Saturday, January 18, 2025
Homeಯಕ್ಷಗಾನಕೋಟೆಕಾರು ದೇರಣ್ಣ ರೈ - ಪರಂಪರೆಯ ಚೆಂಡೆವಾದನಕ್ಕೊಂದು ಅಪ್ರತಿಮ ಮಾದರಿ

ಕೋಟೆಕಾರು ದೇರಣ್ಣ ರೈ – ಪರಂಪರೆಯ ಚೆಂಡೆವಾದನಕ್ಕೊಂದು ಅಪ್ರತಿಮ ಮಾದರಿ

“ಕುಂಬಳೆಯ ಕೋಟೆಕಾರು ಎಂಬಲ್ಲಿಯ ನಿವಾಸಿಯಾಗಿರುವ ಎಂಬತ್ತೇಳರ ಹರೆಯದ ದೇರಣ್ಣ ರೈ ಒಂದು ಊರುಗೋಲನ್ನು ಹಿಡಿದು ನಡೆಯುವುದನ್ನು ಕಂಡರೆ ತೆಂಕುತಿಟ್ಟಿನ ಇತಿಹಾಸವೆ ನಡೆಯುವಂತೆ ಭಾಸವಾಗುತ್ತದೆ” ಯಕ್ಷಗಾನದ ಪರಂಪರೆಯ ಹಿಮ್ಮೇಳ ವಾದಕ, ದಂತಕತೆ ಶ್ರೀ ಕೋಟೆಕಾರು ದೇರಣ್ಣ ರೈಗಳು ಬರೆದ ‘ತೆಂಕಣ ಯಕ್ಷಪಥ’ ಎಂಬ ಪುಸ್ತಕದಲ್ಲಿ ಯಕ್ಷಗಾನ ವಿದ್ವಾಂಸ ಶ್ರೀ ರಾಘವ ನಂಬಿಯಾರರು ಹೇಳಿದ ಮಾತುಗಳಿವು. ಇದರಲ್ಲಿ ಉತ್ಪ್ರೇಕ್ಷೆಗಳೇನೂ ಇಲ್ಲ. ಓರ್ವ ಹಿರಿಯ ಯಕ್ಷಗಾನ ವಿದ್ವಾಂಸರ ಕುರಿತಾಗಿ ಮತ್ತೋರ್ವ ವಿದ್ವಾಂಸರ ಬಾಯಿಯಿಂದ ಸಹಜವಾಗಿ ಹೊರಹೊಮ್ಮಿದ ಉದ್ಘಾರವಿದು. 

ಮೇಲಿನ ಮಾತುಗಳಂತೆ ದೇರಣ್ಣ ರೈಗಳು ತೆಂಕುತಿಟ್ಟಿನ ಪರಂಪರೆಯ ಪ್ರತೀಕವೆಂಬಂತೆ ತನ್ನ ಕಲಾಜೀವನದುದ್ದಕ್ಕೂ ಬಾಳಿ ಬದುಕಿದವರು. ಮುಂದಿನ ಪೀಳಿಗೆಯ ಕಲಾವಿದರಿಗೆ ಆದರ್ಶ ಕಲಾವಿದನಾಗಿ ಕಲಾಸೇವೆ ಮಾಡಿದವರು. ಬೆಳಿಂಜಗುತ್ತು ಕೆ. ದೇರಣ್ಣ ರೈಯವರು 24.02.1917ರಂದು ಕೋಟೆಕಾರು ಹಳೆಮನೆಯ ಶ್ರೀ ಬಟ್ಯಪ್ಪ ರೈ ಮತ್ತು ಬೆಳಿಂಜಗುತ್ತು ಶ್ರೀಮತಿ ಮುತ್ತಕ್ಕೆ ಹೆಂಗ್ಸು ದಂಪತಿಗೆ ಮಗನಾಗಿ ಜನಿಸಿದರು.

ತುಂಬು ಸಂಸಾರದ ಕುಟುಂಬದಲ್ಲಿ ದೇರಣ್ಣ ರೈಯವರು ಕಲಾವಾಸನೆಯ ಜೊತೆಜೊತೆಗೆ ಬೆಳೆಯತೊಡಗಿದರು. ಪುರಾಣ ಪುಣ್ಯ ಕಥೆಗಳ ಆಸಕ್ತಿಯಿರುವ, ಪೌರಾಣಿಕ ಕಲಾ ವಾಸನೆಯಿರುವ ಕುಟುಂಬವೆಂದ ಮೇಲೆ ಕೇಳಬೇಕೆ? ಸಹಜವಾಗಿಯೇ ಬಾಲಕ ದೇರಣ್ಣ ರೈಗಳಿಗೆ ಕಲಾಪ್ರೇಮವೂ ಪುರಾಣಜ್ಞಾನವೂ ಉಂಟಾಯಿತು. ತಂದೆ ಬಟ್ಯಪ್ಪ ರೈಗಳು ಮನೆಯಲ್ಲಿ ಮಾಡುತ್ತಿದ್ದ ಪುರಾಣ ಪುಣ್ಯ ಕತೆಗಳ ವಾಚನ ಮತ್ತು ಅದರ ಅರ್ಥವಿವರಣೆಯನ್ನು ಕೇಳುತ್ತಾ ಬೆಳೆದ ಮಗ ದೇರಣ್ಣನಿಗೆ ಸಹಜವಾಗಿಯೇ ಆ ಕಡೆಯೇ ಆಸಕ್ತಿ ವಾಲಿತು.

ತಂದೆಯಿಂದ ಪ್ರೇರೇಪಿತರಾದ ಇವರು ತಾನೂ ತಂದೆಯ ಪುರಾಣ ವಾಚನಕ್ಕೆ ಅರ್ಥ ವಿವರಣೆಯನ್ನು ಮಾಡಲು ಪ್ರಾರಂಭಿಸಿದರು. ತಂದೆಯ ಪ್ರೋತ್ಸಾಹವೂ ಧಾರಾಳವಾಗಿಯೇ ಲಭಿಸಿತು.   ಮೊದಲೇ ಹೇಳಿದಂತೆ ತುಂಬು ಸದಸ್ಯರಿರುವ ಕುಟುಂಬ. ದೇರಣ್ಣ ರೈಗಳಿಗೆ 4 ಜನ ಅಣ್ಣಂದಿರು ಮತ್ತು 4 ಜನ ತಮ್ಮಂದಿರು. ಹೀಗೆ ಒಂಭತ್ತು ಮಂದಿ ಗಂಡುಮಕ್ಕಳ ನಂತರ ಹತ್ತನೆಯವಳಾಗಿ ಜನಿಸಿದವಳೇ ದೇರಣ್ಣ ರೈಗಳ ಒಬ್ಬಳೇ ತಂಗಿ ಗಿರಿಜಾ. ದೇರಣ್ಣ ರೈಗಳ ಕಿರಿಯ ಸಹೋದರರಾದ ವಿದ್ವಾನ್ ಕೆ. ಬಾಬು ರೈಗಳು ಕರ್ನಾಟಕ ಶಾಸ್ತ್ರೀಯ ಸಂಗೀತದ ಅಪ್ರತಿಮ ಮೃದಂಗಪಟುವಾಗಿದ್ದು ಈ ಕ್ಷೇತ್ರದಲ್ಲಿ ಅತ್ಯುನ್ನತ ಸಾಧನೆಯನ್ನು ಮಾಡಿದವರು.  ಹಲವಾರು ಶಿಷ್ಯಂದಿರನ್ನು ತಯಾರುಮಾಡಿದ್ದಾರೆ. 

ದೇರಣ್ಣ ರೈಗಳ ವಿದ್ಯಾಭ್ಯಾಸ ಕುಂಬಳೆ ಶಾಲೆಯಲ್ಲಿ 8ನೆಯ ತರಗತಿಯ ವರೆಗೆ. ಆಮೇಲೆ ಅಂದರೆ 1930ರ ಸುಮಾರಿಗೆ ಅವರು ಮದ್ದಳೆಯ ಅಭ್ಯಾಸವನ್ನು ಪ್ರಾರಂಭಿಸಿದರು. ಕುಂಬಳೆಯ ಕೊಗ್ಗ ಮದ್ದಳೆಗಾರರ ಪುತ್ರ ಶ್ರೀ ನರಸಿಂಹ ಅವರಿಂದ  ಮದ್ದಳೆವಾದನವನ್ನು ಅಭ್ಯಸಿಸಿದರು. 1936ರಲ್ಲಿ ಕಟೀಲು ಮೇಳಕ್ಕೆ ಸೇರ್ಪಡೆಗೊಂಡರು. ಕಟೀಲು ಮೇಳದಲ್ಲಿ ಬಣ್ಣದ ವೇಷಧಾರಿಯಾಗಿದ್ದ ಕುಂಬಳೆ ಶಂಕರ ಪಾಟಾಳಿಯವರು ದೇರಣ್ಣ ರೈಯವರನ್ನು ಕಟೀಲು ಮೇಳಕ್ಕೆ ಸೇರಿಸಿದರು. ಆಗ ಮವ್ವಾರು ಕಿಟ್ಟಣ್ಣ ಭಾಗವತರು, ಪ್ರಧಾನ ಭಾಗವತರಾಗಿದ್ದ ಆ ಮೇಳದಲ್ಲಿ ಮದ್ದಳೆಗಾರರಾಗಿ ತಮ್ಮ ಕಲಾಜೀವನ ಆರಂಭಿಸಿದ್ದರು. ಕಟೀಲು ಮೇಳದಲ್ಲಿ ಒಂದು ವರ್ಷದ ತಿರುಗಾಟ ನಡೆಸಿದರು. ಅಲ್ಲಿ ಅವರಿಗೆ ಎಚ್ಚಣ್ಣ, ನೆಡ್ಲೆ ನರಸಿಂಹ ಭಟ್, ಕುದ್ರೆಕೊಡ್ಲು ರಾಮ ಭಟ್ ಮೊದಲಾದವರ ಸಾಮೀಪ್ಯ, ಮಾರ್ಗದರ್ಶನಗಳು ದೊರೆತವು.

ಆ ಬಳಿಕ  ಅಂದರೆ 1937ರಲ್ಲಿ ಮುಲ್ಕಿ ಮೇಳಕ್ಕೆ ಸೇರ್ಪಡೆಗೊಂಡರು. ಒಂದು ವರ್ಷದ ಅನುಭವದ ನಂತರ ಕೂಡ್ಲು ಮೇಳಕ್ಕೆ ಸೇರಿದರು. ಆದರೆ 1943ರಲ್ಲಿ ಕಲ್ಲಾಡಿ ಕೊರಗ ಶೆಟ್ಟಿಯವರ ಅಪೇಕ್ಷೆಯಂತೆ ಪುನಃ ಕಟೀಲು ಮೇಳದಲ್ಲಿ ತಿರುಗಾಟ ಪ್ರಾರಂಭಿಸಿದರು. ಅಗರಿ ಶ್ರೀನಿವಾಸ ಭಾಗವತರೊಂದಿಗೆ ಎರಡು ವರ್ಷಗಳ ಕಾಲ ತಿರುಗಾಟ ಮಾಡಿದ್ದರು. ಕೋಟೆಕಾರು ದೇರಣ್ಣ ರೈಗಳು 1954ರಿಂದ 1963ರ ವರೆಗೆ ಅಂದರೆ ಸುಮಾರು ಹತ್ತು ವರ್ಷಗಳ ಕಾಲ ಆ ಕಾಲದ ಪ್ರಸಿದ್ಧ ಭಾಗವತರಾಗಿದ್ದ ಮೈಂದಪ್ಪ ರೈಗಳೊಂದಿಗೆ  ಕರ್ನಾಟಕ ಮೇಳದಲ್ಲಿ ತಿರುಗಾಟ ನಡೆಸಿದ್ದರು. ಈ ಹತ್ತು ವರ್ಷಗಳು ದೇರಣ್ಣ ರೈಗಳ ಕಲಾಜೀವನದ ಉತ್ಕರ್ಷದ ಸಮಯವಾಗಿತ್ತು. 1964ರಲ್ಲಿ ಯಕ್ಷಗಾನದಿಂದ ತಾತ್ಕಾಲಿಕವಾಗಿ ನಿವೃತ್ತರಾದರೂ ಯಕ್ಷಗಾನದ ಜೊತೆ ತಮ್ಮ ಸಂಬಂಧವನ್ನು ಉಳಿಸಿಕೊಂಡಿದ್ದರು. ಅಲ್ಲಲ್ಲಿ ಹಿಮ್ಮೇಳ ತರಗತಿಗಳನ್ನು ನಡೆಸುತ್ತಿದ್ದರು. ಖ್ಯಾತ ಯಕ್ಷಗಾನ ವಿದ್ವಾಂಸ, ಲೇಖಕ ಡಾ. ರಾಘವ ನಂಬಿಯಾರ್ ಕೂಡಾ ದೇರಣ್ಣ ರೈಗಳ ಶಿಷ್ಯಂದಿರಲ್ಲಿ ಒಬ್ಬರು. 

1965ರ ಸುಮಾರಿಗೆ ದೇರಣ್ಣ ರೈಯವರು ಬೆಳಂಜೆ ಗುತ್ತು ಜಾಗದಿಂದ ಪೊಸಣಿಕೆ ಎಂಬಲ್ಲಿ ಬಂದು ನೆಲೆಸಿದರು. ಆಮೇಲೆ ತಮ್ಮ ಜಾಗದಲ್ಲಿ ಕೃಷಿ ಕಾಯಕದಲ್ಲಿ ತೊಡಗಿಸಿಕೊಂಡಿದ್ದರು. ಆದರೆ ಕಲಾಜೀವನದ ಆಸಕ್ತಿ ಆಕರ್ಷಣೆಗಳು ಕಡಿಮೆಯಾಗಿರಲಿಲ್ಲ, 1967ರಲ್ಲಿ ಧರ್ಮಸ್ಥಳ ಮೇಳದ ತಿರುಗಾಟಕ್ಕೆ ತಯಾರಾಗಿದ್ದರು. ಕಡತೋಕಾ ಮಂಜುನಾಥ ಭಾಗವತರೊಂದಿಗೆ ಹಿಮ್ಮೇಳ ವಾದನದಲ್ಲಿ ದೇರಣ್ಣ ರೈಯವರು ಹೊಳೆದು ಕಾಣಿಸಿಕೊಂಡರು. ಹಲವಾರು ಹಿರಿಯ ಕಲಾವಿದರೊಂದಿಗೆ ಧರ್ಮಸ್ಥಳ ಮೇಳದಲ್ಲಿ ತಿರುಗಾಟ ನಡೆಸಿದ್ದರು. ಪುತ್ತೂರು ನಾರಾಯಣ ಹೆಗ್ಡೆ, ಎಂಪೆಕಟ್ಟೆ ರಾಮಯ್ಯ ರೈ, ಕುಂಬ್ಳೆ ಸುಂದರ ರಾವ್, ಕೆ. ಗೋವಿಂದ ಭಟ್, ಪಾತಾಳ ವೆಂಕಟ್ರಮಣ ಭಟ್, ವಿಟ್ಲ ಗೋಪಾಲಕೃಷ್ಣ ಜೋಶಿ ಮೊದಲಾದವರೊಂದಿಗೆ ದೇರಣ್ಣ ರೈಗಳು ಕಲಾಸೇವೆ ಸಲ್ಲಿಸಿದರು. ಹೀಗೆ ಹಲವಾರು ದಿಗ್ಗಜ ಕಲಾವಿದರೊಂದಿಗೆ ರಂಗಸ್ಥಳದಲ್ಲಿ ಸೇವೆ ಸಲ್ಲಿಸಿದ್ದ ಕೋಟೆಕಾರು ದೇರಣ್ಣ ರೈಗಳು ಯಕ್ಷಜಗತ್ತು ಕಂಡ ಓರ್ವ ಅಪರೂಪದ ಮದ್ದಳೆಗಾರ.

ಕಲೆ, ಕೃಷಿಯೊಂದಿಗೆ ದೇರಣ್ಣ ರೈಗಳು ಬರವಣಿಗೆ ಮತ್ತು ಸಾಹಿತ್ಯದಲ್ಲೂ ಕೈಯಾಡಿಸಿದವರು. ಜ್ಯೋತಿಷ್ಯ ಮತ್ತು ವಾಸ್ತುವನ್ನೂ ಕೂಡ ಹವ್ಯಾಸವನ್ನಾಗಿ ಸ್ವೀಕರಿಸಿದ್ದರು. ಸುಮಾರು 35ಕ್ಕೂ ಹೆಚ್ಚು ಭಜನೆಗಳನ್ನು ಬರೆದಿದ್ದಾರೆ. ಅವರು ರಚಿಸಿದ ಭಕ್ತಿಗೀತೆಗಳ ಧ್ವನಿಸುರುಳಿಯೊಂದು ಬಿಡುಗಡೆಯಾಗಿದೆ. ಕಿರಾತಾರ್ಜುನ ಪ್ರಸಂಗಕ್ಕೆ ಅರ್ಥವನ್ನೂ ಬರೆದಿದ್ದು ‘ಮುಜುಂಗಾವು ಕ್ಷೇತ್ರ ಮಹಾತ್ಮೆ’ ಎಂಬ ಗದ್ಯವನ್ನೂ ರಚಿಸಿದ್ದಾರೆ. ‘ತೆಂಕುತಿಟ್ಟಿನ ಮದ್ದಳೆ ವಾದನ ಕ್ರಮ’, ‘ರಂಗಸ್ಥಳ ವಿವರ’, ‘ತೆಂಕಣ ಯಕ್ಷಪಥ’ ಮೊದಲಾದ ಪುಸ್ತಕಗಳನ್ನೂ ಬರೆದಿದ್ದಾರೆ. ಕೋಟೆಕಾರು ದೇರಣ್ಣ ರೈಯವರು 28.07. 2008ರಂದು ತನ್ನ 91ನೆಯ ವಯಸ್ಸಿನಲ್ಲಿ ನಿಧನಹೊಂದಿದ್ದರು. 

ನೇರ ನಿಷ್ಠುರವಾದಿಯಾಗಿದ್ದ ಇವರು ತನಗಾಗದೆ ಇದ್ದುದನ್ನು ಸಹಿಸುತ್ತಿರಲಿಲ್ಲ. ಆಧುನಿಕ ಗಾಳಿ ಬೀಸುತ್ತಿರುವ ಕಾಲಘಟ್ಟದಲ್ಲಿ ಯಕ್ಷಗಾನದ ಅಸಹಜತೆಗಳನ್ನು ಎತ್ತಿ ತೋರಿಸಿ ಹಲವರ ಕೆಂಗಣ್ಣಿಗೂ ಗುರಿಯಾದವರು. ಆದುದರಿಂದಲೇ ಕೋಟೆಕಾರು ದೇರಣ್ಣ ರೈಗಳ ಹೆಸರು ಎಲ್ಲೂ ಹೆಚ್ಚಾಗಿ ಪ್ರಚಾರಕ್ಕೆ ಬಾರದೆ ಹೋಯಿತು. ಕೇವಲ ಪ್ರಸಿದ್ಧಿಗಾಗಿ ಏನನ್ನಾದರೂ ಮಾಡಬೇಕೆಂಬ ಹಂಬಲ ಅವರಲ್ಲಿರಲಿಲ್ಲ. 1972ರಲ್ಲಿ ಕಾಸರಗೋಡಿನಲ್ಲಿ ನಡೆದ ಕನ್ನಡ ಸಮ್ಮೇಳನದಲ್ಲಿ ಸನ್ಮಾನಪತ್ರ, ಕಾಸರಗೋಡು ಜಿಲ್ಲಾ ಜಾನಪದ ಮೇಳ ಮತ್ತು ವಿಚಾರಸಂಕಿರಣದಲ್ಲಿ ಪ್ರಶಸ್ತಿ, ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಕರ್ನಾಟಕ ಯಕ್ಷಗಾನ ಮತ್ತು ಜಾನಪದ ಅಕಾಡೆಮಿಯ ಸನ್ಮಾನ ಹಾಗೂ ಇನ್ನಿತರ ಪ್ರಶಸ್ತಿ ಸನ್ಮಾನಗಳು ದೊರಕಿವೆ. ಯಕ್ಷಗಾನದ ಮೂಲ ಸ್ವರೂಪವು ಅಳಿಯದೆ ಉಳಿಯುವಂತೆ ಪ್ರಯತ್ನಗಳನ್ನು ಮಾಡಿದ ಮಹನೀಯರ ಸಾಲಿನಲ್ಲಿ ಕೋಟೆಕಾರು ದೇರಣ್ಣ ರೈಗಳ ಹೆಸರು ಖಂಡಿತಾ ಸ್ಥಾನ ಪಡೆಯುತ್ತದೆ ಎಂಬುದರಲ್ಲಿ ಯಾವುದೇ ಅನುಮಾನಗಳಿಲ್ಲ. ಪರಂಪರಾಗತ ಮೂಲ ಸ್ವರೂಪದ ಮದ್ದಳೆವಾದನದ ಕ್ರಮವನ್ನು ಬಿಡದೆ, ನಾವೀನ್ಯತೆಯ ಪ್ರದರ್ಶನ ಮತ್ತು ಪರಿಸ್ಥಿತಿಯೊಂದಿಗೆ ಎಂದೂ ರಾಜಿ ಮಾಡಿಕೊಳ್ಳದೆ ತನ್ನ ಕಲಾಜೀವನದಲ್ಲಿ ಸ್ವಚ್ಛತೆಯನ್ನು ಅನವರತವೂ ಕಾಯ್ದುಕೊಂಡು ಪ್ರದರ್ಶನ ನೀಡಿದ ಕೋಟೆಕಾರು ದೇರಣ್ಣ ರೈಗಳಂತಹವರ ಅಗತ್ಯ ಈಗಿನ ಸನ್ನಿವೇಶದಲ್ಲಿ ತುಂಬಾ ಇದೆ. 

ಬರಹ: ಮನಮೋಹನ್ ವಿ. ಎಸ್ (ಪೂರಕ ಮಾಹಿತಿ: ‘ತೆಂಕಣ ಯಕ್ಷಪಥ’)

RELATED ARTICLES

1 COMMENT

LEAVE A REPLY

Please enter your comment!
Please enter your name here

Most Popular

Recent Comments