(ದಾಸರಬೈಲು ಚನಿಯ ಭಾಗವತರು ವಿಧಿವಶರಾದ ಸಂದರ್ಭದಲ್ಲಿ ಬರೆದ ಲೇಖನವಿದು)
ಯಕ್ಷಗಾನ ರಂಗದಲ್ಲಿ ಭಾಗವತನೇ ಸೂತ್ರಧಾರ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಅವನು “ಭಾಗವತ”ನಾಗಿರಬೇಕೆಂಬುದು ಮುಖ್ಯ. ಯಕ್ಷಗಾನ ಕಲೆಗೆ ಆಧಾರಸ್ಥಂಭವಾಗಿರುವ “ಸಭಾಲಕ್ಷಣ”ದಲ್ಲಿ ಹೇಳಿರುವ “ಭಾಗವತ” ಪದಲಕ್ಷಣಗಳನ್ನೊಳಗೊಂಡು ಆಶುಕವಿತ್ವ, ಹಿಮ್ಮೇಳ ಮುಮ್ಮೇಳಗಳ ನಿಖರವಾದ ಜ್ಞಾನವಿದ್ದು ಬಿಳಿನಾಲ್ಕು, ಕಪ್ಪು ಮೂರರ ಶೃತಿಯಲ್ಲಿ ಹಾಡಬಲ್ಲ ಭಾಗವತನು ಸುಖಕರವಾದ ಕಂಠತ್ರಾಣವನ್ನೂ ಹೊಂದಿರಬೇಕು.
ಹೀಗೆ ಹಲವು ಅರ್ಹತೆಗಳಿಂದ ಕೂಡಿರಬೇಕಾದ “ನಿಜಭಾಗವತ”ರ ಸಂಖ್ಯೆ ಇಂದು ಇಳಿಮುಖವಾಗಿ ಪಾತ್ರಧಾರಿಗಳು ಮಾತ್ರವಲ್ಲ ವ್ಯವಸ್ಥಾಪಕರು ಕೂಡಾ ರಂಗ ನಿಯಂತ್ರಣದಲ್ಲಿ ಕಾಣಿಸಿಕೊಳ್ಳುವಂತಾಗಿದೆ. ಅರ್ಥಧಾರಿಗಳು, ವೇಷಧಾರಿಗಳು, ತಮ್ಮ ಕಾರ್ಯವ್ಯಾಪ್ತಿಯನ್ನು ಮೀರಿ ಆ ಪದ್ಯವನ್ನು ಬಿಡಿ, ಈ ಪದ್ಯವನ್ನು ಹೇಳಿ, ಅಲ್ಲಿ ಮೂರು ಮುಕ್ತಾಯ ಕೊಡಿ, ಅದಕ್ಕೆ ಬಿಡಿತ ಬೇಡ, ಇತ್ಯಾದಿ ಕಟ್ಟಪ್ಪಣೆಯೊಂದಿಗೆ “ಭಾಗವತ” ನನ್ನು ನಿಯಂತ್ರಿಸುವುದಕ್ಕೆ ತೊಡಗುತ್ತಿರುವುದು ಇತ್ತೀಚೆಗೆ ಅಧಿಕವಾಗಿ ಕಂಡುಬರುತ್ತಿರುವುದೂ ಒಂದು ಕಾರಣವಾಗಿ ಪ್ರಾಯಶಃ ಅದು ಹೊಸ ತಲೆಮಾರಿನ ಕೆಲವು ಭಾಗವತರ ಜವಾಬ್ದಾರಿಯುತ ಬೆಳವಣಿಗೆಗೆ ತೊಡಕಾಗುತ್ತಿದೆಯೆ? ಇದು ಗಮನಿಸಬೇಕಾದ ವಿಚಾರ.
ಇವೆಲ್ಲದರ ನಡುವೆಯೂ ಮೆರೆದ ಸಮರ್ಥ ಭಾಗವತರಲ್ಲೊಬ್ಬರಾದ ದಿ| ದಾಸರಬೈಲು ಚನಿಯ ನಾಯ್ಕರು ಅಲ್ಲಿ ಮತ್ತೆ ತನ್ನದೇ ಆದ ಒಂದು ಪ್ರತ್ಯೇಕ ಸ್ಥಾನದಲ್ಲಿ ವಿಜೃಂಭಿಸುತ್ತಾರೆ. ನಾನು ತಿಳಿದಂತೆ ಹಾಗಿತ್ತು ಅವರ ಭಾಗವತ ಪ್ರತಿಭೆ. ಪ್ರತಿಭೆಗಿಂತ ಹೆಚ್ಚಿನ ಪ್ರಕಾಶಕ್ಕೆ ಒದ್ದಾಡುವ, ಚಡಪಡಿಸುವ, ಕಲಾವಿದರ ಸಂಖ್ಯೆಯೇ ಅಧಿಕವಾಗಿರುವ ಈ ಕಾಲಘಟ್ಟದಲ್ಲಿ ಚನಿಯ ಭಾಗವತರ ಹೆಸರು ಹಿಂದೆ ಬಿದ್ದುದರಲ್ಲಿ ಆಶ್ಚರ್ಯವಿಲ್ಲ. “ಎಲೆಮರೆಯ ಹಣ್ಣು” “ನಿರಾಡಂಬರ” “ಸರಳ” “ಸಜ್ಜನ” ಇತ್ಯಾದಿ ಶಬ್ದಗಳಿಗೆ ಯಕ್ಷಗಾನ ಕಲಾ ಭೂಮಿಕೆಯಲ್ಲಿ ಪರ್ಯಾಯವಾಗಿ ಚನಿಯ ನಾಯ್ಕರ ಹೆಸರನ್ನು ಬೆಟ್ಟುಮಾಡಿ ತೋರಿಸಬಹುದು.
ಮೋಹಕವಾದ ಚನಿಯ ಭಾಗವತರ ಹಾಡುಗಾರಿಕೆ ಭಾವತನ್ಮಯತೆಯಿಂದ ಕೂಡಿರುತಿತ್ತು. ಪಾತ್ರಧಾರಿಯಲ್ಲಿ ಅಡಗಿದ್ದ ಅಂತಃಸತ್ವವನ್ನು ಹೊರಗೆಳೆಯುವ ವಿಶೇಷವಾದ ಶಕ್ತಿ ಅವರ ಭಾಗವತಿಕೆಯಲ್ಲಿತ್ತು. ಅವರ ಹಾಡುಗಾರಿಕೆಯಲ್ಲಿ ಪ್ರೇಕ್ಷಕನಿಗೆ ಸಿಗುವ ಸುಖಾನುಭವವೇ ಬೇರೆ. “ಭಾಗವತ” ಸ್ಥಾನವನ್ನುಳಿಸಿಕೊಂಡು ಮೇಳಗಳಲ್ಲಿಯೂ ಹವ್ಯಾಸಿಯಾಗಿಯೂ ಸಂಚರಿಸಿದ ಚನಿಯ ಭಾಗವತರ ಕಲಾ ಸಂಸ್ಕಾರದ ಹರಹು ಸಣ್ಣದಲ್ಲ. ನ್ಯಾಯವಾಗಿ ಸಿಗಬೇಕಾಗಿದ್ದ ಸ್ಥಾನ ಗೌರವ ಅವಕಾಶಗಳಿಂದ ಅವರು ವಂಚಿತರಾಗಿದ್ದರೂ ನಿಜ ಕಲಾವಿದನಾಗಿದ್ದ ಅವರಿಗೆ ಅದರ ಗೊಡವೆಯೇ ಇರಲಿಲ್ಲ. ಇದು ಯಕ್ಷಗಾನ ರಂಗದ ದುರ್ವಿಧಿ ಎನ್ನದೆ ವಿಧಿಯಿಲ್ಲ. ಆ ಕಾರಣವೇ ಇಂದು ಅವರು ನಮ್ಮಿಂದ ಭೌತಿಕವಾಗಿ ದೂರವಾದರೂ ಅವರ ನೆನಪೆಂಬ ಸಾಮೀಪ್ಯಭಾವ ನಮ್ಮ ಚಿತ್ತದಲ್ಲಿ ಸದಾ ಉಳಿಯುವಂತಾಗಿದೆ.
ಭೀಷ್ಮಾರ್ಜುನ ಪ್ರಸಂಗದಲ್ಲಿ ಶ್ರೀಕೃಷ್ಣನು ಚಕ್ರಧಾರಿಯಾಗುವ ಸಂದರ್ಭದಲ್ಲಿ ಭೀಷ್ಮನಿಗೆ “ಅಕ್ಷಯಾತ್ಮಕ ಕೇಶವ” ಎಂಬ ಒಂದು ಪದ್ಯವಿದೆ. ಹೆಚ್ಚಾಗಿ ತಾಳಮದ್ದಳೆ ಕೂಟದ ಈ ಪ್ರಸಂಗದ ಈ ಪದ್ಯವನ್ನು ಹಲವಾರು ಭಾಗವತರು ಹಾಡುವುದನ್ನು ನಾನು ಕೇಳಿದ್ದೆ. ದಾಸರಬೈಲು ಚನಿಯ ಭಾಗವತರ ಪರಿಚಯವಾದಂದು ಪ್ರಥಮತಃ ಆ ಪದ್ಯವನ್ನು ಅವರ ಕಂಠಶ್ರೀಯಲ್ಲಿ ಕೇಳಿದಾಗ ಆರಂಭದಲ್ಲಿ ಒಂದೆರಡು ಪದ್ಯಗಳನ್ನು ಹೇಳಿ ಪ್ರೇಕ್ಷಕನಾಗಿ ಕುಳಿತಿದ್ದ ನನಗೆ ರೋಮಾಂಚನವಾಯಿತು. ಭಾವಸ್ಪಂದಿಯಾದ ಆ ಹಾಡಿನಲ್ಲಿ ಅಂತಹಾ ಒಂದು ಸೆಳೆತವಿತ್ತು. ಆ ಮೊದಲು ಮತ್ತು ಆ ಮತ್ತೆ ನಾನು ಕೇಳಿದ ಯಾವ ಭಾಗವತರ “ಅಕ್ಷಯಾತ್ಮಕ ಕೇಶವ”ವೂ ಚನಿಯ ಭಾಗವತರ ಆ ಪದ್ಯದ ಸ್ಥಾನಕ್ಕೆ ಮುಟ್ಟಲಿಲ್ಲ ಎಂಬುದು ಈಗಲೂ ನನ್ನ ಅನಿಸಿಕೆ.
“ಸಾಮ” ರಾಗದಲ್ಲಿ ಆ ಪದ್ಯವನ್ನು ಅವರು ಹಾಡುತ್ತಿದ್ದರು. ಮತ್ತೆ ಹಲವು ಬಾರಿ ಕೇಳಿದ್ದೇನೆ ಅವರ ಅಕ್ಷಯಾತ್ಮಕ. ಅದೇ ರಾಗ, ಅದೇ ಸಂಚಾರ, ಅದೇ ರೀತಿ. ಚನಿಯ ನಾಯ್ಕರ ವಿಶೇಷತೆ ಇರುವುದು ಅಲ್ಲೆ. ಅವರು ಒಂದು ಪ್ರಸಂಗದ ಆಟಕೂಟಗಳ ಭಾಗವತನಾಗಿ ಭಾಗವಹಿಸಬೇಕಿದ್ದರೆ ಪ್ರಸಂಗವನ್ನು ತನ್ನ ಹಸ್ತಪ್ರತಿಯಲ್ಲಿ ಸಿದ್ಧಗೊಳಿಸಿ, ರಾಗ, ತಾಳ, ಲಯವನ್ನು ನಿರ್ಣೈಸಿ ಗಟ್ಟಿಯದಾದ ಸಿದ್ಧತೆಯೊಂದಿಗೆ ರಂಗವನ್ನು ಏರುತ್ತಿದ್ದರು. ಅವರು ಹಾಗೆ ಒಂದು ಪ್ರಸಂಗವನ್ನು ‘ಸೆಟ್’ ಮಾಡಿ ಇಟ್ಟುಕೊಂಡರೆ ಮತ್ತೆ ಅದು ‘ಪರ್ಮನೆಂಟ್’. ಕಾಲಗತಿಗೆ ಹೊಂದಿ ನಾಯ್ಕರು ತಾಳ, ಲಯ ವ್ಯತ್ಯಾಸ ಮಾಡಿದರೂ ರಾಗವನ್ನು ವ್ಯತ್ಯಾಸ ಮಾಡುತ್ತಿರಲಿಲ್ಲ.
ಹೀಗೆ ನಿಯತ್ತಿನ ರಂಗ ಮರ್ಯಾದೆಗೆ ಬದ್ಧರಾಗಿದ್ದ ಚನಿಯ ಭಾಗವತರ ನೆನಪು ಎಂದೆಂದೂ ಮರೆಯಲಾರದ್ದು ಮತ್ತು ಮರೆಯಬಾರದ್ದು. ಅವರಿಗೆ ಚೆಂಡೆ ಮದ್ದಳೆಗೆ ಯಾರೂ ಆದೀತು. ಅಭ್ಯಾಸಿಗಳಾದರೂ ಸುಧಾರಿಸಿಯಾರು. ದೊಡ್ಡ ಮದ್ದಳೆಗಾರರು, ತಾಳ ಕಸರತ್ತು ಪ್ರವೀಣರು ಯಾರೇ ಆದರೂ ಅವರು ಅಧೀರರಾಗರು. ಕಾರಣ ಅವರ ತಾಳ, ಲಯ ಅಷ್ಟು ಗಟ್ಟಿ. ಹಿಂದೆ ಮುಂದೆ ಓಡುವ ಚೆಂಡೆಮದ್ದಳೆಯವರನ್ನು ಎಳೆದು ಸರಿದಾರಿಗೆ ಕೊಂಡು ಹೋಗುವ ಶ್ರಮ ಅವರ ಕ್ರಮ, ಹಿರಿಯ ಕಲಾವಿದರಿಗೆ ಕೊಡುವ ಗೌರವ ಇತ್ಯಾದಿ ಅನುಸರಣೀಯ ಗುಣಗಳ ಗಣಿಯಾಗಿದ್ದ ನಾಯ್ಕರ ನೆನಪು ತೆರೆಯುತ್ತಾ ಹೋದಂತೆ ಮೆರೆಯುತ್ತಾ ಹೋಗುತ್ತದೆ.
ನಮ್ಮ ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾ ಸಂಘದ ನಿಕಟವರ್ತಿಯಾಗಿ ಹೆಚ್ಚಿನ ಎಲ್ಲಾ ಕಾರ್ಯಕ್ರಮಗಳಲ್ಲಿ ನಮ್ಮ ತಂದೆಯವರ ಕಾಲದಿಂದಲೇ (ದಿ| ಕೀರಿಕ್ಕಾಡು ಮಾಸ್ತರ್ ವಿಷ್ಣುಭಟ್) ಭಾಗವಹಿಸುತ್ತಿದ್ದ ಅವರು ತಂದೆಯವರ ಹೆಚ್ಚಿನ ಪ್ರಸಂಗಗಳನ್ನು ರಂಗದಲ್ಲಿ ಆಡಿಸಿದವರು ಮತ್ತು ಅವರನ್ನು ಗುರುಭಾವದಿಂದ ಗೌರವಿಸುತ್ತಿದ್ದವರು. ನಮ್ಮ ಮನೆಯಲ್ಲಿ, ಕಲಾಮಂದಿರದಲ್ಲಿ ನಿತ್ಯ ಚೆಂಡೆಮದ್ದಳೆ ನಾದ ಮೊಳಗುತ್ತಿದ್ದ ಕಾಲವದು. ಭಾಗವತ ಚನಿಯ ನಾಯ್ಕರೂ ಒಂದೆರಡು ದಿನ ನಮ್ಮಲ್ಲಿ ಉಳಿದದ್ದಿದೆ. ಹಾಗಿತ್ತು ಅವರ ಕಲಾ-ಜೀವನ-ಕಲಾಪ್ರೇಮ. ಕೀರಿಕ್ಕಾಡು ಮಾಸ್ತರ್ ವಿಷ್ಣು ಭಟ್ಟರ ವಿಶೇಷ ಪ್ರಶಂಸೆಗೆ ಪಾತ್ರರಾದ ಕೆಲವೇ ಮಂದಿ ಕಲಾವಿದರಲ್ಲಿ ಒಬ್ಬರಾದ ಚನಿಯ ನಾಯ್ಕರು ದಿ| ಕೀರಿಕ್ಕಾಡು ಸಂಸ್ಮರಣಾ ಸನ್ಮಾನದಲ್ಲಿ ಸನ್ಮಾನಿತರಾಗಿರುವುದು ನಮ್ಮ ಬನಾರಿ ಯಕ್ಷಗಾನ ಕಲಾಸಂಘಕ್ಕೆ ಸಂತೃಪ್ತಿಯನ್ನು ಕೊಟ್ಟಿದೆ.
ನನ್ನ ಅನುಭವದಂತೆ ಹೆಸರಾಂತ ಅರ್ಥಧಾರಿಗಳ ಮಡಿವಂತಿಕೆ, ಭಾಗವತರ ಜಾತಿ, ಬಾಹ್ಯ ಸೌಂದರ್ಯ, ತೀವ್ರ ಬಡತನ ಇತ್ಯಾದಿಗಳೆಲ್ಲ ಕಾರಣವಾಗಿಯೋ ಏನೋ ಚನಿಯ ಭಾಗವತರಲ್ಲಿ ಒಂದು ರೀತಿಯ ಹಿಂಜರಿಕೆ ಕಾಣುತ್ತಿತ್ತು. ದೊಡ್ಡಸೆಟ್ಟಿನ ಒಂದು ತಾಳಮದ್ದಳೆಯಲ್ಲಿ ಅವರು ಭಾಗವತರಾಗಿ ಭಾಗವಹಿಸಿದ್ದರು. ಸುಧನ್ವ ಕಾಳಗ ಪ್ರಸಂಗದ ಅಂದಿನ ಅವರ ಹಾಡು ಎಲ್ಲರ ಪ್ರಶಂಸೆಗೆ ಪಾತ್ರವಾಗಿತ್ತು. ಆ ಮತ್ತೆ ನಾವೊಮ್ಮೆ ಭೇಟಿಯಾದಾಗ ಅವರು (ನಮ್ಮ ಹವ್ಯಕ ಭಾಷೆ ಅವರಿಗೆ ಚೆನ್ನಾಗಿ ಬರುತ್ತಿತ್ತು) “ಅಣ್ಣಾ ಇನ್ನು ಎನ್ನ ಅಂದ್ರಾಣ ಹಾಂಗಿಪ್ಪ ದೊಡ್ಡ ಸೆಟ್ಟಿನ ತಾಳಮದ್ದಳೆಗೆ ಹೇಳೆಡಿ. ಸಣ್ಣ ಸೆಟ್ ಹೇಂಗಿಪ್ಪದೂ ಅಕ್ಕು ಬತ್ತೆ” ಎಂದಿದ್ದರು. ಆಗ ನನ್ನ ಮನಸ್ಸು ಆ ದೊಡ್ಡ ಸೆಟ್ಟಿನ! ಸುಧನ್ವ ಕಾಳಗವನ್ನು ಮೆಲುಕು ಹಾಕಿತು. ಅವರು ಹೇಳಿದ ಮಾತಿನ ಮರ್ಮವೂ ಅರ್ಥವಾಯಿತು.
ಹೌದು. ಅಂದು ಪೂರ್ವನಿಶ್ಚಯದಂತೆ ವೇದಿಕೆಯಲ್ಲಿ ನಡೆಯಬೇಕಾಗಿದ್ದ (ಕರಪತ್ರದಲ್ಲಿ ಮಾತ್ರವಲ್ಲ ಕಾರ್ಯಕ್ರಮದ ಅಂದಿನ ಪಾತ್ರವಿವರಣೆಯಲ್ಲಿ ಕೂಡ) ಸುಧನ್ವಕಾಳಗ ಮತ್ತು ರಾವಣ ವಧೆ ಪ್ರಸಂಗದಲ್ಲಿ ದೊಡ್ಡ ಅರ್ಥಧಾರಿಗಳ ಕೈಯ್ಯಾಡಿಸುವಿಕೆಯಿಂದ ಸುಧನ್ವ ಕಾಳಗ ಮಾತ್ರ ಬೆಳಗಾದ ಮೇಲೆ ಹೇಗೋ ಮುಕ್ತಾಯವಾಗಿತ್ತು. ಚನಿಯ ನಾಯ್ಕರ ಭಾಗವತಿಕೆಗೆ ಮತ್ತು ಒಂದಿಬ್ಬರು ಉದಯೋನ್ಮುಖ ಪ್ರತಿಭಾವಂತ ಅರ್ಥಧಾರಿಗಳ ಉತ್ಸಾಹಕ್ಕೆ ತಣ್ಣೀರೆರಚಿದ ಹಿರಿಯ ಅರ್ಥಧಾರಿಗಳೇ ಅದಕ್ಕೆ ಹೊಣೆಗಾರರೆಂಬ ಸತ್ಯತೆಯ ನೆನಪಾಯಿತು. ಇಂತಹಾ ಕಾರಣಗಳೇ ಕಾರಣವಾಗಿ ಚನಿಯ ಭಾಗವತರು ಮತ್ತೆ ಹೆಸರಾಂತ ದೊಡ್ಡ ಸೆಟ್ ನ ತಾಳಮದ್ದಳೆಯಲ್ಲಿ ಭಾಗವಹಿಸಲೇ ಇಲ್ಲ ಎಂಬುದು ನನ್ನ ನೆನಪು. ಆಮಂತ್ರಿಸಿದರೂ ನಯವಾಗಿ ತಿರಸ್ಕರಿಸಿ ಬಿಡುತ್ತಿದ್ದರು.
ಧರ್ಮಸ್ಥಳ ಮೇಳದಲ್ಲಿ ಆರಂಭದ ಸಂಗೀತಗಾರನಾಗಿಯೂ ಮತ್ತೆ ಮೊದಲ ಭಾಗದ ಭಾಗವತನಾಗಿಯೂ ಕಡತೋಕ ಭಾಗವತರೊಂದಿಗೆ ತಿರುಗಾಟ ಮಾಡಿದ ಚನಿಯ ನಾಯ್ಕರು ಚೌಡೇಶ್ವರಿ ಮೇಳದ ಭಾಗವತರಾಗಿ ಕೆಲವು ವರ್ಷ ವ್ಯವಸಾಯ ಮಾಡಿದವರು. ಹೆಚ್ಚಿನ ಕಾಲ ಹವ್ಯಾಸಿ ರಂಗದಲ್ಲಿಯೇ ಕಾಣಿಸಿಕೊಂಡ ದಾಸರಬೈಲು ಚನಿಯ ಭಾಗವತರು ತೆಂಕುತಿಟ್ಟು ಯಕ್ಷಗಾನ ಕ್ಷೇತ್ರಕ್ಕೆ ಕೊಟ್ಟ ಕೊಡುಗೆ ಬಹಳ ದೊಡ್ಡದು. ಕೆಲವು ಮಂದಿ ಶಿಷ್ಯರನ್ನು ತಯಾರು ಮಾಡಿದ ಇವರಿಂದ ಪ್ರಭಾವಿತರಾದ ಕಲಾಗಡಣ ಸಣ್ಣದಲ್ಲ. ಅನಾರೋಗ್ಯದಿಂದ ಕಷ್ಟದಲ್ಲಿದ್ದ ತನ್ನ ಮಧ್ಯಪ್ರಾಯದಲ್ಲೇ ವಿಧಿವಶರಾದ ದಾಸರಬೈಲು ಚನಿಯ ನಾಯ್ಕರು ಬಾಳಿನಲ್ಲಿ ಸಾಕಷ್ಟು ಕಹಿಯನ್ನುಂಡು ಕಲಾರಂಗಕ್ಕೂ, ಪ್ರೇಕ್ಷಕರಿಗೂ ಸಿಹಿಯೂಟವನ್ನುಣಿಸಿದ ಅಪರೂಪದ ಪ್ರತಿಭಾಸಂಪನ್ನ ಕಲಾವಿದ.
- 10th Standard, Social – Economics Chapter 31 – ‘PUBLIC FINANCE AND BUDGET’ – Solutions
- 10th Standard, English Poem 8 – ‘Mending Wall’ – Solutions
- 10th Standard Social Science, Chapter 19 – ‘INDIA AFTER INDEPENDENCE’ – Solutions
- 9th Standard – English – UNIT 8 PROSE – ‘THE STORY-TELLER’ – Solutions
- 9th Social Science – Chapter 26 – ‘Community’ – Solutions