸಖ್ಯ-ವಾಲಿ ಮೋಕ್ಷ, ಜನಕಕಲ್ಯಾಣ-ಮಿತಸಂತಾನ, ಶ್ರೀರಾಮ ಪಟ್ಟಾಭಿಷೇಕ, ಶ್ರೀ ಅಜಪಿಲ ಮಹಾಲಿಂಗೇಶ್ವರ ಸುಪ್ರಭಾತ, ಶ್ರೀ ಕೊಡ್ಯಡ್ಕ ಅನ್ನಪೂರ್ಣೇಶ್ವರಿ ಸುಪ್ರಭಾತ, ಶ್ರೀ ಭಗವತೀ ಚೌಡೇಶ್ವರೀ ಸುಪ್ರಭಾತ, ತೋಚಿದ್ದು-ಗೀಚಿದ್ದು, ಕನ್ನಡ ತುಳು ಹವ್ಯಕ ಮಲೆಯಾಳ ತೆಲುಗು ಭಾಷೆಗಳ ಚುಟುಕುಗಳು, ಬನದ ಕುಸುಮ, ಮರ್ಮಜ್ಞ ವಚನಂ, ಚಾವಟಿ, ಪ್ರವಾಸ, ಜಾನಪದ ನೀತಿ ಸಾರ, ಭಕ್ತ ಸುಧನ್ವ, ಶಿವಲೀಲೆ, ಸ್ವಾತಂತ್ರ್ಯ, ವಿಶ್ವಪ್ರಭಾ, ವಿಧಿಲಿಪಿ, ಚಿಕ್ಕಮ್ಮ, ಶಾಂತಿಸದನ, ಬಾಳ ಗೋಳು, ಪುಟ್ಟು ಕಂದ, ಕಂದನ ನಂದನ, ತಾಟಕಾ, ಶ್ರೀ ಸತ್ಯನಾರಾಯಣ ವ್ರತ ಮಹಾತ್ಮೆ, ಇವುಗಳಲ್ಲಿ ಕೆಲವು ಪ್ರಕಟಿತ. ಕೆಲವು ಅಪ್ರಕಟಿತ.

ಬೆಳ್ಳಾರೆ ಸೂರ್ಯನಾರಾಯಣ ಭಟ್ಟರು ಪುಸ್ತಕ ಸಂಗ್ರಹಕಾರರೂ ಹೌದು. ಇವರ ಸಂಗ್ರಹದಲ್ಲಿ ಅನೇಕ ಪುಸ್ತಕಗಳಿವೆ. ಸುಮಾರು ಇನ್ನೂರಕ್ಕೂ ಹೆಚ್ಚು ಯಕ್ಷಗಾನ ಪ್ರಸಂಗ ಪುಸ್ತಕಗಳೂ ಇದರಲ್ಲಿ ಸೇರಿವೆ. ಇವರ ಈ ಹವ್ಯಾಸವನ್ನು ಕಲಾಪೋಷಕರಾದ ಶ್ರೀ ಟಿ. ಶ್ಯಾಮ ಭಟ್ಟರೂ ಮೆಚ್ಚಿಕೊಂಡಿದ್ದರು. ಪುಸ್ತಕಗಳು ಕೆಡದಂತೆ ಸಂರಕ್ಷಿಸಲು ಒಂದು ಒಳ್ಳೆಯ ಕಪಾಟನ್ನೂ ಕೊಡುಗೆಯ ರೂಪದಲ್ಲಿ ನೀಡಿದ್ದರು.

ಬೆಳ್ಳಾರೆ ಕೆ. ಸೂರ್ಯನಾರಾಯಣ ಭಟ್, ಸರಸ್ವತಿ ದಂಪತಿಗಳಿಗೆ ನಾಲ್ಕು ಮಂದಿ ಮಕ್ಕಳು. ಹಿರಿಯ ಪುತ್ರ ಶ್ರೀನಿವಾಸ ಸ್ವ ಉದ್ಯೋಗಿ. ಪುತ್ರಿಯರಾದ ಭಾರತಿ ಮತ್ತು ಲಲಿತಾ ಅವರು ವಿವಾಹಿತೆಯರು. ಗೃಹಣಿಯರು. ಕಿರಿಯ ಪುತ್ರ ಗಣೇಶ ಕಟೀಲು ಮೇಳದ ಹಿಮ್ಮೇಳ ಕಲಾವಿದ, ಮದ್ದಳೆಗಾರ. ತೆಂಕುತಿಟ್ಟಿನ ಹಿರಿಯ ಖ್ಯಾತ ಕಲಾವಿದ ಬೆಳ್ಳಾರೆ ಶ್ರೀ ಮಂಜುನಾಥ ಭಟ್ಟರು ಸೂರ್ಯನಾರಾಯಣ ಭಟ್ಟರ ತಮ್ಮ. ಬೆಳ್ಳಾರೆ ಸೂರ್ಯನಾರಾಯಣ ಭಟ್ಟರಿಗೆ ಶ್ರೀ ದೇವರು ಆರೋಗ್ಯ, ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂಬ ಹಾರೈಕೆಗಳು. 

ಲೇಖನ: ರವಿಶಂಕರ್ ವಳಕ್ಕುಂಜ 
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments