ಉಡುಪಿಯ ಸಾಂಸ್ಕೃತಿಕ ಸಾಮಾಜಿಕ ಅಧ್ವರ್ಯು ಮುರಲಿ ಕಡೆಕಾರ್ ಬಗ್ಗೆ ಪ್ರೊ| ಎಂ ನಾರಾಯಣ ಹೆಗಡೆಯವರು ಬರೆದ ವಿಶಿಷ್ಟ ಹೊತ್ತಗೆ.ನಾಡಿನ ಪ್ರಖ್ಯಾತ ಸಾಹಿತ್ಯ ಸಂಸ್ಕೃತಿಯ ಶ್ರೇಷ್ಠ ಸಂಸ್ಥೆ ” ಕಾಂತಾವರ ಕನ್ನಡಸಂಘ” ತನ್ನ ನಾಡಿಗೆ ನಮಸ್ಕಾರ ಸರಣಿಯಲ್ಲಿ ಪ್ರಕಟಿಸಿದೆ.ಮುರಲಿ ಎಂದರೆ ಉಡುಪಿಯ ಯಕ್ಷಗಾನ ಕಲಾಸಂಘದ ಹೊಣೆಹೊತ್ತವರು ಎಂಬುದನ್ನು ಮಾತ್ರ ಬಲ್ಲವರು ಈ ಕೃತಿಯನ್ನು ಓದಿದಾಗ ಬೆರಗಾಗಲೇಬೇಕು.
ಮುರಲಿ ಯಕ್ಷಗಾನ ಕಲಾರಂಗದ ಕಾರ್ಯದರ್ಶಿಯಾಗಿ, ನಿಟ್ಟೂರು ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾಗಿ, ಅಂಬಲಪಾಡಿಯ ಲಕ್ಷ್ಮೀಜನಾರ್ದನ ಯಕ್ಷಗಾನ ಸಂಸ್ಥೆಯ ಅಧ್ಯಕ್ಷರಾಗಿ, ಯಕ್ಷಶಿಕ್ಷಣ ಟ್ರಷ್ಟ್ ನ ಕಾರ್ಯದರ್ಶಿಯಾಗಿ, ಪೂರ್ಣಪ್ರಜ್ಞ ಕಾಲೇಜಿನ ಹಳೆವಿದ್ಯಾರ್ಥಿ ಸಂಘದ ಕಾರ್ಯದರ್ಶಿಯಾಗಿ, ಸುಪ್ರಸಿದ್ಧ ವಿದ್ಯಾಪೋಷಕ್ ವ್ಯವಸ್ಥೆಯ ಮುಂದಾಳಾಗಿ ಉಡುಪಿ ಶಾಸಕರ ಕೇದಾರೋತ್ಥಾನ ಟ್ರಷ್ಟ್ ಕಾರ್ಯದರ್ಶಿಯಗಿ ಏಕ ಕಾಲದಲ್ಲಿ ಎಲ್ಲವನ್ನೂ, ಕೋಟ್ಯಂತರ ರೂಪಾಯಿಗಳ ಮಹಾನ್ ಕಾರ್ಯಗಳನ್ನು ನಿಸ್ಪೃಹವಾಗಿ ಹೇಗೆ ಸಾಗಿಸುತ್ತಿದ್ದಾರೆ ಎಂಬುದನ್ನ ಸರಳವಾಗಿ ನಿರೂಪಿಸಿದ್ದಾರೆ.

ಮುರಲಿಯವರ ಅಚ್ಚುಕಟ್ಟಿನ ಕೆಲಸದ ಹಾಗೆ ಒಂದಕ್ಷರವೂ ವ್ಯರ್ಥವಾಗದ ಬರವಣಿಗೆ. ವ್ಯಕ್ತಿ ಪರಿಚಯದ ಅನುಪಮ ಮಾದರಿ. ಕ್ರಿಯಾಶೀಲ ವ್ಯಕ್ತಿತ್ವಕ್ಕೆ ಮಾದರಿ ಎನ್ನಿಸುವ ಮುರಲಿಯವರ ಪರಿಚಯ ಎಲ್ಲರಿಗೂ ಆಗಬೇಕಿದ್ದರೆ ಈ ಕೃತಿಯನ್ನು ಓದಬೇಕು. ಅತ್ಯಂತ ಸರಳ ನಡೆನುಡಿಯ ಮುರಲಿಯವರ ಉತ್ತಮ ಪರಿಚಯ. ಮುರಲಿಯವರನ್ನು ಅಭಿನಂದಿಸುತ್ತಾ ಕೃತಿಕಾರ ಹೆಗಡೆಯವರ ಲೇಖನಿಗೆ ಇನ್ನು ನಿರಂತರ ಕೆಲಸವಿರಲಿ ಎಂದು ಹಾರೈಸುವೆ. ಈ ಗ್ರಂಥ ಪ್ರಕಟಣೆಗಾಗಿ ಕಾಂತಾವರ ಕನ್ನಡಸಂಘದ ಹಿರಿಯರಾದ ಡಾ.ನಾ ಮೊಗಸಾಲೆ, ಸಂಪಾದಕ ಡಾ.ಬಿ ಜನಾರ್ದನ ಭಟ್ಟರಿಗೆ ಅಭಿನಂದನೆಗಳು.
