Sunday, October 6, 2024
Homeಯಕ್ಷಗಾನಹಿಮ್ಮೇಳ ಲೋಕದ ದಂತಕಥೆ- ಚಿಪ್ಪಾರು ಕೃಷ್ಣಯ್ಯ ಬಲ್ಲಾಳ್

ಹಿಮ್ಮೇಳ ಲೋಕದ ದಂತಕಥೆ- ಚಿಪ್ಪಾರು ಕೃಷ್ಣಯ್ಯ ಬಲ್ಲಾಳ್

ಯಕ್ಷಗಾನ ಹಿಮ್ಮೇಳ ಲೋಕದ ದಂತಕಥೆ ಚಿಪ್ಪಾರು ಕೃಷ್ಣಯ್ಯ ಬಲ್ಲಾಳರ ಹೆಸರು ಯಕ್ಷಗಾನದ ಆಸಕ್ತರ ಹೃದಯದಲ್ಲಿ ನವಿರಾದ ಭಾವನೆಗಳನ್ನು ಎಬ್ಬಿಸುತ್ತದೆ. ಚೆಂಡೆಯ ಮಾಂತ್ರಿಕನೆಂದೇ ಖ್ಯಾತಿ ಗಳಿಸಿದ್ದ ಬಲ್ಲಾಳರು ಚೆಂಡೆ ಮದ್ದಲೆಗಳೆರಡರಲ್ಲಿಯೂ ಸಮಾನವಾದ ಪ್ರಭುತ್ವವನ್ನು ಗಳಿಸಿಕೊಂಡವರು. ಒಂದು ಕಾಲದಲ್ಲಿ ತೆಂಕುತಿಟ್ಟು ಹಿಮ್ಮೇಳವಾದನದ ಅಗ್ರಗಣ್ಯರಾಗಿ ಮೆರೆದ ಚಿಪ್ಪಾರು ಅವರದು ಹಿಮ್ಮೇಳವಾದನದಲ್ಲಿ ಅವಿಶ್ರಾಂತ ಮತ್ತು ಪ್ರಾಮಾಣಿಕ ದುಡಿಮೆ. ಅವರು ಈ ಕ್ಷೇತ್ರದಿಂದ ಗಳಿಸಿದ್ದು ಕಡಿಮೆಯಾದರೂ ತನ್ನ ಅಪಾರ ಜ್ಞಾನ,ಶ್ರಮ ಮತ್ತು ವಿದ್ಯೆಗಳನ್ನು ಈ ಕಲಾಕ್ಷೇತ್ರಕ್ಕೆ ಧಾರೆಯೆರೆದಿದ್ದಾರೆ. 

ಒಬ್ಬ ಹಿಮ್ಮೇಳವಾದಕನಿಗೆ ಏನೆಲ್ಲಾ ತಿಳಿದಿರಬೇಕು ಎಂಬ ಪ್ರಶ್ನೆಗೆ ಈ ಕಾಲಮಿತಿಯ ಪ್ರದರ್ಶನದ ಯುಗದಲ್ಲಿ ಉತ್ತರಿಸುವುದು ಅಷ್ಟೊಂದು ಸುಲಭವಲ್ಲ. ಆದರೆ ಕೀರ್ತಿಶೇಷರಾದ ಹಲವಾರು ಹಿಮ್ಮೇಳವಾದಕರು ಈ ಪ್ರಶ್ನೆಗೆ ಉತ್ತರವಾಗಿ ನಮ್ಮ ನೆನಪಿನಲ್ಲಿ ಉಳಿದುಬಿಡುತ್ತಾರೆ. ಆ ಕಾಲದಲ್ಲಿ ಕೇಳಿ ಬಾರಿಸುವುದರಿಂದ ತೊಡಗಿ ಮಂಗಳ ಪದ್ಯದ ವರೆಗೆ ಚೆಂಡೆ ಮದ್ದಳೆಗಳನ್ನು ಸರದಿಯಲ್ಲಿ ಅವಿಶ್ರಾಂತವಾಗಿ ಬಾರಿಸಿದ ಹಲವಾರು  ಮಹಾನುಭಾವರುಗಳ ಉದಾಹರಣೆಯೂ ಇದೆ. ಈ ರೀತಿಯ ತಮ್ಮ ವಿಶೇಷತೆಗಳಿಂದ ಕೆಲವು ಹಿರಿಯ ಕಲಾವಿದರನ್ನು ನಾವು ಇಂದಿಗೂ ಮರೆಯಲು ಸಾಧ್ಯವಿಲ್ಲ. ಇಂತಹಾ ಮರೆಯಲಾಗದ ಮಹಾನುಭಾವರಲ್ಲಿ ಖ್ಯಾತ ಹಿಮ್ಮೇಳ ಕಲಾವಿದ ಶ್ರೀ ಚಿಪ್ಪಾರು ಕೃಷ್ಣಯ್ಯ ಬಲ್ಲಾಳರೂ ಒಬ್ಬರು. 

ಚೆಂಡೆಯ ಮಾಂತ್ರಿಕನೆಂದೇ ಬಿರುದಾಂಕಿತ ಚಿಪ್ಪಾರು ಕೃಷ್ಣಯ್ಯ ಬಲ್ಲಾಳರು ಬಹಳಷ್ಟು ಕಲಾವಿದರು, ಯಕ್ಷಗಾನಾಭಿಗಳಲ್ಲಿ ತಮ್ಮ ಪ್ರಭಾವವನ್ನು ಬೀರಿದವರು. ಮೊದಲೇ ಹೇಳಿದಂತೆ ‘ಹಿಮ್ಮೇಳವಾದಕನಿಗೆ ಏನೆಲ್ಲಾ ತಿಳಿದಿರಬೇಕು’ ಎಂಬ ಪ್ರಶ್ನೆಗೆ ಉತ್ತರವೋ ಎಂಬಂತೆ ಅದಕ್ಕಿಂತಲೂ ಮಿಗಿಲೆನಿಸುವಷ್ಟು ಸಾಧಿಸಿ ತೋರಿಸಿ ಮಾದರಿಯಾದವರು. ಈ ಮಾತನ್ನು ಯಾಕೆ ಹೇಳಿದೆನೆಂದರೆ ಬಲ್ಲಾಳರಿಗಿದ್ದ ಪ್ರಸಂಗ ಮಾಹಿತಿ ಮತ್ತು ನಡೆಯ ತಿಳುವಳಿಕೆ ಹಿಮ್ಮೇಳ ಕಲಾವಿದರಲ್ಲಿ ಕಾಣಸಿಗುವುದು ಅಪರೂಪ. ಕೆಲವೇ ಕೆಲವು ಹಿಮ್ಮೇಳ ಕಲಾವಿದರು ಆ ಸಾಲಿನಲ್ಲಿ ನಿಲ್ಲುತ್ತಾರೆ. 

ಚಿಪ್ಪಾರು ವಿಶೇಷತೆ: ಪ್ರಸಂಗ ನಡೆಯ ಬಗ್ಗೆ ಕೃಷ್ಣಯ್ಯ ಬಲ್ಲಾಳರಿಗೆ ಅಪಾರ ತಿಳುವಳಿಕೆಯಿತ್ತು. ಮುಖ್ಯ ಭಾಗವತರ ಅನುಪಸ್ಥಿತಿಯಲ್ಲಿ, ತಾವು ಚೆಂಡೆವಾದಕರಾಗಿದ್ದುಕೊಂಡು ಕಿರಿಯ ಭಾಗವತರಿಗೆ ಮಾರ್ಗದರ್ಶಕರಾಗಿ ಬಲ್ಲಾಳರು ಬೆಳಗ್ಗಿನ ವರೆಗೆ ಪ್ರಸಂಗವನ್ನು ಮುನ್ನಡೆಸಿದ ಹಲವಾರು ಉದಾಹರಣೆಗಳಿವೆ! ಚಿಪ್ಪಾರು ಅವರು ಜತೆಗಿದ್ದರೆ ಭಾಗವತರಿಗೂ ಆನೆಬಲ ಬಂದಂತೆ ಆಗುತ್ತಿತ್ತಂತೆ. ಆದುದರಿಂದ ಅವರು ಯಕ್ಷಗಾನಕ್ಕೆ ಮಾತ್ರವಲ್ಲದೆ ಕಲಾವಿದರಿಗೂ ಸಂಪನ್ಮೂಲ ವ್ಯಕ್ತಿಯಾಗಿದ್ದರು. 

ಒಂದು ದಿನ ಖ್ಯಾತ ಭಾಗವತರಾದ ಶ್ರೀ ದಿನೇಶ ಅಮ್ಮಣ್ಣಾಯರು ಮಾತಿನ ಮಧ್ಯೆ ಹೀಗೆ ಹೇಳಿದ್ದರು. “ಒಂದು ಪದ್ಯವನ್ನು ಒಂದು ರಾಗದಲ್ಲಿ ಅಷ್ಟತಾಳದಲ್ಲಿ ಹಾಡಿದರೆ ಪುನಃ ಎರಡನೇ ಪದ್ಯ ರೂಪಕತಾಳದಲ್ಲಿ- ಹೀಗೆ ಮೂರು, ನಾಲ್ಕು ಪದ್ಯಗಳನ್ನು ಅದೇ ರಾಗದಲ್ಲಿ ಅಂದರೆ ರಾಗವನ್ನು ಬದಲಾಯಿಸದೆ ಒಮ್ಮೆ ಅಷ್ಟ, ಒಮ್ಮೆ ತ್ರಿವುಡೆ, ಒಮ್ಮೆ ರೂಪಕ- ಹೀಗೆ ತಾಳಗಳನ್ನು ಬದಲಾಯಿಸಿ ಹಾಡುವ ಕ್ರಮ/ಪದ್ಧತಿ ಉಂಟು ಅಂತ ಒಮ್ಮೆ ಚಿಪ್ಪಾರು ಕೃಷ್ಣಯ್ಯ ಬಲ್ಲಾಳರು ನನ್ನಲ್ಲಿ ಹೇಳಿದ್ದರು. ಬಲ್ಲಾಳರು ತುಂಬಾ ತಿಳಿದವರು. ಅವರಲ್ಲಿ ಸಂಶಯಗಳನ್ನು ಕೇಳಿದರೆ ಅದರ ಬಗ್ಗೆ ಮಾಹಿತಿ ಕೊಡುತ್ತಿದ್ದರು. ತುಂಬಾ ಹೇಳುತ್ತಿದ್ದರು. ಆದರೆ ಈಗಿನವರಲ್ಲಿ ಯಾರಲ್ಲಿಯೂ ಕೇಳಿ ತಿಳಿಯುವ ಕ್ರಮ ಇಲ್ಲ ಎಂಬ ಖೇದವನ್ನು ಕೂಡಾ ಶ್ರೀ ಬಲ್ಲಾಳರು ವ್ಯಕ್ತಪಡಿಸಿದ್ದರು” ಎಂದು ದಿನೇಶ ಅಮ್ಮಣ್ಣಾಯರು ಆ ದಿನ ನನ್ನೊಡನೆ ಹೇಳಿದ್ದುದು ಈ ಲೇಖನವನ್ನು ಬರೆಯುವ ಸಂದರ್ಭದಲ್ಲಿ ನೆನಪಾಗುತ್ತಾ ಇದೆ. 

ಬಲ್ಲಾಳರ ವಿಶಿಷ್ಟ ಉರುಳಿಕೆ: ಬಲ್ಲಾಳರು ತಮ್ಮ ಅತ್ಯಾಕರ್ಷಕ ಉರುಳಿಕೆಗೆ ಹೆಸರುವಾಸಿ. ಆ ಉರಳಿಕೆಯಲ್ಲೂ ಒಂದು ವೈಶಿಷ್ಟ್ಯತೆಯಿತ್ತು. ತನ್ನ ಎರಡೂ  ಕೈಗಳ ಮಾಣಿಕಟ್ಟಿನಿಂದ ಕೆಳಗೆ ಮಾತ್ರ ಚಲಿನೆಯಿರುತ್ತಿದ್ದ ಅವರ ಚೆಂಡೆಯ ಉರುಳಿಕೆಗಳು ಅತ್ಯಪೂರ್ವ. ಒಟ್ಟಾರೆ ಅವರ ಚೆಂಡೆವಾದನದಲ್ಲಿಯೂ ಕೈಗಳ ಅನಗತ್ಯ ಚಲನೆ ಇರುತ್ತಿರಲಿಲ್ಲ. ನಾನು ಅವರ ಹಲವಾರು ಪ್ರದರ್ಶನಗಳನ್ನು ನೋಡಿದ್ದೇನೆ. ಎಂತಹಾ ಏರುಪದ್ಯಗಳಾದರೂ ಎದೆಯ ಮಟ್ಟದಿಂದ ಅವರ ಕೈ ಮೇಲೆ ಹೋದದ್ದನ್ನು ಕಾಣಲಿಲ್ಲ. ವೃಥಾ ಶ್ರಮವನ್ನು ಉಪಯೋಗಿಸದೆ ಚೆಂಡೆಯಂತಹಾ ವಾದ್ಯದಿಂದ ಏರು ನಾದವನ್ನು ಹೊರಡಿಸುವುದು ಹೇಗೆ ಎಂಬುದು ಚಿಪ್ಪಾರು ಅವರನ್ನು ನೋಡಿ ಕಲಿಯಬೇಕು. ಆದರೆ ಚಿಪ್ಪಾರು ಅವರೇ ಹೇಳುವಂತೆ ಈಗಿನವರಲ್ಲಿ ಕೇಳಿ ತಿಳಿಯುವ ಕ್ರಮ ಇಲ್ಲದ ಕಾರಣ ಕೆಲವೊಂದು ವೈಶಿಷ್ಟ್ಯತೆಗಳು ಅವರ ಜೊತೆಗೆ ಮರೆಯಾದುವೇನೋ ಎಂದೆನಿಸುತ್ತದೆ. 

ಚಿಪ್ಪಾರು ಕೃಷ್ಣಯ್ಯ ಬಲ್ಲಾಳರ ಸಂಕ್ಷಿಪ್ತ ಪರಿಚಯ: ಬಲ್ಲಾಳರು ಜನಿಸಿದ್ದು 1928 ಏಪ್ರಿಲ್ 24ರಂದು. ಗಡಿನಾಡು ಕಾಸರಗೋಡು ಜಿಲ್ಲೆಯ ಬಾಯಾರು ಸಮೀಪದ ಚಿಪ್ಪಾರು ಇವರ ಹುಟ್ಟೂರು. ತಂದೆ ಮರಿಯಯ್ಯ ಬಲ್ಲಾಳ್. ತಂದೆಯ ಹೆಸರನ್ನೇ ಕೃಷ್ಣಯ್ಯ ಬಲ್ಲಾಳರು ತಮ್ಮ ಮಗನಿಗೆ ಇರಿಸಿದ್ದಾರೆ. 6ನೆಯ ತರಗತಿಗೆ ವಿದ್ಯಾಭ್ಯಾಸಕ್ಕೆ ತಿಲಾಂಜಲಿಯಿತ್ತು ವಿದ್ವಾನ್ ಕೇಶವ ಭಟ್ಟರಲ್ಲಿ ಮೃದಂಗ ಕಲಿಯಲು ಪ್ರಾರಂಭಿಸಿದರು. ಮುಂದಿನ ದಿನಗಳಲ್ಲಿ ಮಾಂಬಾಡಿ ನಾರಾಯಣ ಭಾಗವತರಲ್ಲಿ ಅಭ್ಯಾಸ ಮಾಡಿದರು. ವಿದ್ವಾನ್ ಬಾಬು ರೈಗಳಿಂದ ಶಾಸ್ತ್ರೀಯ ಸಂಗೀತದ ಮೃದಂಗವಾದನವನ್ನೂ ಕಲಿತ ಬಲ್ಲಾಳರು ಕುದ್ರೆಕೊಡ್ಲು ರಾಮ ಭಟ್ಟರಿಂದ ಮೃದಂಗವಾದನದ ಬಗ್ಗೆ ಕಲಿತರು. ನಿಡ್ಲೆ ನರಸಿಂಹ ಭಟ್ಟರಿಂದ ಅಭ್ಯಾಸ ಮಾಡಿದ್ದು ಮಾತ್ರವಲ್ಲದೆ ಅವರ ಜೊತೆ ಕಲಾವಿದರಾಗಿ ಅನೇಕ ಪ್ರದರ್ಶನಗಳಲ್ಲಿ ಭಾಗವಹಿಸಿದ್ದಾರೆ. ಧರ್ಮಸ್ಥಳ ಮೇಳಕ್ಕೆ ಮದ್ದಳೆವಾದಕರಾಗಿ ಸೇರಿದ ಮೇಲೆ ಚಿಪ್ಪಾರು ಅವರು ಹಿಂತುರುಗಿ ನೋಡಲೇ ಇಲ್ಲ. ಸುಮಾರು 40 ವರ್ಷಗಳಿಗೂ ಮಿಕ್ಕಿ ಧರ್ಮಸ್ಥಳ ಮೇಳದಲ್ಲಿ ಹಿರಿಯ ಹಾಗೂ ಕಿರಿಯ ಕಲಾವಿದರೊಂದಿಗೆ ಸೇವೆ ಸಲ್ಲಿಸಿದ್ದಾರೆ. ಅಗರಿ, ಮಂಡೆಚ್ಚ, ಬಲಿಪ, ಕಡತೋಕ, ಇರಾ, ಪುತ್ತಿಗೆ, ಪದ್ಯಾಣ, ಅಮ್ಮಣ್ಣಾಯ, ಸಿರಿಬಾಗಿಲು ಮೊದಲಾದ ಭಾಗವತರೊಂದಿಗೆ ಹಿಮ್ಮೇಳವಾದಕರಾಗಿ ವೇದಿಕೆ ಹಂಚಿಕೊಂಡ ಸಾತ್ವಿಕ ಗುಣದ ಕಲಾವಿದರಾಗಿದ್ದ ಚಿಪ್ಪಾರು ಅವರ ಚೆಂಡೆವಾದನಕ್ಕೆ ಮನಸೋಲದ ಪ್ರೇಕ್ಷಕರಿಲ್ಲ. 80ರ ಇಳಿವಯಸ್ಸಿನಲ್ಲಿಯೂ ಚೆಂಡೆ ಬಾರಿಸುತ್ತಿದ್ದರು. ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ, ಕೇರಳ ಸಂಗೀತ ಅಕಾಡೆಮಿ ಪ್ರಶಸ್ತಿ, ಶೇಣಿ ಪ್ರಶಸ್ತಿಯೇ ಮೊದಲಾದ ಪ್ರಶಸ್ತಿಗಳನ್ನು ಪಡೆದ ಶ್ರೀ ಚಿಪ್ಪಾರು ಕೃಷ್ಣಯ್ಯ ಬಲ್ಲಾಳರು ಏಪ್ರಿಲ್ 27, 2009ರಂದು ಬೆಂಗಳೂರಿನ ಕೋರಮಂಗಲದಲ್ಲಿ ನಡೆದ ಯಕ್ಷಗಾನ ಪ್ರದರ್ಶನದ ಸಂದರ್ಭದಲ್ಲಿಯೇ ಹೃದಯಾಘಾತದಿಂದ ನಿಧನರಾದರು. 
(ಲೇಖನ: ಮನಮೋಹನ್ ವಿ.ಎಸ್) (ಮರೆಯಲಾಗದ ಮಹಾನುಭಾವರು-ಯಕ್ಷಾನುಗ್ರಹ ವಾಟ್ಸಾಪ್ ಬಳಗಕ್ಕೆ ಬರೆದ ಲೇಖನ)

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments