Saturday, January 18, 2025
Homeಯಕ್ಷಗಾನಬಲಿಪ ನಾರಾಯಣ ಭಾಗವತರೊಂದಿಗೆ ಒಂದು ಆತ್ಮೀಯ ಮಾತುಕತೆ

ಬಲಿಪ ನಾರಾಯಣ ಭಾಗವತರೊಂದಿಗೆ ಒಂದು ಆತ್ಮೀಯ ಮಾತುಕತೆ

ಬಲಿಪ ನಾರಾಯಣ ಭಾಗವತರ ಬಗ್ಗೆ ಹೇಳಲು ಏನಿಲ್ಲ…? ಜೀವನವನ್ನೇ ಯಕ್ಷಗಾನಕ್ಕೆ ಮುಡುಪಾಗಿಟ್ಟವರು ಅವರು. ಅವರು ಉಸಿರಾಡುವ ಗಾಳಿ, ಸೇವಿಸುವ ನೀರು, ನಡೆದಾಡುವ ಮಣ್ಣು ಎಲ್ಲವೂ ಯಕ್ಷಗಾನವೆಂಬ ಅಪೂರ್ವ ಕಲೆಯ ಒಂದೊಂದು ಕಥೆಯನ್ನು ನಮಗೆ ಹೇಳಬಲ್ಲವು. ಹದವಾದ ಗಾಳಿಗೆ ಹಿತವಾಗಿ ತೂಗುತ್ತಿದ್ದ ಅವರ ಮನೆಯ ತೋಟದ ತೆಂಗಿನ ಗರಿಗಳು ಯಕ್ಷಗಾನದ ನಾಟ್ಯವಾಡುವಂತೆ ಭಾಸವಾಗುತ್ತಿದ್ದುವು. ಹತ್ತಿರದಲ್ಲೇ ಕೇಳುತ್ತಿದ್ದ ನೀರಿನ ಜುಳುಜುಳು ನಾದದಲ್ಲಿ ಬಲಿಪರ ಅಪೂರ್ವ ಮೋಹನ ರಾಗ ಲೀನವಾದಂತೆ ಕೇಳಿಸಿತು.
ಸಮೀಪದಲ್ಲಿಯೇ ಇದ್ದ ಮನೆಗೆ ತಲುಪಿದಾಗ ಸ್ವತಃ ನಾನು ಯಾರನ್ನು ಮಾತನಾಡಿಸಲೆಂದು ಹೋಗಿದ್ದೆನೋ ಅವರದೇ ಅತ್ಮೀಯ ಸ್ವಾಗತ. ಅಂತಹಾ ಪ್ರಖ್ಯಾತರ, ವಿದ್ವಾಂಸರ, ಹಿರಿಯರ ಆದರದ ಬರಮಾಡಿಕೊಳ್ಳುವಿಕೆಗೆ ಶರಣಾದೆ. ಸರಳತೆ, ಮುಗ್ಧತೆಗೆ ಮನ ಮಾರುಹೋದೆ.

ನಾನು ಬರುವ ವಿಚಾರವನ್ನು ಅವರ ಕಿರಿಯ ಸುಪುತ್ರ ಶ್ರೀ ಬಲಿಪ ಪ್ರಸಾದರ ಮುಖಾಂತರ ಮೊದಲೇ ಅರಿತಿದ್ದುದರಿಂದ ನಿರೀಕ್ಷೆಯಲ್ಲೇ ಇದ್ದ ಹಾಗೆ ಮುಖಭಾವ ಹೇಳಿತು. ಉಭಯ ಕುಶಲೋಪರಿಯ ನಂತರ ಚಹಾ ತಿಂಡಿಯೂ ಆಯಿತು. ಪ್ರಥಮ ಭೇಟಿಯಾದರೂ ಬಹಳ ಬೇಗ ಅವರೊಡನೆ ಆತ್ಮೀಯರಾಗಲು ಸಾಧ್ಯವಾಯಿತು. ಅವರ ವ್ಯಕ್ತಿತ್ವದ ವಿಶೇಷತೆಯದು ಎಂದು ಅರಿತುಕೊಂಡೆ. ಅವರು ತಮ್ಮ “ಬಲಿಪ ನಾರಾಯಣ ಭಾಗವತ ಅಮೃತ ಭವನ”ಕ್ಕೆ ಕರೆದುಕೊಂಡು ಹೋದರು. ಆ ಹಾಲ್‍ನ ತುಂಬೆಲ್ಲಾ ಅವರ ಪ್ರಶಸ್ತಿಗಳು, ಸನ್ಮಾನಪತ್ರಗಳೇ ತುಂಬಿ ತುಳುಕುತ್ತಿದ್ದುವು. ಅಷ್ಟೊಂದು ಪ್ರಶಸ್ತಿಗಳು ಹಾಗೂ ಸನ್ಮಾನಪತ್ರಗಳು ಇದ್ದರೂ ಅದನ್ನು ವ್ಯವಸ್ಥಿತವಾಗಿ ಹಾಗೂ ಅಚ್ಚುಕಟ್ಟಾಗಿ, ಅಂದವಾಗಿ ಜೋಡಿಸಿಡಲಾಗಿತ್ತು. ಅವುಗಳನ್ನೆಲ್ಲಾ ನೋಡುತ್ತಾ ನೋಡುತ್ತಾ ನಾನು ಮೂಕವಿಸ್ಮಿತನಾಗಿ ಬಂದ ಕೆಲಸವನ್ನೇ ಮರೆತೆ. “ಇಲ್ಲಿ ಕುಳಿತುಕೊಂಡು ಆರಂಭಿಸೋಣವೆ?” ಎಂಬ ಅವರ ಮಾತು ನನ್ನನ್ನು ವಾಸ್ತವಲೋಕದತ್ತ ಎಳೆದು ತಂದಿತು. ಅವರಿಗೆ ವಿಧೇಯನಾಗಿ ಅಲ್ಲಿ ಕುಳಿತರೂ ಒಂದೊಂದೇ ಪ್ರಶ್ನೆಗಳನ್ನು ಅವರ ಮುಂದಿಟ್ಟೆ. ಅವರೂ ಅಷ್ಟೇ ಲೀಲಾಜಾಲವಾಗಿ ಉತ್ತರಿಸತೊಡಗಿದರು.

ಬಲಿಪ ನಾರಾಯಣ ಭಾಗವತರು ಫೋಟೋ: ಶ್ರೀ ಮಧುಸೂದನ ಅಲೆವೂರಾಯ

                               
ಪ್ರಶ್ನೆ: ಬಲಿಪ ಎನ್ನುವುದು ನಿಮ್ಮ ಮನೆತನದ ಹೆಸರೋ ? ಹಾಗಿದ್ದರೆ ಆ ಹೆಸರು ನಿಮ್ಮ ಮನೆತನಕ್ಕೆ ಹೇಗೆ ಅಂಟಿಕೊಂಡಿತು ?

ಉತ್ತರ: ‘ಬಲಿಪ’ ಎನ್ನುವುದು ನಮ್ಮ ಮನೆತನಕ್ಕೆ ಬಂದ ಬಿರುದು ಅಥವಾ ಹೆಸರು. ನಿರ್ದಿಷ್ಟವಾಗಿ ಯಾವ ಕಾಲದಲ್ಲಿ ಆ ಹೆಸರು ಬಂತು ಎಂಬುದು ನನಗೆ ಗೊತ್ತಿಲ್ಲ. ಆ ಕಾಲದಲ್ಲಿ ತೀರ್ವೆ(ತೆರಿಗೆ) ಪಾವತಿಸಲಿಕ್ಕೆ ಹೋಗುವ ದಾರಿಯಲ್ಲಿ ಹುಲಿಯೊಂದು (ಬಲಿಪ್ಪ)ಎದುರಾದಾಗ ಅದನ್ನು ಕೊಂದು ಸಾಹಸ ಮೆರೆದು ಆ ಹುಲಿಯನ್ನು ಮಡಿಕೇರಿಯ ಅರಸರಿಗೆ ತೋರಿಸಿದಾಗ ಅವರು ಮೆಚ್ಚಿಕೊಂಡು ಇನ್ನು ನೀವು ತೀರ್ವೆ(ತೆರಿಗೆ) ಕಟ್ಟುವುದು ಬೇಡ ಎಂದು ತೀರ್ವೆಯನ್ನು ಮನ್ನಾ ಮಾಡಿದರಂತೆ. ಅಲ್ಲಿಂದ ನಮ್ಮ ಮನೆತನಕ್ಕೆ ಆ ಹೆಸರು ಬಂತು.

ಪ್ರಶ್ನೆ: ನಿಮ್ಮ ಬಾಲ್ಯದಲ್ಲಿ ನೀವು ಯಕ್ಷಗಾನಾಸಕ್ತಿಯನ್ನು ಗಳಿಸಿಕೊಂಡ ಬಗೆ ಹೇಗೆ ?

ಉತ್ತರ: ನಮ್ಮ ವಂಶದ ಒಂದು ಕವಲಿನಲ್ಲಿ ಕೃಷ್ಣ ಭಟ್ಟರು ಅಂತ ಇದ್ದರು. ಕೃಷ್ಣ ಭಟ್ಟರೆಂದರೆ ನನ್ನ ಅಜ್ಜ ಹಿರಿಯ ಬಲಿಪ ನಾರಾಯಣ ಭಾಗವತರ ಅಜ್ಜ. ಅವರ ನಂತರ ಅವರ ಮಗನಾದ ಮಾಧವ ಭಟ್ಟರು ಯಕ್ಷಗಾನ ಎಂಬ ಕಲೆಯನ್ನು ನಮ್ಮ ಕುಟುಂಬದಲ್ಲಿ ಮುಂದುವರಿಸಿಕೊಂಡು ಹೋಗುವುದಕ್ಕೋಸ್ಕರ ತಮ್ಮ ಮಗನಾದ ಹಿರಿಯ ಬಲಿಪ ನಾರಾಯಣ ಭಾಗವತರಿಗೆ ಅಂದರೆ ನನ್ನ ಅಜ್ಜನಿಗೆ ಭಾಗವತಿಕೆಯನ್ನು ಕಲಿಸಿದರು. ಅಮೇಲೆ ಅಜ್ಜನಿಂದ ತಂದೆಯವರಿಗೆ, ತಂದೆಯವರಿಂದ ನನಗೆ, ನನ್ನಿಂದ ನನ್ನ ಮಕ್ಕಳಿಗೆ ಹೀಗೆ ಮುಂದುವರಿಯುತ್ತಾ ಹೋಯಿತು ಕಲೆಯ ಸಂಬಂಧ.

ಪ್ರಶ್ನೆ: ಹಿರಿಯ ಬಲಿಪ ನಾರಾಯಣ ಭಾಗವತರ ಬಗ್ಗೆ ಪರಿಚಯಾತ್ಮಕವಾಗಿ ಒಂದೆರಡು ವಿವರಗಳನ್ನು ನೀಡಬಹುದೆ ?

ಉತ್ತರ: ನನ್ನ ಅಜ್ಜ ಹಿರಿಯ ಬಲಿಪ ನಾರಾಯಣ ಭಾಗವತರು. ಅವರ ಹೆಸರೇ ನನಗೆ ಇಟ್ಟದ್ದು. ಹಿರಿಯ ಬಲಿಪರು ಮೊದಲಿಗೆ ಬಣ್ಣದ ಮಾಲಿಂಗರ ಅಜ್ಜ, ಪಡ್ರೆ ಮೇಳ ನಡೆಸಿಕೊಂಡು ಬರುತ್ತಿದ್ದ ಮಾಲಿಂಗ ಪಾಟಾಳಿಯವರಲ್ಲಿ ಕಲಿತರು. ಮಾಲಿಂಗ ಪಾಟಾಳಿಯವರು ಪಡ್ರೆ ಮೇಳದ ಯಜಮಾನರು ಮಾತ್ರವಲ್ಲದೆ ಕಲಾವಿದರು ಕೂಡಾ ಆಗಿದ್ದರು. ಚೆಂಡೆ ಮದ್ದಳೆ, ನಾಟ್ಯಗಳಲ್ಲದೆ ವೇಷಭೂಷಣ ತಯಾರಿಸುವ ಕಲೆ ಕೂಡಾ ಮಾಲಿಂಗ ಪಾಟಾಳಿಯವರಿಗೆ ಕರಗತವಾಗಿತ್ತು. ಅಮೇಲೆ ಸರ್ವ ವಿದ್ಯಾ ವಿಶಾರದರಾಗಿದ್ದ ಕೂಡ್ಲು ಸುಬ್ರಾಯ ಶ್ಯಾನುಭಾಗರಲ್ಲಿ ಕಲಿತರು. ಭಾಗವತಿಕೆಯಲ್ಲದೆ ಅಜ್ಜ ನಾರಾಯಣ ಭಾಗವತರು ನಾಟ್ಯ, ಚೆಂಡೆ, ಹರಿಕಥೆ ಎಲ್ಲವನ್ನೂ ಮಾಡುತ್ತಿದ್ದರಂತೆ. ಜೀವನ ನಿರ್ವಹಣೆ ತುಂಬಾ ಕಷ್ಟ ಆಗ. ಸಂಸಾರ ನಿರ್ವಹಣೆಗಾಗಿ ವಿವಿಧ ಬಗೆಯ ವೃತ್ತಿಗಳನ್ನು ಮಾಡಬೇಕಾಗಿತ್ತು. ಅದರಲ್ಲೂ ನಮ್ಮಜ್ಜ ತುಂಬಾ ಗರ್ವಿಷ್ಠರು. ಅನ್ನಾಹಾರ, ನಿದ್ರೆ ಎಲ್ಲವನ್ನೂ ಬಿಟ್ಟು ಸತತವಾಗಿ ಯಕ್ಷಗಾನಾಭ್ಯಾಸವನ್ನೇ ಸಾಧನೆಯಿಂದ ಮಾಡಿದವರು.

ಪ್ರಶ್ನೆ: ಅಜ್ಜನೇ ನಿಮಗೆ ಯಕ್ಷಗಾನದ ಮೂಲ ಪಾಠದ ಗುರುಗಳೇ ? ಅಥವಾ ಬೇರೆಯವರಿಂದಲೂ ನಿಮಗೆ ಪಾಠ ಆಗಿದೆಯೇ ?

ಉತ್ತರ: ನನಗೆ ಯಕ್ಷಗಾನದ ಬಾಲಪಾಠ ತಂದೆಯವರಾದ ಮಾಧವ ಭಟ್ಟರದ್ದು. ಭಾಗವತಿಕೆ ಅಥವಾ ಹಾಡುಗಾರಿಕೆಗೆ ಅಜ್ಜ ಮತ್ತು ತಂದೆಯವರಿಂದ ಪಾಠ ಆಯಿತು. ಯಕ್ಷಗಾನದ ರಂಗತಂತ್ರ,ರಂಗಮಾಹಿತಿಗಳನ್ನು ಕುದ್ರೆಕೋಡ್ಲು ರಾಮ ಭಟ್ಟರಿಂದ, ಅವರ ಒಡನಾಟದಿಂಡ ಕಲಿತೆ. ಅಮೇಲೆ ರಂಗಸ್ಥಳದ ಕ್ರಮಗಳು ಹಾಗೂ ಮಾಹಿತಿಗಳು ಮೊದಲಾದುವುಗಳ ಮಾಹಿತಿ ಅಗಲ್ಪಾಡಿ ಕುಂಞಿ ಕೃಷ್ಣ ಮಣಿಯಾಣಿಯವರಿಂದ ತಿಳಿಯಿತು. ರಂಗದ ನಡೆಗಳನ್ನು ಮತ್ತು ಕೆಲವು ಮಾಹಿತಿಗಳನ್ನು ಕುಂಬಳೆ ತಿಮ್ಮಪ್ಪು ಇವರಿಂದ ಕಲಿತೆ. ಇವರಿಗೆಲ್ಲಾ ಆರಂಭದ ನಡೆಯಿಂದ ಕೊನೆಯ ವರೆಗೂ ಎಲ್ಲಾ ಅಂದರೆ ಪ್ರತಿಯೊಂದು ಭಾಗಗಳೂ ಗೊತ್ತಿತ್ತು. ತಪ್ಪಿದ್ದಲ್ಲಿ ಮಾರನೆಯ ದಿನ ಹೇಳಿಕೊಡುತ್ತಿದ್ದರು. ಅಮೇಲೆ ಇನ್ನೂ ಹಲವು ಹಿರಿಯ ಕಲಾವಿದರ ಒಡನಾಟದಿಂದ ಕಲಿತಿದ್ದೇನೆ.

ಪ್ರಶ್ನೆ: ನೀವು ಭಾಗವತರಾದ ಹೊಸತರಲ್ಲಿ ರಂಗದಲ್ಲಿ ಮೂಲ ವ್ಯವಸ್ಥೆಗಳಾದ ವಿದ್ಯುಚ್ಛಕ್ತಿ, ಮೈಕ್‍ಗಳ ವ್ಯವಸ್ಥೆ ಇತ್ತೇ? ಅದಿಲ್ಲದೆಯೇ ನೀವು ಪದ್ಯ ಹೇಳಿದ್ದುಂಟೋ?

ಉತ್ತರ: ನಾನು ಮೇಳಕ್ಕೆ ಸೇರಿದ ಹೊಸತರಲ್ಲಿ ಮೈಕ್ ಇರಲಿಲ್ಲ. ಆದರೆ ಟೆಂಟ್ ಮೇಳಗಳಿಗೆ ಕರೆಂಟ್, ಮೈಕ್‍ನ ವ್ಯವಸ್ಥೆ ಆಗಿತ್ತು. ಏರು ಶೃತಿಯಲ್ಲಿ ಪದ್ಯ ಹೇಳುತ್ತಿದ್ದ ಕಾರಣ ಸಭೆಯ ಹಿಂದಿನ ವರೆಗೂ ಕೇಳುವುದಕ್ಕೇನೂ ಅಡ್ಡಿಯಿರಲಿಲ್ಲ. ಆಗ ವಿದ್ಯುಚ್ಛಕ್ತಿ ಇರಲಿಲ್ಲ. ಬದಲಿಗೆ ಪೆಟ್ರೋಮ್ಯಾಕ್ಸ್ ಇತ್ತು. ಅಗೆಲ್ಲಾ ಇಡೀ ಪ್ರಸಂಗದ ಪದ್ಯಗಳು ಬಾಯಿಪಾಠ ಬರಬೇಕಿತ್ತು. ಯಾಕೆಂದರೆ ವೇಷಗಳು ಅಂದರೆ ಪಾತ್ರಧಾರಿಗಳು
ಪೆಟ್ರೋಮ್ಯಾಕ್ಸ್ ಬೆಳಕಿಗೆ ಅಡ್ಡವಾಗಿ ನಿಂತಾಗ ಓದಲು ಕಾಣುತ್ತಿರಲಿಲ್ಲ. ಆದ ಕಾರಣ ಪದ್ಯ ಬಾಯಿಪಾಠ ಅನಿವಾರ್ಯವಾಗಿತ್ತು. ಬರುತ್ತಿತ್ತು ಕೂಡಾ. ರಾತ್ರಿ ಹೇಳಬೇಕಾದ ಪದ್ಯಗಳನ್ನು ಹಗಲು ಉರು ಹೊಡೆಯುತ್ತಿದ್ದೆ. ಈಗ ತುಂಬಾ ಪದ್ಯಗಳು ಮರೆತುಹೋಗಿದೆ.

ಪ್ರಶ್ನೆ: ದೊಂದಿ ಬೆಳಕಿನ ಆಟದ ಬಗ್ಗೆ ತಿಳಿಸುತ್ತೀರಾ ? ಪ್ರಸ್ತುತ ದೊಂದಿ ಬೆಳಕಿನ ಆಟದ ಸಂಪೂರ್ಣ ಮಾಹಿತಿಯಿರುವವರಲ್ಲಿ ನೀವು ಕೂಡಾ ಒಬ್ಬರು ಎಂದು ಹೇಳುತ್ತಾರೆ….

ಉತ್ತರ: ನಾನು ರಂಗಕ್ಕೆ ಬರುವಾಗ ದೊಂದಿ ಬೆಳಕಿನ ಆಟಗಳು ಮರೆಯಾಗಿತ್ತು. ದೊಂದಿ ಬೆಳಕು ಹೋಗಿ ಪೆಟ್ರೋಮ್ಯಾಕ್ಸ್ ಬಂದಿತ್ತು. ಆ ಕಾಲಕ್ಕೆ ಬೇರೆ ವ್ಯವಸ್ಥೆಗಳು ಆಗಿಲ್ಲದ ಕಾರಣ ದೊಂದಿ ಬೆಳಕನ್ನು ಉಪಯೋಗಿಸುತ್ತಿದ್ದರೇ ವಿನಃ ಅದು ಉತ್ತಮವಾದದ್ದು, ಶ್ರೇಷ್ಟವಾದದ್ದು ಅಂತ ಅಲ್ಲ. ಕಾಲಕ್ಕನುಗುಣವಾಗಿ ಬದಲಾಗುತ್ತಾ ಹಾಗೂ ಸುಧಾರಣೆಯಾಗುತ್ತಾ ಇರುತ್ತವೆ ವ್ಯವಸ್ಥೆಗಳು. ದೊಂದಿಬೆಳಕು ಹೋಗಿ ಪೆಟ್ರೋಮ್ಯಕ್ಸ್ ಬಂತು. ಅಮೇಲೆ ವಿದ್ಯುಚ್ಛಕ್ತಿ ಬಂತು. ಇನ್ನೂ ಮುಂದಕ್ಕೆ ಇದಕ್ಕಿಂತ ಹೆಚ್ಚಿನದು ಏನಾದರೂ ಬರಬಹುದು.

ಪ್ರಶ್ನೆ: ಹಿರಿಯ ಬಲಿಪರು ಮೈಕ್ ಇಲ್ಲದೆಯೇ ಪದ್ಯ ಹೇಳುತ್ತಿದ್ದರಂತೆ. ಅದು ಎಲ್ಲರಿಗೂ ಕೇಳುವಂತಾಗಲು, ಆಗಿನ ಪ್ರೇಕ್ಷಕರಲ್ಲಿ ಮೌನವಾಗಿ ಆಲಿಸುವ, ಕೇಳುವ ಒಂದು ಶಿಸ್ತು ಇತ್ತು ಅಲ್ಲವೇ?

ಉತ್ತರ: ನನ್ನ ಅಜ್ಜನ ಯಕ್ಷಗಾನ ಕಲಾಸೇವೆಯ ಕೊನೆಯ ಹಂತದಲ್ಲಿ ಧ್ವನಿವರ್ಧಕದ ವ್ಯವಸ್ಥೆ ಆಗಿತ್ತು. ಆದರೆ ಅವರು ಮೈಕ್ ಬೇಡ ಎಂದು ನಿರಾಕರಿಸುತ್ತಾ ಅಸಮಾಧಾನ ತೋರುತ್ತಿದ್ದರು. ದ್ವನಿವರ್ಧಾಕಗಳು ಆಗಾಗ ಸ್ವಲ್ಪ ಸ್ವಲ್ಪ ಗೊರಗೊರನೆ ಶಬ್ದ ಬರುವುದು ಇತ್ಯಾದಿಗಳಿಂದ ಅವರಿಗೆ ಅದು ಸಹನೀಯವಾಗಿರಲಿಲ್ಲ ಎಂದು ತೋರುತ್ತದೆ. ಆ ಕಾಲದಲ್ಲಿ ಪದ್ಯ, ವೇಷ, ಕಥಾನುಸಾರ ನಿಶ್ಶಬ್ದವಾಗಿ ಕೇಳುವ ಆಸಕ್ತಿ ಸಭಿಕರಲ್ಲಿತ್ತು. ಮತ್ತೆ, ಮಕ್ಕಳು ಗಲಾಟೆ ಮಾಡುವುದು ಇದ್ದದ್ದೆ. ಅವರನ್ನು ಎದುರು ಕುಳಿತ ಹಿರಿಯರಾದ ಕೆಲವರು ಕೋಲು ಹಿಡಿದು ಹೆದರಿಸಿ ನಿಯಂತ್ರಿಸುತ್ತಿದ್ದರು. ಉಳಿದವರಲ್ಲಿ ಮೌನವಾಗಿ ಕೇಳುವ ಆಸಕ್ತಿ ಹೆಚ್ಚಾಗಿತ್ತು.

ಪ್ರಶ್ನೆ: ಯಕ್ಷಗಾನದಲ್ಲಿ ಇರುವ ‘ಚೌ’ ತಾಳದ ಬಗ್ಗೆ ಹೇಳಬಹುದೇ ?

ಉತ್ತರ: ಯಕ್ಷಗಾನದಲ್ಲಿ ತಾಳಗಳು ಧ್ರುವ, ಆದಿ, ಚೌ, ರೂಪಕ, ಅಷ್ಟ, ಏಕ, ಝಂಪೆ, ತ್ರಿವುಡೆ, ಕೋರೆ ತಾಳ ಅಥವಾ ತಿತ್ತಿತ್ತೈ ಹಾಗೂ ಮಟ್ಟೆ ತಾಳ. ಅಮೇಲೆ ಕೆಲವು ಉಪತಾಳಗಳೂ ಬಂದುವು. ಅಲ್ಲದೆ ಅಷ್ಟ, ಏಕ, ಝಂಪೆ, ತ್ರಿವುಡೆ ತಾಳಗಳ ತ್ವರಿತ ರೂಪಗಳೂ ಇವೆ. ಒಂದು ತಾಳದಿಂದ ಇನ್ನೊಂದು ತಾಳಕ್ಕೆ ರಂಗದ ಅನುಕೂಲಕ್ಕೆ ತಕ್ಕಂತೆ ಹೋಗುವ ಕ್ರಮವಿದೆ. ಚೌ ತಾಳವೊಂದನ್ನು ಬಿಟ್ಟು ಈಗ ಎಲ್ಲಾ ತಾಳಗಳೂ ಈಗ ಇವೆ. ಧ್ರುವ ತಾಳ ಈಗಲೂ ಇದೆ. ಆಟದ ಕೊನೆಯ ಭಾಗದಲ್ಲಿ ಆರತಿ ಮಾಡುವಾಗಿನ ಪದ್ಯವನ್ನು ಆ ತಾಳದಲ್ಲಿಯೇ ಹಾಡುವುದು. ಆದರೆ ಅದಕ್ಕೆ ಬಾರಿಸುವುದು ಮಾತ್ರ ತ್ರಿವುಡೆ ತಾಳದಲ್ಲಿ. ಆಗೆಲ್ಲಾ ತಾಳಕ್ಕೆ ಮಾತ್ರ ಒಂದು ವೇಗವಿತ್ತು. ತಾಳಕ್ಕೆ ಒಂದನೇ ಕಾಲ, ಎರಡನೇ ಕಾಲ, ಮೂರನೇ ಕಾಲ, ನಾಲ್ಕನೇ ಕಾಲ ಹೀಗೆ ಇತ್ತೇ ಹೊರತು ಮಾತ್ರಾಗಣಗಳಿಗೆ, ಮಾತ್ರಾಕಾಲದ ವೇಗ ಇಲ್ಲ.

“ಚೌ ತಾಳವೆಂಬುದು ನಿರ್ಲಕ್ಷ್ಯದಿಂದಾಗಿ ಕ್ರಮೇಣ ರಂಗದಿಂದ ಮರೆಯಾಗಿ ಹೋಯ್ತು. ಅಗರಿ ಶ್ರೀನಿವಾಸ ಭಾಗವತರು ಇರುವಾಗ ಚೌ ತಾಳದಲ್ಲಿ ಪದ್ಯ ಹೇಳುತ್ತಾ ಇದ್ದರು. ಅಳಿಕೆ ರಾಮಯ್ಯ ರೈಗಳೇ ಮೊದಲಾದವರು ಚೌ ತಾಳದ ಹೆಜ್ಜೆಗಾರಿಕೆಯನ್ನು ಅರಿತಿದ್ದರು ಮಾತ್ರವಲ್ಲ ನೃತ್ಯ ಮಾಡುತ್ತಿದ್ದರು ಕೂಡಾ. ಆ ನಂತರ ಮರೆಯಾಗಿ ಹೋಯಿತು.”

“ಚೌ ತಾಳದ ಬಾಯಿತಾಳ .. “ ತತ್ತಾ ದಿಂದತ್ತಾಂ ದಿಂದತ್ತಾಂ ತತ್ತಾ ದಿಂದತ್ತಾಂ” ಪದ ತೆಗೆಯುವಾಗ ಎರಡನೇ ಪೆಟ್ಟಿಗೆ ಪದ ತೆಗೆಯಬೇಕು. ಇನ್ನೊಂದು ರೀತಿಯಲ್ಲಿ ಕೂಡಾ ಹೇಳುತ್ತಾರೆ. “ತೋಂ ದಿಂದತ್ತಾಂ ದಿಂದತ್ತಾ ದಿಂದತ್ತಾ ದಿಂದತ್ತಾಂ” ಅಥವಾ ಮತ್ತೊಂದು ರೀತಿಯಲ್ಲಿ “ತತ್ತಾ ದಿಂದತ್ತಾಂ ದಿಂದತ್ತಾ ದಿಂದತ್ತಾ ದಿಂದತ್ತಾಂ” ಎಂದು ಕೂಡಾ ಹೇಳುತ್ತಾರೆ.

ಪ್ರಶ್ನೆ: ನೀವು ಸುಮಾರು ಮೂರು ತಲೆಮಾರಿನ ಕಲಾವಿದರಿಗೆ ಭಾಗವತಿಕೆ ಮಾಡಿದವರು. ಹಿಂದಿನ ತಲೆಮಾರಿನ ಕಲಾವಿದರಲ್ಲಿ ನೀವು ಕಾಣುವ ವಿಶೇಷತೆಗಳೇನು ?

ಉತ್ತರ: ನಾನು ಹಳೆಯ ವೇಷಧಾರಿಗಳನ್ನೆಲ್ಲಾ ಕುಣಿಸಿದ್ದೇನೆ. ಅವರಿಗೆಲ್ಲಾ ವೇಷದ ಬಗ್ಗೆ ಒಂದು ಭಕ್ತಿ ಇತ್ತು. ಶ್ರದ್ಧಾಭಕ್ತಿಗಳು ಇದ್ದುವು. ವೇಷದಲ್ಲಿ ಸ್ವಲ್ಪ ಏನಾದರೂ ತಪ್ಪಿದರೆ ಮರೆಯಲಾಗದ ಬೇಸರವಾಗುತ್ತಿತ್ತು ಅವರಿಗೆ. ಲೆಕ್ಕಾಚಾರದ ಮಾತುಗಾರಿಕೆಯಾಗಿದ್ದರೂ ಕಲೆಯ ಬಗ್ಗೆ ಅಪಾರ ಗೌರವವಿತ್ತು. ಮಾಡಿದ ತಪ್ಪನ್ನು ಕೇಳಿ ತಿಳಿದುಕೊಂಡು ಮರುದಿನಕ್ಕೆ ತಿದ್ದಿಕೊಳ್ಳುತ್ತಿದ್ದರು. ಮುಮ್ಮೇಳದವರಿಗೆ ಮಾತ್ರವಲ್ಲ, ಹಿಮ್ಮೇಳದವರಿಗೂ ಅಷ್ಟೇ. ಸಹಾಯಕರಿಗೂ ಹಾಗೆಯೇ, ತೆರೆ ಹಿಡಿಯುವಲ್ಲಿ ಏನಾದರೂ ವ್ಯತ್ಯಾಸ ಬಂದರೆ ಅವರಿಗೆಲ್ಲಾ ಅತೀವ ಪಶ್ಚಾತ್ತಾಪವಾಗುತ್ತಿತ್ತು. ನನ್ನಿಂದ ಹೀಗಾಯಿತಲ್ಲಾ ಎಂದು ಅತಿಯಾಗಿ ಬೇಸರಿಸಿಕೊಳ್ಳುತ್ತಿದ್ದರು.

ಪ್ರಶ್ನೆ: ನಿಮ್ಮ ವೃತ್ತಿಜೀವನದ ಆರಂಭದಲ್ಲಿ ಇದ್ದ “ಪೂರ್ವರಂಗ”ದ ಅವಧಿಯ ಬಗ್ಗೆ ತಿಳಿಸುತ್ತೀರಾ? ಪೂರ್ವರಂಗದಲ್ಲಿ ಯಾವೆಲ್ಲಾ ವಿಭಾಗಗಳಿದ್ದುವು ?

ಉತ್ತರ: ನನ್ನ ಯಕ್ಷಗಾನದ ವೃತ್ತಿಜೀವನದಲ್ಲಿ ಹೇಳುವುದಾದರೆ ‘ಪೂರ್ವರಂಗ’ ಈಗ ಬಹಳ ಕಡಿಮೆಯಾಗಿದೆ. ಯಾಕೆ ಅಂತ ಹೇಳಿದರೆ ಆ ದಿನಗಳಲ್ಲಿ ಆಟ ಆಡಿಸುವವರು ಯಾರಾದರೂ ದಾನಿಗಳ ಸಹಾಯದಿಂದ ಆಟ ಆಡಿಸುತ್ತಿದ್ದರು. ಯಕ್ಷನ ಸಂಚಾರ ಮಧ್ಯರಾತ್ರಿ ಸುಮಾರು ಒಂದು ಘಂಟೆಗೆ ಅಂತ ಹಿಂದಿನವರ ನಂಬಿಕೆ. ಆದ್ದರಿಂದ ಪೀಠಿಕೆ ಬಡಿಯುವಾಗಲೇ 12.30 ಆಗುತ್ತಿತ್ತು. ಆದುದರಿಂದ ಹೆಚ್ಚಾಗಿ ನೋಡುವ ಪೂರ್ವರಂಗವೇ ಮಧ್ಯರಾತ್ರಿಯ ವರೆಗೆ ಆಗುವಾಗ ಅವರಿಗೆ ಬೇಸರವಾಗುತ್ತಿತ್ತು. ಆದುದರಿಂದ ಆಟ ಆಡಿಸುವವರ ಸಂಖ್ಯೆ ಕಡಿಮೆಯಾಗಬಹುದೆಂಬ ಭಯದಿಂದ ಪೂರ್ವರಂಗವನ್ನು ಕಡಿತಗೊಳಿಸುತ್ತಾ ಬಂದು, ನಾನು ಈ ಯಕ್ಷಗಾನ ಕ್ಷೇತ್ರಕ್ಕೆ ಪ್ರವೇಶಿಸುವಾಗ 10.30 ಘಂಟೆಗೆ ಪೀಠಿಕೆ ಆಗಲು ಸುರುವಾಯಿತು.
ಆಗ ಪ್ರಾರಂಭದ ಸಭಾಲಕ್ಷಣದ ಪದ್ಯಗಳೆಲ್ಲಾ ಇದ್ದುವು. ಅಮೇಲೆ ಶ್ಲೋಕಗಳನ್ನೆಲ್ಲಾ ಹೇಳಲಿಕ್ಕಿತ್ತು. ನಾನು ಕೂಡಾ ಹೇಳಿದವ. ಶ್ಲೋಕಗಳನ್ನು ಹೇಳಲು ಸುಮಾರು ಮುಕ್ಕಾಲರಿಂದ ಒಂದು ಘಂಟೆಯ ಅವಧಿ ಬೇಕಾಗುತ್ತಿತ್ತು. ಅಮೇಲೆ ನಿತ್ಯವೇಷ ಪ್ರವೇಶ, ದೇವರ ಪೂಜೆ, ಅದರ ನಂತರ ‘ಕಟ್ಟುಹಾಸ್ಯ’ ಅಂತ ಇತ್ತು. ಅದನ್ನು ಹಾಸ್ಯಗಾರರೇ ಮಾಡುವುದು. ಆಗ ವಿಟ್ಲ ಜೋಷಿಯವರು ಹೇಮರೆಡ್ಡಿ ಮಲ್ಲಮ್ಮ ಅಂತ ವೇಷ ಮಾಡುತ್ತಿದ್ದರು. ಇನ್ನು ಕೆಲವು ಹಾಸ್ಯಗಳಾದ ರಂಗಾರಂಗಿ, ಈರೋಡು ಸ್ವಾಮಿ, ಮಡಿವಾಳ ಮಡಿವಾಳ್ತಿ ಮೊದಲಾದ ಕಟ್ಟುಹಾಸ್ಯಗಳಿದ್ದುವು. ಅಮೇಲೆ ಮುಖ್ಯ ಸ್ತ್ರೀವೇಷ. ಅದು ಬಿಟ್ಟು ಮುಖ್ಯ ಸ್ತ್ರೀವೇಷ ನಿಜವಾಗಿ ಒಂದೇ ಆಗಬೇಕಾದ್ದು. ಈಗ ಎರಡು ಮಾಡ್ತಾರೆ. ಮೊದಲು ಒಂದೇ ಇತ್ತು. ಅಮೇಲೆ ಪೀಠಿಕೆ. ಪೀಠಿಕೆ ಸ್ತ್ರೀವೇಷಗಳು ನಾನು ಈ ರಂಗಕ್ಕೆ ಬರುವಾಗ ಇರಲಿಲ್ಲ. ಬರಿಯ ಪದ್ಯಗಳನ್ನು ಮಾತ್ರ ಹೇಳುತ್ತಿದ್ದರು. ಏಳೆಂಟು ಪದ್ಯಗಳನ್ನು ಮಾತ್ರ ಹೇಳುತ್ತಿದ್ದರು. ಅದರ ಮಧ್ಯದಲ್ಲಿ ‘ಅರ್ಧನಾರಿ’ ಅನ್ನುವ ವೇಷ ಇತ್ತು. ಅದು ಈಗ ಇಲ್ಲ. ಅಮೇಲೆ ‘ಷಣ್ಮುಖ ಸುಬ್ರಾಯ’ ಅಂತ ಇತ್ತು. ಅದು ಕೂಡಾ ಈಗ ಇಲ್ಲ. ಕೋಲಾಟ ಇತ್ತು. ಒಂದೆರಡು ಸಲ ನಾನು ಕೂಡ ಮಾಡಿಸಿದ್ದೇನೆ. ಕೆಲವು ವೇಷಗಳನ್ನು ಹೊತ್ತು ಕಳೆಯಲಿಕ್ಕಾಗಿ ಅಂದರೆ ಸಮಯದ ಹೊಂದಾಣಿಕೆಗಾಗಿ ಮಾಡುತ್ತಿದ್ದರು. ಕೆಲವರು ಮುಖ್ಯ ಪಾತ್ರಧಾರಿಗಳು ಮನೆಯಿಂದ ನಡೆದುಕೊಂಡೇ ಬರಬೇಕಾದ ಪರಿಸ್ಥಿತಿ ಬಂದಾಗ  ಅಂತಹಾ ಸಂದರ್ಭಗಳಲ್ಲಿ ತಡವಾಗುವುದರಿಂದ ಕೆಲವು ವೇಷಗಳನ್ನೆಲ್ಲಾ ಸಂದರ್ಭೋಚಿತವಾಗಿ ಕೂಡಾ ಮಾಡುತ್ತಿದ್ದರು.

ಪ್ರಶ್ನೆ: ಮುಂದಿನ ಪೀಳಿಗೆಗೆ ಪೂರ್ವರಂಗ ಮರೆತುಹೋಗದಂತೆ ಮಾಡುವುದು ಹೇಗೆ ?

ಉತ್ತರ: ಮುಂದಿನ ಪೀಳಿಗೆಗೆ ‘ಪೂರ್ವರಂಗ’ದ ವಿಭಾಗವನ್ನು ರಂಗದಲ್ಲಿ ಪುನಃ ಪ್ರದರ್ಶನ ಮಾಡುವುದು ಕಷ್ಟ. ಆದ ಕಾರಣ ಮೊದಲು ಮಾಡುತ್ತಿದ್ದ ಹಾಗೆ ಪೂರ್ವರಂಗವನ್ನೇ ಮೊದಲು ಮಕ್ಕಳಿಗೆ ಅಥವಾ ಇತರ ಅಭ್ಯಾಸಿಗಳಿಗೆ ಕಲಿಸುವುದು ಉತ್ತಮ. ಅ ರೀತಿ ಮಾಡಿ ಉಳಿಸಿಕೊಳ್ಳಲು ಪ್ರಯತ್ನಿಸಬಹುದು. ರಂಗದಲ್ಲಿ ಇನ್ನು ಕಷ್ಟ. ಕಾಲಮಿತಿಯ ಆಟವನ್ನು ಪ್ರದರ್ಶಿಸುವಾಗ ಒಂದೊಂದು ದಿನ ಪೂರ್ವರಂಗವನ್ನು ಮಾತ್ರವೇ ಪ್ರದರ್ಶಿಸಿ ಅದರ ಪರಿಚಯ ಜನರಿಗಾಗುವಂತೆ ಮಾಡಬಹುದು.

ಪ್ರಶ್ನೆ: ಈಗ ಯಕ್ಷಗಾನ ರಂಗದಲ್ಲಿ ಮಾತ್ರವಲ್ಲ, ಎಲ್ಲಾ ರಂಗಗಳಲ್ಲಿಯೂ ಹೊಸತನದ ಸೃಷ್ಟಿಯಾಗುತ್ತಿದೆ. ಆದರೆ ಯಕ್ಷಗಾನದಲ್ಲಿ ಸ್ವಲ್ಪ ಹೆಚ್ಚೇ ಅನ್ನುವಷ್ಟು ಆಗಿದೆ. ಈ ಪರಂಪರೆಯನ್ನು ಉಳಿಸಲು ಮುಂದಿನ ಪೀಳಿಗೆಗೆ ನೀವು ಕೊಡುವ ಸಲಹೆಗಳೇನು?

ಉತ್ತರ: ಯಕ್ಷಗಾನದಲ್ಲಿ ಈಗ ಹೊಸತನ ಕಾಣುವುದು ನಿಜ. ಮೊದಲಿನ ಕಾಲದಲ್ಲಿ ಒಂದು ಶಿಸ್ತು ಇತ್ತು. ತನ್ನದೂ ಒಂದು ಸ್ವಂತ ಸೃಷ್ಟಿ ಮಾಡಹೊರಟು ಅದರಲ್ಲಿ ಯಶಸ್ವಿಯಾದರೂ ಅದು ಮತ್ತೊಬ್ಬನಿಗೂ ಬರೋದಿಲ್ಲ. ಪರಂಪರೆಯನ್ನು ಪ್ರೇಕ್ಷಕ ಯವತ್ತೂ ತಿರಸ್ಕರಿಸಲಿಲ್ಲ. ಹೊಸತನವೆಂಬುದು ಒಮ್ಮೆಗೆ ಯಶಸ್ಸು ಕಂಡರೂ ಸ್ಥಿರವಾಗಿ ಉಳಿಯುವುದಿಲ್ಲ.

ಪ್ರಶ್ನೆ: ಪರಂಪರೆಯ ಮೂಲ ಕಲೆಗೆ ಕಸಿ ಕಟ್ಟುವ ಕೆಲಸ ಮಾಡುವುದನ್ನು ಕಂಡಾಗ ಅಪಾರವಾದ ನೋವು ನಿಮ್ಮನ್ನು ಬಾಧಿಸುತ್ತಿರಬಹುದಲ್ಲವೇ?  

ಉತ್ತರ: ಹೌದು. ಹಾಗೆ ಮಾಡುವುದು ಕಂಡಾಗ ಬೇಸರವಾಗುತ್ತದೆ. ಆದರೆ ನಾವು ಯಾರಲ್ಲಿ ಹೇಳುವುದು ? ಕೂಡಿದಷ್ಟು ನೋಡುವುದು, ಬರುವುದು ಅಷ್ಟೆ. ನಮ್ಮ ಬೇಸರ ನಮ್ಮಲ್ಲೇ ಇಟ್ಟುಕೊಳ್ಳುವುದು.

ಪ್ರಶ್ನೆ: ನಿಮ್ಮ ಹಿಂದಿನ ಭಾಗವತರಲ್ಲಿ ನೀವು ಯಾರನ್ನು ಇಷ್ಟಪಡುತ್ತೀರಿ?

ಉತ್ತರ: ಹಿಂದಿನವರಲ್ಲಿ ನನ್ನ ಅಜ್ಜ ಹಿರಿಯ ಬಲಿಪ ನಾರಾಯಣ ಭಾಗವತರು, ಪುತ್ತಿಗೆ ರಾಮಕೃಷ್ಣ ಜೋಯಿಸರು, ಅಗರಿ ಶ್ರೀನಿವಾಸ ಭಾಗವತರು.

ಪ್ರಶ್ನೆ: ಹಿಮ್ಮೇಳದಲ್ಲಿ ನಿಮ್ಮ ದೀರ್ಘಾವದಿಯ ಜೊತೆಗಾರರಾಗಿದ್ದವರು ಯಾರೆಲ್ಲಾ?

ಉತ್ತರ: ಕುದ್ರೆಕೋಡ್ಲು ರಾಮ ಭಟ್ಟರು, ನಿಡ್ಲೆ ನರಸಿಂಹ ಭಟ್ಟರು, ಕಾಸರಗೋಡು ವೆಂಕಟ್ರಮಣ, ಅಡೂರು ಶಿವ ಮದ್ದಳೆಗಾರರು, ರಾಮಕೃಷ್ಣ ಮದ್ದಳೆಗಾರರು ಹಾಗೂ ಇನ್ನೂ ಅನೇಕ ಕಲಾವಿದರು.
ಸಂದರ್ಶನ ಮುಗಿಸಿದಾಗ ಏನೋ ಒಂದು ಆತ್ಮತೃಪ್ತಿ, ಸಮಾಧಾನ. ಕೆಲವೊಂದು ಅನಿರೀಕ್ಷಿತವಾಗಿ ಕೇಳಿದ ಪ್ರಶ್ನೆಗಳಿಗೆ ಅವರು ನಯವಾಗಿಯೇ “ಅದೆಲ್ಲಾ ಯಾಕೆ… ಬೇಡ” ಎಂದು ಹೇಳುತ್ತಾ ತಮ್ಮ ದೂರದೃಷ್ಟಿತ್ವಕ್ಕೆ ಸಾಕ್ಷಿಯಾದರು. ನನಗೂ ಅದು ಸರಿಯೆಂದು ಕಂಡಿತು.


ಹಿರಿಯ ಬಲಿಪ ನಾರಾಯಣ  ಭಾಗವತರ ತಮ್ಮ ಶಂಕರ ಭಟ್ಟರ ಮಗ ಮಾಧವ ಭಟ್ಟ- ಸರಸ್ವತೀ ಅಮ್ಮ ದಂಪತಿಯ ಎಂಟು ಜನ ಮಕ್ಕಳಲ್ಲಿ ಮೊದಲನೆಯವರಾಗಿ 19-03-1938ರಲ್ಲಿ ಬಲಿಪ ನಾರಾಯಣ ಭಾಗವತರ ಜನನ. ದೊಡ್ಡಜ್ಜನಿಗೆ ಮಕ್ಕಳಿಲ್ಲದ ಕಾರಣ ಅವರ ಹೆಸರನ್ನೇ ಇವರಿಗೆ ನಾಮಕರಣ ಮಾಡಲಾಯಿತು. ಪೆರ್ಲ ಸತ್ಯನಾರಾಯಣ ಶಾಲೆಯಲ್ಲಿ ಶಿಕ್ಷಣವನ್ನು ಪಡೆದ ಬಲಿಪ ನಾರಾಯಣ ಭಾಗವತರು ಕಲಿತದ್ದು 7ನೇ ತರಗತಿಯ ವರೆಗಾದರೂ ಅವರ ಜೀವನಾನುಭವ ಅಪಾರವಾದದ್ದು. ಲೋಕಾನುಭವದ ಜೊತೆಗೆ ಮುಗ್ಧತೆಯೂ ಮೇಳೈಸಿ ಅವರೊಬ್ಬ ಆಕರ್ಷಕ ಗೌರವಾನ್ವಿತ ವಕ್ತಿಯಂತೆ ಕಾಣಿಸುತ್ತಾರೆ.

ಬಲಿಪ ನಾರಾಯಣ ಭಾಗವತರಿಗೆ ಸಿಕ್ಕಿದ ಸನ್ಮಾನ ಪ್ರಶಸ್ತಿಗಳಿಗೆ ಲೆಕ್ಕವಿಲ್ಲ. ಅಂದರೆ ಅದು ಅವರಿಗೇ ಲೆಕ್ಕಕ್ಕೆ ಸಿಗದಷ್ಟು…! ಯಾಕೆಂದರೆ ಅದನ್ನು ಜೋಪಾನವಾಗಿ ಇಟ್ಟುಕೊಳ್ಳಲು ಸೂಕ್ತ ಜಾಗದ ಕೊರತೆಯಿಂದ ಎಷ್ಟೋ ಸನ್ಮಾನಪತ್ರಗಳು ಗೆದ್ದಲು ತಿಂದು ನಾಶವಾಗಿವೆ ಎಂದು ಅವರೇ ಒಪ್ಪಿಕೊಳ್ಳುತ್ತಾರೆ. ಆದರೆ ಉಳಿದ ಇಷ್ಟೇ ಅವರ ಅನನ್ಯ ಕಲಾಜೀವನದ ಸಾಕ್ಷಿಯಾಗಿ ನಿಂತಿರುವಾಗ ಅಳಿದುದನ್ನೂ ಸೇರಿಸಿದರೆ ಎಷ್ಟಾಗಬಹುದು? ಊಹಿಸಿ. ಅದು ಅವರ ಸಾಧನೆಗೆ ಹಿಡಿದ ಕೈಗನ್ನಡಿಯಾಗಬಹುದು. ಅದ್ಭುತ, ಅಮೋಘ ಎಂಬ ಪದಗಳೆಲ್ಲಾ ಯಕ್ಷಲೋಕದ ಸಾಧನೆಯ ಮೇರುಶಿಖರದ ಈ ವ್ಯಕ್ತಿತ್ವಕ್ಕೆ ಸಾಕ್ಷೀಭೂತವಾಗಿ ಅನ್ವರ್ಥನಾಮವಾಗಿ ನಿಲ್ಲುವುದು.


ಬಲಿಪರಿಗೆ ಸಿಕ್ಕ ಪ್ರಶಸ್ತಿಗಳು ಮತ್ತು ಸನ್ಮಾನಗಳು: ಸುಮಾರು ಇನ್ನೂರಕ್ಕೂ ಹೆಚ್ಚು(ನಾಶವಾದದ್ದು ಸೇರಿಸಿದರೆ ಇನ್ನೂ ಹೆಚ್ಚಾಗಬಹುದು)
ಬಲಿಪರು ಬರೆದ ಪ್ರಸಂಗಗಳು: ನಾಗವಿಜಯ(ನಾಗ ಸಿರಿಕನ್ನೆ), ನಟಚರಿತ್ರೆ ಅಥವಾ ಆಟದೊಳಗಣ ಆಟ, ಭಸ್ಮಾಸುರ ಮೋಹಿನಿ, ಗಾಯತ್ರಿ ಮಹಾತ್ಮೆ, ಶಿವಪ್ರಭಾ ಪರಿಣಯ, ಗಜೇಂದ್ರ ಮೋಕ್ಷ, ಅಂಗತಾಪಹರ (ಗರುದೋದ್ಭವ), ಕಂತುಕಾವತಿ ಕಲ್ಯಾಣ, ನವಗ್ರಹ ಮಹಾತ್ಮೆ, ದೇವಾಂಗ ಮದನಿಕೆ(ಕಾಳಿಂದಿ ವಿವಾಹ), ಮತ್ಸ್ಯಾವತಾರ, ಯಶೋಮತಿ ಏಕಾವಳಿ, ಶಕಟಾಸುರಾದಿಗಳ ವಧೆ, ಅಜಾಮಿಳ ಚರಿತ್ರೆ, ಶ್ರೀಕೃಷ್ಣ ಕಾರುಣ್ಯ, ಮೂರೂವರೆ ರತ್ನ, ಮಹಾದಾನಿ ಶಿಬಿ ಚಕ್ರವರ್ತಿ, ಕಾಲನೇಮಿ ಕಾಳಗ, ರಂತಿ ದೇವೋಪಖ್ಯಾನ, ದಂಭೋದ್ಭವ, ಗುರುದಕ್ಷಿಣೆ, ಶ್ರೀಕೃಷ್ಣ ಗಾರುಡಿ, ಶ್ರವಣಕುಮಾರ ಚರಿತ್ರೆ, ಐದು ದಿನದ ಶ್ರೀದೇವಿ ಮಹಾತ್ಮೆ ಮತ್ತು ಶ್ರೀಕೃಷ್ಣ ತುಲಾಭಾರ
ಪ್ರಕಟವಾಗದಿರುವ ಕೃತಿಗಳು: ಚಂದ್ರಕಲಾ ಪರಿಣಯ, ಧ್ರುವ ಚರಿತ್ರೆ, ಅಷ್ಮಾಂಗನೆಯರ ವಿವಾಹ, ಹಿರಣ್ಯಮಣಿ, ಪ್ರತಾಪನ ಪ್ರತಾಪ, ಗರುಡ ಗರ್ವಭಂಗ, ಚಿತ್ರವಿಚಿತ್ರ ಕಾಳಗ, ದಶರಥೋದ್ಭವ, ಚಂದ್ರಸೇನ ಚರಿತೆ, ಸೀಮಂತಮಣಿ ಸೀತಾರಮಣಿ, ತುಳಸಿ ಮಾಲತಿ ಧಾತ್ರಿ, ಹೀಗೆ ಹತ್ತು ಹಲವಾರು.

ಕುಟುಂಬ ವಿವರ:
ಹೆಸರು: ಬಲಿಪ ನಾರಾಯಣ ಭಾಗವತರು
ಪತ್ನಿ: ದಿ| ಜಯಲಕ್ಷ್ಮಿ
ಜನನ: 19.03.1938
ಜನನ ಸ್ಥಳ: ಕಾಸರಗೋಡು ಜಿಲ್ಲೆಯ ಎಣ್ಮಕಜೆ ಗ್ರಾಮದ ಪಡ್ರೆ ಎಂಬಲ್ಲಿ
ತಂದೆ ತಾಯಿ: ಶ್ರೀ ಬಲಿಪ ಮಾಧವ ಭಟ್ಟ ಮತ್ತು ಶ್ರೀಮತಿ ಸರಸ್ವತಿ ಅಮ್ಮ
ಯಕ್ಷಗಾನ ಗುರುಗಳು: ಅಜ್ಜ ಹಿರಿಯ ಬಲಿಪ ನಾರಾಯಣ ಭಟ್ಟ ಮತ್ತು ತಂದೆ ಬಲಿಪ ಮಾಧವ ಭಟ್ಟ
ರಂಗಮಾಹಿತಿ: ಆ ಕಾಲದ ಪ್ರಸಿಧ್ಧ ಮದ್ದಳೆಗಾರರಾದ ದಿ| ಕುದ್ರೆಕೋಡ್ಲು ರಾಮ ಭಟ್ಟ, ವೇಷಧಾರಿಗಳಾದ ದಿ| ಕುಂಬಳೆ ತಿಮ್ಮಪ್ಪ ಮತ್ತು ದಿ| ಅಗಲ್ಪಾಡಿ ಕುಂಞಿ ಕೃಷ್ಣ ಮಣಿಯಾಣಿ.
ಅನುಭವ: 50 ವರ್ಷಕ್ಕೂ ಮೇಲ್ಪಟ್ಟು (ಕೂಡ್ಲು, ಕುಂಡಾವು, ರೆಂಜಾಳ, ಮೂಲ್ಕಿ, ಭಗವತಿ ಮೇಳಗಳಲ್ಲಿ ಅಲ್ಲದೆ ಕಟೀಲು ಮೇಳವೊಂದರಲ್ಲೇ 25 ವರ್ಷಕ್ಕೂ ಮೇಲ್ಪಟ್ಟು ತಿರುಗಾಟ ನಡೆಸಿದ್ದಾರೆ.
ಮಕ್ಕಳು: ನಾಲ್ಕು ಜನ ಗಂಡುಮಕ್ಕಳು ( ಬಲಿಪ ಮಾಧವ ಭಟ್ಟ, ಹವ್ಯಾಸೀ ಭಾಗವತರಾದ ಬಲಿಪ ಶಿವಶಂಕರ ಭಟ್ಟ, ಬಲಿಪ ಶಶಿಧರ ಭಟ್ಟ, ಹಾಗೂ ಪ್ರಖ್ಯಾತ ಭಾಗವತರಾಗಿ ಪ್ರಸ್ತುತ ಕಟೀಲು ಮೇಳದಲ್ಲಿ ಭಾಗವತರಾಗಿ ಸೇವೆ ಸಲ್ಲಿಸುತ್ತಿರುವ ಬಲಿಪ ಪ್ರಸಾದ ಭಟ್ಟ)

ಲೇಖನ: ಮನಮೋಹನ್. ವಿ. ಎಸ್.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments