ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಶ್ರೀ ಮಹಾಬಲೇಶ್ವರ ಎ. ಹೆಗಡೆ (ಎಂ.ಎ. ಹೆಗಡೆ) ಇಂದು ತೀವ್ರ ಉಸಿರಾಟದ ತೊಂದರೆಯಿಂದ ಮುಂಜಾನೆ ನಿಧನರಾಗಿದ್ದಾರೆ. ಅವರಿಗೆ 73 ವರ್ಷ ವಯಸ್ಸಾಗಿತ್ತು. ಅವರಿಗೆ ಕೆಲವು ದಿನಗಳ ಹಿಂದೆ ಕೋವಿಡ್ ಸೋಂಕು ತಗುಲಿರುವುದು ದೃಢಪಟ್ಟಿತ್ತು. ಇಂದು ಉಸಿರಾಟದ ತೊಂದರೆ ಕಾಣಿಸಿಕೊಂಡು ಆಸ್ಪತ್ರೆಗೆ ದಾಖಲಿಸುವಷ್ಟರಲ್ಲಿ ಕೊನೆಯುಸಿರೆಳೆದರು.
ಅಪ್ರತಿಮ ವಾಗ್ಮಿ, ತಾಳಮದ್ದಳೆ ಅರ್ಥಧಾರಿಯಾಗಿದ್ದ ಅವರು ಸುಮಾರು ಮೂವತ್ತಕ್ಕೂ ಹೆಚ್ಚು ವರ್ಷಗಳ ಕಾಲ ಉಪಾನ್ಯಾಸಕರಾಗಿ ಸೇವೆ ಸಲ್ಲಿಸಿದ್ದರು. ಯಕ್ಷಗಾನ ಕ್ಷೇತ್ರದಲ್ಲಿ ವೇಷಧಾರಿ, ತಾಳಮದ್ದಳೆ ಅರ್ಥಧಾರಿ, ಸಂಶೋಧಕರಾಗಿ ಕೆಲಸ ಮಾಡಿದುದಲ್ಲದೆ ಪ್ರಸಂಗಕರ್ತರಾಗಿಯೂ ಪ್ರಸಿದ್ಧರಾಗಿದ್ದರು. ಅವರು ಧರ್ಮ ದುರಂತ, ವಿಜಯೀ ವಿಶ್ರುತ, ಸೀತಾ ವಿಯೋಗ, ರಾಜಾ ಕರಂಧಮ, ಮೊದಲಾದ ಇಪ್ಪತ್ತಕ್ಕೂ ಹೆಚ್ಚು ಪ್ರಸಂಗಗಳನ್ನು ರಚಿಸಿದ್ದರು.
ಅವರು ಮೂಲತಃ ಸಿದ್ದಾಪುರ ತಾಲೂಕಿನ ಜೋಗಿನಮನೆಯವರು. ಪ್ರಸ್ತುತ ಶಿರಸಿ ತಾಲೂಕಿನ ದಂಟ್ಕಲ್ ನಲ್ಲಿ ನೆಲೆಸಿದ್ದರು. ಕಳೆದ ಅವಧಿಯಲ್ಲೂ ಕರ್ನಾಟಕ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರಾಗಿದ್ದ ಅವರು ಈ ಬಾರಿಯೂ ಅಕಾಡೆಮಿಯ ಅಧ್ಯಕ್ಷರಾಗಿ ಮುಂದುವರಿದಿದ್ದರು. ತನ್ನ ಅವಧಿಯಲ್ಲಿ ಯಕ್ಷಗಾನಕ್ಕೋಸ್ಕರ ಹಲವಾರು ಉತ್ತಮ ಯೋಜನೆ ಕಾರ್ಯಗಳನ್ನು ಕೈಗೊಂಡ ಹೆಗ್ಗಳಿಕೆಗೆ ಹಾಗೂ ಸರ್ವರ ಪ್ರಸಂಶೆಗೆ ಪಾತ್ರರಾಗಿದ್ದ ಶ್ರೀಯುತ ಎಂ.ಎ. ಹೆಗಡೆಯವರ ನಿಧನ ಯಕ್ಷಗಾನ ಕ್ಷೇತ್ರಕ್ಕೆ ತುಂಬಲಾರದ ನಷ್ಟ.