Saturday, January 18, 2025
Homeಯಕ್ಷಗಾನಹಿರಿಯ ಅರ್ಥಧಾರಿ - ಕೃಷಿಕ ಕುತ್ಲೋಡಿ ವಾಸು ಶೆಟ್ಟಿ ನಿಧನ

ಹಿರಿಯ ಅರ್ಥಧಾರಿ – ಕೃಷಿಕ ಕುತ್ಲೋಡಿ ವಾಸು ಶೆಟ್ಟಿ ನಿಧನ


ಯಕ್ಷಗಾನದ ಹಿರಿಯ ಅರ್ಥಧಾರಿ, ಪ್ರಗತಿಪರ ಕೃಷಿಕ ಕುತ್ಲೋಡಿ ವಾಸು ಶೆಟ್ಟಿ ( 1931 – 2021 ) ಜುಲೈ 26, 2021ರಂದು ಸಾಯಂಕಾಲ ಸಿದ್ಧಕಟ್ಟೆ ಸಮೀಪದ ತಮ್ಮ ಸ್ವಗೃಹದಲ್ಲಿ ನಿಧನರಾದರು. ಮೂಲತ: ಕೃಷಿಕರಾಗಿದ್ದ ಅವರು ಎಳವೆಯಿಂದಲೇ ಯಕ್ಷಗಾನದ ಅರ್ಥಗಾರಿಕೆಯಲ್ಲಿ ಪಳಗಿ ಪ್ರಸಿದ್ಧರ ಕೂಟಗಳಲ್ಲಿ ಭಾಗವಹಿಸಿ ಖ್ಯಾತರಾಗಿದ್ದರು. ಸ್ಥಳೀಯವಾಗಿ ಯಕ್ಷಗಾನ ಸಂಘಗಳನ್ನು ಸ್ಥಾಪಿಸಿ ಕಿರಿಯರಿಗೆ ಮಾರ್ಗದರ್ಶಕರಾಗಿದ್ದರು. ತಾಳಮದ್ದಳೆ ಕ್ಷೇತ್ರದ ಜನಪ್ರಿಯ ಅರ್ಥಧಾರಿ ಮತ್ತು ಹೆಸರಾಂತ ವೇಷಧಾರಿ ದಿ.ಸಿದ್ಧಕಟ್ಟೆ ಚೆನ್ನಪ್ಪ ಶೆಟ್ಟರು ಅವರನ್ನು ಗುರುವಾಗಿ ಪರಿಭಾವಿಸಿದ್ದರು. ಚೆನ್ನಪ್ಪ ಶೆಟ್ಟರ ಅಂತ್ಯಕ್ರಿಯೆಯಲ್ಲಿ ಅವರ ಉಭಯ ಗುರುಗಳಾದ ದಿ.ಶಿಮಂತೂರು ನಾರಾಯಣ ಶೆಟ್ಟರು ಹಾಗೂ ವಾಸು ಶೆಟ್ಟರು ಭಾಗವಹಿಸಿದ್ದು ವಿಶೇಷ.          

ವಿಪುಲವಾದ ಪುರಾಣ ಜ್ಞಾನ ಹಾಗೂ ಯಕ್ಷಗಾನ ಪ್ರಸಂಗಗಳ ಸಮಗ್ರ ಮಾಹಿತಿ ಹೊಂದಿದ್ದ ವಾಸು ಶೆಟ್ಟರು ಭೀಷ್ಮ, ಕರ್ಣ, ಕೌರವ, ವಾಲಿ, ಮಾಗಧ, ರಾಮ, ಕೃಷ್ಣ ಇತ್ಯಾದಿ ಪಾತ್ರಗಳಲ್ಲಿ ಪ್ರಭುತ್ವ ಸಾಧಿಸಿದ್ದರು. ಹಾಗೆಯೇ ಹಳೆ ತಲೆಮಾರಿನ ಹಾಗೂ ಈಗಿನ ಅನೇಕ ಪ್ರಮುಖ ಕಲಾವಿದರ ಸಂಪರ್ಕದಲ್ಲಿದ್ದು ತಮ್ಮ ತೊಂಭತ್ತರ ಹರೆಯದಲ್ಲೂ ಕ್ರಿಯಾಶೀಲರಾಗಿದ್ದರು. ಇದೀಗ ಅಲ್ಪಕಾಲದ ಅಸ್ವಾಸ್ಥ್ಯದಿಂದ ವಯೋ ಸಹಜವಾಗಿ ಅಸು ನೀಗಿರುವ ಅವರು ಮಕ್ಕಳು, ಕುಟುಂಬಿಕರು ಹಾಗೂ ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ.


ಯಕ್ಷಾಂಗಣ ಸಂತಾಪ:       ಯಕ್ಷಾಂಗಣ ಮಂಗಳೂರು ಆಯೋಜಿಸಿದ್ದ ಸಿದ್ಧಕಟ್ಟೆ ಸಂಸ್ಮರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಲ್ಲದೆ, ಸಪ್ತಾಹ ಕಲಾಪಗಳನ್ನು ಸದಾ ಪ್ರೋತ್ಸಾಹಿಸುತ್ತಿದ್ದ ಹಿರಿಯ ವಿದ್ವಾಂಸ ಕುತ್ಲೋಡಿ ವಾಸು ಶೆಟ್ಟರ ನಿಧನಕ್ಕೆ ಯಕ್ಷಾಂಗಣದ ಪದಾಧಿಕಾರಿಗಳು ಮತ್ತು ಕಲಾವಿದ ಬಳಗದ ಪರವಾಗಿ ಯಕ್ಷಾಂಗಣ ಕಾರ್ಯಾಧ್ಯಕ್ಷ ಭಾಸ್ಕರ ರೈ ಕುಕ್ಕುವಳ್ಳಿ ಸಂತಾಪ ಸೂಚಿಸಿದ್ದಾರೆ. ಹಿರಿಯ ಅರ್ಥಧಾರಿ ಡಾ.ಎಂ.ಪ್ರಭಾಕರ ಜೋಶಿ, ಯಕ್ಷ ಸಂಗಮದ ಸಂಘಟಕ ಶಾಂತಾರಾಮ ಕುಡ್ವ ಮೂಡಬಿದಿರೆ, ಮುಂಬಯಿ ಬಂಟರವಾಣಿಯ ಅಶೋಕ ಪಕ್ಕಳ, ಸಿದ್ಧಕಟ್ಟೆ ಚೆನ್ನಪ್ಪ ಶೆಟ್ಟಿ ಮತ್ತು ವಿಶ್ವನಾಥ ಶೆಟ್ಟಿ ಅವರ ಕುಟುಂಬ ವರ್ಗದವರೂ ಶ್ರದ್ಧಾಂಜಲಿ ಸಮರ್ಪಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments